ಚೀನಾ ಕೊರೋನಾ ವೈರಸ್‌ ಎಂಬ ಗಂಭೀರ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಇದನ್ನು ‘ತುರ್ತು ಪರಿಸ್ಥಿತಿ’ ಎಂದು ಘೋಷಿಸಿದೆ. ಈವರೆಗೆ 80 ಜನರು ಬಲಿಯಾಗಿದ್ದಾರೆ. ಇಡೀ ಜಗತ್ತಿನ ಮೇಲೆ ಇದರ ಅಡ್ಡಪರಿಣಾಮ ಉಂಟಾಗುತ್ತಿದೆ. 2003ರಲ್ಲಿ ಸಾರ್ಸ್‌ ವೈರಸ್‌ ದಾಳಿ ಜಾಗತಿಕ ಆರ್ಥಿಕತೆಯ ಮೇಲೆ ಉಂಟುಮಾಡಿದ ಪರಿಣಾಮವನ್ನೇ ಕೊರೋನಾ ಕೂಡಾ ಉಂಟುಮಾಡಲಿದೆ ಎಂದು ಹೇಳಲಾಗುತ್ತಿದೆ.

ಸಾರ್ಸ್‌ ರೀತಿಯಲ್ಲೇ ಕೊರೋನಾ ವೈರಸ್‌ ಹೊಡೆತ

ಕೊರೋನಾ ವೈರಸ್‌ ವೇಗವಾಗಿ ಚೀನಾದ ಆಚೆಗೂ ವ್ಯಾಪಿಸುತ್ತಿದ್ದು, ಹೂಡಿಕೆದಾರರು ಈ ಸಾಂಕ್ರಾಮಿಕ ರೋಗವನ್ನು 2003ರಲ್ಲಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದ ಸಾರ್ಸ್‌ ವೈರಸ್‌ನೊಂದಿಗೆ ಹೋಲಿಸುತ್ತಿದ್ದಾರೆ.

ಸಾರ್ಸ್‌ನ ಭೀತಿಯಿಂದ ಜನರು ಹೊರಗೆ ಹೋಗುವುದು, ಪ್ರಯಾಣ ಹಾಗೂ ವ್ಯಾಪಾರ ವಹಿವಾಟುಗಳನ್ನು ಕಡಿಮೆ ಮಾಡಿದ್ದರಿಂದ ಜಾಗತಿಕ ಆರ್ಥಿಕತೆಗೆ ಸುಮಾರು 50 ಬಿಲಿಯನ್‌ ಡಾಲರ್‌ (3.6 ಲಕ್ಷ ಕೋಟಿ ರು.) ನಷ್ಟವಾಗಿತ್ತು. ಈಗ ಕೊರೋನಾ ವೈರಸ್‌ನಿಂದಲೂ ಅದೇ ರೀತಿಯಲ್ಲಿ ಆರ್ಥಿಕತೆಗೆ ಹೊಡೆತ ಬೀಳಲಾರಂಭಿಸಿದೆ. ಈ ನಷ್ಟಎಲ್ಲಿಗೆ ಹೋಗಿ ನಿಲ್ಲಬಹುದು ಎಂಬ ಅಂದಾಜು ಯಾರಿಗೂ ಇಲ್ಲ.

90,000 ಜನರಿಗೆ ಕೊರೋನಾ ವೈರಸ್‌?: ಶಾಕಿಂಗ್ ವಿಡಿಯೋ ಔಟ್

ಔಷಧ ಕಂಪನಿಗಳಿಗೆ ಮಾತ್ರ ಲಾಭ!

ಸಾಂಕ್ರಾಮಿಕ ರೋಗಗಳ ಭೀತಿ ಹುಟ್ಟಿದ ಸಂದರ್ಭದಲ್ಲಿ ಔಷಧ ವಲಯ ಅನಿರೀಕ್ಷಿತ ಲಾಭ ಗಳಿಸುತ್ತದೆ. ಇದೀಗ ಚೀನಾದಲ್ಲೂ ಲಸಿಕೆ ಹಾಗೂ ಮಾಸ್ಕ್‌ಗೆ ಭಾರೀ ಬೇಡಿಕೆ ಉಂಟಾಗುತ್ತಿದೆ.

ರೋಗದಿಂದ ಆರ್ಥಿಕತೆಗೆ ಏಕೆ ನಷ್ಟವಾಗುತ್ತದೆ?

