ಅಮೆರಿಕವು ಭಾರತದ ಮೇಲೆ ಹೆಚ್ಚುವರಿ ಟ್ಯಾರಿಫ್ ವಿಧಿಸಲು ಮುಂದಾಗಿದೆ. ಈ ಕ್ರಮವು ಭಾರತದ ಆರ್ಥಿಕ ನೀತಿಗಳ ಯಶಸ್ಸನ್ನು ತೋರಿಸುತ್ತದೆಯೇ ಅಥವಾ ಹೊಸ ಸವಾಲುಗಳನ್ನು ತರುತ್ತದೆಯೇ ಎಂಬುದರ ವಿಶ್ಲೇಷಣೆ ಇಲ್ಲಿದೆ.
ಕೆಲ ತಿಂಗಳ ಹಿಂದೆ ಇದ್ದಕ್ಕಿದ್ದಂತೆ ನಿದ್ರೆಯಿಂದ ಎದ್ದಂತೆ ತಿಕ್ಕಲು ತಿಕ್ಕಲಾಗಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಭಾರತದ್ದು ಸತ್ತ ಆರ್ಥಿಕತೆ ಅಂತ ಪೋಸ್ಟ್ ಮಾಡಿದ್ರು. ಅವರ ಮಾತಿಗೆ ದನಿಗೂಡಿಸಿದ ರಾಹುಲ್ ಗಾಂಧಿ, ನಿಮಗೆ ಗೊತ್ತಿಲ್ಲವ ಭಾರತದ ಆರ್ಥಿಕತೆ ಸತ್ತು ಹೋಗಿದೆ, ಅಂತ ಪತ್ರಕರ್ತರನ್ನೇ ಪ್ರಶ್ನಿಸಿದ್ರು. ಇನ್ನೊಂದೆಡೆ ಭಾರತದ ವಿಪಕ್ಷ ನಾಯಕ ರಾಹುಲ್ ಗಾಂಧಿ, ಭಾರತದಲ್ಲಿ ಮೇಕ್ ಇನ್ ಇಂಡಿಯಾ ಯಶಸ್ಸು ಕಾಣೋದು ಅಸಾಧ್ಯ ಅಂತ ಸಂಸತ್ತಿನಲ್ಲಿಯೇ ಘೋಷಿಸಿದ್ರೆ, ಉಳಿದ ವಿಪಕ್ಷ ನಾಯಕರು, ಭಾರತದಲ್ಲಿ ಏನೂ ಆಗ್ತಿಲ್ಲ, ನಿರುದ್ಯೋಗ ಹೆಚ್ಚುತ್ತಿದೆ. ಹಣದುಬ್ಬರ ಮುಗಿಲು ಮುಟ್ಟಿದೆ ಅಂತ ಮೋದಿ ಸರ್ಕಾರವನ್ನು ಕಟಕಟೆಯಲ್ಲಿ ನಿಲ್ಲಿಸುತ್ತಲೇ ಇದ್ದಾರೆ. ಈ ನಡುವೆ ಮತ್ತೆ ಇದ್ದಕ್ಕಿದ್ದಂತೆ ಡೋನಾಲ್ಡ್ ಟ್ರಂಪ್ ಕೆಲ ದಿನಗಳ ಹಿಂದಷ್ಟೇ ಭಾರತದಲ್ಲಿ ಬಡ್ಡೀದರ ಕಡಿಮೆ ಇದೆ. ಹೂಡಿಕೆ ಭರಪೂರವಾಗಿದೆ. ಅವರ ಜಿಡಿಪಿ ದರ ಶೇ.7ರಷ್ಟು ವೇಗದಲ್ಲಿ ಬೆಳಿತಿದೆ ಅಂತ ಹೇಳಿದ್ರು. ಈಗ ನೋಡಿದ್ರೆ ಅದೇ ಅಮೆರಿಕದ ಟ್ರೇಡ್ ರೆಪ್ರಸೆಂಟೇಟಿವ್ಸ್ ಭಾರತದ ವಿರುದ್ಧ ಮತ್ತೆ ಹೆಚ್ಚುವರಿ ಟಾರೀಫ್ ಹಾಕುವಂತೆ ಶಿಫಾರಸ್ಸು ಮಾಡಿದ್ದಾರೆ.
