movie screening for dogs in China: ಶ್ವಾನಗಳಿಗಾಗಿಯೇ 'ಝುಟೊಪಿಯಾ 2' ಅನಿಮೇಟೆಡ್ ಸಿನಿಮಾದ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ರೆಡ್ ಕಾರ್ಪೆಟ್ ಸ್ವಾಗತ, ವಿಶೇಷ ಆಹಾರ ವ್ಯವಸ್ಥೆಯೊಂದಿಗೆ ಮಾಲೀಕರು ತಮ್ಮ ಶ್ವಾನಗಳ ಜೊತೆ ಥಿಯೇಟರ್‌ನಲ್ಲಿ ಕುಳಿತು ಸಿನಿಮಾ ವೀಕ್ಷಿಸಿದರು. 

ಶ್ವಾನಗಳಿಗಾಗಿ ಥಿಯೇಟರ್‌ಗಳಲ್ಲಿ ಸಿನಿಮಾ ಶೋ ಆಯೋಜನೆ:

ಇತ್ತೀಚೆಗೆ ಕೆಲ ಶ್ವಾನಗಳಿಗೆ ಇರುವ ಬೆಲೆ ಕೆಲವು ಮನುಷ್ಯರಿಗಿಲ್ಲ. ಮನುಷ್ಯರ ನಿಯತ್ತಿನ ಸ್ನೇಹಿತನಾಗಿರುವ ಶ್ವಾನಗಳು ಈಗ ಕೆಲ ಮನೆಗಳಲ್ಲಿ ಮನೆಯ ಪ್ರಮುಖ ಸದಸ್ಯರಂತಾಗಿವೆ. ಮಕ್ಕಳಿಲ್ಲದ ಕೆಲ ದಂಪತಿಗಳು ಶ್ವಾನವನ್ನೇ ಮಗುವಂತೆ ಸಾಕುವ ನಿದರ್ಶನಗಳು ಇವೆ. ಇದರ ಜೊತೆಗೆ ಕೆಲವರು ಹೋದಲೆಲ್ಲಾ ತಮ್ಮ ಸ್ನೇಹಿತನಂತೆ ಈ ಶ್ವಾನವನ್ನು ಕರೆದೊಯ್ಯುತ್ತಾರೆ. ಜನರ ಮೇಲಿನ ಈ ಶ್ವಾನ ಪ್ರೀತಿಯೇ ಈಗ ಹಲವು ಶ್ವಾನಗಳಿಗಾಗಿ ಇರುವ ಉತ್ಪನ್ನಗಳನ್ನು ತಯಾರಿಸುವ ಸಂಸ್ಥೆಗಳನ್ನು ಅತೀ ಶ್ರೀಮಂತಗೊಳಿಸಿವೆ. ಇವತ್ತು ನಗರ ಪ್ರದೇಶಗಳಲ್ಲಿ ಜನರು ಹಲವು ತಳಿಯ ಶ್ವಾನಗಳನ್ನು ಸಾಕುತ್ತಿದ್ದು, ಈ ವಿವಿಧ ವಿದೇಶಿ ಬ್ರೀಡ್‌ಗಳ ಶ್ವಾನಗಳನ್ನು ಸಾಕುವುದು ಸುಲಭದ ಮಾತಲ್ಲ. ಪ್ರತಿ ತಿಂಗಳು ಶ್ವಾನಗಳ ಖರ್ಚುವೆಚ್ಚಗಳಿಗಾಗಿ ಕೆಲ ಸಾವಿರ ರೂಪಾಯಿಗಳನ್ನು ತೆಗೆದಿಡಬೇಕಾಗುತ್ತದೆ. ಶ್ವಾನಗಳನ್ನು ಪ್ರೀತಿಸುವವರಿಗೆ ಇದೆನೂ ದೊಡ್ಡ ವಿಷಯವಲ್ಲ, ಕೆಲ ಶ್ರೀಮಂತ ಹಾಗೂ ಅತೀ ಶ್ರೀಮಂತ ಜನರು ಶ್ವಾನಗಳಿಗಾಗಿ ಏನೂ ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಕೆಲವರು ಶ್ವಾನಗಳನ್ನು ವಿದೇಶ ಪ್ರವಾಸಕ್ಕು ಕರೆದೊಯ್ಯುತ್ತಾರೆ. ಇನ್ನೂ ಕೆಲವರು ಶ್ವಾನಗಳೊಂದಿದೆ ದೇಶದಲ್ಲೇ ಹಲವು ಪ್ರವಾಸಿ ಕೇಂದ್ರಗಳನ್ನೂ ಸುತ್ತುತ್ತಾರೆ. ಹೀಗೆ ಶ್ವಾನಗಳು ಇಂದು ಕುಟುಂಬದ ಜೀವನಾಡಿಯಾಗಿವೆ.

