ವಾಷಿಂಗ್ಟನ್‌(ಮಾ.25): ಅಮೆರಿಕದ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳುವ ಮಹತ್ವದ ಸರ್ಜನ್‌ ಜನರಲ್‌ ಹುದ್ದೆಗೆ ಮಂಡ್ಯ ಮೂಲದ ಡಾ| ವಿವೇಕ್‌ ಹಲ್ಲೇಗೆರೆ ಮೂರ್ತಿ ಎರಡನೇ ಬಾರಿಗೆ ನೇಮಕಗೊಂಡಿದ್ದಾರೆ. 43 ವರ್ಷದ ವಿವೇಕ್‌ ಮೂರ್ತಿಯ ನೇಮಕವನ್ನು ಅಮೆರಿಕದ ಸೆನೆಟ್‌ (ಮೇಲ್ಮನೆ) ಮಂಗಳವಾರ ಅಂಗೀಕರಿಸಿತು. ಅದರೊಂದಿಗೆ ಅವರ ನೇಮಕ ಅಂತಿಮಗೊಂಡಿತು.

ಅಧ್ಯಕ್ಷ ಜೋ ಬೈಡೆನ್‌ ಅಧಿಕಾರ ಸ್ವೀಕರಿಸುತ್ತಿದ್ದಂತೆ ವಿವೇಕ್‌ ಮೂರ್ತಿ ಹೆಸರನ್ನು ಸರ್ಜನ್‌ ಜನರಲ್‌ ಹುದ್ದೆಗೆ ಶಿಫಾರಸು ಮಾಡಿದ್ದರು. ಅದನ್ನು ಸೆನೆಟ್‌ ಅಂಗೀಕರಿಸಬೇಕಿತ್ತು. ಮಂಗಳವಾರ ಈ ಕುರಿತು ಮತದಾನ ನಡೆದಾಗ 57-43 ಮತದೊಂದಿಗೆ ವಿವೇಕ್‌ ಮೂರ್ತಿ ನೇಮಕಗೊಂಡರು. ಇವರು ಬೈಡೆನ್‌ ಆಡಳಿತದ ಆರೋಗ್ಯ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಲಿದ್ದಾರೆ. ಅಮೆರಿಕದಲ್ಲಿ ಭಾರಿ ಪ್ರಮಾಣದಲ್ಲಿ ಹರಡುತ್ತಿರುವ ಕೊರೋನಾ ವೈರಸ್‌ ಮಟ್ಟಹಾಕುವುದು ಇವರಿಗಿರುವ ಮೊದಲ ಸವಾಲಾಗಿದೆ.

ಡಾ| ವಿವೇಕ್‌ ಮೂರ್ತಿ ಈ ಹಿಂದೆ 2013ರಲ್ಲಿ ಬರಾಕ್‌ ಒಬಾಮಾ ಅಧ್ಯಕ್ಷರಾಗಿದ್ದಾಗ ತಮ್ಮ 37ನೇ ವರ್ಷಕ್ಕೇ ಸರ್ಜನ್‌ ಜನರಲ್‌ ಆಗಿ ನೇಮಕಗೊಂಡು ಈ ಹುದ್ದೆ ಅಲಂಕರಿಸಿದ ಅತ್ಯಂತ ಕಿರಿಯ ವ್ಯಕ್ತಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ನಂತರ ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷರಾದಾಗ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಈಗ ಮತ್ತೆ ಅದೇ ಹುದ್ದೆಗೆ ನೇಮಕಗೊಂಡಿದ್ದಾರೆ.

ನಿಮ್ಮ ಸರ್ಜನ್‌ ಜನರಲ್‌ ಆಗಿ ಸೇವೆ ಸಲ್ಲಿಸಲು ಸೆನೆಟ್‌ ನನಗೆ ಅವಕಾಶ ನೀಡಿದೆ. ಅದಕ್ಕೆ ಆಭಾರಿಯಾಗಿದ್ದೇನೆ. ಕಳೆದ ವರ್ಷ ಕೊರೋನಾದಿಂದ ನಮ್ಮ ದೇಶ ಬಹಳ ನರಳಿದೆ. ಆ ಗಾಯವನ್ನು ಗುಣಪಡಿಸಲು ಹಾಗೂ ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ಕಟ್ಟಿಕೊಡಲು ಶ್ರಮಿಸುತ್ತೇನೆ.

- ಡಾ| ವಿವೇಕ್‌ ಹಲ್ಲೇಗೆರೆ ಮೂರ್ತಿ