ಆದ್ರೆ, ವಿಶೇಷವೆಂದ್ರೆ ಅವರು ಕೊಟ್ಟಿರುವ 5 ಕಾರಣಗಳು, ಮೋದಿ ಸರ್ಕಾರದ ಪಾಲಿಸಿಗಳಿಗೆ ಕೊಟ್ಟ ಅತಿ ದೊಡ್ಡ ಐದು ಪುರಸ್ಕಾರಗಳಂತೆ ತೋರುತ್ತಿದೆ. ಈ ಬಾರಿ ಟಾರೀಫ್ಗೆ ಭಾರತ ತಲೆಕೆಡಿಸಿಕೊಳ್ಳೋಬದಲು ಅವರು ಕೊಟ್ಟ ಕಾರಣ ನೋಡಿ ಬೆನ್ನು ಚಪ್ಪರಿಸಿಕೊಳ್ಳುವಂತೆ ಆಗಿದೆ. ಹಾಗಿದ್ದರೆ, ಅಮೆರಿಕ ಯಾಕೆ ಈಗ ಮತ್ತೆ ಟಾರೀಫ್ ಬಗ್ಗೆ ಮಾತನಾಡುತ್ತಿದೆ? ಭಾರತದ ಬೆಳವಣಿಗೆ ತಡೆಯಲು ಯಾಕೆ ವೈರಿ ರಾಷ್ಟ್ರದಂತೆ ಹವಣಿಸುತ್ತಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ.!
ವಿಶ್ವದಲ್ಲಿಯೇ ಮೂರನೇ ಅತಿದೊಡ್ಡ ಷೇರು ಮಾರುಕಟ್ಟೆ ಅನ್ನೋ ಹೆಗ್ಗಳಿಕೆಗೆ ಭಾರತ ಈಗಷ್ಟೇ ಪಾತ್ರವಾಗಿದೆ. ಮತ್ತೆ ಇಂಗ್ಲೆಂಡ್ ಅನ್ನು ಹಿಂದಿಕ್ಕಿ ವಿಶ್ವದ 4ನೇ ಅತಿ ದೊಡ್ಡ ಆರ್ಥಿಕತೆಯಾಗಿದೆ ಹೊರ ಹೊಮ್ಮಿದೆ. ಜಿಡಿಪಿ ಬೆಳವಣಿಗೆ ದರ ಶೇ.7, ಹಣದುಬ್ಬರ ಅತಿ ಕಡಿಮೆ, 700 ಬಿಲಿಯನ್ ಡಾಲರ್ ಗೂ ಅಧಿಕ ವಿದೇಶಿ ವಿನಿಮಯ ಭಂಡಾರ, ಯೂರೋಪ್ನ 3ನೇ ಅತಿ ದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರ ಹೀಗೆ ಹೇಳುತ್ತಾ ಹೋದರೆ ಮಿತಿ ಇಲ್ಲ. ಕಾರ್ಮೋಡ ಕವಿದಿರುವ ವಿಶ್ವದ ಆರ್ಥಿಕ ಪರಿಸ್ಥಿತಿಯಲ್ಲಿ ವಜ್ರದಂತೆ ಮಿಗುತ್ತಿದೆ ಭಾರತದ ಆರ್ಥಿಕತೆ. ಇಂಥ ವೇಳೆ, ಸ್ನೇಹಿತರೂ ವೈರಿಗಳಾಗುವ ಅನುಭವಗಳೂ ಸಹಜ. ಅಂಥದ್ದೇ ಒಂದು ಕಡು ಅನುಭವವನ್ನು ಭಾರತಕ್ಕೆ ಒದಗಿಸಬೇಕು ಅಂತ ಅಮೆರಿಕ ಟ್ರೇಡ್ ರಿಪ್ರಸೆಂಟೇಟಿವ್ ಕಚೇರಿ ನಿರ್ಧಾರ ಮಾಡಿದಂತಿದೆ. ಇವತ್ತು ಅವರು ಮಾಡಿರುವ ಶಿಫಾರಸ್ಸು ಬಯಲಾಗಿದ್ದು, ಭಾರತದ ಗೆಲುವಿನ ನಾಗಾಲೋಟ ಹೇಗೆ ಅಮೆರಿಕಕ್ಕೂ ಅರಗಲಾರದ ತುತ್ತಾಗಿದೆ ಅನ್ನೋದು ಬೆಳಕಿಗೆ ಬಂದಿದೆ. ಯುಎಸ್ಟಿಆರ್ ಸೆಕ್ಷನ್ 301ಪ್ರಕಾರ ಭಾರತದ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಿದೆ.
ಸೆಕ್ಷನ್ 301 ಎಂದರೇನು?
