ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕನ್ನಡದಲ್ಲಿ ಪ್ರಚಾರ!
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಮತದಾರರನ್ನು ಸೆಳೆಯಲು ರಿಪಬ್ಲಿಕ್ ಹಾಗೂ ಡೆಮಾಕ್ರಟಿಕ್ ಪಕ್ಷಗಳು ಕಸರತ್ತು ನಡೆಸುತ್ತಿವೆ. ಅದರಲ್ಲೂ ಡೆಮಾಕ್ರಟ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಒಂದು ಹೆಜ್ಜೆ ಮುಂದೆ ಹೋಗಿ ಕನ್ನಡ ಸೇರಿದಂತೆ ಭಾರತದ 14 ಭಾಷೆಗಳಲ್ಲಿ ಪ್ರಚಾರ ಮಾಡಲು ಮುಂದಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ವಾಷಿಂಗ್ಟನ್(ಆ.01): ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಮೂಲದ ಮತದಾರರ ಓಲೈಕೆಗೆ ಹಾಲಿ ಅಧ್ಯಕ್ಷ ಅಬ್ ಕೀ ಬಾರ್ ಟ್ರಂಪ್ ಸರ್ಕಾರ್ ಎಂಬ ಘೋಷಣೆ ಮಾಡುತ್ತಿರುವ ಬೆನ್ನಲ್ಲೇ, ಅವರ ಪ್ರತಿಸ್ಪರ್ಧಿ ಡೆಮಾಕ್ರಟ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಕನ್ನಡ ಸೇರಿದಂತೆ ಭಾರತದ 14 ಭಾಷೆಗಳಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಅಮೆರಿಕದಲ್ಲೇ ಅತ್ಯಂತ ಪ್ರಭಾವೀ ಸಮುದಾಯವಾದ ಭಾರತೀಯ ಮತದಾರರನ್ನು ಭಾವನಾತ್ಮಕವಾಗಿ ಸೆಳೆಯುವ ಸಲುವಾಗಿ ಬೈಡನ್ ಅವರು ಕನ್ನಡ, ಹಿಂದಿ, ತಮಿಳು, ತೆಲುಗು, ಪಂಜಾಬಿ, ಮಲಯಾಳಂ, ಒರಿಯಾ ಹಾಗೂ ಮರಾಠಿ ಭಾಷೆಗಳ ಮೊರೆ ಹೋಗಿದ್ದಾರೆ.
ಈ ಪ್ರಕಾರ, ‘ಅಮೆರಿಕ ಕಾ ನೇತಾ ಕೈಸಾ ಹೋ, ಜೋ ಬೈಡನ್ ಜೈಸಾ ಹೋ’(ಅಮೆರಿಕದ ನಾಯಕ ಹೇಗಿರಬೇಕು ಎಂದರೆ ಅದು ಬೈಡನ್ ರೀತಿ) ಎಂಬ ಘೋಷ ವಾಕ್ಯಗಳೊಂದಿಗೆ ಈಗಾಗಲೇ ಅಮೆರಿಕದಾದ್ಯಂತ ಪ್ರಚಾರ ನಡೆಸಲಾಗುತ್ತಿದೆ.
ದೇಶವಾಸಿಗಳ ಆಪ್ತರಕ್ಷಕ ಮೋದಿ: ಈ ವಿಚಾರದಲ್ಲಿ ಅಮೆರಿಕಾ, ಕೆನಡಾವನ್ನೇ ಹಿಂದಿಕ್ಕಿದ ಭಾರತದ ಪಿಎಂ!
ಅಮೆರಿಕ ಅಧ್ಯಕ್ಷೀಯ ಚುನಾವಣೆ ನವೆಂಬರ್ 03ರಂದು ನಿಗದಿಪಡಿಸಲಾಗಿದೆ. ಡೆಮಾಕ್ರೆಟಿಕ್ ಹಾಗೂ ರಿಪಬ್ಲಿಕ್ ಪಕ್ಷಗಳ ನಾಯಕರು ಭಾರತೀಯರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಡೆಮಾಕ್ರೆಟಿಕ್ ಅಭ್ಯರ್ಥಿ ಜೋ ಬೈಡನ್ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ರಿಪಬ್ಲಿಕ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರನ್ನು ಎದುರಿಸಲಿದ್ದಾರೆ.