ವಾಷಿಂಗ್ಟನ್‌ (ನ.06): ಅಮೆರಿಕದ ನೂತನ ನೂತನ ಅಧ್ಯಕ್ಷರ ಆಯ್ಕೆಗೆ ನಡೆದಿರುವ ಚುನಾವಣೆಯ ಫಲಿತಾಂಶ ಮತ್ತಷ್ಟುವಿಳಂಬವಾಗಿದ್ದು, ಭಾರತೀಯ ಕಾಲಮಾನ ಶುಕ್ರವಾರ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಗುರುವಾರ ರಾತ್ರಿಯವರೆಗಿನ ಮತ ಎಣಿಕೆಯ ಅನ್ವಯ ಡೆಮಾಕ್ರೆಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡೆನ್‌, ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ರಿಗಿಂತ ಮುನ್ನಡೆ ಸಾಧಿಸಿದ್ದಾರೆ. ನೂತನ ಅಧ್ಯಕ್ಷರಾಗಲು ಅಭ್ಯರ್ಥಿಗಳು 270 ಪ್ರತಿನಿಧಿ ಮತ ಪಡೆಯಬೇಕಿದ್ದು, ಇದುವರೆಗೆ ಬೈಡೆನ್‌ಗೆ 264 ಮತಗಳು ಲಭ್ಯವಾಗಿದ್ದರೆ, ಟ್ರಂಪ್‌ಗೆ 214 ಮತಗಳ ಮಾತ್ರ ಸಿಕ್ಕಿವೆ.

"

ಮತ ಎಣಿಕೆ ಬಾಕಿ ಉಳಿದ 5 ರಾಜ್ಯಗಳ ಪೈಕಿ 4ರಲ್ಲಿ ಟ್ರಂಪ್‌ ಮುನ್ನಡೆಯಲ್ಲಿದ್ದರೆ, 1ರಲ್ಲಿ ಬೈಡೆನ್‌ ಮುನ್ನಡೆ ಸಾಧಿಸಿದ್ದಾರೆ. ಆದರೆ ಅಧ್ಯಕ್ಷರಾಗಿ ಆಯ್ಕೆಯಾಗಲು ಬೈಡೆನ್‌ ಈಗಾಗಲೇ ತಾವು ಮುನ್ನಡೆ ಸಾಧಿಸಿರುವ 6 ಮತಗಳನ್ನು ಹೊಂದಿರುವ ನೆವಾಡಾ ರಾಜ್ಯ ಗೆದ್ದರೆ ಸಾಕು. ಮತ್ತೊಂದೆಡೆ ಟ್ರಂಪ್‌ ಅಧ್ಯಕ್ಷ ಗಾದಿ ಉಳಿಸಿಕೊಳ್ಳಲು ಎಲ್ಲಾ 5 ರಾಜ್ಯಗಳನ್ನು ಗೆಲ್ಲಬೇಕು. ಹೀಗಾಗಿ ಅಂತಿಮ ಹಂತದಲ್ಲಿ ಜಯಮಾಲೆ ಯಾರ ಕೊರಳಿಗೆ ಬೇಕಾದರೂ ಬೀಳಬಹುದು ಎಂಬ ವಿಶ್ಲೇಷಣೆ ಕೇಳಿಬಂದಿದೆ.

'ಕೌಂಟಿಂಗ್ ಕೂಡಲೇ ನಿಲ್ಲಿಸಿ' ಗುಡುಗಿದ ಟ್ರಂಪ್‌ ಟ್ವೀಟ್ ಮಂಗಮಾಯ! ...

