ಪಾಕ್‌ನ ಅಡಿಯಾಲಾ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹತ್ಯೆ ವದಂತಿ ನಡುವೆ ಅವರ ಭೇಟಿಗೆ ಅವಕಾಶ ನೀಡದ ಜೈಲಧಿಕಾರಿಗಳ ವಿರುದ್ಧ ಇಮ್ರಾನ್ ಸಹೋದರಿ ಅಲೀಮಾ ಖಾನ್‌ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ.

ಇಸ್ಲಾಮಾಬಾದ್‌: ಪಾಕ್‌ನ ಅಡಿಯಾಲಾ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹತ್ಯೆ ವದಂತಿ ನಡುವೆ ಅವರ ಭೇಟಿಗೆ ಅವಕಾಶ ನೀಡದ ಜೈಲಧಿಕಾರಿಗಳ ವಿರುದ್ಧ ಇಮ್ರಾನ್ ಸಹೋದರಿ ಅಲೀಮಾ ಖಾನ್‌ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ.

ಈ ವರ್ಷದ ಮಾರ್ಚ್‌ನಲ್ಲಿ ಇಸ್ಲಾಮಾಬಾದ್‌ ಹೈಕೋರ್ಟ್‌ ವಾರಕ್ಕೆ 2 ಸಲ ಇಮ್ರಾನ್‌ ಖಾನ್‌ ಅವರನ್ನು ಭೇಟಿ ಮಾಡುವುದಕ್ಕೆ ಅವಕಾಶ ನೀಡಿತ್ತು. ಆದರೆ ಜೈಲಾಧಿಕಾರಿಗಳು ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಅಲೀಮಾ ಅವರು ಅರ್ಜಿ ಸಲ್ಲಿಸಿದ್ದಾರೆ.

ಮಗನ ಕಳವಳ:

ಮತ್ತೊಂದೆಡೆ ಇಮ್ರಾನ್‌ ಪುತ್ರ ಕಾಸಿಮ್‌ ಜೈಲಿನ ಅಧಿಕಾರಿಗಳ ವಿರುದ್ಧ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿದ್ದು ‘ಕಳೆದ 6 ವಾರಗಳಿಂದ ತಮ್ಮ ತಂದೆಯನ್ನು ಏಕಾಂತ ಬಂಧನದಲ್ಲಿ ಇರಿಸಲಾಗಿದೆ. ಕುಟುಂಬದವರ ಭೇಟಿಗೆ ಯಾವುದೇ ಅವಕಾಶ ನೀಡುತ್ತಿಲ್ಲ. ತಂದೆಯನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಅವರು ಜೀವಂತವಿರುವುದಕ್ಕೆ ಯಾವುದೇ ಸಾಕ್ಷಿ ನಮ್ಮ ಬಳಿ ಇಲ್ಲ’ ಎಂದಿದ್ದಾರೆ.

ರಾಹುಲ್‌ ನಾಯಕತ್ವ ತ್ಯಜಿಸಲಿ: ಅಹ್ಮದ್‌ ಪಟೇಲ್‌ ಪುತ್ರ

ನವದೆಹಲಿ: ‘ಬಿಹಾರದಲ್ಲಿ ಕಾಂಗ್ರೆಸ್‌ ಸೋಲಿಗೆ ಗಾಂಧಿ ಮುಖಗಳು ಕಾರಣ. ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್‌ ಗಾಂಧಿಯೂ ಹೊಣೆ. ಇಂಥವರು ಈಗ ನಾಯಕತ್ವದಿಂದ ದೂರ ಸರಿದು ಶಶಿ ತರೂರ್‌ ಅಥವಾ ಇತರ ಅರ್ಹರಿಗೆ ನೀಡಬೇಕು’ ಎಂದು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಆಪ್ತರಾಗಿದ್ದ ದಿ. ಅಹ್ಮದ್‌ ಪಟೇಲ್ ಪುತ್ರ ಫೈಸಲ್‌ ಪಟೇಲ್ ಆಗ್ರಹಿಸಿದ್ದಾರೆ.ಶುಕ್ರವಾರ ಮಾತನಾಡಿದ ಫೈಸಲ್‌, ‘ಕಾಂಗ್ರೆಸ್‌ ಪಕ್ಷದ ಅಧಿಕಾರವು ಶಶಿ ತರೂರ್‌ ಅಥವಾ ಗಾಂಧಿಯವರಿಗಿಂತ 25 ಪಟ್ಟು ಅರ್ಹರಾಗಿರುವ ನಾಯಕರ ಕೈಯಲ್ಲಿರಬೇಕು. ‘ಕಳೆದುಹೋದ ಗಾಂಧಿಗಳು’ ಅಸಮರ್ಥರು. ಅವರು ಬದಿಗೆ ಸರಿಯಬೇಕು’ ಎಂದರು.

