ಅಮೆರಿಕ ಮತ್ತು ಇಸ್ರೇಲ್‌ ಜಂಟಿಯಾಗಿ ಇರಾನ್‌ನ ಇಸ್ಫಹಾನ್‌ ನಗರದ ಮೇಲೆ ಬಂಕರ್‌ ಬಸ್ಟರ್‌ ಬಾಂಬ್‌ ದಾಳಿ ನಡೆಸಿವೆ. ಪರಮಾಣು ಬಾಂಬ್‌ ತಯಾರಿಕೆಗೆ ಬಳಸುವ ಯುರೇನಿಯಂ ಸಂಗ್ರಹವನ್ನು ನಾಶಪಡಿಸುವುದು ಈ ದಾಳಿಯ ಮುಖ್ಯ ಉದ್ದೇಶ. ಈ ದಾಳಿ ಯುರೇನಿಯಂ ಸಂಗ್ರಹಕ್ಕೆ ಹಾನಿಯಾಗಿದೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ.

ದುಬೈ (ಏ.1): ಅಣ್ವಸ್ತ್ರಗಳು ಇರಾನ್‌ ಕೈವಶವಾಗಬಾರದು ಎಂಬ ಹಠಕ್ಕೆ ಬಿದ್ದಿರುವ ಅಮೆರಿಕ ಮತ್ತು ಇಸ್ರೇಲ್‌ ಮಂಗಳವಾರ ಬೆಳ್ಳಂಬೆಳಗ್ಗೆ ಜಂಟಿಯಾಗಿ ಕೇಂದ್ರ ಇರಾನ್‌ನ ಇಸ್ಫಹಾನ್‌ ನಗರದ ಮೇಲೆ 907 ಕೆ.ಜಿ. ತೂಕದ ಬಂಕರ್‌ ಬಸ್ಟರ್‌ ಬಾಂಬ್‌ ದಾಳಿ ನಡೆಸಿವೆ.

Add Asianetnews Kannada as a Preferred SourcegooglePreferred

ಪರಮಾಣು ಬಾಂಬ್‌ ತಯಾರಿಗೆಂದು ಸಂಸ್ಕರಣೆ ಮಾಡಲಾಗಿರುವ ಯುರೇನಿಯಂ ಸಂಗ್ರಹಿಸಿ ಇಡಲಾಗಿದೆ ಎಂಬ ಶಂಕೆ ಇರುವ ಬಂಕರ್‌ಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ದಾಳಿಯ ಕುರಿತ ವಿಡಿಯೋಗಳನ್ನು ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಂಚಿಕೊಂಡಿದ್ದರೆ, ದಾಳಿಯನ್ನು ಇರಾನ್‌ ಇದುವರೆಗೂ ಖಚಿತಪಡಿಸಿಲ್ಲ.

ಭೂಮಿಯ ಮೇಲ್ಮೈನಿಂದ ಭಾರೀ ಆಳ ಪ್ರದೇಶದ ನಿರ್ಮಿಸಿರುವ ಬಂಕರ್‌ಗಳಲ್ಲಿ ಅಡಗಿಸಿ ಇಡಲಾಗಿದೆ ಎನ್ನಲಾದ ಯುರೇನಿಯಂ ಸಂಗ್ರಹಕ್ಕೆ, ಅಮೆರಿಕ ನಡೆಸಿದ ದಾಳಿಯಿಂದ ಯಾವುದಾದರೂ ಹಾನಿ ಆಗಿದೆಯೇ ಎಂಬುದರ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಒಂದು ವೇಳೆ ಹಾಗೇನಾದರೂ ಆಗಿದ್ದಲ್ಲಿ ಅತ್ಯಂತ ವಿಕಿರಣಶೀಲ ಪದಾರ್ಥ ಸುತ್ತಮುತ್ತಲಿನ ಗಾಳಿ, ನೀರನ್ನು ಸೇರಿ ಜಗತ್ತು ಮತ್ತೊಂದು ವಿನಾಶಕ್ಕೆ ಸಾಕ್ಷಿಯಾಗಬೇಕಾಗಿ ಬರಲಿದೆ.

