ಥಾಯ್ಲೆಂಡ್‌ನ ದಕ್ಷಿಣ ಭಾಗದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ 145 ಮಂದಿ ಬಲಿಯಾಗಿದ್ದು, 12 ಪ್ರಾಂತ್ಯಗಳಲ್ಲಿ ಸುಮಾರು 36 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಹವಾಮಾನ ಇಲಾಖೆ ಮತ್ತೊಂದು ಚಂಡಮಾರುತದ ಎಚ್ಚರಿಕೆ ನೀಡಿದೆ.
ಬ್ಯಾಂಕಾಕ್: ಥಾಯ್ಲೆಂಡ್‌ನ ದಕ್ಷಿಣ ಭಾಗದಲ್ಲಿ ಕಳೆದ ಒಂದು ವಾರದಿಂದ ಮುಂದುವರೆದಿರುವ ಭೀಕರ ಪ್ರವಾಹಕ್ಕೆ ಈಗಾಗಲೇ 145 ಮಂದಿ ಬಲಿ ಆಗಿದ್ದಾರೆ ಎಂಬುದನ್ನು ಅಧಿಕಾರಿಗಳು ಶುಕ್ರವಾರ ದೃಢಪಡಿಸಿದ್ದಾರೆ. 12 ಪ್ರಾಂತ್ಯಗಳಲ್ಲಿ ಸುಮಾರು 36 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಸಾವಿರಾರು ಮನೆಗಳು ಕುಸಿದಿವೆ, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ, ರಸ್ತೆ ಸಂಪರ್ಕ ಕಡಿತಗೊಂಡಿದೆ. ಒಂದೇ ಸೊಂಖ್ಲಾ ಪ್ರಾಂತ್ಯದಲ್ಲಿ 110 ಮಂದಿ ಸಾವನ್ನಪ್ಪಿದ್ದು, ಈ ಪ್ರಾಂತ್ಯವೇ ಅತ್ಯಂತ ಹಾನಿಗೊಳಗಾದ ಪ್ರದೇಶವಾಗಿದೆ. ಮಳೆ ನೀರು ಕಡಿಮೆಯಾಗುತ್ತಿದ್ದರೂ ಹೊಸ ಪ್ರದೇಶಗಳಿಗೆ ಪ್ರವೇಶ ಸಾಧ್ಯವಾದಂತೆ ಸಾವಿನ ಸಂಖ್ಯೆ ತೀವ್ರವಾಗಿ ಏರಿಕೆ ಕಂಡಿದೆ ಎಂದು ಸರ್ಕಾರ ಹೇಳಿದೆ. ಹವಾಮಾನ ಇಲಾಖೆ ಮುಂದಿನ ದಿನಗಳಲ್ಲಿ ಇನ್ನೊಂದು ಬಲವಾದ ಚಂಡಮಾರುತದ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದೆ. ಶುಕ್ರವಾರದಿಂದ ನೀರಿನ ಮಟ್ಟ ಸ್ವಲ್ಪ ಇಳಿಮುಖವಾಗುತ್ತಿದೆ ಎಂದು ಇಲಾಖೆಯ ವರದಿ ತಿಳಿಸಿದೆ.
36 ಲಕ್ಷ ಜನರಿಗೆ ಸಂಕಷ್ಟ
ಥೈಲ್ಯಾಂಡ್‌ನ ವಿಪತ್ತು ನಿರ್ವಹಣಾ ಇಲಾಖೆ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ದಕ್ಷಿಣದ 12 ಪ್ರಾಂತ್ಯಗಳು ದುರಂತಕ್ಕೆ ಒಳಗಾಗಿವೆ. 1.2 ದಶಲಕ್ಷ ಮನೆಗಳು ಹಾನಿಗೊಳಗಾಗಿವೆ. 3.6 ದಶಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ ಸಂಕಷ್ಟಕ್ಕೀಡಾಗಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ನೀರಿನ ಮಟ್ಟ ತಗ್ಗಿದರೂ, ಇನ್ನೂ ಅನೇಕ ಪ್ರದೇಶಗಳು ಸಂಪೂರ್ಣವಾಗಿ ಜಲಾವೃತ ಸ್ಥಿತಿಯಲ್ಲೇ ಉಳಿದಿವೆ. ಹವಾಮಾನ ಇಲಾಖೆ ಮಳೆ ತಗ್ಗುತ್ತಿದ್ದುದಾಗಿ ತಿಳಿಸಿದರೂ, ಕೆಲವು ದಕ್ಷಿಣ ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಮಳೆಯ ಸಾಧ್ಯತೆ ಮುಂದುವರಿಯುತ್ತದೆ ಎಂದು ಎಚ್ಚರಿಸಿದೆ.
