ಟ್ರಂಪ್ ಜಾರಿಗೊಳಿಸಿದ್ದ ಎಚ್1ಬಿ ವೀಸಾ ನಿರ್ಬಂಧ ರದ್ದು!
ಟ್ರಂಪ್ ಜಾರಿಗೊಳಿಸಿದ್ದ ಎಚ್1ಬಿ ವೀಸಾ ನಿರ್ಬಂಧ ರದ್ದು| ಸಾವಿರಾರು ಭಾರತೀಯರ ಅಮೆರಿಕನ್ ಕನಸಿಗೆ ಮತ್ತೆ ರೆಕ್ಕೆಪುಕ್ಕ
ವಾಷಿಂಗ್ಟನ್(ಡಿ.03): ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಲ ತಿಂಗಳ ಹಿಂದೆ ಜಾರಿಗೊಳಿಸಿದ್ದ ಎಚ್1ಬಿ ವೀಸಾ ನಿರ್ಬಂಧಗಳನ್ನು ಜಿಲ್ಲಾ ನ್ಯಾಯಾಲಯ ರದ್ದುಪಡಿಸಿದ್ದು, ಸಾವಿರಾರು ಭಾರತೀಯರ ಅಮೆರಿಕನ್ ಕನಸಿಗೆ ಮತ್ತೆ ರೆಕ್ಕೆಪುಕ್ಕ ಬಂದಿದೆ. ವಿದೇಶೀಯರು ಅಮೆರಿಕದಲ್ಲಿ ಕೆಲಸ ಮಾಡುವ ವೀಸಾ ಪಡೆಯುವುದಕ್ಕೆ ಕಠಿಣ ಷರತ್ತುಗಳನ್ನು ಹೇರಿ ಟ್ರಂಪ್ ಜಾರಿಗೊಳಿಸಿದ್ದ ಹೊಸ ನೀತಿ ಡಿ.7ರಿಂದ ಜಾರಿಗೆ ಬರಬೇಕಿತ್ತು. ಆದರೆ, ಅದಕ್ಕೂ ಮನ್ನವೇ ಕ್ಯಾಲಿಫೋರ್ನಿಯಾದ ನಾರ್ದರ್ನ್ ಡಿಸ್ಟ್ರಿಕ್ಟ್ ನ್ಯಾಯಾಲಯ ಈ ಆದೇಶವನ್ನು ಮಂಗಳವಾರ ರದ್ದುಪಡಿಸಿದೆ.
ಭಾರತೀಯ ಟೆಕ್ಕಿಗಳಿಗೆ ಟ್ರಂಪ್ ಎಚ್-1ಬಿ ಶಾಕ್!
ವಿದೇಶೀಯರು ಅಮೆರಿಕದ ಕಂಪನಿಗಳಲ್ಲಿ ಉನ್ನತ ಕೌಶಲ್ಯದ ಹುದ್ದೆಗಳಲ್ಲಿ ಕೆಲಸ ಮಾಡಲು ಪ್ರತಿ ವರ್ಷ ಸುಮಾರು 85,000 ಎಚ್1ಬಿ ವೀಸಾ ನೀಡಲಾಗುತ್ತದೆ. ಇದರ ಅವಧಿ 3 ವರ್ಷವಾಗಿದ್ದು, ಮತ್ತೆ ನವೀಕರಿಸಬಹುದಾಗಿದೆ. ಈಗಾಗಲೇ 6 ಲಕ್ಷಕ್ಕೂ ಹೆಚ್ಚು ಎಚ್1ಬಿ ವೀಸಾದಾರರು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದು, ಅವರಲ್ಲಿ ಭಾರತ ಹಾಗೂ ಚೀನಾದ ಸಾಫ್ಟ್‌ವೇರ್ ಎಂಜಿನಿಯರ್‌ಗಳೇ ಹೆಚ್ಚಿದ್ದಾರೆ. ಅಮೆರಿಕದ ಕೆಲಸ ಅಮೆರಿಕನ್ನರಿಗೇ ಸಿಗಬೇಕು ಎಂಬ ತಮ್ಮ ನೀತಿಯ ಅನುಸಾರ ಟ್ರಂಪ್ ಎಚ್1ಬಿ ವೀಸಾ ನೀತಿ ಬಿಗಿಗೊಳಿಸಿ, ಅಮೆರಿಕದ ಕಂಪನಿಗಳು ವಿದೇಶಿ ನೌಕರರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳುವುದನ್ನು ಕಷ್ಟಗೊಳಿಸಿದ್ದರು. ಅದನ್ನೀಗ ನ್ಯಾಯಾಲಯ ರದ್ದುಪಡಿಸಿದೆ.
ಈ ನೀತಿಯ ಜೊತೆಗೆ, ಅಮೆರಿಕದ ತಾಂತ್ರಿಕ ಕಂಪನಿಗಳು ಎಚ್1ಬಿ ವೀಸಾದಾರ ವಿದೇಶಿ ನೌಕರರನ್ನು ನೇಮಕ ಮಾಡಿಕೊಳ್ಳಲು ಪರಿಗಣಿಸಬೇಕಾದ ಅರ್ಹತೆಗಳನ್ನು ಕಠಿಣಗೊಳಿಸಿದ್ದ ಇನ್ನೊಂದು ಆದೇಶವನ್ನೂ ನ್ಯಾಯಾಲಯ ರದ್ದುಪಡಿಸಿದೆ.
ಗಣಪತಿ ವಿಸರ್ಜನೆ: ಹಿಂದೂ ಹಬ್ಬ ಆಚರಿಸಿದ್ದಕ್ಕೆ ಶಾರೂಖ್ ಟ್ರೋಲ್
ಟ್ರಂಪ್ ಜಾರಿಗೊಳಿಸಿದ್ದ ಹೊಸ ನೀತಿಗೆ ಅಮೆರಿಕದ ಗೂಗಲ್, ಫೇಸ್‌ಬುಕ್, ಮೈಕ್ರೋಸಾಫ್ಟ್‌ನಂತಹ ದೈತ್ಯ ಕಂಪನಿಗಳೇ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಜೊತೆಗೆ ಕೆಲ ಕಂಪನಿಗಳು ಹೊಸ ನೀತಿಯನ್ನು ಪ್ರಶ್ನಿಸಿ ಕೋರ್ಟ್‌ಗೆ ಹೋಗಿದ್ದವು. ಈಗ ಹೊಸ ನೀತಿ ರದ್ದುಪಡಿಸಿ ಆದೇಶ ನೀಡಿರುವುದು ಜಿಲ್ಲಾ ನ್ಯಾಯಾಲಯವಾಗಿದ್ದರೂ ಅದು ಇಡೀ ಅಮೆರಿಕಕ್ಕೆ ಅನ್ವಯಿಸಲಿದೆ.