ಅಮೆರಿಕದ Trade Act of 1974ರ ಅಡಿಯಲ್ಲಿ ಇರುವ ಕಾನೂನು ಇದು. ಇದರ ಪ್ರಕಾರ ಯಾವುದೇ ದೇಶದ ನೀತಿಗಳು “ಅಸಮಂಜಸ” (unreasonable) ಅಥವಾ ತಾರತಮ್ಯಪೂರ್ಣವಾಗಿದ್ದು ಅಮೆರಿಕದ ವ್ಯಾಪಾರಕ್ಕೆ ಹಾನಿ ಮಾಡುತ್ತಿದೆ ಅನಿಸಿದ್ರೆ, ಯುನೈಟೆಡ್ ಸ್ಟೇಟ್ ಟ್ರೇಡ್ ರೆಪ್ರೆಸೆಂಟೇಟಿವ್ಸ್ ಕಚೇರಿ ವಿಚಾರಣೆ ನಡೆಸಿ ಸುಂಕ (tariffs) ಅಥವಾ ಇತರ ಕ್ರಮಗಳನ್ನು ತೆಗೆದುಕೊಳ್ಳಬಹುದು. ಸೂಕ್ಷ್ಮವಾಗಿ ನೊಡೋದಾದ್ರೆ ಅಮೆರಿಕದ ಆರ್ಥಿಕ ಹಿತಾಸಕ್ತಿ ರಕ್ಷಣೆಗೆ ಇರುವ ಕಾನೂನು ಇದು. ಈ ಬಾರಿ ಒಟ್ಟು 16 ದೇಶಗಳ ವಿರುದ್ಧ ವಿಚಾರಣೆ ನಡೆಸಿ, ಸದ್ಯ ಭಾರತವೂ ಸೇರಿದಂತೆ 14 ದೇಶಗಳ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ.
ಯುಎಸ್ಟಿಆರ್ ತನಿಖೆಯಲ್ಲಿ ಭಾರತದ ಬಗ್ಗೆ ಕಂಡು ಕೊಂಡಿದ್ದೇನು? ಯುಎಸ್ಟಿಆರ್ ತನಿಖೆ ಪ್ರಕಾರ ಭಾರತದ ನೀತಿ, ಕಾನೂನು ಮತ್ತು ನಡವಳಿಕೆ ಅಮೆರಿಕ ದೃಷ್ಟಿಯಿಂದ ಅಸಮಂಜಸ ಮತ್ತು ತನ್ನ ವಾಣಿಜ್ಯ ವ್ಯವಹಾರಕ್ಕೆ ಹೊರೆಯಾಗುತ್ತಿದೆ ಅಂತ ಹೇಳಿದೆ. ಹೀಗಾಗಿ, ಸೆಕ್ಷನ್ 301(b) ಅಡಿಯಲ್ಲಿ ಕ್ರಮಕ್ಕೆ ಭಾರತ ಅರ್ಹವಾಗಿದೆ ಅಂತ ವರದಿಯಲ್ಲಿ ತಿಳಿಸಲಾಗಿದೆ. ಜೊತೆಗೆ ಭಾರತದ ಯಾವ ನಿರ್ಧಾರಗಳು ಅಮೆರಿಕಕ್ಕೆ ಹೇಗೆ ಸವಾಲಾಗಿವೆ? ಅನ್ನೋದನ್ನ 5 ಅಂಶಗಳಲ್ಲಿ ವಿವರಿಸಲಾಗಿದೆ.
ಉತ್ಪಾದನೆ ಹೆಚ್ಚಿಸುವ ಕೈಗಾರಿಕಾ ಯೋಜನೆಗಳು: ಆತ್ಮ ನಿರ್ಭರ ಭಾರತ ಅನ್ನೋದು ಮೋದಿ ಸರ್ಕಾರದ ಮೂಲ ಮಂತ್ರಗಳಲ್ಲಿ ಒಂದು. ಇದಕ್ಕಾಗಿಯೇ ಮೇಕ್ ಇನ್ ಇಂಡಿಯಾ ಯೋಜನೆ ಜಾರಿ ತರಲಾಯಿತು. ಉತ್ಪಾದನೆ ಹೆಚ್ಚಿಸಲು ಪ್ರೊಡಕ್ಷನ್ ಲಿಂಕಡ್ ಇನ್ಸೆಂಟಿವ್ಸ್ ಅನ್ನ ಘೋಷಿಸಿತು. ಇದರಿಂದ ಸಹಜವಾಗಿ ಹಲವು ಸೆಕ್ಟರ್ ಗಳಲ್ಲಿ ಯುದ್ಧೋಪಾದಿಯಲ್ಲಿ ಭಾರತ ಉತ್ಪಾದನೆಯಲ್ಲಿ ತೊಡಗಿದೆ. ಈಗ ಅಮೆರಿಕ ಇದನ್ನೇ ಸವಾಲಾಗಿ ಪರಿಗಣಿಸಿದೆ.
