ವಾಷಿಂಗ್ಟನ್‌(ಅ.08): ಅಧ್ಯಕ್ಷೀಯ ಚುನಾವಣೆಗೆ ಕೇವಲ 4 ವಾರ ಬಾಕಿ ಉಳಿದಿರುವಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್‌-1 ಬಿ ವೀಸಾಕ್ಕೆ ಇನ್ನಷ್ಟುನಿರ್ಬಂಧಗಳನ್ನು ವಿಧಿಸಿದ್ದಾರೆ. ಇದರಿಂದ ಅಮೆರಿಕದಲ್ಲಿನ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಲಭ್ಯವಾಗಲಿದ್ದು, ಅಮೆರಿಕದಲ್ಲಿ ಉದ್ಯೋಗ ನಿರ್ವಹಿಸುವ ಕನಸು ಕಾಣುತ್ತಿರುವ ಭಾರತದ ಸಾವಿರಾರು ಐಟಿ ಉದ್ಯೋಗಿಗಳು ಎಚ್‌-1 ಬಿ ವೀಸಾ ಪಡೆಯುವ ಅವಕಾಶದಿಂದ ವಂಚಿತರಾಗಲಿದ್ದಾರೆ. ಈ ಸಂಬಂಧ ಅಮೆರಿಕದ ಗೃಹ ಇಲಾಖೆ ಎನ್‌-1 ಬಿ ವೀಸಾ ಯೋಜನೆಗೆ ಬದಲಾವಣೆ ತಂದು ಮಧ್ಯಂತರ ಆದೇಶ ಹೊರಡಿಸಿದ್ದು, ಮುಂದಿನ 60 ದಿನಗಳಲ್ಲಿ ಜಾರಿಗೆ ಬರುವ ನಿರೀಕ್ಷೆ ಇದೆ.

ಏನು ಬದಲಾವಣೆ?:

ಹೊಸ ನೀತಿಯಲ್ಲಿ ಕೌಶಲ್ಯಯುತ ಹುದ್ದೆಗಳ ಬಗ್ಗೆ ಇನ್ನಷ್ಟುನಿರ್ದಿಷ್ಟವಾಗಿ ವ್ಯಾಖ್ಯಾನ ಮಾಡಲಾಗಿದೆ. ಇದರಿಂದಾಗಿ ಎಚ್‌-1ಬಿ ವೀಸಾ ನೀತಿಯಲ್ಲಿನ ಕೆಲ ಲೋಪದೋಷಗಳನ್ನೇ ಬಳಸಿಕೊಂಡು, ದುಬಾರಿ ವೇತನದ ಅಮೆರಿಕನ್ನರನ್ನು ಉದ್ಯೋಗದಿಂದ ತೆಗೆದು ವಿದೇಶಿಯರನ್ನು ನೇಮಕ ಮಾಡುವ ಕಂಪನಿಗಳ ಕ್ರಮಕ್ಕೆ ಬ್ರೇಕ್‌ ಬೀಳಲಿದೆ. ಕೇವಲ ಅರ್ಹ ಫಲಾನುಭವಿಗಳು ಮತ್ತು ಅರ್ಜಿದಾರರಿಗೆ ಮಾತ್ರವೇ ವೀಸಾ ನೀಡಲಾಗುತ್ತದೆ.

ಅಲ್ಲದೇ ವೀಸಾದ ಮಾನ್ಯತೆಯನ್ನು ಮೂರು ವರ್ಷದಿಂದ 1 ವರ್ಷಕ್ಕೆ ಇಳಿಸಲಾಗಿದೆ. ಒಂದು ವೇಳೆ ವೀಸಾ ದೊರಕಿದ್ದರ ಬಗ್ಗೆ ಅನುಮಾನಗಳಿದ್ದರೆ ತನಿಖೆ ನಡೆಸಲು ಮತ್ತು ಅದನ್ನು ರದ್ದುಪಡಿಸುವ ಅಧಿಕಾರ ಅಮೆರಿಕ ಗೃಹ ಇಲಾಖೆಗೆ ಲಭ್ಯವಾಗಲಿದೆ. ಹೀಗಾಗಿ ಎಚ್‌-1 ಬಿ ವೀಸಾ ಫಲಾನುಭವಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಆಗಲಿದೆ.