ಪಾಕಿಸ್ತಾನದಲ್ಲಿ ಸರ್ಕಾರಕ್ಕಿಂತ ಮಿಲಿಟರಿಯೇ ಪವರ್ ಫುಲ್ ಯಾಕೆ..?
1947ರಿಂದ ಈವರೆಗೆ ಯಾವ ಪ್ರಧಾನಿಯೂ 5 ವರ್ಷಗಳ ಅಧಿಕಾರವನ್ನ ಪೂರ್ಣಗೊಳಿಸಲು ಅಲ್ಲಿನ ಮಿಲಿಟರಿ ಬಿಟ್ಟಿಲ್ಲ. ಪಾಕಿಸ್ತಾನ ಸ್ವತಂತ್ರಗೊಂಡ ಈ 75 ವರ್ಷಗಳಲ್ಲಿ ಅಲ್ಲಿನ ಮಿಲಿಟರಿ 33 ವರ್ಷ ನೇರವಾಗಿ ಆಡಳಿತ ನಡೆಸಿದೆ.
ಪಾಕಿಸ್ತಾನ... ಪ್ರಜಾಪ್ರಭುತ್ವಕ್ಕೊಂದು ಕೆಟ್ಟ ಉದಾಹರಣೆ.. ಭಾರತದ ಜತೆಗೆ ಪಾಕಿಸ್ತಾನವೂ 1947ರಲ್ಲಿ ಸ್ವಾತಂತ್ರ್ಯ ಪಡೀತು... ಭಾರತ ವಿಶ್ವದ 3ನೇ ಆರ್ಥಿಕ ಶಕ್ತಿಯಾಗುವತ್ತ ದಾಪುಗಾಲಿಡುತ್ತಿದ್ದರೆ, ಪಾಕಿಸ್ತಾನ ವರ್ಷದಿಂದ ವರ್ಷಕ್ಕೆ ದಿವಾಳಿಯಾಗುತ್ತಿದೆ. ಯಾವುದೇ ದೇಶಕ್ಕೆ ಆ ದೇಶದ ಮಿಲಿಟರಿ ಒಂದು ಶಕ್ತಿ.. ಆದರೆ, ಪಾಕಿಸ್ತಾನದ ಪಾಲಿಗೆ ಮಿಲಿಟರಿಯೇ ಶಾಪ. ಪಾಕಿಸ್ತಾನದಲ್ಲಿ ಮಿಲಿಟರಿಯ ಒಪ್ಪಿಗೆ ಇಲ್ಲದೇ ಒಂದು ಹುಲ್ಲು ಕಡ್ಡಿ ಕೂಡ ಅಲುಗಾಡುವುದಿಲ್ಲ. ಅಲ್ಲಿ ಸರ್ಕಾರ ಹೆಸರಿಗಷ್ಟೇ, ಆಡಳಿತ ವ್ಯವಸ್ಥೆ, ರಾಜಕೀಯ, ನ್ಯಾಯಾಲಯ ಎಲ್ಲವನ್ನೂ ಮಿಲಿಟರಿ ನೇರವಾಗಿ ಕಂಟ್ರೋಲ್ ಮಾಡುತ್ತೆ. ಪಾಕಿಸ್ತಾನದ ಆಡಳಿತ ನಡೆಯುವುದು ಇಸ್ಲಾಮಾಬಾದ್‌ನಿಂದ ಅಲ್ಲ, ರಾವಲ್ ಪಿಂಡಿಯಿಂದ. ಯಾಕಂದ್ರೆ ಪಾಕಿಸ್ತಾನಿ ಮಿಲಿಟರಿಯ ಹೆಡ್ ಆಫೀಸ್ ಇರೋದು ಅಲ್ಲೇ.