ಕೊರೋನಾ ವೈರಸ್‌ನಿಂದ ಚೀನಾ ಹಾಗೂ ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಹೋಟೆಲ್‌, ಪ್ರವಾಸೋದ್ಯಮ ಕ್ಷೇತ್ರಗಳು, ಗ್ರಾಹಕ ಉತ್ಪನ್ನ ತಯಾರಿಕಾ ಕಂಪನಿಗಳು ನಷ್ಟದ ಭೀತಿ ಎದುರಿಸುತ್ತಿವೆ. ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ವಿವಿಧ ದೇಶಗಳು ತಮ್ಮ ಪ್ರಜೆಗಳ ಚೀನಾ ಪ್ರವಾಸಕ್ಕೆ ನಿರ್ಬಂಧ ಹೇರುತ್ತಿವೆ. ದೇಶೀ ಪ್ರವಾಸಿಗರೂ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ.

ಜನರು ಸಾರ್ವಜನಿಕ ಸಾರಿಗೆ ಬಳಸುತ್ತಿಲ್ಲ. ಕೆಲಸಕ್ಕೂ ತೆರಳುತ್ತಿಲ್ಲ. ಶಾಪಿಂಗ್‌, ಸಿನೆಮಾ, ಕಾನ್ಫರೆನ್ಸ್‌ಗಳಿಂದ ದೂರವೇ ಉಳಿದಿದ್ದಾರೆ. ಇವೆಲ್ಲದರ ಪರಿಣಾಮ ಆರ್ಥಿಕತೆಯ ಮೇಲೆ ಬೀಳುತ್ತದೆ. ಸಾರ್ಸ್‌ ವೈರಸ್‌ ಹರಡಿದ ಸಂದರ್ಭದಲ್ಲಿ ಚೀನಾದ್ಲಿ ಚಿಲ್ಲರೆ ವ್ಯಾಪಾರ, ಹೋಟೆಲ್‌ ಉದ್ಯಮ ಮತ್ತು ಸಿನೆಮಾ ಕ್ಷೇತ್ರ ಸಂಪೂರ್ಣವಾಗಿ ಬಿದ್ದೇ ಹೋಗಿದ್ದವು. ಈ ಬಾರಿಯೂ ಈ ಲಕ್ಷಣಗಳು ಗೋಚರಿಸುತ್ತಿವೆ.

ಭಾರತಕ್ಕೂ ಕೊರೋನಾ ವೈರಸ್‌ ಲಗ್ಗೆ? 80 ಜನರ ಮೇಲೆ ನಿಗಾ!

ಚೀನಾದಲ್ಲಿ ಹೊಸ ವರ್ಷಾಚರಣೆಯೇ ಇಲ್ಲ

ಇತ್ತೀಚೆಗಷ್ಟೆಚೀನೀಯರು ಆಚರಿಸುವ ಲೂನಾರ್‌ ನ್ಯೂ ಇಯರ್‌ (ಚೀನೀಯರ ಹೊಸ ವರ್ಷದ ಆರಂಭ) ಮುಗಿದಿದೆ. ಸಾಮಾನ್ಯವಾಗಿ ಈ ದಿನ ಪ್ರವಾಸ, ಶಾಪಿಂಗ್‌, ಉಡುಗೊರೆಗಳ ವಿನಿಮಯ ನಡೆಯುತ್ತದೆ. ಪ್ರತಿವರ್ಷ ಈ ದಿನ ರೈಲು ನಿಲ್ದಾಣಗಳು, ಏರ್‌ಪೋರ್ಟ್‌ಗಳು, ಮಾರ್ಕೆಟ್‌ಗಳು ಜನಜಂಗುಳಿಯಿಂದ ತುಂಬಿರುತ್ತವೆ. ಕಳೆದ ವರ್ಷ ಈ ದಿನ 6 ಲಕ್ಷ ಕೋಟಿ ರು. ವಹಿವಾಟು ನಡೆದಿತ್ತು. ಆದರೆ ಈ ಬಾರಿ ಜನರು ಹಬ್ಬದ ದಿನ ಹೊರಗೇ ಬಂದಿಲ್ಲ. ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಫಾರ್‌ಬಿಡನ್‌ ಸಿಟಿಯೂ ಮುಚ್ಚಿದೆ.

2003 ರಂತೆ ಚೀನಾ ಚೇತರಿಸಿಕೊಳ್ಳಲು ಸಾಧ್ಯವೆ?

ಚೀನಾ ಜಗತ್ತಿನ ಪ್ರಮುಖ ಆರ್ಥಿಕತೆಗಳಲ್ಲಿ ಒಂದು. 2003ರ ಸಾರ್ಸ್‌ ವೈರಸ್‌ ಇಂಥ ಬಲಿಷ್ಠ ಆರ್ಥಿಕತೆಯನ್ನೇ ಅಲುಗಾಡಿಸಿತ್ತು. ಆದರೆ ಅನಂತರದಲ್ಲಿ ಚೀನಾ ಹೆಚ್ಚೆಚ್ಚು ರಫ್ತು ಮಾಡಿ ಮತ್ತೆ ತನ್ನ ಆರ್ಥಿಕತೆಯನ್ನು ಸರಿದಾರಿಗೆ ತಂದಿತ್ತು. ಇವತ್ತು ಚೀನಾ ಆರ್ಥಿಕತೆ ದೊಡ್ಡದಿದೆ. ಆದರೆ ಬೆಳವಣಿಗೆಯ ಗತಿ ನಿಧಾನವಾಗಿದೆ.