ಕೆಲಸಕ್ಕೆ ಹೋದ ಒಡೆಯ/ಒಡತಿ ಮನೆಗೆ ಬರುವವರೆಗೂ ಆತನಿಗೆ/ಆಕೆಗಾಗಿ ಸದಾ ಕಾವಲು ಕಾಯುವ ಶ್ವಾನಗಳ ಮಗುವಿನ ನಡವಳಿಕೆಯೂ ಅಧುನಿಕ ಜೀವನ ಶೈಲಿಯಿಂದಾಗಿ ಸದಾ ಒತ್ತಡದಿಂದ ಬಳಲುವ ಜನರಿಗೆ ಔಷಧಿಯಂತೆ ಕೆಲಸ ಮಾಡುತ್ತದೆ. ಹಲವು ಕಡೆಗಳಲ್ಲಿ ಶ್ವಾನಗಳಿಗಾಗಿ ಸ್ಪಾ ಕೇಂದ್ರಗಳಿರುವುದು ಗೊತ್ತೇ ಇದೆ. ಇಲ್ಲಿ ಶ್ವಾನಗಳಿಗೆ ಮನುಷ್ಯರಂತೆ ಪೆಡಿಕ್ಯೂರ್ ಮೆನಿಕ್ಯೂರ್ ಮಾಡಲಾಗುತ್ತದೆ. ಅವುಗಳ ಕೂದಲು ಕತ್ತರಿಸಿ ಟ್ರಿಮ್ ಮಾಡಲಾಗುತ್ತದೆ. ಹೀಗೆ ಕೆಲ ಶ್ವಾನಗಳು ಇಂದು ಮನುಷ್ಯರಂತೆ ಎಲ್ಲಾ ಐಷಾರಾಮಿ ಸವಲತ್ತುಗಳನ್ನು ಅನುಭವಿಸುತ್ತಿದ್ದಾರೆ. ಬರೀ ಇಷ್ಟೇ ಏಕೆ ಇಲ್ಲೊಂದು ಕಡೆ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋವನ್ನು ಕೂಡ ಆಯೋಜಿಸಲಾಗಿತ್ತು. ಈ ಸಿನಿಮಾವನ್ನು ನೋಡುವುದಕ್ಕೆ ಶ್ವಾನಗಳ ಮಾಲೀಕರು ತಮ್ಮ ಪ್ರೀತಿಯ ಶ್ವಾನಗಳನ್ನು ಕರೆದುಕೊಂಡು ಸಿನಿಮಾ ಥಿಯೇಟರ್‌ಗೆ ಬಂದು ಶ್ವಾನಗಳ ಜೊತೆ ಕುಳಿತು ಸಿನಿಮಾ ನೋಡಿದರು. ಅಂದಹಾಗೆ ಈ ವಿಶೇಷ ಘಟನೆ ನಡೆದಿರುವುದು ಚೀನಾದಲ್ಲಿ..