ಅಸಮರ್ಪಕ ಕಾರ್ಮಿಕ ರಕ್ಷಣೆ: ಅಭಿವೃದ್ಧಿ ಶೀಲ ಭಾರತದಲ್ಲಿ ಕಾರ್ಮಿಕ ರಕ್ಷಣೆ ಬಗ್ಗೆಯೂ ಅಮೆರಿಕದ ವರದಿ ಮಾತನಾಡಿದೆ. ಇದು ಅಸಮಂಜಸವಾಗಿದೆ ಅನ್ನೋದನ್ನ ಬೊಟ್ಟು ಮಾಡಿ ತೋರಿಸಿದೆ.
ಹಣಕಾಸು ನಿಗ್ರಹ ನೀತಿಗಳು!
ಇದೊಂದು ಇಂಟರೆಸ್ಟಿಂಗ್ ಅಂಶ. ಯಾಕಂದ್ರೆ ಮನಿ ಲಾಂಡರಿಂಗ್, ಟೆರರ್ ಫಂಡಿಂಗ್ ಪ್ರಕರಣಗಳಲ್ಲಿ ಬೆತ್ತಲಾಗಿರುವ ಪಾಕಿಸ್ತಾನದ ಬಗ್ಗೆ ತುಟಿ ಬಿಚ್ಚದ ಅಮೆರಿಕಾ, ಉತ್ಪಾದನೆ ದೃಷ್ಟಿಯಿಂದ ಹಾಗೂ ಆರ್ಥಿಕತೆ ಸದೃಢತೆಗಾಗಿ ಭಾರತ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಶ್ನಿಸಿದೆ.
ಕಡಿಮೆ ಬಡ್ಡಿದರ ಉತ್ಪಾದನಾ ವಲಯಗಳಿಗೆ ಆರ್ಥಿಕ ಸಹಾಯ ಅಥವಾ ಸಾಲ ಪೂರೈಕೆ ಮಾಡೋದನ್ನ ಪ್ರಶ್ನಿಸಿದೆ. ಜೊತೆಗೆ, ಭಾರತದ ಈ ನೀತಿಗಳಿಂದಾಗಿ ಮಾರುಕಟ್ಟೆ ಪರಿಸ್ಥಿತಿಗೆ ವ್ಯತಿರಿಕ್ತವಾಗಿ ಹಣ ಹರಿದು, ಉತ್ಪಾದನಾ ವಲಯದಲ್ಲಿ ಭಾರತದ ಸಾಮರ್ಥ್ಯ ಹೆಚ್ಚುತ್ತಿದೆ ಅಂತ ಯುಎಸ್ಟಿಆರ್ ಹೇಳಿದೆ.
ಮಾರುಕಟ್ಟೆ ಬಳಕೆಗೆ ನಿರಂತರ ತಡೆ! ಭಾರತ ಮತ್ತು ಅಮೆರಿಕದ ಟ್ರೇಡ್ ಡೀಲ್ ಇನ್ನೂ ಫೈನಲ್ ಆಗದೇ ಇರೋದಕ್ಕೆ ಮುಖ್ಯ ಕಾರಣವೇ ಇದು. ಡೈರಿ ಪ್ರೊಡಕ್ಟ್ ಇರಬಹುದು ಮತ್ತು ಭಾರತವು ಉತ್ಪಾದಿಸುವ ಅತ್ಯಂತ ಪ್ರಮುಖ ವಸ್ತುಗಳ ಆಮದಿನ ವಿರುದ್ಧ ಭಾರತ ಕಟು ನಿರ್ಧಾರ ಕೈಗೊಂಡಿದೆ. ಆದ್ರೆ, ಇವುಗಳ ಮಾರಾಟಕ್ಕೂ ಪಟ್ಟು ಹಿಡಿದಿದೆ. ಇದು ಸಹಜವಾಗಿ ಅಮೆರಿಕಕ್ಕೆ ಹೊಂದಿಕೆ ಆಗುತ್ತಿಲ್ಲ. ಮಾರುಕಟ್ಟೆಯಲ್ಲದ ಆರ್ಥಿಕತೆಯಿಂದ ಆಮದು ಮತ್ತು ವಿದೇಶಿ ನೇರ ಹೂಡಿಕೆ ಒಳಗೊಂಡು ಜಾಗತಿಕ ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯವನ್ನು ನಿರ್ವಹಿಸುವಲ್ಲಿ ವಿಫಲತೆ! ಈ ಪದಗಳನ್ನ ಓದಿದ್ರೆ ಗಣೇಶನ ಮದುವೆ ಚಿತ್ರದಲ್ಲಿ ರೇಡಿಯೋದಲ್ಲಿ ಬಂದ ಮಾಹಿತಿ ಕೇಳಿ ಅನಂತ್ ನಾಗ್ ಹೇಳಿದ ಡೈಲಾಗೇ ನಮ್ಮ ಬಾಯಲ್ಲೂ ಬರೋದು ಗ್ಯಾರಂಟೀ. ಇಲ್ಲಿ ಆ ವರದಿ ಹೇಳುತ್ತಿರೋದು ಇಷ್ಟೇ, ಭಾರತ ಉತ್ಪಾದನೆ ಹೆಚ್ಚಿಸುತ್ತಿರುವುದರಿಂದ ಅದು ಕಡಿಮೆ ಆಮದು ಮಾಡಿಕೊಳ್ಳುತ್ತಿದೆ ಅಂತ!
