2023ರಲ್ಲಿ ಮೊದಲ ಬಾರಿ ಚಂದ್ರನ ದಕ್ಷಿಣ ಧ್ರುವ ತಲುಪಿದ ಭಾರತದ ಚಂದ್ರಯಾನ-3ರ ಬಗ್ಗೆ ಅಮೆರಿಕ ಸಂಸದ ರಿಚ್ ಮೆಕ್‌ಕಾರ್ಮಿಕ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ‘ಅಮೆರಿಕಕ್ಕೆ ಒಂದು ಕಟ್ಟಡ ಕಟ್ಟಲೂ ಕಡಿಮೆ ಬೀಳುವ ಹಣದಲ್ಲಿ ಭಾರತ ಚಂದ್ರನ ಅಂಗಳಕ್ಕೆ ತಲುಪಿದೆ’ ಎಂದು ಹೇಳಿದ್ದಾರೆ.

ವಾಷಿಂಗ್ಟನ್‌: 2023ರಲ್ಲಿ ಮೊದಲ ಬಾರಿ ಚಂದ್ರನ ದಕ್ಷಿಣ ಧ್ರುವ ತಲುಪಿದ ಭಾರತದ ಚಂದ್ರಯಾನ-3ರ ಬಗ್ಗೆ ಅಮೆರಿಕ ಸಂಸದ ರಿಚ್ ಮೆಕ್‌ಕಾರ್ಮಿಕ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ‘ಅಮೆರಿಕಕ್ಕೆ ಒಂದು ಕಟ್ಟಡ ಕಟ್ಟಲೂ ಕಡಿಮೆ ಬೀಳುವ ಹಣದಲ್ಲಿ ಭಾರತ ಚಂದ್ರನ ಅಂಗಳಕ್ಕೆ ತಲುಪಿದೆ’ ಎಂದು ಹೇಳಿದ್ದಾರೆ.

ಭಾರತ ಮತ್ತು ಅಮೆರಿಕ ಸಂಬಂಧದ ಚರ್ಚೆಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘726 ಕೋಟಿ ರು.(80 ಮಿಲಿಯನ್‌ ಡಾಲರ್‌) ಖರ್ಚಿನಲ್ಲಿ ಭಾರತವು ತನ್ನ ಬಾಹ್ಯಾಕಾಶ ನೌಕೆಯನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಿತು. ಆದರೆ ಅಮೆರಿಕಕ್ಕೆ ಇಷ್ಟು ಹಣದಲ್ಲಿ ಒಂದು ಕಟ್ಟಡ ಕಟ್ಟುವುದೂ ಕಷ್ಟ’ ಎಂದರು. ಈ ಮೂಲಕ, ಬಜೆಟ್‌ ಸ್ನೇಹಿ ಯೋಜನೆಗಳಿಗೆ ಹೆಸರುವಾಸಿಯಾಗಿರುವ ಇಸ್ರೋವನ್ನು ಶ್ಲಾಘಿಸಿದ್ದಾರೆ.

ಡಾಲರ್‌ ಎದುರು ರು. ಮೌಲ್ಯ 90.78ಕ್ಕಿಳಿಕೆ: ಸಾರ್ವಕಾಲಿಕ ಕನಿಷ್ಠ

ಮುಂಬೈ: ಜಾಗತಿಕ ಆರ್ಥಿಕ ಅಸ್ಥಿರತೆಯ ನಡುವೆ ಶುಕ್ರವಾರ ಡಾಲರ್‌ ಎದುರು ರುಪಾಯಿ ಮೌಲ್ಯ 44 ಪೈಸೆಯಷ್ಟು ಭಾರೀ ಕುಸಿತ ಕಂಡು 90.78ಕ್ಕೆ ತಲುಪಿದೆ. ಇದು ಡಾಲರ್‌ ಎದುರು ರುಪಾಯಿಯ ಸಾರ್ವಕಾಲಿಕ ಕನಿಷ್ಠ ಮೌಲ್ಯವಾಗಿದೆ. ಸತತ ಮೂರು ದಿನಗಳಿಂದಲೂ ರುಪಾಯಿ ಮೌಲ್ಯ ಕುಸಿತದ ಹಾದಿಯಲ್ಲಿದೆ. ಷೇರುಪೇಟೆಯಿಂದ ಸಾಂಸ್ಥಿಕೆ ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಹಣ ಹಿಂಪಡೆದಿದ್ದು, ಡಾಲರ್‌ಗೆ ಬೇಡಿಕೆ ಹೆಚ್ಚಿದ್ದು ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ.

