ಇಸ್ರೇಲ್‌ ಶುಕ್ರವಾರ ನಡೆಸಿದ ದಾಳಿಯಲ್ಲಿ ಮುಖ್ಯವಾಗಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ ಮತ್ತು ಅದರ ಮುಖ್ಯಸ್ಥ ಜ.ಹೊಸ್ಸೇನ್‌ ಸಲಾಮಿ ಅವರನ್ನೇ ಗುರಿಯಾಗಿಸಿಕೊಂಡಿದೆ. ದಾಳಿಯಲ್ಲಿ ರೆವಲ್ಯೂಷನರಿ ಗಾರ್ಡ್ಸ್‌ಗೆ ಭಾರೀ ಹೊಡೆತ ಬಿದ್ದಿರುವ ಜೊತೆಗೆ ಅದರ ಮುಖ್ಯಸ್ಥ ಸಲಾಮಿ ಕೂಡಾ ಸಾವನ್ನಪ್ಪಿದ್ದಾನೆ.

ಟೆಲ್ ಅವಿವ್: ಇಸ್ರೇಲ್‌ ಶುಕ್ರವಾರ ನಡೆಸಿದ ದಾಳಿಯಲ್ಲಿ ಮುಖ್ಯವಾಗಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ ಮತ್ತು ಅದರ ಮುಖ್ಯಸ್ಥ ಜ.ಹೊಸ್ಸೇನ್‌ ಸಲಾಮಿ ಅವರನ್ನೇ ಗುರಿಯಾಗಿಸಿಕೊಂಡಿದೆ. ದಾಳಿಯಲ್ಲಿ ರೆವಲ್ಯೂಷನರಿ ಗಾರ್ಡ್ಸ್‌ಗೆ ಭಾರೀ ಹೊಡೆತ ಬಿದ್ದಿರುವ ಜೊತೆಗೆ ಅದರ ಮುಖ್ಯಸ್ಥ ಸಲಾಮಿ ಕೂಡಾ ಸಾವನ್ನಪ್ಪಿದ್ದಾನೆ. ಇದು ಇರಾನ್‌ ಪಾಲಿಗೆ ದೊಡ್ಡ ಹೊಡೆತ ಎಂದೇ ವಿಶ್ಲೇಷಿಸಲಾಗಿದೆ.

ರೆವಲ್ಯೂಷನರಿ ಗಾರ್ಡ್ಸ್‌ ಇರಾನ್‌ನ ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಿ ಪಡೆಯಾಗಿದ್ದು, 1979ರ ಇಸ್ಲಾಮಿಕ್‌ ಕ್ರಾಂತಿ ಬಳಿ ಇದನ್ನು ಸ್ಥಾಪಿಸಲಾಗಿತ್ತು. ಅರೆಸೇನಾಪಡೆಯಾಗಿ ದೇಶದ ಆಂತರಿಕ ಭದ್ರತೆ ಉಸ್ತುವಾರಿ ಹೊತ್ತಿರುವ ಇದು ನಂತರದ ವರ್ಷಗಳಲ್ಲಿ ಇರಾನ್‌ನ ನೆರೆಹೊರೆಯ ಆಪ್ತ ದೇಶಗಳಾದ ಸಿರಿಯಾ, ಲೆಬನಾನ್ ಸೇರಿದಂತೆ ಮಧ್ಯಪ್ರಾಚ್ಯದ ಹಲವು ದೇಶಗಳಿಗೆ ನೆರವಿನ ಹಸ್ತ ಚಾಚುತ್ತಿದೆ.

