* ಇಂದೇ ರಾಜೀನಾಮೆ ಘೋಷಣೆ ನಿರೀಕ್ಷೆ* ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಇಂದು ಪದತ್ಯಾಗ?* ಅವಿಶ್ವಾಸ ಜೊತೆಗೆ ಬಂಧನ ಭೀತಿ ಹಿನ್ನೆಲೆ
ಇಸ್ಲಾಮಾಬಾದ್(ಮಾ.27): ಕಳೆದ ನಾಲ್ಕು ವರ್ಷಗಳಿಂದ ಪಾಕಿಸ್ತಾನದ ಚುಕ್ಕಾಣಿ ಹಿಡಿದಿರುವ ಮಾಜಿ ಕ್ರಿಕೆಟಿಗ, ಪ್ರಧಾನಮಂತ್ರಿ ಇಮ್ರಾನ್ ಖಾನ್ ಪದತ್ಯಾಗ ಸನ್ನಿಹಿತವಾದಂತಿದೆ. ಭ್ರಷ್ಟಾಚಾರ, ವಿದೇಶಿ ದೇಣಿಗೆ ಅಕ್ರಮ ಆರೋಪಗಳ ಹಿನ್ನೆಲೆಯಲ್ಲಿ ಬಂಧನ ಭೀತಿಯ ಜೊತೆಗೆ ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿಯನ್ನೂ ಎದುರಿಸುತ್ತಿರುವ ಇಮ್ರಾನ್ ಖಾನ್ ಭಾನುವಾರವೇ ರಾಜೀನಾಮೆ ಘೋಷಿಸುವ ಸಾಧ್ಯತೆ ಇದೆ.
ಕಳೆದ ಕೆಲ ತಿಂಗಳಿನಿಂದ ಬಂಡಾಯ ಎದುರಿಸುತ್ತಿರುವ ಇಮ್ರಾನ್ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ಗೊತ್ತುವಳಿಗೆ ನಿರ್ಧರಿಸಿವೆ. ಅವಿಶ್ವಾಸ ಗೊತ್ತುವಳಿ ಸೋಮವಾರ ಮಂಡನೆಯಾಗಿ, ಮುಂದಿನ ವಾರದಲ್ಲಿ ಮತದಾನಕ್ಕೆ ಬರುವ ನಿರೀಕ್ಷೆ ಇದೆ. ಇದೇ ವೇಳೆ, ಗಂಭೀರ ಭ್ರಷ್ಟಾಚಾರ ಆರೋಪಗಳು ಹಾಗೂ ಅಕ್ರಮವಾಗಿ ವಿದೇಶಿ ದೇಣಿಗೆ ಪಡೆದ ಆರೋಪಗಳ ಹಿನ್ನೆಲೆಯಲ್ಲಿ ಸೋಮವಾರವೇ ಇಮ್ರಾನ್ ಬಂಧನವಾಗುವ ಸಂಭವವಿದೆ ಎನ್ನಲಾಗುತ್ತಿದೆ. ಅಲ್ಲದೆ, ಪಾಕ್ ಸೇನೆಯನ್ನು ಇಬ್ಭಾಗಗೊಳಿಸಿ ಅದನ್ನು ದುರ್ಬಲಗೊಳಿಸಲು ಯತ್ನಿಸಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಇಮ್ರಾನ್ ವಿರುದ್ಧ ಪಾಕ್ ಸೇನಾ ಮುಖ್ಯಸ್ಥ ಮುನಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ದೇಶದಲ್ಲಿ ತಮ್ಮ ವಿರುದ್ಧ ರಾಜಕೀಯ ಬಿರುಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಬೇರೆ ದಾರಿ ಕಾಣದೆ ಇಮ್ರಾನ್ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದಾರೆ. ಭಾನುವಾರ ಸಾರ್ವಜನಿಕ ರಾರಯಲಿಯೊಂದರಲ್ಲಿ ರಾಜೀನಾಮೆ ಘೋಷಿಸಿ ಅವಧಿಪೂರ್ವ ಚುನಾವಣೆಗೆ ಕೋರಿಕೆ ಸಲ್ಲಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ರಾಜಕೀಯ ವಿರೋಧ:
