ಐಸಿಸಿ ಅಂಡರ್‌-19 ಏಕದಿನ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಭಾರತವು ಯುಎಸ್‌ಎ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಹೆನಿಲ್‌ ಪಟೇಲ್ ಮಾರಕ ಬೌಲಿಂಗ್ ದಾಳಿಗೆ (6 ವಿಕೆಟ್) ತತ್ತರಿಸಿದ ಯುಎಸ್‌ಎ 107 ರನ್‌ಗಳಿಗೆ ಆಲೌಟ್ ಆಯಿತು. ಅಭಿಗ್ಯಾನ್‌ ಅಜೇಯ 42 ರನ್‌ಗಳ ನೆರವಿನಿಂದ ಭಾರತ ಗೆದ್ದಿತು.  

ಬುಲವಾಯೊ(ಜಿಂಬಾಬ್ವೆ): ಈ ಬಾರಿಯ ಐಸಿಸಿ ಅಂಡರ್‌-19 ಏಕದಿನ ವಿಶ್ವಕಪ್‌ನಲ್ಲಿ 5 ಬಾರಿ ಚಾಂಪಿಯನ್‌ ಭಾರತ ಭರ್ಜರಿ ಶುಭಾರಂಭ ಮಾಡಿದೆ. ಗುರುವಾರ ಯುಎಸ್‌ಎ ವಿರುದ್ಧ ಯುವ ಭಾರತಕ್ಕೆ 6 ವಿಕೆಟ್‌ ಗೆಲುವು ಲಭಿಸಿತು. ಹೆನಿಲ್‌ ಪಟೇಲ್‌ ಮಾರಕ ದಾಳಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟಿತು.

ಟಾಸ್‌ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಯುಎಸ್‌ಎ ತೀವ್ರ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಭಾರತದ ನಿಖರ ದಾಳಿ ಮುಂದೆ ರನ್‌ ಗಳಿಸಲು ಪರದಾಡಿದ ತಂಡ 35.2 ಓವರ್‌ಗಳಲ್ಲಿ 107 ರನ್‌ಗೆ ಆಲೌಟಾಯಿತು. ನಿತೀಶ್‌ ಸುದಿನಿ(36) ತಂಡದ ಪರ ಗರಿಷ್ಠ ವೈಯಕ್ತಿಕ ಮೊತ್ತ ಗಳಿಸಿದರೆ, ಅದ್ನಿತ್‌ 18, ಸಾಹಿಲ್‌ ಗರ್ಗ್‌ 16, ಅರ್ಜುನ್‌ ಮಹೇಶ್‌ 16 ರನ್ ಬಾರಿಸಿದರು. ವೇಗಿ ಹೆನಿಲ್‌ ಪಟೇಲ್‌ 7 ಓವರ್‌ಗಳಲ್ಲಿ 1 ಮೇಡಿನ್‌ ಸಹಿತ 16 ರನ್‌ ನೀಡಿ 6 ವಿಕೆಟ್‌ ಪಡೆದರು.

ಸುಲಭ ಗುರಿ ಪಡೆದ ಭಾರತಕ್ಕೆ ಉತ್ತಮ ಆರಂಭವೇನೂ ಸಿಗಲಿಲ್ಲ. ತಂಡದ ಮೊತ್ತ 25 ಆಗುವಷ್ಟರಲ್ಲಿ ಪ್ರಮುಖ 3 ವಿಕೆಟ್‌ ಬಿದ್ದವು. ವೈಭವ್ ಸೂರ್ಯವಂಶಿ(2), ವೇದಾಂತ್‌ ತ್ರಿವೇದಿ(2) ಮಿಂಚಲಿಲ್ಲ. ಈ ನಡುವೆ ಮಳೆಯಿಂದ ಪಂದ್ಯ ಸ್ಥಗಿತಗೊಂಡಿತು. ಬಳಿಕ 37 ಓವರ್‌ಗಳಲ್ಲಿ 96 ರನ್‌ ಗುರಿ ಪಡೆದ ಭಾರತ ತಂಡ, 17.2 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು. ಅಭಿಗ್ಯಾನ್‌ ಕುಂಡು ಔಟಾಗದೆ 42 ರನ್‌ ಸಿಡಿಸಿದರೆ, ನಾಯಕ ಆಯುಶ್‌ ಮ್ಹಾತ್ರೆ 19, ವಿಹಾನ್‌ ಮಲ್ಹೋತ್ರ 18 ರನ್‌ ಕೊಡುಗೆ ನೀಡಿದರು. ರಿತ್ವಿಕ್‌ ಅಪ್ಪಿಡಿ 2 ವಿಕೆಟ್‌ ಕಿತ್ತರು.

Scroll to load tweet…

ಸ್ಕೋರ್: ಯುಎಸ್‌ಎ 35.2 ಓವರ್‌ಗಳಲ್ಲಿ 107/10 (ನಿತೀಶ್‌ 36, ಹೆನಿಲ್ 5-16, ವೈಭವ್‌ 1-2), ಭಾರತ 17.2 ಓವರ್‌ಗಳಲ್ಲಿ 99/4 (ಡಿಎಲ್‌ಎಸ್‌ ನಿಯಮದನ್ವಯ) (ಅಭಿಗ್ಯಾನ್‌ ಔಟಾಗದೆ 42, ಆಯುಶ್‌ 19, ರಿತ್ವಿಕ್ 2-24)

ಪಂದ್ಯಶ್ರೇಷ್ಠ: ಹೆನಿಲ್‌ ಪಟೇಲ್‌

ವಿಂಡೀಸ್‌ಗೆ ಜಯ

ದಿನದ ಮತ್ತೊಂದು ಪಂದ್ಯದಲ್ಲಿ ತಾಂಜಾನಿಯಾ ವಿರುದ್ಧ ವೆಸ್ಟ್‌ಇಂಡೀಸ್‌ 5 ವಿಕೆಟ್‌ ಗೆಲುವು ಸಾಧಿಸಿತು. ತಾಂಜಾನನಿಯ 122 ರನ್‌ಗೆ ಆಲೌಟಾದರೆ, ವಿಂಡೀಸ್‌ 21 ಓವರ್‌ನಲ್ಲೇ ಜಯಗಳಿಸಿತು. ಆದರೆ ಜಿಂಬಾಬ್ವೆ-ಸ್ಕಾಟ್ಲೆಂಡ್‌ ನಡುವಿನ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತು.

--

ಆಸೀಸ್‌, ಪಾಕ್‌ಗೆ ಶುಭಾರಂಭ ಗುರಿ

ಶುಕ್ರವಾರ 3 ಪಂದ್ಯಗಳು ನಡೆಯಲಿವೆ. ಹಾಲಿ ಹಾಗೂ 4 ಬಾರಿ ಚಾಂಪಿಯನ್‌ ಆಸ್ಟ್ರೇಲಿಯಾಕ್ಕೆ ಐರ್ಲೆಂಡ್‌ ಸವಾಲು ಎದುರಾಗಲಿದೆ. ಮತ್ತೊಂದು ಪಂದ್ಯದಲ್ಲಿ ಮಾಜಿ ಚಾಂಪಿಯನ್‌ಗಳಾದ ಇಂಗ್ಲೆಂಡ್‌-ಪಾಕಿಸ್ತಾನ ಸೆಣಸಾಡಲಿವೆ. ದ.ಆಫ್ರಿಕಾ ತಂಡ ಆಫ್ಘನ್‌ ಸವಾಲು ಎದುರಿಸಲಿದೆ.