ಕೊರೋನಾದಿಂದಾಗಿ ತಾವು ಭಾರತ ಮತ್ತು ಅಮೆರಿಕದಲ್ಲಿ 10 ಮಂದಿ ಕುಟುಂಬ ಸದಸ್ಯರನ್ನು ಕಳೆದುಕೊಂಡಿರುವೆ ಮಂಡ್ಯ ಮೂಲದವರಾದ ಅಮೆರಿಕದ ಸರ್ಜನ್ ಜನರಲ್ ಡಾ.ವಿವೇಕ್ ಹಲ್ಲೇಗೆರೆ ಮೂರ್ತಿ ಹೇಳಿಕೆ ಎಲ್ಲರೂ ಲಸಿಕೆ ಪಡೆಯುವಂತೆ ಮನವಿ ಮಾಡಿದ ಡಾ.ವಿವೇಕ್
ವಾಷಿಂಗ್ಟನ್ (ಜು.17): ಕೊರೋನಾದಿಂದಾಗಿ ತಾವು ಭಾರತ ಮತ್ತು ಅಮೆರಿಕದಲ್ಲಿ 10 ಮಂದಿ ಕುಟುಂಬ ಸದಸ್ಯರನ್ನು ಕಳೆದುಕೊಂಡಿರುವ ಸಂಗತಿಯನ್ನು ಮಂಡ್ಯ ಮೂಲದವರಾದ ಅಮೆರಿಕದ ಸರ್ಜನ್ ಜನರಲ್ ಡಾ.ವಿವೇಕ್ ಹಲ್ಲೇಗೆರೆ ಮೂರ್ತಿ ಬಹಿರಂಗಪಡಿಸಿದ್ದಾರೆ.
ಲಸಿಕೆಯ ವಿರುದ್ಧ ಹರಿಬಿಡಲಾಗುತ್ತಿರುವ ತಪ್ಪು ಮಾಹಿತಿಯ ವಿರುದ್ಧ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ವಿವೇಕ್ ಮೂರ್ತಿ, ಮಾರಾಣಾಂತಿಕ ವೈರಸ್‌ನಿಂದ ರಕ್ಷಿಸಿಕೊಳ್ಳಲು ಪ್ರತಿಯೊಬ್ಬರೂ ಹಿಂಜರಿಕೆ ಬಿಟ್ಟು ಲಸಿಕೆ ಪಡೆಯಬೇಕು ಎಂದು ಅಮೆರಿಕನ್ನರನ್ನು ಒತ್ತಾಯಿಸಿದರು.
ಮಂಡ್ಯ, ಮಡಿಕೇರಿಗೆ ಅಮೆರಿಕದ ಸರ್ಜನ್ ಜನರಲ್ ವಿವೇಕ್‌ರಿಂದ ಕೋಟಿ ನೆರವು!
ಇದುವರೆಗೆ ಅಮೆರಿಕದಲ್ಲಿ 16 ಕೋಟಿ ಮಂದಿ ಲಸಿಕೆ ಪಡೆದಿರುವುದು ಒಳ್ಳೆಯ ಸಂಗತಿ. ಆದರೆ, ಕೋಟ್ಯಂತರ ಅಮೆರಿಕನ್ನರು ಇನ್ನೂ ಲಸಿಕೆ ಪಡೆದಿಲ್ಲ. ಲಸಿಕೆ ಪಡೆಯದೇ ಇರುವವರಲ್ಲಿ ಸೋಂಕು ಹೆಚ್ಚಳ ಆಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಅಮೆರಿಕದ ಸರ್ಜನ್ ಜನರಲ್ ಆಗಿ ವಿವೇಕ್ ಮೂರ್ತಿ ನೇಮಕ!
‘ವೈಯಕ್ತಿವಾಗಿ ಹೇಳುವುದಾದರೆ, ಈಗ ಸಂಭವಿಸುತ್ತಿರುವ ಪ್ರತಿಯೊಂದು ಸಾವನ್ನು ತಡೆಯಬಹುದಾಗಿತ್ತು ಎಂಬ ನೋವು ನನ್ನನ್ನು ಬಾಧಿಸುತ್ತಿದೆ. ಒಂದು ವೇಳೆ ಲಸಿಕೆಯನ್ನು ಪಡೆಯುವ ಅವಕಾಶ ಸಿಕ್ಕಿದ್ದರೆ ಸಾವಿನಿಂದ ಅವರನ್ನು ಪಾರು ಮಾಡಬಹುದಾಗಿತ್ತು. ಕೊರೋನಾಕ್ಕೆ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಯಾರೇ ಆದರೂ ಲಸಿಕೆ ಪಡೆಯಲು ಒಂದೇ ಒಂದು ಅವಕಾಶ ಸಿಗಲಿ ಎಂದು ಪ್ರತಿದಿನವೂ ಬಯಸುತ್ತಾರೆ. ಎರಡು ಮಕ್ಕಳ ತಂದೆಯಾಗಿ ಲಸಿಕೆ ಪಡೆದು ಕುಟುಂಬವನ್ನು ರಕ್ಷಿಸುವುದು ನನ್ನ ಜವಾಬ್ದಾರಿ’ ಎಂದರು.