ಇತ್ತೀಚೆಗಷ್ಟೇ ಪಾಕಿಸ್ತಾನದಲ್ಲಿ ಚುನಾವಣೆ ನಡೆದಿದೆ, ಚುನಾವಣೆಗೆ ಮುನ್ನವೇ ಪಾಕಿಸ್ತಾನದ ಪ್ರಧಾನಿ ಯಾರಾಗಬೇಕು ಅನ್ನೋದನ್ನ ಮಿಲಿಟರಿ ನಿರ್ಧರಿಸಿಯಾಗಿತ್ತು.. ಎಲೆಕ್ಷನ್ ನಡೆದಿದ್ದು ಹೆಸರಿಗಷ್ಟೇ. ನವಾಜ್ ಷರೀಫ್ ಸೋದರ ಶಹಬಾಜ್ ಷರೀಫ್ ಮತ್ತೊಮ್ಮೆ ಪಾಕಿಸ್ತಾನದ ಪ್ರಧಾನಿಯಾಗಿದ್ದಾರೆ. ಯಾವ ಪಕ್ಷಕ್ಕೂ ಬಹುಮತ ಸಿಗದಂತೆ ಮಾಡಿ ಮೈತ್ರಿ ಪಕ್ಷಗಳ ಸರ್ಕಾರ ಬರುವಂತೆ ಮಾಡಿದೆ ಅಲ್ಲಿನ ಮಿಲಿಟರಿ. ಬಹುಮತದ ಸರ್ಕಾರ ಬಂದರೆ ತಮ್ಮ ಮಾತನ್ನ ಕೇಳಲ್ಲ ಅನ್ನೋದು ಪಾಕಿಸ್ತಾನಿ ಮಿಲಿಟರಿ ಜನರಲ್‌ಗಳ ನಿಲುವು. ಇಮ್ರಾನ್ ಖಾನ್‌ಗೂ 2018ರಲ್ಲಿ ಬಹುಮತ ಸಿಕ್ಕಿರಲಿಲ್ಲ. ಅದೇ ಕಾರಣಕ್ಕೆ ಅವರ ಸರ್ಕಾರವನ್ನ 2022ರಲ್ಲಿ ಕೆಡವಲಾಯ್ತು. ಆರಂಭದಲ್ಲಿ ಮಿಲಿಟರಿ ಜನರಲ್ ಗಳ ಮಾತು ಕೇಳುತ್ತಿದ್ದ ಇಮ್ರಾನ್ ಖಾನ್ ನಂತರ ತಿರುಗಿಬಿದ್ದಿದ್ದರು. ಅದೇ ಕಾರಣಕ್ಕೆ ಇಮ್ರಾನ್ ಸರ್ಕಾರ ಬೀಳಿಸಿ ಅವರನ್ನ ಜೈಲಿಗೆ ತಳ್ಳಲಾಗಿದೆ. ಇವತ್ತು ಇಮ್ರಾನ್ ಖಾನ್ ಎದುರಿಸುತ್ತಿರೋ ಆರೋಪಗಳನ್ನ 2017ರಲ್ಲಿ ನವಾಜ್ ಷರೀಫ್ ಕೂಡ ಎದುರಿಸಿದ್ದರು. ಮಿಲಿಟರಿಗೆ ಹೆದರಿ ನವಾಜ್ ಷರೀಫ್ ದೇಶವನ್ನೇ ಬಿಟ್ಟು ಹೋಗಿದ್ದರು. ಈಗ ಬರೋ ಸರ್ಕಾರ ಮಿಲಿಟರಿ ಅಧಿಕಾರಿಗಳ ಮಾತು ಕೇಳದೇ ಇದ್ದರೆ ಜೈಲಿನಲ್ಲಿರೋ ಇಮ್ರಾನ್ ಖಾನ್ ಬಿಡುಗಡೆಯಾಗಿ ಮತ್ತೆ ಪ್ರಧಾನಿಯಾದರೂ ಆಗಬಹುದು. ಪಾಕಿಸ್ತಾನದಲ್ಲಿ ಏನು ಬೇಕಾದರೂ ಆಗಬಹುದು. ಅಲ್ಲಿನ ರಾಜಕೀಯ ವ್ಯವಸ್ಥೆ, ಚುನಾವಣೆ, ಸರ್ಕಾರ ಎಲ್ಲವೂ ನಾಮಕಾವಸ್ಥೆಯಷ್ಟೇ. ಸಂಪೂರ್ಣ ಅಧಿಕಾರ ಇರೋದು ಮಿಲಿಟರಿ ಕೈಯಲ್ಲಿ...