ಜೋ ಮುನ್ನಡೆ:

ನ.3ರಂದು ನಡೆದಿದ್ದ ಅಧ್ಯಕ್ಷೀಯ ಚುನಾವಣೆ ಮತ ಎಣಿಕೆ ಪ್ರಕ್ರಿಯೆಯು ಗುರುವಾರ ಕೂಡಾ ಪೂರ್ಣಗೊಂಡಿಲ್ಲ. ಕೊರೋನಾ ಹಿನ್ನೆಲೆ ಈ ಬಾರಿ ಕೋಟ್ಯಂತರ ಜನರು ಅಂಚೆಮತಕ್ಕೆ ಶರಣಾದ ಕಾರಣ, ದೊಡ್ಡ ದೊಡ್ಡ ರಾಜ್ಯಗಳಲ್ಲಿ ಮತ ಎಣಿಕೆ ತಡವಾಗಿದೆ. ಭಾರತೀಯ ಕಾಲಮಾನ ಗುರುವಾರ ರಾತ್ರಿಯವರೆಗೆ ಅಮೆರಿಕದ 50 ರಾಜ್ಯಗಳ ಪೈಕಿ 45 ರಾಜ್ಯಗಳ ಫಲಿತಾಂಶ ಪ್ರಕಟವಾಗಿದೆ. ಇದರಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 214 ಪ್ರತಿನಿಧಿ ಮತ ಪಡೆದಿದ್ದರೆ, ಬೈಡೆನ್‌ 264 ಮತ ಪಡೆದಿದ್ದಾರೆ. ಹೀಗಾಗಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಲು ಟ್ರಂಪ್‌ಗೆ 56 ಮತ್ತು ಬೈಡೆನ್‌ಗೆ ಕೇವಲ 6 ಮತಗಳ ಕೊರತೆ ಇದೆ.

ಹಾಲಿ ಪೆನ್ಸಿಲ್ವೇನಿಯಾ, ನಾತ್‌ರ್‍ ಕ್ಯಾರೋಲಿನಾ, ಜಾರ್ಜಿಯಾ, ಅಲಾಸ್ಕಾ ಮತ್ತು ನೆವಾಡಾ ರಾಜ್ಯಗಳಲ್ಲಿ ಮತ ಎಣಿಕೆ ಮುಂದುವರೆದಿದೆ. ಈ ಪೈಕಿ ಪೆನ್ಸಿಲ್ವೇನಿಯಾ, ನಾತ್‌ರ್‍ ಕ್ಯಾರೋಲಿನಾ, ಜಾರ್ಜಿಯಾ, ಅಲಸ್ಕಾದಲ್ಲಿ ಟ್ರಂಪ್‌ ಮುನ್ನಡೆ ಸಾಧಿಸಿದ್ದಾರೆ. ಈ ನಾಲ್ಕು ರಾಜ್ಯಗಳು ಒಟ್ಟು 54 ಮತಗಳನ್ನು ಹೊಂದಿವೆ. ಇನ್ನು ಬೈಡೆನ್‌ ಮುನ್ನಡೆ ಹೊಂದಿರುವ ನೆವಾಡಾ 6 ಸ್ಥಾನ ಹೊಂದಿವೆ.

ಹಾಲಿ ಬಲಾಬಲ

ಅಭ್ಯರ್ಥಿ ಪಕ್ಷ ಗೆದ್ದ ಸ್ಥಾನ

ಜೋ ಬೈಡೆನ್‌ ಡೆಮಾಕ್ರೆಟಿಕ್‌ ಪಕ್ಷ 264

ಡೊನಾಲ್ಡ್‌ ಟ್ರಂಪ್‌ ರಿಪಬ್ಲಿಕನ್‌ 214

ಒಟ್ಟು ಪ್ರತಿನಿಧಿ ಮತಗಳ ಸಂಖ್ಯೆ 538

ಬಹುಮತ ಪಡೆಯಲು ಬೇಕಾದ ಸ್ಥಾನ 270

ಮತ ಎಣಿಕೆ ಬಾಕಿ ಉಳಿದ ರಾಜ್ಯಗಳು

ಪೆನ್ಸಿಲ್ವೇನಿಯಾ 20

ನಾತ್‌ರ್‍ ಕ್ಯಾರೋಲಿನಾ 16

ಜಾರ್ಜಿಯಾ 15

ನೆವಾಡಾ 06

ಅಲಾಸ್ಕಾ 03