2025ರ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ, ವೆನೆಜುವೆಲಾದ ಮಾರಿಯಾ ಕೊರಿನಾ ಮಚಾಡೊ ಅವರು ತಮ್ಮ ಪ್ರಶಸ್ತಿಯನ್ನು ಅಮೆರಿಕದ ಶ್ವೇತಭವನದಲ್ಲಿ ಡೊನಾಲ್ಡ್ ಟ್ರಂಪ್‌ಗೆ ಹಸ್ತಾಂತರಿಸಿದ್ದಾರೆ. ಈ ವಿಚಿತ್ರ ಘಟನೆ ಇತಿಹಾಸದ ಪುಟದಲ್ಲಿ ದಾಖಲಾಗಿದೆ. ಆದರೆ ನಿಯಮ ಇರೋದೇನು?

2025ರ ನೊಬೆಲ್​ ಶಾಂತಿ ಪ್ರಶಸ್ತಿ ತಮಗೇ ಸಿಗಬೇಕು ಎಂದು ಗೋಳೋ ಎಂದು ಕಣ್ಣೀರಿಟ್ಟವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​. ಇದಕ್ಕಾಗಿ ಅವರು ಕೊಟ್ಟ ಹೇಳಿಕೆಗಳು, ಬಿಟ್ಟ ರೈಲುಗಳು ಅಷ್ಟಿಷ್ಟಲ್ಲ. ಆದರೂ ಕೊನೆಗೆ ನೊಬೆಲ್​ ಪ್ರಶಸ್ತಿ ಸಿಕ್ಕಿದ್ದು ವೆನೆಜುವೆಲಾದ ವಿರೋಧ ಪಕ್ಷದ ಮಾರಿಯಾ ಕೊರಿನಾ ಮಚಾಡೊ (Maria Corina Machado) ಅವರಿಗೆ. ಆದರೆ ಟೈಮಲ್ಲದ ಟೈಮ್​ನಲ್ಲಿ ಇದೀಗ ದಿಢೀರ್​ ಎಂದು ಟ್ರಂಪ್​ಗೆ ಪ್ರಶಸ್ತಿ ಸಿಕ್ಕೇ ಬಿಟ್ಟಿದೆ. ಅದೂ ಅವರ ಮನೆಬಾಗಿಲಿಗೇ ಹುಡುಕಿಕೊಂಡು ಹೋಗಿದೆ. ವಿಚಿತ್ರ ಎನ್ನಿಸಿದರೂ ಇದು ಸತ್ಯ. ಹಾಗಿದ್ದರೆ ಆಗಿದ್ದೇನು? ಹಿಂದೆಂದೂ ಆಗದ ಘಟನೆ ಆಗಿದ್ದು ಹೇಗೆ? ಇಲ್ಲಿದೆ ಇಂಟರೆಸ್ಟಿಂಗ್​ ವಿಷ್ಯ.

ಆಗಲೇ ಹೇಳಿದ್ದ ಮಾರಿಯಾ

ಈ ಪ್ರಶಸ್ತಿಯನ್ನು ಸ್ವೀಕರಿಸುವಾಗಲೇ ಮಾರಿಯಾ ಕೊರಿನಾ ಮಚಾಡೊ ಅವರು, ಇದನ್ನು ನಾನು ಟ್ರಂಪ್​ ಹೆಸರಿನಲ್ಲಿ ಸ್ವೀಕರಿಸುತ್ತಿರುವುದಾಗಿ ತಿಳಿಸಿದ್ದರು. ಅದರಂತೆಯೇ ಅವರು ತಮಗೆ ಸಿಕ್ಕಿರುವ ಈ ಪ್ರಶಸ್ತಿಯನ್ನು ಇದೀಗ ಟ್ರಂಪ್​ ಅವರಿಗೆ ಹಸ್ತಾಂತರಿಸಿದ್ದಾರೆ ಅಷ್ಟೇ. ಅಮೆರಿಕದ ಶ್ವೇತಭವನದಲ್ಲಿ ನಡೆದ ಕಾರ್ಯಕ್ರದಲ್ಲಿ ಮಾರಿಯಾ ಅವರು ಪ್ರಶಸ್ತಿಯನ್ನು ಟ್ರಂಪ್ ಅವರಿಗೆ ನೀಡಿದರು. ಈ ಹಿನ್ನೆಲೆಯಲ್ಲಿ 2025ರ ಪ್ರಶಸ್ತಿ ಈಗ ಟ್ರಂಪ್​ ಅವರಿಗೆ ಸಿಕ್ಕಂತಾಗಿದೆ. ನೊಬೆಲ್‌ ಚಿನ್ನದ ಪದಕವು ಈಗ ಟ್ರಂಪ್ ಅವರ ಬಳಿ ಇದೆ ಎಂದು ವೈಟ್​ಹೌಸ್​ ಅಧಿಕಾರಿ ತಿಳಿಸಿದ್ದಾರೆ. ಏಕೆಂದರೆ, ಪ್ರಶಸ್ತಿ ಹಸ್ತಾಂತರಿಸಿದ ಮಾರಿಯಾ ಅವರು, ಚಿನ್ನದ ಪದಕವನ್ನು ಟ್ರಂಪ್​ ಬಳಿ ಬಿಟ್ಟು ಹೋಗಿದ್ದಾರೆ.

ಮಾರಿಯಾ ಹೇಳಿದ್ದೇನು?