1947ರಿಂದ ಈವರೆಗೆ ಯಾವ ಪ್ರಧಾನಿಯೂ 5 ವರ್ಷಗಳ ಅಧಿಕಾರವನ್ನ ಪೂರ್ಣಗೊಳಿಸಲು ಅಲ್ಲಿನ ಮಿಲಿಟರಿ ಬಿಟ್ಟಿಲ್ಲ. ಪಾಕಿಸ್ತಾನ ಸ್ವತಂತ್ರಗೊಂಡ ಈ 75 ವರ್ಷಗಳಲ್ಲಿ ಅಲ್ಲಿನ ಮಿಲಿಟರಿ 33 ವರ್ಷ ನೇರವಾಗಿ ಆಡಳಿತ ನಡೆಸಿದೆ. ಉಳಿದ ಅಷ್ಟೂ ಸರ್ಕಾರಗಳನ್ನ ತನ್ನ ಬೆರಳ ತುದಿಯಲ್ಲಿಟ್ಟುಕೊಂಡು ನಿಯಂತ್ರಿಸಿದೆ. ಭಾರತದ ಜತೆಗೇ ಪಾಕಿಸ್ತಾನ ಸ್ವತಂತ್ರ ದೇಶವಾಯ್ತು.. ಭಾರತದ ಮಿಲಿಟರಿ ದೇಶ ರಕ್ಷಣೆಯ ಕೆಲಸ ಬಿಟ್ಟರೆ ರಾಜಕೀಯ ವಿಷಯಗಳಿಗೆ ತಲೆಹಾಕಿಲ್ಲ... ಆದ್ರೆ ಪಾಕಿಸ್ತಾನದಲ್ಲಿ ಮಿಲಿಟರಿ ಈ ಮಟ್ಟಕ್ಕೆ ಶಕ್ತಿಶಾಲಿಯಾಗಿದ್ದೇಗೆ..?
ಭಾರತ-ಪಾಕಿಸ್ತಾನ ಇಬ್ಬಾಗವಾದಾಗ ಮಿಲಿಟರಿಯನ್ನೂ ಇಬ್ಬಾಗ ಮಾಡಲಾಯ್ತು... 67ರಷ್ಟು ಮಿಲಿಟರಿ ಭಾರತದ ಭಾಗವಾದ್ರೆ 33ರಷ್ಟು ಮಿಲಿಟರಿ ಪಾಕಿಸ್ತಾನದ ಭಾಗವಾಯ್ತು... 1947ರಿಂದಲೂ ಪಾಕಿಸ್ತಾನ ತನಗೆ ಅಗತ್ಯವಿರುವುದಕ್ಕಿಂತಲೂ ಹೆಚ್ಚಿನ ಮಿಲಿಟರಿ ಶಕ್ತಿಯನ್ನ ಇಟ್ಟುಕೊಂಡಿದೆ. ಬಲಿಷ್ಠ ಸೈನ್ಯ ಇಟ್ಟುಕೊಳ್ಳದಿದ್ದರೆ ಹೆಚ್ಚು ಶಕ್ತಿಶಾಲಿ ಭಾರತವು ದಾಳಿ ಮಾಡಿ ನಾಶಪಡಿಸುತ್ತದೆ ಅನ್ನೋ ಭಯ. ಈ ಭಯ ಪಾಕಿಸ್ತಾನದಲ್ಲಿ ಈಗಲೂ ಇದೆ. ಇದೇ ಕಾರಣಕ್ಕೆ ಪಾಕಿಸ್ತಾನದ ಅವತ್ತಿನ ರಾಜಕಾರಣಿಗಳು ತಾವು ನಿಯಂತ್ರಿಸಲು ಸಾಧ್ಯವಾಗದಷ್ಟು ದೊಡ್ಡ ಸೈನ್ಯವನ್ನ ಸೃಷ್ಟಿಸಿದರು. ಇದರ ಜತೆಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ... ಈ ಗುಪ್ತಚರ ಸಂಸ್ಥೆಯನ್ನ ಪಾಕಿಸ್ತಾನಿ ಮಿಲಿಟರಿ ನೇರವಾಗಿ ನಿಯಂತ್ರಿಸುತ್ತೆ. 