ಹಾಗಿದ್ರೆ ಇದರಿಂದ ಅಮೆರಿಕಕ್ಕೆ ಆಗುತ್ತಿರೋದು ಏನು? ಅನ್ನೋದನ್ನ ಕೂಡ ಯುಎಸ್ಟಿಆರ್ 3 ಅಂಶಗಳಲ್ಲಿ ವಿವರಿಸಿದೆ. 1. ಭಾರತದಿಂದಾಗಿ ಅಮೆರಿಕದ ರಫ್ತುದಾರರು ಹಾಗೂ ಉತ್ಪಾದಕರಿಗೆ ಆರ್ಥಿಕ ಅವಕಾಶಗಳು ಕಡಿಮೆ ಆಗುತ್ತಿವೆ. 2. ಅಮೆರಿಕ ಉತ್ಪಾದನಾ ವಲಯದಲ್ಲಿ ಉತ್ಪಾದನೆ, ರಫ್ತು, ಉದ್ಯೋಗ ಸೃಷ್ಟಿ ಹಾಗೂ ಹೂಡಿಕೆ ಕುಂಠಿತವಾಗುವುದರ ಮೂಲಕ ಅಮೆರಿಕದ ಆರ್ಥಿಕತೆಗೆ ಪೆಟ್ಟು. 3. ಭಾರತದಿಂದ ಭಾರೀ ಮಷೀನರಿಗಳು, ವಸ್ತುಗಳ ಆಮದು ಕಾರಣದಿಂದ ಅಮೆರಿಕದ ಆರ್ಥಿಕ ಭದ್ರತೆಗೆ ಧಕ್ಕೆ. ಅದ್ರಲ್ಲೂ ಆರೋಗ್ಯ, ಸ್ಟೀಲ್, ಸೋಲಾರ್ ಹಾಗೂ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ವಿಶೇಷ ಕಾಳಜಿ ವಲಯಗಳಾಗಿವೆ.
ಯುಎಸ್ಟಿಆರ್ ಪ್ರಸ್ತಾವಿತ ಕ್ರಮ ಏನು? ಭಾರತದಿಂದ ಆಮದಾಗುವ ಎಲ್ಲ ಸರಕುಗಳ ಮೇಲೆ ಶೇ.25ರಷ್ಟು ಸುಂಕ ವಿಧಿಸಬೇಕು. ಒಂದು ವೇಳೇ ಟ್ರೇಡ್ ಡೀಲ್ ಆದರೆ ಅಥವಾ ಅಮೆರಿಕಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಚರ್ಚಿಸಿದರೆ ಸುಂಕವನ್ನ ಶೇ.17ಕ್ಕೆ ಇಳಿಸಬೇಕು. ಸದ್ಯಕ್ಕೆ ಭಾರತ ಹಾಗೂ ಅಮೆರಿಕದ ವಹಿವಾಟು ನೋಡೋದಾದ್ರೆ, ಭಾರತಕ್ಕೆ ಸುಮಾರು 57.3 ಬಿಲಿಯನ್ ಡಾಲರ್ ಟ್ರೇಡ್ ಸರ್ ಪ್ಲಸ್ ಇದೆ. ಇದೇ ಅಮೆರಿಕದ ಕಣ್ಣು ಕುಕ್ಕಲು ಪ್ರಮುಖ ಕಾರಣವಾಗಿದೆ.
ಭಾರತದ ಪ್ರತಿಕ್ರಿಯೆ ಏನು? ಅಮೆರಿಕ 189 ಪುಟಗಳ ವರದಿ ಕೊಟ್ಟು ನಮ್ಮ ಮೇಲೆ ಮುಗಿಬಿದ್ದಿದ್ದರೆ, ಭಾರತ ಮಾತ್ರ ಕೆಲವೇ ಪದಗಳಲ್ಲಿ ಈ ವರದಿಯನ್ನು ತಿರಸ್ಕರಿಸಿದೆ. ಭಾರತವು ಈ ತನಿಖೆಗೆ ಸಹಕರಿಸಿದೆ. ಏನೇ ಸಮಸ್ಯೆ ಇದ್ದರೂ ಮಾತುಕತೆ ಮತ್ತು ವ್ಯಾಪಾರ ಒಪ್ಪಂದದ ಮೂಲಕ ಬಗೆಹರಿಸಿಕೊಳ್ಳಬೇಕು ಅಂತ ಹೇಳಿದೆ.