ಈ ಸಂದರ್ಭದಲ್ಲಿ ಮಾತನಾಡಿರುವ ಮಾರಿಯಾ, ನಮ್ಮ ದೇಶದ ಸ್ವಾತಂತ್ರ್ಯಕ್ಕೆ ಟ್ರಂಪ್​ ಅವರ ವಿಶಿಷ್ಟ ಬದ್ಧತೆಗೆ ಮನ್ನಣೆಯಾಗಿ ಪ್ರಶಸ್ತಿಯ ಪದಕವನ್ನು ಪ್ರದಾನ ಮಾಡಿದ್ದೇನೆ ಎಂದಿದ್ದಾರೆ. ಪದಕ ಕೈಗೆ ಬಂದ ಬಳಿಕ ಸಂತೋಷದಿಂದ ತೇಲಾಡಿದ ಟ್ರಂಪ್​, ಮಾರಿಯಾ ಅವರನ್ನು ಹಾಡಿ ಹೊಗಳಿದರು. ಅವರನ್ನು ಭೇಟಿಯಾಗಿರುವುದು ನನಗೆ ದೊಡ್ಡ ಗೌರವ. ಅವರು ತುಂಬಾ ಕಷ್ಟಗಳನ್ನು ಅನುಭವಿಸಿದ ಅದ್ಭುತ ಮಹಿಳೆ. ನನ್ನ ಕೆಲಸ ಗಮನಿಸಿ ಅವರು ಇದನ್ನು ನೀಡಿರೋದು ಖುಷಿಯ ಸಂಗತಿ ಎಂದಿದ್ದಾರೆ.

ನಿಯಮ ಹೇಳೋದೇನು?

ಹಾಗಿದ್ದರೆ ಒಬ್ಬರಿಗೆ ಬಂದ ನೊಬೆಲ್​ ಪ್ರಶಸ್ತಿಯನ್ನು ಇನ್ನೊಬ್ಬರಿಗೆ ಹಸ್ತಾಂತರಿಸುವ ಕಾನೂನು ಇದ್ಯಾ? ನಿಯಮದಲ್ಲಿ ಇದಕ್ಕೆ ಅವಕಾಶ ಇದೆಯಾ ಎಂದು ನೋಡುವುದಾದರೆ, ಇಲ್ಲ. ಹೀಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ವರ್ಗಾಯಿಸುವ ಅಥವಾ ಇತರರೊಂದಿಗೆ ಹಂಚಿಕೊಳ್ಳುವ ಯಾವುದೇ ಅವಕಾಶ ಇಲ್ಲ. ಇದನ್ನು ನೀಡುವ ಸಂಸ್ಥೆಯ ನಿರ್ಧಾರವೇ ಅಂತಿಮ. ಯಾರಿಗೆ ಪ್ರಶಸ್ತಿ ದಕ್ಕಿರುತ್ತದೆಯೋ ಅವರದ್ದೇ ಹೆಸರು ಉಳಿದುಕೊಳ್ಳುತ್ತದೆ. ಅವರು ಇಷ್ಟಪಟ್ಟಲ್ಲಿ ಪದಕ ಬೇಕಿದ್ದರೆ ಹಸ್ತಾಂತರಿಸಬಹುದು. ಹಾಗೆಂದು ನೊಬೆಲ್​ ಪ್ರಶಸ್ತಿ ಪುರಸ್ಕೃತರ ಹೆಸರಿನಲ್ಲಿ ಯಾರಿಗೆ ಇದು ನೀಡಲಾಗುತ್ತದೆಯೋ ಅವರದ್ದೇ ಹೆಸರು ಇರುತ್ತದೆಯೇ ವಿನಾ ಹಸ್ತಾಂತರದಿಂದ ಪಡೆದವರ ಹೆಸರು ಅಲ್ಲ. ಆದ್ದರಿಂದ ಟ್ರಂಪ್​ ತಾತ್ಕಾಲಿಕ ಖುಷಿಪಟ್ಟುಕೊಳ್ಳಬಹುದೇ ವಿನಾ ಅವರ ಹೆಸರು ನೊಬೆಲ್​ ಪಡೆದವರ ಪಟ್ಟಿಯಲ್ಲಿ ಇರುವುದಿಲ್ಲ.

ಮಾರಿಯಾ ಅವರಿಗೆ ಸಿಕ್ಕಿದ್ದೇಕೆ? ಟ್ರಂಪ್​ ಹೇಳಿದ್ದೇನು?

ವೆನೆಜುವೆಲಾದ ಜನರ ಪ್ರಜಾಪ್ರಭುತ್ವ ಹಕ್ಕುಗಳನ್ನು ಮರಳಿ ಪಡೆಯಲು, ಸರ್ವಾಧಿಕಾರದಿಂದ ಪ್ರಜಾಪ್ರಭುತ್ವಕ್ಕೆ ನ್ಯಾಯಯುತ ಮತ್ತು ಶಾಂತಿಗಾಗಿ ಹೋರಾಟ ನಡೆಸಿದ್ದಾಗಿ ಮಾರಿಯಾ ಅವರಿಗೆ ಈ ಪ್ರಶಸ್ತಿ ನೀಡಲಾಗಿತ್ತು. ಆಗ ಕಣ್ಣೀರು ಹಾಕಿದ್ದ ಟ್ರಂಪ್​, ಭಾರತ ಸೇರಿದಂತೆ ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ. ಬರಾಕ್‌ ಒಬಾಮ ಏನು ಮಾಡದೇ ಅವರಿಗೆ ಸಿಕ್ಕಿದೆ. ನನಗೆ ಏಕೆ ಕೊಟ್ಟಿಲ್ಲ ಎಂದೆಲ್ಲಾ ಹೇಳಿಕೊಂಡಿದ್ದರು.