ಹಾಟ್ ಯೈ ಸೇರಿದಂತೆ ಗಡಿ ಪ್ರದೇಶಗಳಲ್ಲಿ ಗಂಭೀರ ಪರಿಸ್ಥಿತಿ
ಮಲೇಷ್ಯಾ ಗಡಿಯ ಸಮೀಪದ ಹಾಟ್ ಯೈ ಪ್ರದೇಶದಲ್ಲಿ ಪ್ರವಾಹ ಅತ್ಯಂತ ಗಂಭೀರ ಸ್ಥಿತಿಗೆ ತಲುಪಿದೆ. ಆಳವಾದ ನೀರಿನಲ್ಲಿ ಮುಳುಗಿ ಹೋಗಿದ್ದ ರಸ್ತೆ ಮತ್ತು ಮನೆಗಳಿಂದ ರಕ್ಷಣಾ ಸಿಬ್ಬಂದಿ ಬಹುಶಃ ಮೊದಲ ಬಾರಿಗೆ ಪ್ರವೇಶ ಪಡೆದು, ಹೆಚ್ಚು ಶವಗಳನ್ನು ಸಾಗಿಸಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ. ಕೆಲವು ಆಸ್ಪತ್ರೆಗಳ ಶವಾಗಾರಗಳು ಸಾಮರ್ಥ್ಯ ಮೀರಿ ತುಂಬಿಕೊಂಡಿವೆ. ಹೀಗಾಗಿ ಮೃತದೇಹಗಳನ್ನು ಸಂಗ್ರಹಿಸಲು ಶೈತ್ಯೀಕರಿಸಿದ ಟ್ರಕ್‌ಗಳ ನೆರವು ಪಡೆಯಲಾಗುತ್ತಿದೆ.
"ನಾವು ಈಗ ಪುನರ್ವಸತಿ ಹಂತಕ್ಕೆ ಹೋಗುತ್ತಿದ್ದೇವೆ. ನಗರಗಳನ್ನು ಸಾಧ್ಯವಾದಷ್ಟು ಬೇಗ ಸಾಮಾನ್ಯ ಸ್ಥಿತಿಗೆ ತರಲು ಬೃಹತ್ ಮಟ್ಟದ ಶ್ರಮ ಮುಂದುವರೆಯುತ್ತಿದೆ," ಎಂದು ಪ್ರವಾಹ ಪರಿಹಾರ ಕಾರ್ಯಾಚರಣೆ ಕೇಂದ್ರದ ನಿರ್ದೇಶಕ ಪ್ಯಾರಡಾರ್ನ್ ಪ್ರಿಸ್ಸನನಂತಕುಲ್ ಮಾಹಿತಿ ನೀಡಿದ್ದಾರೆ. ಇಲ್ಲಿಯವರೆಗೆ 14,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದ್ದು, ನೂರಾರು ಗ್ರಾಮಗಳು ಇನ್ನೂ ಜಲಾವೃತವಾಗಿವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಉರುಳಿಬಿದ್ದ ವಾಹನಗಳು, ಪುಡಿಪುಡಿಯಾದ ವಿದ್ಯುತ್ ಕಂಬಗಳು, ನೀರಿನಲ್ಲಿ ತೇಲುತ್ತಿರುವ ಕಬ್ಬಿಣದ ತುಂಡುಗಳು ಮತ್ತು ಭಗ್ನಾವಶೇಷಗಳು, ಸಂಪೂರ್ಣ ಮುಳುಗಿದ ಮನೆಗಳು, ಜನರು ಮನೆಗಳ ಮೇಲ್ಚಾವಣಿಗಳಲ್ಲಿ ಆಶ್ರಯ ಪಡೆದಿರುವುದು. ರಸ್ತೆಗಳು ಮಾಯವಾಗಿರುವುದು ಈ ಎಲ್ಲಾ ದೃಶ್ಯಗಳು ವಿಪತ್ತು ವಲಯದ ತೀವ್ರತೆಗೆ ಸಾಕ್ಷಿಯಾಗಿವೆ.
ಆಗ್ನೇಯ ಏಷ್ಯಾದಾದ್ಯಂತ ಮಳೆ ಆರ್ಭಟ: 300ಕ್ಕೂ ಹೆಚ್ಚು ಸಾವುಗಳು
ದಕ್ಷಿಣ ಥೈಲ್ಯಾಂಡ್‌ನಲ್ಲಿ ಸಂಭವಿಸಿದ ಈ ಭೀಕರ ಪ್ರವಾಹವು ಆಗ್ನೇಯ ಏಷ್ಯಾದ ತೀವ್ರ ಮಾನ್ಸೂನ್ ಹಾನಿಯ ಭಾಗವಾಗಿದೆ. ಥೈಲ್ಯಾಂಡ್, ಇಂಡೋನೇಷ್ಯಾ ಮತ್ತು ಮಲೇಷ್ಯಾವನ್ನು ಸೇರಿ, ಈ ಪ್ರದೇಶದಲ್ಲಿ ಒಟ್ಟು 300 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ. ಹವಾಮಾನ ಬದಲಾವಣೆ ಪರಿಣಾಮ ಬಿರುಗಾಳಿ ಮತ್ತು ಮಳೆ ಹೆಚ್ಚಳವಾಗಿದೆ. ಈ ಎಲ್ಲವೂ ಇತ್ತೀಚಿನ ದಕ್ಷಿಣ ಥೈಲ್ಯಾಂಡ್ ಪ್ರವಾಹದ ಗಂಭೀರತೆಗೆ ಕಾರಣವಾಗಿವೆ ಎಂಬುದು ಹವಾಮಾನ ತಜ್ಞರ ಅಭಿಪ್ರಾಯ.