2018ರಿಂದ ಪಾಕ್ ಪ್ರಧಾನಿ ಆಗಿರುವ ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ (ಪಿಟಿಐ) ಪಕ್ಷದ ನೇತಾರ ಇಮ್ರಾನ್ ಖಾನ್ ವಿರುದ್ಧ ಇತ್ತೀಚೆಗೆ ರಾಜಕೀಯ ಅಸ್ಥಿರತೆ ಎದುರಿಸುತ್ತಿದ್ದಾರೆ. ಇದನ್ನು ಮನಗಂಡ ಪ್ರತಿಪಕ್ಷಗಳು ಅವರ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಿವೆ. ಇಮ್ರಾನ್ ವಿರುದ್ಧ ಬಂಡೆದ್ದಿರುವ 20ಕ್ಕೂ ಹೆಚ್ಚು ಸಂಸದರು ಅವಿಶ್ವಾಸದ ಪರವಾಗಿ ಮತ ಚಲಾಯಿಸುವುದಾಗಿ ಬಹಿರಂಗವಾಗಿ ಸಾರಿದ್ದಾರೆ. 2-3 ಸಂಸದರು ಪಕ್ಷಾಂತರ ಮಾಡುವ ಬೆದರಿಕೆ ಒಡ್ಡಿದ್ದಾರೆ. ಏತನ್ಮಧ್ಯೆ, ಇಮ್ರಾನ್ ಸರ್ಕಾರದ 50 ಸಚಿವರು ದಿಢೀರನೆ ‘ನಾಪತ್ತೆಯಾಗಿದ್ದಾರೆ’ ಎನ್ನಲಾಗಿದ್ದು, ಇದು ಅವರನ್ನು ಮತ್ತಷ್ಟುಇಕ್ಕಟ್ಟಿಗೆ ಸಿಲುಕಿಸಿದೆ.
342 ಸದಸ್ಯ ಬಲದ ನ್ಯಾಷನಲ್ ಅಸೆಂಬ್ಲಿಯಲ್ಲಿ ಇಮ್ರಾನ್ ನೇತೃತ್ವದ ಪಿಟಿಐ 155 ಸ್ಥಾನ ಹೊಂದಿವೆ. ಮಿತ್ರಪಕ್ಷಗಳ ಬೆಂಬಲ ಸೇರಿದರೆ 178 ಸ್ಥಾನ ಆಗುತ್ತದೆ. ಆದರೆ ಹಲವು ಸ್ವಪಕ್ಷೀಯರು ಮತ್ತು ಮಿತ್ರಪಕ್ಷಗಳೇ ಅವಿಶ್ವಾಸದ ಪರ ಇರುವ ಕಾರಣ, ವಿಶ್ವಾಸಮತ ಗೆಲ್ಲಲು ಅಗತ್ಯವಾದ 172 ಮತ ಲಭ್ಯವಾಗುವ ಸಾಧ್ಯತೆ ದೂರವಾಗಿದೆ. ಹೀಗಾಗಿ 2018ರಲ್ಲಿ ಅಧಿಕಾರಕ್ಕೆ ಬಂದಿದ್ದ ಇಮ್ರಾನ್‌ಗೆ ಸೋಲಿನ ಭೀತಿ ಎದುರಾಗಿದೆ.
ಏನು ಕಾರಣ?
1. ಭ್ರಷ್ಟಾಚಾರ ಹಾಗೂ ಅಕ್ರಮ ವಿದೇಶಿ ದೇಣಿಗೆ ಪಡೆದ ಆರೋಪಗಳಲ್ಲಿ ಸೋಮವಾರ ಬಂಧನ ಸಾಧ್ಯತೆ
2. ಸೋಮವಾರವೇ ಸಂಸತ್ತಲ್ಲಿ ಇಮ್ರಾನ್ ಖಾನ್ ಅವಿಶ್ವಾಸ ಎದುರಿಸಲಿದ್ದು ಅದರಲ್ಲಿ ಸೋಲಾಗುವ ನಿರೀಕ್ಷೆ
3. ಈ ಎರಡೂ ಕಾರಣಗಳ ಹಿನ್ನೆಲೆಯಲ್ಲಿ ಭಾನುವಾರವೇ ರಾಜೀನಾಮೆ ಘೋಷಿಸುವ ಬಗ್ಗೆ ದಟ್ಟವದಂತಿ