ಈ ವರ್ಷ ‘ವಂದೇ ಮಾತರಂ’ ಥೀಮ್‌ನಲ್ಲಿ ಗಣರಾಜ್ಯೋತ್ಸವ

ನವದೆಹಲಿ: ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ಗೆ 150 ವರ್ಷಗಳು ಪೂರ್ಣವಾಗಿರುವ ಹಿನ್ನೆಲೆಯಲ್ಲಿ ಈ ವರ್ಷದ ಗಣರಾಜ್ಯ ದಿನವನ್ನು ಇದೇ ಥೀಮ್‌ನಲ್ಲಿ ರೂಪಿಸಲಾಗಿದೆ. ಕರ್ತವ್ಯ ಪಥದುದ್ದಕ್ಕೂ ಗೀತೆಯ ಆರಂಭಿಕ ಚರಣಗಳನ್ನು ವಿವರಿಸುವ ವರ್ಣಚಿತ್ರ ಪ್ರದರ್ಶಿಸಲಾಗುತ್ತದೆ. ಕವಿ ಬಂಕಿಮ ಚಂದ್ರ ಚಟರ್ಜಿಯವರಿಗೆ ಗೌರವ ಸಲ್ಲಿಸುವಂತೆ ಮುಖ್ಯ ವೇದಿಕೆಯನ್ನು ಅಲಂಕರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರೇಡ್‌ ಸ್ಥಳದ ಸುತ್ತಲಿನ ಆವರಣದಲ್ಲಿ ಈ ಹಿಂದಿನಂತೆ ‘ವಿವಿಐಪಿ’ ಮತ್ತು ಇತರ ಲೇಬಲ್‌ಗಳನ್ನು ಬಳಸಲಾಗುವುದಿಲ್ಲ. ಬದಲಾಗಿ, ಭಾರತೀಯ ನದಿಗಳ ಹೆಸರಿಡಲಾಗಿದೆ. ಕಾರ್ಯಕ್ರಮದ ಆಹ್ವಾನ ಪತ್ರದಲ್ಲಿ ವಂದೇ ಮಾತರಂ ಲೋಗೊ ಮುದ್ರಿಸಲಾಗಿದೆ. ಪರೇಡ್‌ನ ಕೊನೆಯಲ್ಲಿ ಗೀತೆಯ ಥೀಮ್ ಹೊಂದಿರುವ ಬ್ಯಾನರ್ ಹೊತ್ತ ಬಲೂನ್‌ಗಳನ್ನು ಆಕಾಶದಲ್ಲಿ ಹಾರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.ಜ.19ರಿಂದ 26ರವರೆಗೆ 120ಕ್ಕೂ ಹೆಚ್ಚು ನಗರಗಳ 235 ಸ್ಥಳಗಳಲ್ಲಿ ‘ವಂದೇ ಮಾತರಂ’ ವಿಷಯದ ಮೇಲೆ ಸೈನ್ಯ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಬ್ಯಾಂಡ್ ಪ್ರದರ್ಶನಗಳು ನಡೆಯಲಿವೆ. ಕರ್ತವ್ಯ ಪಥದಲ್ಲಿ ತೇಜೇಂದ್ರ ಕುಮಾರ್‌ ಮಿತ್ರ ರಚಿಸಿದ ವಂದೇ ಮಾತರಂ ಕುರಿತಾದ ವರ್ಣಚಿತ್ರಗಳನ್ನು ಪ್ರದರ್ಶಿಲಾಗುವುದು. ಈ ಚಿತ್ರಗಳನ್ನು 1923ರಲ್ಲಿ ಪ್ರಕಟಿಸಲಾಗಿತ್ತು ಎಂದಿದ್ದಾರೆ.