1947ರಲ್ಲಿ ಪಾಕಿಸ್ತಾನದ ಮೊದಲ ಬಜೆಟ್‌ನ ಶೇ.75ರಷ್ಟು ಹಣವನ್ನ ಮಿಲಿಟರಿಗೆ ಮೀಸಲಿಡಲಾಗಿತ್ತು. ಈಗಲೂ ಪಾಕಿಸ್ತಾನ ತನ್ನ ಬಜೆಟ್‌ನ ಹೆಚ್ಚು ಭಾಗವನ್ನ ಮಿಲಿಟರಿಗಾಗಿ ಖರ್ಚು ಮಾಡುತ್ತೆ. ಭಾರತ ಅನ್ನೋ ಗುಮ್ಮ ತೋರಿಸಿಯೇ ಪಾಕಿಸ್ತಾನಿ ಜನರಲ್ ಗಳು ರಾಜಕೀಯ ನಾಯಕರುಗಳಿಂದ ಹೆಚ್ಚು ಅಧಿಕಾರ, ಅನುದಾನ ಪಡೆದುಕೊಂಡರು. ದೇಶದ ಬಹುಪಾಲು ಆದಾಯವನ್ನ ಮಿಲಿಟರಿ ವ್ಯವಸ್ಥೆಯ ಮೇಲೆ ಖರ್ಚು ಮಾಡಿದ್ದರಿಂದ ಸೇನಾ ಜನರಲ್‌ಗಳು ಆಡಳಿತದಲ್ಲೂ ಮೂಗು ತೂರಿಸಲು ಆರಂಭಿಸಿದರು. ಭಾರತ ದಾಳಿ ಮಾಡುತ್ತೆ ಅನ್ನೋ ಭಯ ಸೃಷ್ಟಿಸಿಕೊಂಡೇ ತಮ್ಮ ಪ್ರಭಾವ ವಿಸ್ತರಿಸಿದರು.. ಅದರ ಪರಿಣಾಮ ಪಾಕಿಸ್ತಾನ ಸೃಷ್ಟಿಯಾದ ಕೇವಲ 11 ವರ್ಷಕ್ಕೇ ಅಂದ್ರೆ 1958ರಲ್ಲಿ ಅಲ್ಲಿ ಮೊದಲ ಮಿಲಿಟರಿ ಆಡಳಿತ ಬಂತು.. ರಾಜಕೀಯ ಸ್ಥಿತ್ಯಂತರದ ಸಮಯ ಬಳಸಿಕೊಂಡು ಮಿಲಿಟರಿ ಅವತ್ತು ಅಧಿಕಾರ ಹಿಡಿದಿತ್ತು... 1958ರಲ್ಲಿ ಬಂದ ಮಿಲಿಟರಿ ಆಡಳಿತ 1971ರವರೆಗೂ ನಡೀತು.
1971ರಲ್ಲಿ ಭಾರತ-ಪಾಕಿಸ್ತಾನ ಯುದ್ಧದ ನಂತರ ಪೂರ್ವ ಪಾಕಿಸ್ತಾನ ಬಾಂಗ್ಲಾದೇಶವಾಯ್ತು... ಪಾಕಿಸ್ತಾನ ಸೇನೆ ಅವಮಾನಕರ ಸೋಲನುಭವಿಸ್ತು. 1 ಲಕ್ಷಕ್ಕೂ ಹೆಚ್ಚು ಸೈನಿಕರು ಭಾರತದ ಮುಂದೆ ಶರಣಾದ್ರು... ಜಗತ್ತಿನ ಇತಿಹಾಸದಲ್ಲೇ ಇಷ್ಟು ದೊಡ್ಡ ಸಂಖ್ಯೆಯ ಸೈನ್ಯ ಶರಣಾಗತಿಯಾಗಿದ್ದು ಅದೇ ಮೊದಲು. ಇದಾದ ನಂತರ ಪಾಕಿಸ್ತಾನದಲ್ಲಿ ನಾಗರೀಕ ಸರ್ಕಾರ ಅಸ್ಥಿತ್ವಕ್ಕೆ ಬಂತು.. ಅಧಿಕಾರದ ರುಚಿ ನೋಡಿದ್ದ ಪಾಕಿಸ್ತಾನಿ ಮಿಲಿಟರಿ 1977ರಲ್ಲಿ ಮತ್ತೆ ನಾಗರೀಕ ಸರ್ಕಾರ ಕಿತ್ತೊಗೆದು ಆಡಳಿತ ಹಿಡಿತಕ್ಕೆ ತೆಗೆದುಕೊಳ್ತು. 1979ರಲ್ಲಿ ಪ್ರಧಾನಿಯಾಗಿದ್ದ ಜುಲ್ಫೀಕರ್ ಆಲಿ ಬುಟ್ಟೋರನ್ನ ನೇಣಿಗೇರಿಸಲಾಯ್ತು. ಜನರಲ್ ಜಿಯಾ ಉಲ್ ಹಕ್ ತಾನು ಸಾಯುವವರೆಗೂ ಅಂದ್ರೆ 1988ರವರೆಗೆ ಅಧಿಕಾರ ನಡೆಸಿದ. ಜನರಲ್ ಜಿಯಾ ಉಲ್ ಹಕ್ ಅಧಿಕಾರದಲ್ಲಿದ್ದಷ್ಟೂ ದಿನ ಭಾರತದ ವಿರುದ್ಧ ಬಡಿದಾಡಲು ಉಗ್ರರ ಗುಂಪುಗಳನ್ನ ಸೃಷ್ಟಿಸಿದ. ಇಸ್ಲಾಮಿಕ್ ಮೂಲಭೂತವಾದ ತುಂಬಿ ತನ್ನ ಕುರ್ಚಿ ಗಟ್ಟಿಮಾಡಿಕೊಂಡ.