ಇದು ದೇಶದ ಸಶಸ್ತ್ರ ಪಡೆಗಳಿಗೆ ಸಮಾನಾಂತರವಾಗಿ ಕಾರ್ಯನಿರ್ವಹಿತ್ತಿದ್ದು, ಇರಾನ್‌ನ ಬ್ಯಾಲೆಸ್ಟಿಕ್‌ ಕ್ಷಿಪಣಿಗಳ ಭಂಡಾರಗಳ ಮೇಲೆ ಪೂರ್ಣ ನಿಯಂತ್ರಣ ಹೊಂದಿದೆ. ಇಸ್ರೇಲ್‌- ಹಮಾಸ್‌ ನಡುವಿನ ಯುದ್ಧದ ವೇಳೆ ರೆವಲ್ಯೂಷನರಿ ಗಾರ್ಡ್ಸ್‌ ಈ ಕ್ಷಿಪಣಿಗಳ ಬಳಸಿಕೊಂಡೇ ಇಸ್ರೇಲ್‌ ಮೇಲೆ ದಾಳಿ ನಡೆಸಿತ್ತು.

ಈ ಸೇನೆಯ ಮುಖ್ಯಸ್ಥರಾಗಿ ಸಲಾಮಿಯನ್ನು 2019ರಲ್ಲಿ ನೇಮಿಸಲಾಗಿತ್ತು. 1980ರ ಇರಾನ್‌- ಇರಾಕ್‌ ಯುದ್ಧದ ವೇಳೆ ರೆವಲ್ಯೂಷನರಿ ಗಾರ್ಡ್ಸ್‌ ಸೇರಿಕೊಂಡಿದ್ದ ಸಲಾಮಿ ನಂತರದ ವರ್ಷಗಳಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿ ಬಳಿಕ ಇದರ ಮುಖ್ಯಸ್ಥರಾಗಿದ್ದರು.

ರೆವಲ್ಯೂಷನರಿ ಗಾರ್ಡ್ಸ್‌ನ ಇತರೆ ನಾಯಕರಂತೆ ಸಲಾಮಿ ಕೂಡಾ ಇಸ್ರೇಲ್‌ ವಿರುದ್ಧ ಕ್ರಾಂತಿಕಾರಕ ಮತ್ತು ಪ್ರಚೋದನಕಾರಿ ಭಾಷಣಗಳ ಮೂಲಕ ಇಸ್ರೇಲ್‌ ಕೆಂಗಣ್ಣಿಗೆ ಗುರಿಯಾಗಿದ್ದರು. ಹಲವು ಬಾರಿ ಅಮೆರಿಕಕ್ಕೂ ನೇರ ಬೆದರಿಕೆ ಹಾಕಿದ್ದರು. ಕಳೆದ ವರ್ಷ ಇಸ್ರೇಲ್ ಮೇಲೆ ನಡೆದ ಸರಣಿ ಡ್ರೋನ್‌ ಮತ್ತು ಕ್ಷಿಪಣಿ ದಾಳಿಗೂ ಸಲಾಮಿ ಕಾರಣರಾಗಿದ್ದರು.

ಹೀಗಾಗಿ ಸಲಾಮಿಯನ್ನು ಗುರಿಯಾಗಿಸಿ ದಾಳಿ ನಡೆಸಿದ ಇಸ್ರೇಲ್‌ ತನ್ನ ಶತ್ರು ಹತ್ಯೆಗೈಯುವಲ್ಲಿ ಯಶಸ್ವಿಯಾಗಿದೆ.

 ಇಸ್ರೇಲ್‌, ಈ ದಾಳಿಯನ್ನು ಇರಾನ್‌ನೊಳಗಿಂದಲೇ ಸಂಘಟಿಸಿತ್ತು

ಶುಕ್ರವಾರ ಇರಾನ್‌ ಮೇಲೆ ದಾಳಿ ನಡೆಸಿದ್ದ ಇಸ್ರೇಲ್‌, ಈ ದಾಳಿಯನ್ನು ಇರಾನ್‌ನೊಳಗಿಂದಲೇ ಸಂಘಟಿಸಿತ್ತು ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ. ಇದು ಶತ್ರು ದೇಶದೊಳಗೆ ನುಗ್ಗಿ ದಾಳಿ ನಡೆಸುವ ಇಸ್ರೇಲ್‌, ಅದರ ಸೇನೆ ಮತ್ತು ಅದರ ಗುಪ್ತಚರ ಸಂಸ್ಥೆ ಮೊಸಾದ್‌ನ ಸಾಮರ್ಥ್ಯವನ್ನು ಮತ್ತೊಮ್ಮೆ ಜಗತ್ತಿನ ಮುಂದೆ ಇಟ್ಟಿದೆ.

