Asianet Suvarna News Asianet Suvarna News

US President: ಒಂದೇ ವರ್ಷದಲ್ಲಿ ಜೋ ಬೈಡೆನ್‌ ಜನಪ್ರಿಯತೆ ಕುಸಿತ

ಡೊನಾಲ್ಡ್‌ ಟ್ರಂಪ್‌ ಅವರ ಅತಿರೇಕದ ಎದುರು ಭರವಸೆಯಾಗಿ ಕಂಡ ಜೋ ಬೈಡೆನ್‌ ಅವರು ಅಮೆರಿಕ ಅಧ್ಯಕ್ಷರಾಗಿ ಗುರುವಾರ ಒಂದು ವರ್ಷವನ್ನು ಪೂರ್ಣಗೊಳಿಸಿದ್ದಾರೆ. ಆದರೆ ಈ ಅವಧಿಯಲ್ಲಿ ಬೈಡೆನ್‌ ಜನಪ್ರಿಯತೆ ನಿರೀಕ್ಷೆಗೂ ಮೀರಿ ಕುಸಿದಿದೆ. 

US President Joe Bidens Popularity Declined in a Single Year gvd
Author
Bangalore, First Published Jan 21, 2022, 2:10 AM IST

ವಾಷಿಂಗ್ಟನ್‌ (ಜ.21): ಡೊನಾಲ್ಡ್‌ ಟ್ರಂಪ್‌ (Donald Trump) ಅವರ ಅತಿರೇಕದ ಎದುರು ಭರವಸೆಯಾಗಿ ಕಂಡ ಜೋ ಬೈಡೆನ್‌ (Joe Biden) ಅವರು ಅಮೆರಿಕ ಅಧ್ಯಕ್ಷರಾಗಿ ಗುರುವಾರ ಒಂದು ವರ್ಷವನ್ನು ಪೂರ್ಣಗೊಳಿಸಿದ್ದಾರೆ. ಆದರೆ ಈ ಅವಧಿಯಲ್ಲಿ ಬೈಡೆನ್‌ ಜನಪ್ರಿಯತೆ ನಿರೀಕ್ಷೆಗೂ ಮೀರಿ ಕುಸಿದಿದೆ. ಕೊರೋನಾ (Coronavirus) ನಿರ್ವಹಣೆ ಹಾಗೂ ಹಣದುಬ್ಬರ ಏರಿಕೆ ಹಿನ್ನೆಲೆಯಲ್ಲಿ ಬೈಡೆನ್‌ ಆಡಳಿತದ ವಿರುದ್ಧ ಭಾರಿ ಸಂಖ್ಯೆಯಲ್ಲಿ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೈಡೆನ್‌ ಆಡಳಿತ ಚೆನ್ನಾಗಿಲ್ಲ ಎಂದು ಶೇ.56ರಷ್ಟು ಜನರು ಹೇಳಿದ್ದರೆ, ಶೇ.43 ಮಂದಿ ಮಾತ್ರ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಬೈಡೆನ್‌ ಅವರು 2024ರಲ್ಲೂ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಕೈಗೊಳ್ಳಲಿ ಎಂದು ಕೇವಲ ಶೇ.28ರಷ್ಟುಜನರು ಬಯಕೆ ತೋಡಿಕೊಂಡಿದ್ದಾರೆ. ಅವರ ಪಕ್ಷವಾದ ಡೆಮೊಕ್ರಟ್‌ನಲ್ಲೂ 48% ಮಂದಿ ಮಾತ್ರ ಈ ಆಸೆ ವ್ಯಕ್ತಪಡಿಸಿದ್ದಾರೆ ಎಂದು ದ ಅಸೋಸಿಯೇಟೆಡ್‌ ಪ್ರೆಸ್‌ ಹಾಗೂ ಸಾರ್ವಜನಿಕ ವ್ಯವಹಾರಗಳ ಸಂಶೋಧನಾ ಸಂಸ್ಥೆ ಎನ್‌ಒಆರ್‌ಸಿ ಸೆಂಟರ್‌ ನಡೆಸಿರುವ ಸಮೀಕ್ಷೆ ತಿಳಿಸಿದೆ.

ಅಚ್ಚರಿ ಎಂದರೆ, 2021ರ ಜುಲೈನಲ್ಲಿ ಇದೇ ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲಿ ಬೈಡೆನ್‌ ಆಡಳಿತಕ್ಕೆ 59% ಜನರು ಮೆಚ್ಚುಗೆ ಸೂಚಿಸಿದ್ದರು. ಅಷ್ಘಾನಿಸ್ತಾನದಿಂದ ಅಮೆರಿಕ ತನ್ನ ಸೇನೆಯನ್ನು ಹಿಂತೆಗೆದುಕೊಂಡ ತರುವಾಯ ಕಳೆದ ಸೆಪ್ಟೆಂಬರ್‌ನಲ್ಲಿ ಜನಪ್ರಿಯತೆ 50%ಕ್ಕೆ ಕುಸಿದಿತ್ತು. ಆರ್ಥಿಕ, ಮೂಲಸೌಕರ್ಯ ಹಾಗೂ ತೆರಿಗೆ ನೀತಿಗಳಿಂದಾಗಿ ಬೈಡೆನ್‌ ಜನಪ್ರಿಯತೆ ಈಗ 43%ಕ್ಕೆ ಜಾರಿದೆ. ಈ ಸಮೀಕ್ಷೆಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಗಮನ ಸೆಳೆದಾಗ, ‘ನಾನು ಸಮೀಕ್ಷೆಗಳನ್ನು ನಂಬುವುದಿಲ್ಲ’ ಎಂದು ಬೈಡೆನ್‌ ಹೇಳಿದ್ದಾರೆ.

