US Slow Growth Rate: ಅಮೆರಿಕದ ರಾಷ್ಟ್ರೀಯ ಸಾಲ $37 ಟ್ರಿಲಿಯನ್ ತಲುಪಿದ್ದು, ಆರ್ಥಿಕ ತಜ್ಞರಲ್ಲಿ ಆತಂಕ ಮೂಡಿಸಿದೆ. ಈ ಸಾಲ ಭವಿಷ್ಯದಲ್ಲಿ ಆರ್ಥಿಕ ಬೆಳವಣಿಗೆಗೆ ಹೊರೆಯಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.
ನವದೆಹಲಿ: ಅಮೆರಿಕ ರಾಷ್ಟ್ರೀಯ ಸಾಲದ ಮೊತ್ತ $37 ಟ್ರಿಲಿಯನ್ ($3200000000000000) (ಸುಮಾರು ರೂ. 32 ಲಕ್ಷ ಶತಕೋಟಿ) ಏರಿಕೆಯಾಗಿದ್ದು, ಇಂದು ಭವಿಷ್ಯದ ಮಾರುಕಟ್ಟೆಯ ಆತಂಕಕ್ಕೆ ಕಾರಣವಾಗಿದೆ. ಈ ಸಾಲಕ್ಕೆ ಪಾವತಿಸುವ ವಾರ್ಷಿಕ ಬಡ್ಡಿ ವೆಚ್ಚ ಸುಮಾರು $1 ಟ್ರಿಲಿಯನ್ ತಲುಪುತ್ತಿದೆ. ಈ ಬಡ್ಡಿ ಹೆಚ್ಚಳವಾಗುತ್ತಿರೋದರಿಂದ ಫೆಡರಲ್ ಬಜೆಟ್ ಕುಸಿತಗೊಂಡು, ಸರ್ಕಾರದ ಅಗತ್ಯ ಕೆಲಸಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಆರ್ಥಿಕ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಜೂನ್ 20 ರ ವೇಳೆಗೆ, ಅಮೆರಿಕ ಸರ್ಕಾರವು ದೇಶದ ಇಡೀ ಆರ್ಥಿಕತೆಗಿಂತ ಹೆಚ್ಚಿನ ಹಣವನ್ನು ಬಾಕಿ ಉಳಿಸಿಕೊಂಡಿದೆ.
ಕಳೆದ ಒಂದು ವರ್ಷದಲ್ಲಿ ಯಾವುದೇ ಆರ್ಥಿಕ ಸುಧಾರಣೆ ಯೋಜನೆಗಳು ನಡೆಯಲಿಲ್ಲದಿದ್ದರೆ 2055 ರ ವೇಳೆಗೆ ಸಾಲವು GDP ಯ 156% ತಲುಪುತ್ತದೆ ಎಂದು CBO (Congressional Budget Office) ಅಂದಾಜಿಸಿದೆ. ಪ್ರಸ್ತುತ ಅಮೆರಿಕ $2 ಟ್ರಿಲಿಯನ್ ವಾರ್ಷಿಕ ಕೊರತೆಯು ಸಾಲವನ್ನು ಹೆಚ್ಚಿಸಿಕೊಂಡಿದೆ. ಕಳೆದ ಒಂದು ವರ್ಷದಲ್ಲಿ ಅಧಿಕ ಖರ್ಚು ಮತ್ತು ನಿಧಾನಗತಿ ಆದಾಯದ ಆಗಮನದಿಂದ ಸಾಲದ ಪ್ರಮಾಣ ಏರಿಕೆಯಾಗುತ್ತಿದೆ. ಅಮೆರಿಕ ತೆರಿಗೆಯ ಕಾಲು ಭಾಗವನ್ನು ಸಾಲ ಮರುಪಾವತಿಸಲು ಬಳಕೆ ಮಾಡುತ್ತಿದೆ ಎಂದು ವರದಿಯಾಗಿದೆ.