ಹಾಗಿದ್ರೆ, ಈ ವರದಿ ಭಾರತದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರೋದಿಲ್ಲವ? ಅನ್ನೋ ಪ್ರಶ್ನೆ ಸಹಜವಾಗಿ ಮೂಡುತ್ತೆ. ಹೀಗಾಗಿ ಬಗ್ಗೆ ವಸ್ತುನಿಷ್ಠ ವಿಶ್ಲೇಷಣೆಯನ್ನ ಮಾಡಲೇಬೇಕು. ಹೀಗಾಗಿ ಈ ವರದಿಯಿಂದ ಭಾರತಕ್ಕೆ ಆಗಬಹುದಾದ ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳನ್ನ ನೋಡೋದಾದ್ರೆ..
ಸಕಾರಾತ್ಮಕ 5 ಅಂಶಗಳು!
ಮೋದಿ ಪಾಲಿಸಿಗಳಿಗೆ ದೊಡ್ಡ ಬಹುಪರಾಕ್ ಡೆಡ್ ಎಕಾನಮಿ, ಮೇಕ್ ಇಂಡಿಯಾ ಫೇಲ್ಯೂರ್, ಆತ್ಮ ನಿರ್ಭರ ಭಾರತದ ಬಗ್ಗೆ ಪ್ರಶ್ನೆ, ನರೆಂದರ್ ಸೆರೆಂಡರ್ , ಟ್ರಂಪ್ ಮುಂದೆ ಮಂಡಿಯೂರಿದ ಮೋದಿ ಅನ್ನೋ ಟೀಕೆಗಳಿಗೆ ಅಮೆರಿಕವೇ ಕಪಾಳಮೋಕ್ಷ ಮಾಡಿದಂತೆ ಆಗಿದೆ. ಈ ವರದಿ ಭಾರತದ ಉತ್ಪಾದನಾ ವಲಯದಲ್ಲಿ ಸಾಮರ್ಥ್ಯ ಹೆಚ್ಚಿರೋದನ್ನ ಒಪ್ಪಿದಂತೆ ಆಗಿದೆ.
ಬ್ರ್ಯಾಂಡ್ ಮೋದಿಗೆ ದೊಡ್ಡ ಬಲ ನಾವು ಯಾರನ್ನೂ ಕಣ್ಣು ಮೇಲೆತ್ತಿಯೂ ನೋಡೋದಿಲ್ಲ. ಕಣ್ಣು ಕೆಳಗೆ ಮಾಡಿಯೋ ನೋಡಲ್ಲ. ಕಣ್ಣಲ್ಲಿ ಕಣ್ಣಿಟ್ಟು ನೋಡ್ತೀವಿ. ಇದು ಹೊಸ ಭಾರತ ಅಂತ ಹೇಳುತ್ತಿದ್ದ ಬ್ರ್ಯಾಂಡ್ ಮೋದಿಗೆ ಇತ್ತೀಚೆಗೆ ಸಾಕಷ್ಟು ಹಿನ್ನಡೆ ಆಗಿತ್ತು. ಒಂದೆಡೆ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷ ನಾಯಕರಿಂದ ನಿರಂತರ ಟೀಕೆ, ಫಾರೆನ್ ಪಾಲಿಸಿ ಫೆಲ್ಯೂರ್ ಅನ್ನೋ ಆರೋಪ, ಎಲ್ಲದಕ್ಕೂ ಇದು ಉತ್ತರ ಕೊಟ್ಟಂತೆ ಆಗಿದೆ, ಜೊತೆಗೆ, ಮೋದಿ ಬೆಂಬಲಿಗರಿಗೂ ಸಂಭ್ರಮಿಸಲು ಅವಕಾಶ ಸಿಕ್ಕಂತೆ ಆಗಿದೆ. ಕೇವಲ ರಾಜಕೀಯ ಲಾಭ ಮಾತ್ರವಲ್ಲ, PLI ಪ್ರೋತ್ಸಾಹ, ಕೈಗಾರಿಕಾ ಗುರಿ ಮತ್ತು ಸ್ವಾವಲಂಬನೆ ನೀತಿ, ಉದ್ಯೋಗ ಸೃಷ್ಟಿ, ಹೂಡಿಕೆ ಆಕರ್ಷಣೆ ಮತ್ತು ಕೆಲವು ವಲಯಗಳಲ್ಲಿ ಆಮದು ಅವಲಂಬನೆ ಕಡಿಮೆ ಮಾಡುವಲ್ಲಿ ಸಹಾಯ ಮಾಡಿವೆ. ಇವು ಭಾರತದ ದೀರ್ಘಕಾಲೀನ ಬೆಳವಣಿಗೆಗೆ ಇನ್ನೂ ಪ್ರಯೋಜನಕಾರಿಯಾಗಿ ದೇಶಿ ಆರ್ಥಿಕತೆಗೂ ಲಾಭವಾಗುತ್ತದೆ.