ಭೀಕರ ಬಾಂಬ್:

ಇರಾನ್‌ನ 3 ಪ್ರಮುಖ ಪರಮಾಣು ಕೇಂದ್ರಗಳ ಪೈಕಿ ಇಸ್ಪಹಾನ್‌ ಕೂಡಾ ಒಂದು. ಕಳೆದ ವರ್ಷವೂ ಇದರ ಮೇಲೆ ಅಮೆರಿಕ ದಾಳಿ ನಡೆಸಿತ್ತು. ಮಂಗಳವಾರ ಬೆಳಗ್ಗೆ ಮತ್ತೆ ಇದೇ ಘಟಕದ ಸಮೀಪವೇ ಇರುವ ಬಂಕರ್‌ಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಇಲ್ಲಿ ಇರಾನ್‌ನ ಶಸ್ತ್ರಾಸ್ತ್ರ ಕೋಠಿ ಇತ್ತು. ಅದನ್ನು ಧ್ವಂಸಗೊಳಿಸುವ ಸಲುವಾಗಿ ಬಂಕರ್‌ ಬಸ್ಟರ್‌ ಬಾಂಬ್‌ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಹೇಳಿದೆ. ಬಾಂಬ್‌ ಸ್ಫೋಟದ ಬೆನ್ನಲ್ಲೇ ಸರಣಿ ಸ್ಫೋಟಗಳು ಉಂಟಾಗಿದ್ದು, ಆ ಬಳಿಕ ಮುಗಿಲೆತ್ತರಕ್ಕೆ ಭಾರೀ ಪ್ರಮಾಣದ ಬೆಂಕಿ ಅಲೆಗಳು ಜಿಗಿದಿದೆ.

ಅಮೆರಿಕಕ್ಕೆ ಶಂಕೆ ಏಕೆ?:

ಕಳೆದ ವರ್ಷ ಇಸ್ಫಹಾನ್‌ ಅಣು ಘಟಕದ ಮೇಲೆ ದಾಳಿ ನಡೆಸುವುದಕ್ಕೂ ಮುನ್ನ ಅಮೆರಿಕದ ಉಪಗ್ರಹಗಳು ಕೆಲವೊಂದಿಷ್ಟು ಚಿತ್ರಗಳನ್ನು ಸೆರೆಹಿಡಿದಿದ್ದವು. ಅದರಲ್ಲಿ ಹಲವು ಟ್ರಕ್‌ಗಳಲ್ಲಿ ಇಡಲಾದ 18 ಕಂಟೇನರ್‌ ಮೂಲಕ ಸಂಸ್ಕರಿಸಿದ ಯುರೇನಿಯಂ ಅನ್ನು ಸುರಂಗವೊಂದರೊಳಗೆ ಕೊಂಡೊಯ್ಯುತ್ತಿದ್ದ ದೃಶ್ಯಗಳಿದ್ದವು. ಹೀಗಾಗಿ ಕಳೆದ ಜೂನ್‌ ತಿಂಗಳಲ್ಲಿ ಇದರ ಮೇಲೆ ಅಮೆರಿಕ ದಾಳಿ ನಡೆಸಿತ್ತು. ಆದರೆ ಅದರಿಂದ ಏನೂ ಹೆಚ್ಚಿನ ಪರಿಣಾಮ ಆಗಿಲ್ಲ. ಈಗಲೂ ಇರಾನ್‌ ಬಳಿ 400 ಕೆಜಿಯಷ್ಟು ಯುರೇನಿಯಂ ಇದೆ. ಇದು ಈಗಾಗಲೇ ಶೇ.60ರಷ್ಟು ಸಂಸ್ಕರಣೆಗೊಂಡಿದೆ. ಇದು ಶೇ.90ಕ್ಕೆ ತಲುಪಿದರೆ ಅದು ಅಣ್ವಸ್ತ್ತ ತಯಾರಿಗೆ ಅರ್ಹವಾಗುತ್ತದೆ. ಅದು ಇರಾನ್‌ಗೆ ಕನಿಷ್ಠ 10 ಪರಮಾಣು ಬಾಂಬ್‌ ತಯಾರಿ ಶಕ್ತಿ ನೀಡುತ್ತದೆ ಎಂಬುದು ಅಮೆರಿಕ ಮತ್ತು ಇಸ್ರೇಲ್‌ನ ಆತಂಕ. ಇದೇ ಕಾರಣಕ್ಕೆ ಹೇಗಾದರೂ ಮಾಡಿ ಇರಾನ್‌ ಬಳಿ ಇರುವ ಯುರೇನಿಯಂ ಅನ್ನು ನಾಂ ಮಾಡಬೇಕು ಅಥವಾ ವಶಪಡಿಸಿಕೊಳ್ಳಬೇಕು ಎಂಬ ಆಶಯದಲ್ಲಿ ಮಂಗಳವಾರ ದಾಳಿ ನಡೆಸಲಾಗಿದೆ ಎನ್ನಲಾಗಿದೆ.