ಫೆಡರಲ್ ತೆರಿಗೆ ಆದಾಯದ ಇನ್ನುಳಿದ ಭಾಗದಲ್ಲಿಯೇ ಸಾಮಾಜಿಕ ಭದ್ರತೆ, ಮೆಡಿಕೇರ್, ರಾಷ್ಟ್ರೀಯ ರಕ್ಷಣೆ ಮತ್ತು ಮೂಲಸೌಕರ್ಯದಂತಹ ಯೋಜನೆಗಳಿಗೆ ಬಳಕೆ ಮಾಡಲಾಗುತ್ತಿದೆ. ಆದ್ರೆ ಸದ್ಯ ಈ ಯೋಜನೆಗಳಿಗೆ ಬಳಕೆ ಮಾಡುತ್ತಿರುವ ನಿಧಿಯೂ ಕಡಿಮೆಯಾಗಿದೆ. ಲಕ್ಷಾಂತರ ಅಮೆರಿಕನ್ನರು ಈ ಯೋಜನೆಗಳ ಮೇಲೆ ಅವಲಂಬಿತರಾಗಿದ್ದಾರೆ. $37 ಟ್ರಿಲಿಯನ್ ಸಾಲದ ಮೊತ್ತ ಅಮೆರಿಕಕ್ಕೆ ಹೊರೆಯಾಗಲಿದೆ ಎಂದು ಅಂದಾಜಿಸಲಾಗುತ್ತಿದೆ.
ಅಮೆರಿಕದ ಈ ಪರಿಸ್ಥಿತಿಗೆ ಕಾರಣ ಏನು?
ಸಾಮಾನ್ಯವಾಗಿ ಅಮೆರಿಕದ ಆರ್ಥಿಕ ನೀತಿಗಳು ಜಾಗತಿಕ ಸಂಬಂಧಗಳ ಮಲೆ ನೇರವಾದ ಪರಿಣಾಮವನ್ನು ಬೀರುತ್ತವೆ. ವ್ಯಾಪಾರದ ವಿಷಯದಲ್ಲಿಯೇ ಚೀನಾ ವಿರುದ್ಧ ಡೊನಾಲ್ಡ್ ಟ್ರಂಪ್ ತೋರುತ್ತಿರುವ ಮೃದು ಧೋರಣೆಯೇ ಇದಕ್ಕೆಲ್ಲಾ ಕಾರಣ ಎಂದು ಪರಿಗಣಿಸಲಾಗುತ್ತದೆ. ಡೊನಾಲ್ಡ್ ಟ್ರಂಪ್ ತೆರಿಗೆ ಹೆಚ್ಚಳ ಮಾಡಿದ್ದಕ್ಕೆ ಪ್ರತಿಯಾಗಿ ಚೀನಾವೂ ಸಹ ತನ್ನ ತೆರಿಗೆಯನ್ನು ಹೆಚ್ಚಳ ಮಾಡಿತ್ತು. ನಂತರ ಇಬ್ಬರು ಪರಸ್ಪರ ತೆರಿಗೆ ಕಡಿಮೆ ಮಾಡಿಕೊಂಡಿದ್ದರು.