ವ್ಯಾಪಾರ ಒಪ್ಪಂದಕ್ಕೆ ಅವಕಾಶ USTR 25% ಸುಂಕವನ್ನು 17%ಗೆ ಇಳಿಸುವ ಸಲುವಾಗಿ ಟ್ರೇಡ್ ಅಗ್ರೀಮೆಂಟ್ ಆಯ್ಕೆ ನೀಡಿದೆ. ಇದು ಭಾರತಕ್ಕೂ ಉತ್ತಮ ಮಾರುಕಟ್ಟೆ ಲಭ್ಯತೆ ಹಾಗೂ ದ್ವಿಪಕ್ಷೀಯ ಮಾತುಕತೆಗಳ ಮೂಲಕ ಸಮಸ್ಯೆ ಪರಿಹರಿಸುವ ಅವಕಾಶ ನೀಡುತ್ತದೆ.
ನಿಷ್ಪಕ್ಷ ಮತ್ತು ರೂಲ್ ಬೇಸಡ್ ಭಾರತ ಈ ತನಿಖೆಗೆ ಭಾರತ ಯಾವುದೇ ಪೂರ್ವಗ್ರಹವಿಲ್ಲದೇ ಸಹಕಾರ ನೀಡಿದೆ. ಇದು ರಾಜತಾಂತ್ರಿಕ ಸ್ಥಾನವನ್ನ ಮತ್ತಷ್ಟು ಎತ್ತರಕ್ಕೆ ಏರಿಸುತ್ತದೆ.
ಭೌಗೋಳಿಕ-ರಾಜಕೀಯ ಅವಕಾಶ ಬಹು-ದೇಶಗಳ ವಿಚಾರಣೆಯಲ್ಲಿ ಸೇರಿಸಲಾಗಿರುವುದು ಭಾರತವನ್ನು ಪ್ರಮುಖ ತಯಾರಿಕಾ ಶಕ್ತಿ ಎಂದು ಪರಿಗಣಿಸಲಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ಇದನ್ನು supply chain ವೈವಿಧ್ಯೀಕರಣ ಮತ್ತು ಚೀನಾಕ್ಕೆ ಪರ್ಯಾಯವಾಗಿ ಕೂಡ ಬಲವಾಗಬಹುದು.
ನಕಾರಾತ್ಮಕ 5 ಅಂಶಗಳು!
ಹೆಚ್ಚಿನ ಸುಂಕದ ಅಪಾಯ (25% ವರೆಗೆ) ಭಾರತದ ಬಹುತೇಕ ಸರಕುಗಳ ಮೇಲೆ 25% ವರೆಗೆ ಹೆಚ್ಚುವರಿ ಸುಂಕ ಪ್ರಸ್ತಾಪಿಸಲಾಗಿದೆ. ಇದು ಮತ್ತೊಂದು ತಲೆನೋವಿಗೂ ಕಾರಣವಾಗಬಹುದು. ಮತ್ತಷ್ಟು ಭಾರತವನ್ನು ಟಾರ್ಕೆಟ್ ಮಾಡಲು ಅವಕಾಶ ಈಗಾಗಲೇ ಮೇಕ್ ಅಮೆರಿಕಾ ಗ್ರೇಟ್ ಅಗೇನ್ ಗ್ಯಾಂಗ್ ಅಮೆರಿಕದಲ್ಲಿ ವಲಸಿಗರನ್ನ ಟಾರ್ಗೆಟ್ ಮಾಡುತ್ತಿದೆ. ಅದ್ರಲ್ಲೂ ಮೋಸ್ಟ್ ಸಕ್ಸೆಸ್ ಫುಲ್ ಇಮ್ಮಿಗ್ರೆಂಟ್ ಎಂದೇ ಖ್ಯಾತಿ ಪಡೆದಿರುವ ಭಾರತೀಯರು ಮತ್ತಷ್ಟು ಟಾರ್ಗೆಟ್ ಆಗಬಹುದು. ಜೊತೆಗೆ, ಭಾರತದ ವಿರುದ್ಧವೂ ದ್ವೇಷ ಹೆಚ್ಚಾಗುವ ಸಾಧ್ಯತೆ. ಕಾರ್ಮಿಕರ ಶೋಷಣೆ ! ಭಾರತದಲ್ಲಿ ಉದ್ಯೋಗಿಗಳ, ಕಾರ್ಮಿಕರ ರಕ್ಷಣೆಗೆ ಮತ್ತಷ್ಟು ಕಾನೂನು ಗಟ್ಟಿಕೊಳ್ಳಬೇಕಿರುವ ಅಗತ್ಯತೆಯಂತೂ ಇದ್ದೇ ಇದೆ. ಈ ಬಗ್ಗೆ ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಕೋಟಿ ಕುಳಗಳನ್ನು ತರಾಟೆಗೆ ತೆಗೆದುಕೊಂಡಿದ್ರು. ಒಂದು ವೇಳೆ ಈ ಸಮಸ್ಯೆ ಬೇಗ ಬಗೆಹರಿಯದೇ ಇದ್ದರೆ, ಭಾರತ ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲುವ ಸಾಧ್ಯತೆ. ಚೀನಾ ಮೇಲಿನ ಅವಲಂಬನೆ ಚೀನಾ ಸೇರಿದಂತೆ ಇತರೆ non-market economies ನಿಂದ ಭಾರತ ಎಚ್ಚೆತ್ತುಕೊಳ್ಳಲೇ ಬೇಕಿದೆ. ಅಲ್ಟರ್ ನೇಟಿವ್ ಮಾರುಕಟ್ಟೆ, ಕಚ್ಚಾ ವಸ್ತುಗಳಲ್ಲೂ ಸ್ವಾವಲಂಬನೆಗೆ ದಾರಿಯನ್ನ ಭಾರತ ಹುಡುಕಲೇ ಬೇಕಿದೆ. ಇಲ್ಲದಿದ್ದರೆ, ಇದು ಇಂದಲ್ಲ ನಾಳೆ ಸಮಸ್ಯೆ ಸಿಲುಕುವುದರಲ್ಲಿ ಯಾವುದೇ ಸಂಶಯವಿಲ್ಲ.
ದೀರ್ಘಕಾಲೀನ ವ್ಯಾಪಾರ ಘರ್ಷಣೆಯ ಅಪಾಯ ಭಾರತದ ನೀತಿಗಳು “ಅಸಮಂಜಸ” ಮತ್ತು ಅಮೆರಿಕದ ವ್ಯಾಪಾರಕ್ಕೆ ಹಾನಿಕಾರಕ ಎಂಬ ತೀರ್ಮಾನವನ್ನು ಈಗ ಅಮೆರಿಕ ಮಾಡಿದೆ. ಹೀಗಾಗಿ ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಘರ್ಷಣೆಗೆ ದಾರಿಯಾಗಬಹುದು.
ಒಟ್ಟಾರೆಯಾಗಿ, ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಒಂದಂತೂ ಸ್ಪಷ್ಟವಾಗುತ್ತಿದೆ. ಭಾರತದ ಬೆಳವಣಿಗೆಯ ವೇಗ ಹಲವರಿಗೆ ಮತ್ತು ರೀತಿ ಹಲವರ ಕಣ್ಣು ಕುಕ್ಕುತ್ತಿದೆ. ಹಾಗಂತ ತೀರ ಖುಷಿ ಪಡುವ ಸಮಯವೂ ಇದು ಅಲ್ಲ. ಭಾರತ ಮತ್ತಷ್ಟು ಎಚ್ಚರಿಕೆಯಿಂದ ಇರಬೇಕು. ವಿಶ್ರಮಿಸುವ ಅವಕಾಶವೂ ಇಲ್ಲ. ಹೀಗಾಗಿ ವೈರಿಗಳು ಮಾತ್ರವಲ್ಲ ಸ್ನೇಹಿತನ ಮುಖವಾಡ ಹೊತ್ತ ವೈರಿಗಳು ಮತ್ತಷ್ಟು ಕುತ್ಸಿಕ ಕ್ರಮಗಳಿಗೂ ಮುಂದಾಗುವ ಸಾಧ್ಯತೆ ಇದ್ದೇ ಇರುತ್ತೆ. ಹೀಗಾಗಿ, ಭಾರತೀಯರು ಒಗ್ಗಟ್ಟಾಗಿರಬೇಕು. ಭಾರತ ಮುನ್ನುಗ್ಗಬೇಕು. ಒಡೆಯುವವರನ್ನು ದೂರ ಇರಿಸಿ ಒಟ್ಟಾಗಿ ಮುನ್ನುಗ್ಗಲೇಬೇಕಾದ ಸಂದರ್ಭವಂತೂ ಈಗ ಬಂದಿದೆ.
