ಬಿಜೆಪಿ ಸೇರ್ಪಡೆ ಸುಳಿವು:

‘ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರ ಜತೆ ಸಂಪರ್ಕದಲ್ಲಿದ್ದು, ಬಿಜೆಪಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಅಲ್ಲಿ ಕಠಿಣ ಪರಿಶ್ರಮಿಗಳು ಮತ್ತು ಅದ್ಭುತ ಕೆಲಸದ ಸಂಸ್ಕೃತಿಯಿದೆ’ ಎಂದು ಪರೋಕ್ಷವಾಗಿ ಬಿಜೆಪಿ ಸೇರುವ ಸುಳಿವು ನೀಡಿದರು.

ಇನ್ನೂ 10 ಲಕ್ಷ ಮಹಿಳೆಯರಿಗೆ ಸಿಎಂ ನಿತೀಶ್‌ ₹10,000

ಪಟನಾ: ಬಿಹಾರದಲ್ಲಿ ಎನ್‌ಡಿಎ ಜಯಕ್ಕೆ ಕಾರಣವಾದ ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್‌ ಯೋಜನೆಯ ಭಾಗವಾಗಿ ಸಿಎಂ ನಿತೀಶ್‌ ಕುಮಾರ್‌ ಶುಕ್ರವಾರ 10 ಲಕ್ಷ ಮಹಿಳೆಯರಿಗೆ ಕೊನೆಯ ಕಂತಿನಲ್ಲಿ 10,000 ರು. ವಿತರಿಸಿದ್ದಾರೆ.

ವಿಧಾನಸಭೆ ಚುನಾವಣೆಗೂ ಮುನ್ನ ಪರಿಚಯಿಸಲಾಗಿದ್ದ ಈ ಯೋಜನೆಯಡಿ ಒಟ್ಟು 4 ಹಂತದಲ್ಲಿ 1.56 ಕೋಟಿ ಮಹಿಳೆಯರಿಗೆ ಹಣವನ್ನು ಹಂಚಲಾಗಿದೆ. ಶುಕ್ರವಾರ ನೀಡಿದ್ದು ಕೊನೆಯ ಕಂತಾಗಿದೆ.ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಉತ್ತೀಜಿಸುವ ಸಲುವಾಗಿ ಆ.29ರಂದು ಈ ಯೋಜನೆ ಘೋಷಣೆಯಾಗಿದ್ದು, ಮೊದಲ ಹಂತದಲ್ಲಿ ಸೆ.26ರಂದು 1 ಕೋಟಿ ಮಹಿಳೆಯರು, ಅಕ್ಟೋಬರ್‌ನಲ್ಲಿ 2ನೇ ಮತ್ತು 3ನೇ ಹಂತದಲ್ಲಿ 46 ಲಕ್ಷ ಸ್ತ್ರೀಯರು ಮತ್ತು ನ.28ರಂದು ಕೊನೆಯ ಹಂತದಲ್ಲಿ 10 ಲಕ್ಷ ಜನರು ಈ ಮೊತ್ತವನ್ನು ಪಡೆದಿದ್ದು, ಒಟ್ಟು ಫಲಾನುಭವಿಗಳ ಸಂಖ್ಯೆ 1.56 ಕೋಟಿ ಆಗಿದೆ. ಚುನಾವಣೆಯಲ್ಲಿ ನಿತೀಶ್‌ ಗೆಲುವಿಗೆ, ಮಹಿಳಾ ಮತಗಳನ್ನು ಸೆಳೆದ ಈ ಯೋಜನೆಯೂ ಕಾರಣವಾಗಿತ್ತು ಎಂಬ ವಿಶ್ಲೇಷಣೆಯಿದೆ.ಏನಿದು ಯೋಜನೆ?:ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್‌ ಯೋಜನೆಯಡಿ, ಸಣ್ಣ ಉದ್ಯಮವನ್ನು ಆರಂಭಿಸಲು ಮಹಿಳೆಯರಿಗೆ ಮೊದಲಿಗೆ 10,000 ರು. ನೀಡಲಾಗುವುದು. ಇದನ್ನು ಬಳಸಿ ಅವರು ವ್ಯಾಪಾರ/ವೃತ್ತಿ ಆರಂಭಿಸಬೇಕು. 6 ತಿಂಗಳ ಬಳಿಕ ಅವರು ಉದ್ಯಮದಲ್ಲಿ ಆರಂಭಿಕ ಯಶಸ್ಸು ಕಂಡರೆ, ಅಂಥವರಿಗೆ 2 ಲಕ್ಷ ರು. ನೀಡಲಾಗುವುದು.