ಶ್ವಾನಗಳಿಗಾಗಿ ಝುಟೊಪಿಯಾ 2 ಹೆಸರಿನ ಪ್ರಾಣಿಗಳ ಅನಿಮೇಷನ್ ಮೂವಿ

ಹೌದು, ಚೀನಾದ ಕೆಲ ನಗರಗಳಲ್ಲಿ ಶ್ವಾನಗಳಿಗಾಗಿ ಝುಟೊಪಿಯಾ 2 ಹೆಸರಿನ ಪ್ರಾಣಿಗಳ ಅನಿಮೇಷನ್ ಮೂವಿಯನ್ನು ಥಿಯೇಟರ್‌ಗಳಲ್ಲಿ ಪ್ರದರ್ಶಿಸಲಾಯ್ತು. ಈ ಸಿನಿಮಾವನ್ನು ವಿಶೇಷವಾಗಿ ಶ್ವಾನಗಳಿಗಾಗಿಯೇ ಏರ್ಪಡಿಸಲಾಗಿತ್ತು. ಈ ಸಿನಿಮಾದಲ್ಲಿ ಇರುವ ಕೆಲ ಪಾತ್ರಧಾರಿಗಳ ಧಿರಿಸುಗಳನ್ನು ಹಾಕಿ ಶ್ವಾನಗಳ ಮಾಲೀಕರು ತಮ್ಮ ಶ್ವಾನಗಳನ್ನು ಈ ಸಿನಿಮಾದ ವೀಕ್ಷಣೆಗಾಗಿ ಥಿಯೇಟರ್‌ಗೆ ಕರೆದುಕೊಂಡು ಬಂದಿದ್ದರು. ಜೊತೆಗೆ ಈ ಸಿನಿಮಾವನ್ನು ವೀಕ್ಷಿಸಲು ಬರುವ ಶ್ವಾನಗಳಿಗಾಗಿ ರೆಡ್‌ ಕಾರ್ಪೆಟ್ಗಳನ್ನು ಹಾಕಲಾಗಿತ್ತು. ಶಾಂಘೈ, ಬೀಜಿಂಗ್ ಹಾಗೂ ಚೇಂಗ್ಡು ಮುಂತಾದ ಸ್ಥಳಗಳಲ್ಲಿ ಸಿನಿಮಾಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಸಿನಿಮಾ ಸಮಯದಲ್ಲಿ ಪ್ರತಿ ಸೀಟುಗಳಿಗೆ ಡಯಪರ್‌ಗಳನ್ನು ಅಳವಡಿಸಲಾಗಿತ್ತು. ಹಾಗೆಯೇ ನಾಯಿಗಳು ಗಲೀಜು ಮಾಡಿದರೆ ಕ್ಲೀನ್ ಮಾಡುವುದಕ್ಕೆ ವೈಫರ್‌ಗಳನ್ನು ಇಡಲಾಗಿತ್ತು. ಸಸ್ಯಾಹಾರಿ ಹಾಗೂ ಮಾಂಸಹಾರಿ ಶ್ವಾನಗಳಿಗಾಗಿ ಪ್ರತ್ಯೇಕವಾಗಿ ಸಸ್ಯಾಹಾರ ಹಾಗೂ ಮಾಂಸಹಾರದ ಆಹಾರವನ್ನು ಸಿದ್ಧಪಡಿಸಲಾಗಿತ್ತು. ಈ ಮೂಲಕ ಅವುಗಳು ಯಾವುದೇ ಬೋರ್ ಆಗದಂತೆ ಸಿನಿಮಾವನ್ನು ನೋಡುವುದಕ್ಕೆ ಅವಕಾಶ ಮಾಡಲಾಗಿತ್ತು.

ಇದನ್ನೂ ಓದಿ: ಸುಪ್ರೀಂ ಆದೇಶ ಹಿನ್ನೆಲೆ ಮಂಗಳೂರಿನಲ್ಲಿ ಶ್ವಾನಗಳಿಗೆ ಪ್ರತ್ಯೇಕ ಆಹಾರ ಕೇಂದ್ರ ತೆರೆದ ಮೊದಲ ಕಂಪನಿ!

ಶ್ವಾನಗಳು ಥಿಯೇಟರ್‌ಗಳಲ್ಲಿ ಕುಳಿತು ಸಿನಿಮಾ ವೀಕ್ಷಿಸುವ ಈ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿವೆ. ತಮ್ಮ ಪ್ರೀತಿಯ ಶ್ವಾನಗಳಿಗೆ ಸಿನಿಮಾ ತೋರಿಸಿ ಥಿಯೇಟರ್‌ಗಳ ಅನುಭವ ಮಾಡಿಸಬೇಕು ಎಂಬ ಉದ್ದೇಶದಿಂದ ಅನೇಕರು ಈ ಸಿನಿಮಾ ನೋಡುವುದಕ್ಕೆ ಶ್ವಾನಗಳೊಂದಿಗೆ ಬಂದಿದ್ದರಿಂದಾಗಿ ಈ ಝುಟೊಪಿಯಾ 2 ಸಿನಿಮಾ ಈಗ ಚೀನಾದಲ್ಲಿ 2474 ಕೋಟಿಗೂ ಅಧಿಕ ಹಣ ಕಲೆಕ್ಷನ್ ಮಾಡಿದೆ.

ಇದನ್ನೂ ಓದಿ: ಭದ್ರಾವತಿಯಲ್ಲಿ ಹೃದಯ ವಿದ್ರಾವಕ ಘಟನೆ: ಮಾಲೀಕನ ಶವ ಕಂಡು ಶ್ವಾನವೂ ನಿಧನ, ಒಟ್ಟಿಗೆ ಅಂತ್ಯಕ್ರಿಯೆ!