ಕೇಂದ್ರದಿಂದ 242 ಜೂಜು ವೆಬ್‌ಸೈಟ್‌ ಲಿಂಕ್‌ ಬ್ಲಾಕ್‌

ನವದೆಹಲಿ: ಕಳೆದ ಆಗಸ್ಟ್‌ನಲ್ಲಿ ದುಡ್ಡಿನೊಂದಿಗೆ ಆಡುವ ಜೂಜಿನ ಆ್ಯಪ್‌ಗಳನ್ನು ನಿಷೇಧಿಸಿದ್ದ ಕೇಂದ್ರ ಸರ್ಕಾರ ಇದೀಗ ಕಾನೂನುಬಾಹಿರ ಬೆಟ್ಟಿಂಗ್‌ ಮತ್ತು ಜೂಜಿನ 242 ವೆಬ್‌ಸೈಟ್‌ಗಳನ್ನು ಬ್ಯಾನ್‌ ಮಾಡಿದೆ. ಈ ಕುರಿತು ಶುಕ್ರವಾರ ಕೇಂದ್ರ ಸರ್ಕಾರ ಪ್ರಕಟಣೆ ಹೊರಡಿಸಿದೆ. ಈಗಾಗಲೇ ಇಂತಹ 7,800 ವೆಬ್‌ಸೈಟ್‌ಗಳನ್ನು ನಿಷ್ಕ್ರಿಯಗೊಳಿಸಿರುವುದಾಗಿ ವರದಿಯಾಗಿದೆ. ಆನ್‌ಲೈನ್‌ ಜೂಜಿನಿಂದ ಜನರಿಗೆ, ವಿಶೇಷವಾಗಿ ಯುವಕರಿಗೆ ಆಗುವ ಆರ್ಥಿಕ ಮತ್ತು ಸಾಮಾಜಿಕ ತೊಂದರೆಯನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.

ಟೈಂ ಆಯ್ತು ಇನ್ನು ಫ್ಲೈಟ್‌ ಹಾರಿಸಲ್ಲ ಎಂದ ಪೈಲಟ್‌ : ಇಂಡಿಗೋದಲ್ಲಿ ಹೈಡ್ರಾಮ

ಮುಂಬೈ: ಇನ್ನೇನು ವಿಮಾನ ಹೊರಡಬೇಕು ಎನ್ನುವ ಹೊತ್ತಿನಲ್ಲಿ ನನ್ನ ಕೆಲಸದ ಅವಧಿ ಮುಗಿಯಿತು. ಇನ್ನು ವಿಮಾನ ಹಾರಿಸಲ್ಲ ಎಂದು ಇಂಡಿಗೋದ ಪೈಲೆಟ್‌ ಕ್ಯಾತೆ ತೆಗೆದ ಘಟನೆ ಮುಂಬೈನಲ್ಲಿ ನಡೆದಿದೆ. ಇದರಿಂದಾಗಿ ಥಾಯ್ಲೆಂಡ್‌ಗೆ ಹೊರಟಿದ್ದ ವಿಮಾನ 3 ಗಂಟೆ ವಿಳಂಬವಾಗಿದೆ.ಇದರಿಂದ ಆಕ್ರೋಶಗೊಂಡ ಕ್ಯಾಬಿನ್‌ ಸಿಬ್ಬಂದಿ ಪ್ರಯಾಣಿಕರ ಜತೆ ವಾಗ್ವಾದಕ್ಕೆ ಇಳಿದರು. ಅಲ್ಲದೇ ಓರ್ವ ಸಿಬ್ಬಂದಿ ಸಿಟ್ಟಿಗೆದ್ದು ವಿಮಾನದ ನಿರ್ಗಮನ ದ್ವಾರ ಒದ್ದ ಪ್ರಸಂಗವೂ ನಡೆಯಿತು. ಘಟನೆಯ ವಿಡಿಯೋ ಜಾಲತಾಣದಲ್ಲಿ ವೈರಲ್‌ ಆಗಿದೆ. ಬೆಳಿಗ್ಗೆ 10 ಗಂಟೆಗೆ ಕ್ರಾಬಿಯಲ್ಲಿ ಇಳಿಯಬೇಕಿದ್ದ ವಿಮಾನ ಮಧ್ಯಾಹ್ನ 1 ಗಂಟೆಗೆ ಲ್ಯಾಂಡ್‌ ಆಗಿದೆ.

ಈ ಬೆನ್ನಲ್ಲೇ ಇಂಡಿಗೋ ಸ್ಪಷ್ಟನೆ ನೀಡಿದ್ದು, ‘ ವಿಮಾನ ತಡವಾಗಿ ಬಂದಿರುವುದು, ವಾಯು ಸಂಚಾರ ದಟ್ಟಣೆ ಮತ್ತು ಸಿಬ್ಬಂದಿ ಕರ್ತವ್ಯ ಸಮಯ ಮೀರಿರುವುದರಿಂದ ವಿಳಂಬವಾಯಿತು. ಇಬ್ಬರು ಪ್ರಯಾಣಿಕರು ಸಿಬ್ಬಂದಿ ಜತೆ ಅನುಚಿತವಾಗಿ ವರ್ತಿಸಿದರು. ನಿಯಮದ ಪ್ರಕಾರ ಅವರನ್ನು ಕೆಳಗಿಳಿಸಿ, ಭದ್ರತಾ ಸಂಸ್ಥೆಗೆ ಹಸ್ತಾಂತರಿಸಲಾಗಿದೆ’ ಎಂದಿದೆ.