GDP $340 ಶತಕೋಟಿ
ಸಾಲದ ಪ್ರಮಾಣ ಹೆಚ್ಚಳ ಮಾಡಿಕೊಂಡಿದ್ರಿಂದ ಬಜೆಟ್‌ನಲ್ಲಿ ಕಡಿತವಾಗಹಬಹುದು, ಖಾಸಗಿ ಬಂಡವಾಳ ಹೂಡಿಕೆ ಪ್ರಮಾಣವೂ ಕುಸಿಯುವ ಸಾಧ್ಯತೆಗಳಿರುತ್ತವೆ. ಸಾಲದ ಮೇಲಿನ ಪಾವತಿಸುವ ಬಡ್ಡಿ ಪ್ರಮಾಣ ಹೆಚ್ಚಳವಾದ್ರೆ ಇದು ಆರ್ಥಿಕ ಬೆಳವಣಿಗೆ ಅಡ್ಡಿಯಾಗುತ್ತದೆ ಎಂದು ಅರ್ಥಶಾಸ್ತ್ರಜ್ಞರು ಹೇಳುತ್ತಾರೆ. ಒಂದು ವೇಳೆ ಸಾಲದ ಪ್ರಮಾಣ ನಿಯಂತ್ರಣಕ್ಕೆ ಬಾರದಿದ್ದರೆ ಮುಂದಿನ ದಶಕದಲ್ಲಿ GDP $340 ಶತಕೋಟಿಯಷ್ಟು ಕಡಿಮೆಯಾಗಬಹುದು, 1.2 ಮಿಲಿಯನ್ ಉದ್ಯೋಗಗಳನ್ನು ಕಳೆದುಕೊಳ್ಳಬಹುದು. ಉದ್ಯೋಗಿಗಳ ವೇತನ ಏರಿಕೆ ಪ್ರಮಾಣವೂ ಇಳಿಕೆಯಾಗಬಹುದು ಎಂದು CBO ಅಂದಾಜಿಸಿದೆ.
ಅಮೆರಿಕಾಗೆ ಆರ್ಥಿಕ ಬಿಕ್ಕಟ್ಟಿನ ಬಿಸಿ
ಸಾಲ ಹೆಚ್ಚಳ, ಪ್ರಸ್ತುತ ತೆಗೆದುಕೊಳ್ಳುತ್ತಿರುವ ನಿರ್ಧಾರಗಳಿಂದ ಖಾಸಗಿ ಹೂಡಿಕೆದಾರರು ಸರ್ಕಾರದ ಹಣಕಾಸು ನಿರ್ವಹಣೆಯ ಸಾಮರ್ಥ್ಯದಲ್ಲಿ ನಂಬಿಕೆ ಕಳೆದುಕೊಂಡ್ರೆ ಬಡ್ಡಿದರಗಳು ಏರಿಕೆಯಾಗುತ್ತವೆ. ಇದರಿಂದ ಡಾಲರ್ ಮೌಲ್ಯ ಇತರೆ ಕರೆನ್ಸಿಗಳ ಮುಂದೆ ಕುಸಿಯಲಾರಂಭಿಸುತ್ತದೆ. ಇದರಿಂದ ಆರ್ಥಿಕ ಸ್ಥಿರತೆಯನ್ನು ದುರ್ಬಲಗೊಂಡು ಜಾಗತೀಕ ಮಾರುಕಟ್ಟೆಯಲ್ಲಿ ಕಲ್ಪನೆಗೂ ಮೀರಿದ ಬದಲಾವಣೆಗಳು ಉಂಟಾಗಬಹುದು.
ಈ ಎಲ್ಲಾ ಬೆಳವಣಿಗೆ ನಡುವೆಯೂ ಅಮೆರಿಕದ ಆರ್ಥಿಕತೆ ಬೆಳೆಯುತ್ತಿದ್ದು, ಆದ್ರೆ ಏರಿಕೆ ಪ್ರಮಾಣ ಇಳಿಕೆಯಾಗುತ್ತಿರೋದನ್ನು ಇಡೀ ಜಗತ್ತು ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ವರ್ಷ ಜಿಡಿಪಿ ಬೆಳವಣಿಗೆ ಕೇವಲ 1.4%–1.6% ಎಂದು ಅಂದಾಜಿಸಲಾಗಿದ್ದು, ನಿರುದ್ಯೋಗ ಮತ್ತು ಹಣದುಬ್ಬರ ಸಹ ಏರಿಕೆಯಾಗುತ್ತಿದೆ. ಒಂದು ವೇಳೆ ಅಮೆರಿಕ ಇದೇ ಮಾರ್ಗದಲ್ಲಿ ನಡೆದುಕೊಂಡು ಬಂದ್ರೆ ಆರ್ಥಿಕ ಬಿಕ್ಕಟ್ಟು ಎದುರಾಗಬಹುದು