ಚೀನಾದ ಝೂವೊಂದರಲ್ಲಿ ವಲ್‌ರಸ್ ಪ್ರಾಣಿಯ 8ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಸಿಬ್ಬಂದಿ ಮೀನಿನ ಕೇಕ್ ತಿನ್ನಿಸಿ, ಬಬಲ್ ಟೀ ಪಾನೀಯವನ್ನು ಉಡುಗೊರೆಯಾಗಿ ನೀಡಿದರು.
ಇತ್ತೀಚೆಗೆ ಚೀನಾದ ಝೂವೊಂದರಲ್ಲಿ ವಲ್‌ರಸ್ ಎಂಬ ಪ್ರಾಣಿಯ 8ನೇ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯ್ತು. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈಶಾನ್ಯ ಚೀನಾದ ಮೃಗಾಲಯವೊಂದರಲ್ಲಿ ಈ ಘಟನೆ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಝೂ ಕೀಪರ್‌ಗಳು ಹಾಗೂ ಜನ ಹ್ಯಾಪಿ ಬರ್ತ್‌ಡೇ ಎಂದು ಕೂಗುವುದರ ಜೊತೆ ವಲ್‌ರಸ್‌ಗೆ ಅದರಿಷ್ಟದ ಆಹಾರವನ್ನು ನೀಡುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆ ಆಗಿದೆ.
ಅಂದಹಾಗೆ ಈ ವಲ್‌ರಸ್‌ಗೆ ಮಾರ್ಚ್ 24ಕ್ಕೆ 8 ವರ್ಷ ತುಂಬಿದ್ದು, ಝೂ ಸಿಬ್ಬಂದಿ ವಲ್‌ರಸ್‌ನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು. ಈ ಅದ್ಭುತ ದೃಶ್ಯಾವಳಿ ನೋಡುಗರನ್ನು ಭಾವುಕರನ್ನಾಗಿಸಿದೆ. ವೀಡಿಯೋ ನೋಡಿದ ಅನೇಕರು ನಮಗೂ ವಲ್‌ರಸ್ ರೀತಿಯೇ ಹುಟ್ಟುಹಬ್ಬದ ಆಚರಣೆ ಮಾಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ.
ಡೇಲಿಯನ್ ಸನ್ ಏಷ್ಯಾ ಓಷನ್ ವರ್ಲ್ಡ್‌ನಲ್ಲಿ ನಡೆದ ಆಚರಣೆಯನ್ನು ತೋರಿಸುವ ಈ ವೀಡಿಯೋ ಸಾಮಾಜಿಕ ಜಾಲತಾಣದ ವಿವಿಧ ಫ್ಲಾಟ್‌ಫಾರ್ಮ್‌ಗಳಲ್ಲಿ ಶೇರ್ ಆಗಿದೆ . ವರದಿಯ ಪ್ರಕಾರ ವಲ್‌ರಸ್‌ನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಹೀಲಿಯಂ ಬಲೂನ್‌ಗಳು ಮತ್ತು ಸಮುದ್ರಾಹಾರದಿಂದ ತಯಾರಿಸಿದ ಮೀನಿನ ಕೇಕ್ ಇತ್ತು ಜೊತೆಗೆ ಅದರ ಮೇಲೆಯೇ ಹೊಳೆಯುವ ಮೇಣದಬತ್ತಿಯಿಂದ ಮಾಡಿದ ಸಂಖ್ಯೆ 8ನ್ನು ಇಡಲಾಗಿತ್ತು. ವಲ್‌ರಸ್‌ಗೆ ಬರ್ತ್‌ಡೇ ಸರ್‌ಫ್ರೈಸ್ ನೀಡಲು ಓರ್ವ ಝೂ ಸಿಬ್ಬಂದಿ ಅದರ ಕಣ್ಣುಗಳನ್ನು ನಿಧಾನವಾಗಿ ಮುಚ್ಚಿದನು.
'ಇನ್ಸ್ಟಾ ಕ್ವೀನ್ ಪೋಲೀಸಮ್ಮ' ಹಿಂದಿದೆ ಮಾದಕ ಕಥೆ; 17 ಗ್ರಾಂ ಹೆರಾಯಿನ್ ಸಮೇತ ಸಿಕ್ಕಿಬಿದ್ದ ಮಹಾನ್ 'ಕಿ'ಲೇಡಿ!
ಹಾಗೆಯೇ ಇತರ ಝೂ ಕೀಪರ್‌ಗಳು ಕಿಟಕಿಯಲ್ಲಿ ಇಣುಕಿ ನೋಡುತ್ತಾ ತಮ್ಮ ಮೊಬೈಲ್ ಫೋನ್‌ನ ಫ್ಲಾಶ್ ಲೈಟ್ ಆನ್ ಮಾಡಿ ಹ್ಯಾಪಿ ಬರ್ತ್‌ಡೇ ಹಾಡನ್ನು ಜೋರಾಗಿ ಹಾಡಿದ್ದಾರೆ. ಆದರೆ ಮನುಷ್ಯರು ತನ್ನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿರುವುದರ ಬಗ್ಗೆ ಈ ಮೂಕ ಜೀವಿ ವಲ್‌ರಸ್‌ಗೆ ತಿಳಿದಿದೆಯೋ ಇಲ್ಲವೋ ಎಂಬುದು ಗೊತ್ತಾಗಿಲ್ಲ. ಆದರೆ ಅದೂ ಕ್ಯಾಮರಾದತ್ತ ಮುದ್ದಾಗಿ ಗುರಾಯಿಸುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಅಲ್ಲದೇ ಬರ್ತ್‌ಡೇ ಹಾಡಿನ ನಂತರ ವಲ್‌ರಸ್ ಶಿಳ್ಳೆ ಹೊಡೆಯುವ ಸದ್ದನ್ನು ಹೊರಡಿಸಿದೆ. ಅಲ್ಲದೇ ಮೇಣದಬತ್ತಿಯನ್ನು ಆರಿಸಲು ತನ್ನ ತುಟಿಗಳನ್ನು ಸಿದ್ಧಗೊಳಿಸಿತು.
ಆಚರಣೆಯನ್ನು ಪೂರ್ಣಗೊಳಿಸಲು, ಸಿಬ್ಬಂದಿ ವಲ್‌ರಸ್‌ಗೆ ಅದರಿಷ್ಟದ ವಿಶೇಷ ಮೀನಿನ ಕೇಕ್ ಅನ್ನು ಕೈಯಿಂದ ತಿನ್ನಿಸಿದರು ಮತ್ತು ಬಬಲ್ ಟೀ ಪಾನೀಯವನ್ನು ಹೋಲುವ ಬಕೆಟ್ ಅನ್ನು ಉಡುಗೊರೆಯಾಗಿ ನೀಡಿದರು. ಟೀಫನಿ ಫಿಂಗ್ ಎಂಬುವವರು ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋ ನೋಡಿದ ಕೆಲವರು ನನಗೆ ವಲ್‌ರಸ್ ಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಅವನು ಅವನ ಜೀವನವನ್ನು ಉತ್ತಮವಾಗಿ ಜೀವಿಸುತ್ತಿದ್ದಾನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅದು ಸ್ಟ್ರಾ ಬಳಿ ಕುಡಿಯುತ್ತಿರುವುದನ್ನು ನೋಡುವುದಕ್ಕೆ ಖುಷಿಯಾಗುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
