ಅಧಿಕಾರಕ್ಕೆ ಬಂದ ಬಳಿಕ ವಲಸೆ ನೀತಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೀಗ ವಿದೇಶಿಗರಿಗೆ ‘ಗೋಲ್ಡ್‌ ಕಾರ್ಡ್‌ ವೀಸಾ’ ನೀಡುವುದಕ್ಕೆ ಮುಂದಾಗಿದ್ದಾರೆ. 85 ಲಕ್ಷ ರು. ಪಾವತಿಸಿದರೆ ಈ ವೀಸಾ ಸಿಗಲಿದ್ದು, ಗ್ರೀನ್‌ಕಾರ್ಡ್‌ ಪಡೆಯುವ ಹಾದಿ ಸುಗಮವಾಗಲಿದೆ.

ನ್ಯೂಯಾರ್ಕ್‌/ ವಾಷಿಂಗ್ಟನ್‌: ಅಧಿಕಾರಕ್ಕೆ ಬಂದ ಬಳಿಕ ವಲಸೆ ನೀತಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೀಗ ವಿದೇಶಿಗರಿಗೆ ‘ಗೋಲ್ಡ್‌ ಕಾರ್ಡ್‌ ವೀಸಾ’ ನೀಡುವುದಕ್ಕೆ ಮುಂದಾಗಿದ್ದಾರೆ. 85 ಲಕ್ಷ ರು. ಪಾವತಿಸಿದರೆ ಈ ವೀಸಾ ಸಿಗಲಿದ್ದು, ಗ್ರೀನ್‌ಕಾರ್ಡ್‌ ಪಡೆಯುವ ಹಾದಿ ಸುಗಮವಾಗಲಿದೆ.

ಗೋಲ್ಡ್‌ ಕಾರ್ಡ್‌ ನೀಡುವ ಅಧಿಕೃತ ಆದೇಶಕ್ಕೆ ಟ್ರಂಪ್‌ ಶನಿವಾರ ಸಹಿ ಹಾಕಿದ್ದಾರೆ. ಈ ಪ್ರಕಾರ 85 ಲಕ್ಷ ರು. ನೀಡುವವರು ಅಥವಾ 170 ಲಕ್ಷ ರು.ನ ಪ್ರಾಯೋಜಕತ್ವ ಪಡೆಯುವವರಿಗೆ ಇದನ್ನು ನೀಡಲಾಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಗ್ರೀನ್‌ ಕಾರ್ಡ್‌ ಪಡೆಯಲು ಸುಲಭವಾಗುತ್ತದೆ ಎನ್ನಲಾಗಿದೆ.

ಈ ಕಾರ್ಡ್‌ ಪಡೆಯುವವರು, ಹಣ ನೀಡುವುದರ ಜತೆಗೆ ಅಗತ್ಯ ದಾಖಲೆಗಳನ್ನೂ ಒದಗಿಸಬೇಕು. ಈ ಬಗ್ಗೆ ಮಾತನಾಡಿರುವ ಟ್ರಂಪ್‌, ‘ಗೋಲ್ಡ್‌ ಕಾರ್ಡ್‌ ಒಂದು ಅದ್ಭುತ ವಿಷಯ. ಕಂಪನಿಗಳು 85 ಲಕ್ಷ ರು. ನೀಡಿ ತಮಗೆ ಬೇಕಾದ ನುರಿತ ಕೆಲಸಗಾರರನ್ನು ಉಳಿಸಿಕೊಳ್ಳಬಹುದು. ನಾವು ಆ ಮೊತ್ತವನ್ನು ಬಳಸಿಕೊಂಡು ತೆರಿಗೆ ಮತ್ತು ಸಾಲವನ್ನು ಕಡಿಮೆ ಮಾಡುತ್ತೇವೆ’ ಎಂದಿದ್ದಾರೆ.

ಮುಂದಿನ ತಿಂಗಳು ಪ್ರಧಾನಿ ಮೋದಿ - ಡೊನಾಲ್ಡ್‌ ಟ್ರಂಪ್‌ ಭೇಟಿ

ನವದೆಹಲಿ: ಶೇ.50 ಸುಂಕ ಹೇರಿಕೆ ಬಳಿಕ ಹದಗೆಟ್ಟಿರುವ ಭಾರತ-ಅಮೆರಿಕ ನಡುವಿನ ಸಂಬಂಧ ಸುಧಾರಣೆಗೆ ಮಲೇಷ್ಯಾದಲ್ಲಿ ಮುಂದಿನ ತಿಂಗಳು ನಡೆಯಲಿರುವ 45ನೇ ಆಸಿಯಾನ್‌ ಸಮ್ಮೇಳನ ವೇದಿಕೆಯಾಗುವ ನಿರೀಕ್ಷೆ ಇದೀಗ ಗರಿಗೆದರಿದೆ.

ಸುಂಕ ವಿವಾದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಜತೆಗೆ ಮುಖಾಮುಖಿ ಭೇಟಿಯಿಂದ ಅಂತರ ಕಾಯ್ದುಕೊಂಡು ಬಂದಿದ್ದ ಪ್ರಧಾನಿ ಮೋದಿ ಅವರು ಆಸಿಯಾನ್‌ ಸಮ್ಮೇಳನದಲ್ಲಿ ವೇದಿಕೆ ಹಂಚಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಮೋದಿ ಮತ್ತು ಟ್ರಂಪ್‌ ಈ ಸಮ್ಮೇಳನದ ನೆಪದಲ್ಲಿ ಪ್ರತ್ಯೇಕವಾಗಿ ಭೇಟಿಯಾಗಿ ಕೆಲಕಾಲ ಚರ್ಚೆ ನಡೆಸುವ ನಿರೀಕ್ಷೆಯೂ ಇದೆ. ಒಂದು ವೇಳೆ ಇದು ಸಾಧ್ಯವಾದರೆ ಅಮೆರಿಕದ ಪ್ರತಿಸುಂಕ ವಿವಾದದ ಬಳಿಕ ಹಳೆಯ ದೋಸ್ತಿಗಳಾದ ಮೋದಿ ಮತ್ತು ಟ್ರಂಪ್‌ ನಡುವಿನ ಮೊದಲ ಮುಖಾಮುಖಿ ಭೇಟಿ ಇದಾಗಲಿದೆ.

ಪ್ರಧಾನಿ ಮೋದಿ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಸೆ.17ರಂದು ಟ್ರಂಪ್‌ ಅವರು ಕರೆ ಮಾಡಿ ಮಾತನಾಡಿದ್ದರು. ಈ ಕರೆ ಮೋದಿ ಮತ್ತು ಟ್ರಂಪ್‌ ನಡುವಿನ ಭೇಟಿಗೆ ಮುನ್ನಡಿ ಬರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.