ಭದ್ರತಾ ಪಡೆಯ ಹಿರಿಯ ಅಧಿಕಾರಿಗಳನ್ನು ಉಲ್ಲೇಖಿಸಿ ಈ ಕುರಿತು ವರದಿ ಪ್ರಕಟಿಸಿರುವ ‘ದ ಟೈಮ್ಸ್‌ ಆಫ್‌ ಇಸ್ರೇಲ್‌’ ಪತ್ರಿಕೆ, ಇಸ್ರೇಲಿ ಗುಪ್ತಚರ ಸಂಸ್ಥೆ ಮೊಸಾದ್‌, ಇಸ್ರೇಲ್‌ನ ರಕ್ಷಣಾ ಪಡೆಗಳ ನಿಕಟ ಸಹಯೋಗದೊಂದಿಗೆ ಇರಾನ್‌ನಲ್ಲೇ ರಹಸ್ಯವಾಗಿ ದಾಳಿ ನೆಲೆ ಸ್ಥಾಪಿಸಿ, ಅಲ್ಲಿಗೇ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಸಾಗಿಸಿ ದಾಳಿ ನಡೆಸಿತ್ತು ಎಂದು ಹೇಳಿದೆ.

ವರದಿಯಲ್ಲೇನಿದೆ?: 

 ಇರಾನ್‌ನೊಳಗೇ ರಹಸ್ಯವಾಗಿ ಸ್ಥಾಪಿಸಿದ್ದ ಕ್ಷಿಪಣಿ, ಡ್ರೋನ್‌ ಉಡ್ಡಯನ ನೆಲೆಗಳನ್ನು ಇಸ್ರೇಲಿ ಯೋಧರು ರಾತ್ರೋರಾತ್ರಿ ಸಕ್ರಿಯಗೊಳಿಸಿದರು. 

ಮತ್ತೊಂದೆಡೆ ಇಸ್ರೇಲ್‌ನ ಇತರೆ ಶಸ್ತ್ರಾಸ್ತ್ರಗಳು ಇರಾನ್‌ನ ವಾಯುರಕ್ಷಣಾ ಪಡೆಯನ್ನು ಧ್ವಂಸಗೊಳಿಸುವ ಕೆಲಸ ಮಾಡಿದವು. ಇದು ಇಸ್ರೇಲ್‌ನ ಯುದ್ಧ ವಿಮಾನಗಳು ತಮ್ಮ ದಾಳಿಯನ್ನು ಸುಗಮವಾಗಿ ನಡೆಸಲು ಅನುವು ಮಾಡಿಕೊಟ್ಟಿತು. ಈ ಹಂತದಲ್ಲೇ ಇರಾನ್‌ನೊಳಗೆ ಪ್ರವೇಶಿಸಿದ್ದ ಮೊಸಾದ್ ಕಮಾಂಡೋಗಳು ಇರಾನ್‌ನೊಳಗಿನಿಂದಲೇ ಇರಾನ್‌ನ ವಾಯುರಕ್ಷಣಾ ವ್ಯವಸ್ಥೆ ಮತ್ತು ಕ್ಷಿಪಣಿ ಉಡ್ಡಯನ ಕೇಂದ್ರಗಳನ್ನು ಧ್ವಂಸಗೊಳಿಸುವ ಕೆಲಸ ಮಾಡಿದರು.

ಹೀಗೆ ಏಕಕಾಲಕ್ಕೆ ಇರಾನ್‌ನೊಳಗೆ ಮತ್ತು ಹೊರಗಿನಿಂದಲೂ ಇರಾನ್‌ ಮೇಲೆ ನಡೆಸಿದ ದಾಳಿ, ಇರಾನ್‌ ಸೇನಾಪಡೆಗಳನ್ನು ಸಂಪೂರ್ಣ ವಿಚಲಿತಗೊಳಿಸಿತು ಎಂದು ವರದಿ ತಿಳಿಸಿದೆ.