ತಿರುಪತಿ ಲಡ್ಡುಗೆ ನಕಲಿ ತುಪ್ಪ: ಟಿಟಿಡಿಯ ಮೊದಲ ಸಿಬ್ಬಂದಿ ಬಂಧನ

ತಿರುಪತಿ: ತಿರುಮಲ ತಿಮ್ಮಪ್ಪನ ದೇವಸ್ಥಾನದಲ್ಲಿ ಪ್ರಸಾದವಾಗಿ ಕೊಡಲಾಗುವ ಶ್ರೀವಾರಿ ಲಡ್ಡು ತಯಾರಿಕೆಯಲ್ಲಿ ನಕಲಿ ತುಪ್ಪ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎಸ್‌ಐಟಿ, ಟಿಟಿಡಿಯ ಓರ್ವ ಅಧಿಕಾರಿಯನ್ನು ಬಂಧಿಸಿದೆ. ಇದು ಪ್ರಕರಣದಲ್ಲಿ ಟಿಟಿಡಿ ಸಿಬ್ಬಂದಿಯ ಮೊದಲ ಬಂಧನವಾಗಿದೆ ಹಾಗೂ ಬಾಹ್ಯ ವ್ಯಕ್ತಿಗಳ ಬಂಧನ ಸೇರಿ ಬಂಧಿತರ ಸಂಖ್ಯೆ 9ಕ್ಕೇರಿದೆ.ಬಂಧಿತ ಸುಬ್ರಹ್ಮಣ್ಯಂ ಅವರು ತುಪ್ಪ ಉತ್ಪಾದನಾ ಘಟಕಗಳನ್ನು ಪರಿಶೀಲಿಸುವ ತಾಂತ್ರಿಕ ತಂಡದಲ್ಲಿದ್ದರು. ಈ ವೇಳೆ, ಖಾಸಗಿ ತುಪ್ಪ ಉತ್ಪಾದಕರಿಂದ ಲಂಚ ಪಡೆದು ಗುಣಮಟ್ಟದ ಪ್ರಮಾಣಪತ್ರ ನೀಡುತ್ತಿದ್ದರು ಎಂಬ ಆರೋಪವಿದೆ.ಇವರನ್ನು ಗುರುವಾರ 1.30ರ ಸುಮಾರಿಗೆ ವಶಕ್ಕೆ ಪಡೆದ ಎಸ್‌ಐಟಿ, ಎಸಿಬಿ ಕೋರ್ಟ್‌ ಮುಂದೆ ಹಾಜರುಪಡಿಸಿತು. ಅವರನ್ನು 15 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

ಶಬರಿಮಲೆ ಭಕ್ತರಿಗೆ ವಿಮಾನದಲ್ಲಿ ಇರುಮುಡಿಗೆ ಅವಕಾಶ

ಹೈದರಾಬಾದ್‌: ಶಬರಿಮಲೆಗೆ ತೆರಳುವ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶುಕ್ರವಾರದಿಂದ ಜ.20ರವರೆಗೆ ವಿಮಾನದ ಕ್ಯಾಬಿನ್‌ನಲ್ಲೇ ಇರುಮುಡಿ ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ತಿಳಿಸಿದ್ದಾರೆ.‘‘ಭಕ್ತರಿಗೆ ಅನುಕೂಲವಾಗಲೆಂದು ಕ್ಯಾಬಿನ್‌ನಲ್ಲಿಯೇ ಇರುಮುಡಿ ಇಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಭಕ್ತರ ಭಾವನೆಗಳಿಗೆ ಗೌರವಿಸುವ ಕೆಲಸವನ್ನು ಎನ್‌ಡಿಎ ಸರ್ಕಾರ ಮಾಡಿದೆ’ ಎಂದು ಎಂದಿದ್ದಾರೆ. ಕ್ಯಾಬಿನ್‌ ಲಗೇಜ್‌ ಎಂದು ಇರುಮುಡಿಯನ್ನು ಪರಿಗಣಿಸದೇ ಇದ್ದರೆ ಚೆಕ್‌-ಇನ್‌ ಬ್ಯಾಗೇಜ್ ಎಂದು ಪರಿಗಣಿಸಲಾಗುತ್ತಿತ್ತು.

ವನ್ಯಮೃಗಗಳಿಂದ ಭಕ್ತರಿಗೆ ರಕ್ಷಣೆ:ಶಬರಿಮಲೆ ಮಾರ್ಗದಲ್ಲಿ ವನ್ಯಮೃಗಗಳು ಭಕ್ತರ ಮೇಲೆ ದಾಳಿ ಮಾಡದಂತೆ ನಿಗಾ ವಹಿಸಲು ಕೇರಳ ಸರ್ಕಾರ ವಿಶೇಷ ತಂಡಗಳನ್ನು ನಿಯೋಜಿಸಿದೆ. 12 ಪರಿಣತ ಉರಗ ತಜ್ಞರು, 60 ಪರಿಸರ ಗಾರ್ಡ್‌ಗಳು, ಕ್ಷಿಪ್ರ ಸ್ಪಂದನಾ ತಂಡಗಳು ಚಾರಣ ಮಾರ್ಗದುದ್ದಕ್ಕೂ ಕಾರ್ಯನಿರ್ವಹಿಸಲಿದೆ ಎಂದು ಸರ್ಕಾರ ತಿಳಿಸಿದೆ.