ಅಮೆರಿಕದೊಂದಿಗಿನ ಟ್ರೇಡ್‌ ವಾರ್‌ ಒಂದು ದೊಡ್ಡ ಸಮಸ್ಯೆಯಾಗಿದೆ. ಹಾಗಾಗಿ ಈ ಬಾರಿ ಕೊರೋನಾ ಚೀನಾ ಆರ್ಥಿಕತೆ ಮೇಲೆ ಗಂಭೀರ ಪ್ರಭಾವ ಬೀರಿದರೆ ಚೇತರಿಸಿಕೊಳ್ಳಲು ಬಹಳ ಸಮಯ ಬೇಕಾಗುತ್ತದೆ.

ಚೀನಾದ ವಾಣಿಜ್ಯ ರಾಜಧಾನಿಯೇ ಸ್ತಬ್ಧ

ವುಹಾನ್‌ ಚೀನಾದ ವಾಣಿಜ್ಯ ನಗರ. ಇದು ಪ್ರಮುಖ ನ್ಯಾಷನಲ್‌ ಟ್ರಾನ್ಸ್‌ಪೋರ್ಟ್‌ ಹಬ್‌. ಹಾಗೆಯೇ ವಾಹನ ಉತ್ಪಾದನೆಯ ಪ್ರಮುಖ ಕೇಂದ್ರ. ಇಲ್ಲಿ ಜನರಲ್‌ ಮೋಟಾ​ರ್‍ಸ್, ಹೋಂಡಾ ಮುಂತಾದ ಜಾಗತಿಕವಾಗಿ ಪ್ರಸಿದ್ಧಿ ಪಡೆದಿರುವ ಫ್ಯಾಕ್ಟರಿಗಳಿವೆ. ಆದರೆ ಈ ನಗರ ಈಗ ಜನರಿಲ್ಲದೆ ಬಣಗುಡುತ್ತಿದೆ. ಹೀಗೆ ಸಾರಿಗೆ ವ್ಯವಸ್ಥೆಯು ನಿಂತರೆ ಆರ್ಥಿಕತೆಯೂ ನಿಂತಂತೇ ಸರಿ. ಇದರಿಂದ ಬರೀ ಜನರ ಓಡಾಟ ಮಾತ್ರವಲ್ಲ, ಸರಕುಗಳ ಸಾಗಣೆಗೂ ಅಡಚಣೆಯುಂಟಾಗುತ್ತದೆ. ಆಗ ಆಹಾರೋತ್ಪನ್ನಗಳ ಕೊರತೆಯುಂಟಾಗುತ್ತದೆ, ಇರುವ ವಸ್ತುಗಳಿಗೆ ದುಬಾರಿ ಬೆಲೆ ಕೊಟ್ಟು ಕೊಂಡುಕೊಳ್ಳಬೇಕಾಗುತ್ತದೆ.

ನಷ್ಟದ ಆತಂಕದಲ್ಲಿ ಏರ್‌ಲೈನ್ಸ್‌ಗಳು

ವೈರಸ್‌ ಭೀತಿಯಿಂದ ಚೀನಾಕ್ಕೆ ಪ್ರವಾಸ ಹೋಗುವವರ ಸಂಖ್ಯೆ ತೀವ್ರ ಇಳಿಮುಖವಾಗಿದೆ. ಹಾಗಾಗಿ ಏರ್‌ಫ್ರಾನ್ಸ್‌ , ಬ್ರಿಟಿಷ್‌ ಏರ್‌ವೇಸ್‌ ಕಳವಳ ವ್ಯಕ್ತಪಡಿಸಿವೆ. ಹಾಗೆಯೇ ಹಾಂಕ್‌ಕಾಂಗ್‌ ಏರ್‌ಲೈನ್ಸ್‌, ಕ್ಯಾಥೆ ಪೆಸಿಫಿಕ್‌ ಏರ್‌ವೇಸ್‌ ಪ್ರಮುಖ ವಿಮಾನಯಾನ ಸಂಸ್ಥೆಗಳು ವುಹಾನ್‌ಗೆ ತೆರಳುವುದನ್ನು ನಿಲ್ಲಿಸಿವೆ. ಈ ಎಲ್ಲಾ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಪ್ರವಾಸ ಹೋಗದಂತೆ ಮತ್ತು ಮುಖಕ್ಕೆ ಮಾಸ್ಕ್‌ ಧರಿಸುವಂತೆ ಹೇಳಿವೆ.