1988 ರಿಂದ 1999ರವರೆಗೆ ಹಲವು ಸರ್ಕಾರಗಳು ಬಂದು ಹೋದವು. ವಿದೇಶಾಂಗ ನೀತಿ ಮತ್ತು ರಕ್ಷಣಾ ವ್ಯವಸ್ಥೆಯನ್ನ ಮಿಲಿಟರಿಯೇ ಪರೋಕ್ಷವಾಗಿ ನಿಯಂತ್ರಿಸುತ್ತಿತ್ತು. ಮೂರನೇ ಬಾರಿ ಪಾಕಿಸ್ತಾನದಲ್ಲಿ ಮಿಲಿಟರಿ ಆಡಳಿತ ಬಂದಿದ್ದು ಜನರಲ್ ಪರ್ವೇಜ್ ಮುಷರಫ್ ಕಾಲದಲ್ಲಿ... ಪಾಕಿಸ್ತಾನಿ ಸರ್ಕಾರದ ಮಾತು ಕೇಳದೇ ಮುಷರಫ್ ಭಾರತದ ವಿರುದ್ಧ ಯುದ್ಧ ಸಾರಿದ್ದ. ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನ ಭಾರತದ ಎದುರು ಮತ್ತೆ ಸೋಲಬೇಕಾಯ್ತು.. ಯುದ್ಧದ ಬೆನ್ನಿಗೇ ನವಾಜ್ ಷರೀಫ್ ವಿರುದ್ಧ ದಂಗೆಯೆದ್ದ ಮುಷರಫ್ ಅಧಿಕಾರ ವಹಿಸಿಕೊಂಡ. ಜೀವ ಉಳಿಸಿಕೊಳ್ಳಲು ನವಾಜ್ ಷರೀಫ್ ಪಾಕಿಸ್ತಾನವನ್ನೇ ಬಿಟ್ಟು ಹೋಗಬೇಕಾಯ್ತು. ಮುಷರಫ್ ಆಳ್ವಿಕೆ 2008ರವರೆಗೂ ನಡೀತು.
ಕಾಲೇಜಿನಲ್ಲಿ ನಮಾಜ್‌ಗೆ ಅನುಮತಿ ನಿರಾಕರಣೆ, ಮುಸ್ಲಿಮ್ ವಿದ್ಯಾರ್ಥಿನಿಯರ ಪ್ರತಿಭಟನೆ!
ಅಧಿಕೃತವಾಗಿ ಪಾಕಿಸ್ತಾನ ಪ್ರಜಾಪ್ರಭುತ್ವ ದೇಶವಾಗಿದ್ದರೂ, ಅಲ್ಲಿನ ಎಲ್ಲವನ್ನೂ ನಿಯಂತ್ರಿಸುವುದೂ ಆ ದೇಶದ ಮಿಲಿಟರಿಯೇ.. ಪಾಕಿಸ್ತಾನದಲ್ಲಿ ಬೇರೆ ಯಾವುದೇ ಸಂಸ್ಥೆಗಳಿಗಿಂತ ಹೆಚ್ಚು ಬಲಶಾಲಿಯಾಗಿರೋದು ಅಲ್ಲಿನ ಸೈನ್ಯ. ಕಳೆದ 75 ವರ್ಷಗಳಲ್ಲಿ ಪಾಕಿಸ್ತಾನಿ ಮಿಲಿಟರಿ ಆ ದೇಶದ ಎಲ್ಲ ವಿಷಯಗಳಲ್ಲೂ ನಿಯಂತ್ರಣ ಸಾಧಿಸಿದೆ. ರಾಜಕೀಯ ಪಕ್ಷಗಳಿಗೆ ಮಿಲಿಟರಿ ಜನರಲ್ ಗಳ ಮಾತು ಕೇಳದೇ ಬೇರೆ ಆಯ್ಕೆಯಿಲ್ಲ... ಹಾಗಾಗಿಯೇ ಪಾಕಿಸ್ತಾನ ಪ್ರಜಾಪ್ರಭುತ್ವಕ್ಕೊಂದು ಕೆಟ್ಟ ಉದಾಹರಣೆ...
ಶುಕ್ರವಾರದ ನಮಾಜ್ ಬೆನ್ನಲ್ಲೇ, ಜ್ಞಾನವಾಪಿ ವಿಚಾರದಲ್ಲಿ ಜೈಲ್ ಭರೋಗೆ ಕರೆ ನೀಡಿದ ಮುಸ್ಲಿಂ ಧರ್ಮಗುರು!