ಬಿ-2 ಅಮೆರಿಕದ 30,000 ಪೌಂಡ್ ತೂಕದ ಜಿಬಿಯು-57 ಮ್ಯಾಸಿವ್‌ ಆರ್ಡನೆನ್ಸ್ ಪೆನೆಟ್ರೇಟರ್ ಅನ್ನು ಹೊತ್ತೊಯ್ಯಲು ಸಾಧ್ಯವಾಗುವ ಜಗತ್ತಿನ ಏಕೈಕ ಜೆಟ್‌. ಇದನ್ನು ಆಳವಾದ ಭೂಗತ ಗುರಿಗಳನ್ನು ನಾಶಮಾಡಲು ವಿನ್ಯಾಸಗೊಳಿಸಲಾಗಿದೆ. 

ವಾಷಿಂಗ್ಟನ್‌(ಜೂ.21): ಅಮೆರಿಕ ಇಂದಲ್ಲ, ನಾಳೆ ಇರಾನ್‌-ಇಸ್ರೇಲ್‌ ಸಂಘರ್ಷದಲ್ಲಿ ಇಸ್ರೇಲ್‌ ಪರವಾಗಿ ಭಾಗಿಯಾಗುವುದು ಖಚಿತವಾಗಿದೆ. ಅದಕ್ಕೆ ಸಿದ್ಧತೆ ಎನ್ನುವಂತೆ ಆಳವಾದ ಭೂಗತ ಗುರಿಗಳನ್ನು ನಾಶ ಮಾಡಲು ಸಾಧ್ಯವಾಗುವ ಜಿಬಿಯು-57 ಮ್ಯಾಸಿವ್‌ ಆರ್ಡನೆನ್ಸ್ ಪೆನೆಟ್ರೇಟರ್ ಬಾಂಬ್‌ಅನ್ನು ಹೊತ್ತೊಯ್ಯಲು ಸಾಧ್ಯವಾಗುವ ಏಕೈಕ ಜೆಟ್‌ ಆದ ಬಿ2 ಬಾಂಬರ್‌ ಅನ್ನು ಗುವಾಮ್‌ ದೇಶಕ್ಕೆ ಕಳಿಸಿಕೊಟ್ಟಿದೆ.

ಇರಾನ್ ವಿರುದ್ಧ ಇಸ್ರೇಲ್ ನಡೆಸಿದ ದಾಳಿಯಲ್ಲಿ ಅಮೆರಿಕ ಭಾಗವಹಿಸಬೇಕೇ ಬೇಡವೇ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಚಿಸುತ್ತಿರುವ ನಡುವೆಯೇ, ಅಮೆರಿಕವು ಬಿ -2 ಬಾಂಬರ್‌ಗಳನ್ನು ಪೆಸಿಫಿಕ್ ದ್ವೀಪವಾದ ಗುವಾಮ್‌ಗೆ ಸಾಗಿಸುತ್ತಿದೆ ಎಂದು ಅಮೆರಿಕದ ಇಬ್ಬರು ಅಧಿಕಾರಿಗಳು ಶನಿವಾರ ರಾಯಿಟರ್ಸ್‌ಗೆ ತಿಳಿಸಿದ್ದಾರೆ. ಬಾಂಬರ್ ವಿಮಾನಗಳ ನಿಯೋಜನೆಯು ಮಧ್ಯಪ್ರಾಚ್ಯದ ಉದ್ವಿಗ್ನತೆಗಳಿಗೆ ಸಂಬಂಧಿಸಿದೆಯೇ ಎನ್ನುವುದು ಮಾತ್ರ ಸ್ಪಷ್ಟವಾಗಿಲ್ಲ.

ಬಿ-2 ಅಮೆರಿಕದ 30,000 ಪೌಂಡ್ ತೂಕದ ಜಿಬಿಯು-57 ಮ್ಯಾಸಿವ್‌ ಆರ್ಡನೆನ್ಸ್ ಪೆನೆಟ್ರೇಟರ್ ಅನ್ನು ಹೊತ್ತೊಯ್ಯಲು ಸಾಧ್ಯವಾಗುವ ಜಗತ್ತಿನ ಏಕೈಕ ಜೆಟ್‌. ಇದನ್ನು ಆಳವಾದ ಭೂಗತ ಗುರಿಗಳನ್ನು ನಾಶಮಾಡಲು ವಿನ್ಯಾಸಗೊಳಿಸಲಾಗಿದೆ. ಫೋರ್ಡೋ ಸೇರಿದಂತೆ ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಧ್ವಂಸ ಮಾಡಲು ಬಳಸಬಹುದಾದ ಅಸ್ತ್ರ ಅದು ಎಂದು ತಜ್ಞರು ಹೇಳುತ್ತಾರೆ.

ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಗಳು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದರು. ಗುವಾಮ್‌ನ ಆಚೆಗೆ ಬಾಂಬರ್‌ಗಳನ್ನು ಸ್ಥಳಾಂತರಿಸಲು ಇನ್ನೂ ಯಾವುದೇ ಫಾರ್ವರ್ಡ್‌ ಆದೇಶಗಳನ್ನು ನೀಡಲಾಗಿಲ್ಲ ಎಂದು ಒಬ್ಬ ಅಧಿಕಾರಿ ಹೇಳಿದ್ದಾರೆ. ಎಷ್ಟು ಬಿ-2 ಬಾಂಬರ್‌ಗಳನ್ನು ಸ್ಥಳಾಂತರಿಸಲಾಗುತ್ತಿದೆ ಎನ್ನುವ ಮಾಹಿತಿಯನ್ನೂ ಬಿಟ್ಟುಕೊಟ್ಟಿಲ್ಲ. ಪೆಂಟಗನ್ ಕೂಡ ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.