NRI's In White House: ಜೋ ಬೈಡನ್ ತಂಡಕ್ಕೆ ಇನ್ನೊಬ್ಬ ಭಾರತೀಯ ಸೇರ್ಪಡೆ

ಬೈಡೆನ್‌ ಕುರಿತು ಅಮೆರಿಕನ್ನರಲ್ಲಿ ಆಕ್ರೋಶಕ್ಕೆ ಕಾರಣವಾಗಿರುವುದು 40 ವರ್ಷಗಳಲ್ಲೇ ಭಾರಿ ವೇಗದಲ್ಲಿ ಹೆಚ್ಚಾಗಿರುವ ಹಣದುಬ್ಬರ. ಇದರಿಂದಾಗಿ ಮನೆ ಬಳಕೆ ವಸ್ತುಗಳು ಹಾಗೂ ಆಹಾರ ಪದಾರ್ಥಗಳ ಬೆಲೆ ಬಲು ದುಬಾರಿಯಾಗಿದೆ. ಇದೇ ವೇಳೆ ಬೈಡೆನ್‌ ಅವರು ಕೊರೋನಾ ನಿರ್ಮೂಲನೆಯ ಪಣ ತೊಟ್ಟಿದ್ದರು. ಆದರೆ ಕೊರೋನಾ ಅಮೆರಿಕದಲ್ಲಿ ಈಗಲೂ ಹೆಚ್ಚಿನ ಪ್ರಮಾಣದಲ್ಲೇ ವರದಿಯಾಗುತ್ತಿದೆ. 79 ವರ್ಷದ ಬೈಡೆನ್‌ ಅವರು ಅಮೆರಿಕ ಕಂಡ ಅತ್ಯಂತ ವಯೋವೃದ್ಧ ಅಧ್ಯಕ್ಷ. ‘ನಾನು ಈಗ ದಿನಸಿ ವಸ್ತುಗಳ ಬೆಲೆ ಏರಿಕೆಯಿಂದ ತಪ್ಪಿಸಿಕೊಳ್ಳಲು ಕಡಿಮೆ ಮಾಂಸ ತಿನ್ನುವಂತಾಗಿದೆ’ ಎಂದು ಅರೆಕಾಲಿಕ ನೈರ್ಮಲ್ಯ ನೌಕರರೊಬ್ಬರು ಬೈಡೆನ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೋ ಬೈಡೆನ್‌, ಕಮಲಾ ಹ್ಯಾರಿಸ್‌ ಮಧ್ಯೆ ಬಿರುಕು: 2020ರ ಅಧ್ಯಕ್ಷೀಯ ಚುನಾವಣೆ ವೇಳೆ ಡೊನಾಲ್ಡ್‌ ಟ್ರಂಪ್‌ರನ್ನು ಸೋಲಿಸಿ ಅಧಿಕಾರಕ್ಕೇರಿದ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ (US President Joe Biden) ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ನಡುವೆ ಶೀತಲಯುದ್ಧ ಆರಂಭವಾಗಿದೆ ಎಂದು ಭಾರಿ ಗುಸುಗುಸು ಹಬ್ಬಿದೆ. ಅಧಿಕಾರಕ್ಕೇರಿದ ಆರಂಭದ ದಿನಗಳಲ್ಲಿ ಬಹುತೇಕ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದ ಬೈಡೆನ್‌ ಮತ್ತು ಕಮಲಾ, ಇತ್ತೀಚಿನ ದಿನಗಳಲ್ಲಿ ಅಂತರ ಕಾಪಾಡಿಕೊಳ್ಳುತ್ತಿರುವುದು ಈ ಗುಸುಗುಸುವಿಗೆ ಕಾರಣವಾಗಿದೆ.

US President; ಕಮಲಾ ಹ್ಯಾರಿಸ್‌ಗೆ ಅಧಿಕಾರ ಹಸ್ತಾಂತರಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್!

ದಿನ ಕಳೆದಂತೆ ಜೋ ಬೈಡೆನ್‌ ಜನಪ್ರಿಯತೆ ಕುಸಿತವಾಗುತ್ತಿರುವ ಬೆನ್ನಲ್ಲೇ, ಅವರಿಂದ ಅಂತರ ಕಾಪಾಡಿಕೊಳ್ಳುತ್ತಿರುವ ಭಾರತೀಯ ಮೂಲದ ಕಮಲಾ ಹ್ಯಾರಿಸ್‌, 2024ರ ಅಧ್ಯಕ್ಷೀಯ ಚುನಾವಣೆ ಅಥವಾ ತೀರಾ ಅನಿವಾರ್ಯ ಸಂದರ್ಭದಲ್ಲಿ ಯಾವುದೇ ಕ್ಷಣದಲ್ಲಿ ಅಮೆರಿಕದ ಅಧ್ಯಕ್ಷ ಹುದ್ದೆ ಏರಲು ಸಜ್ಜಾಗುತ್ತಿರಬಹುದು ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ. ವಿಶೇಷವೆಂದರೆ ಟ್ರಂಪ್‌ ವಿರುದ್ಧ ಬೈಡೆನ್‌ ಮತ್ತು ಕಮಲಾ ಪರವಾಗಿ ಬ್ಯಾಟಿಂಗ್‌ ಮಾಡಿದ್ದ ಅಮೆರಿಕದ ಬಲಪಂಥೀಯ ಪತ್ರಿಕೆಗಳೇ ಇದೀಗ ಇಂಥದ್ದೊಂದು ವಿಶ್ಲೇಷಣೆ ಮಾಡುತ್ತಿವೆ.

Follow Us:
Download App:
  • android
  • ios