2026ರ ಭಯಾಕನ ಭವಿಷ್ಯ, ಭಯೋತ್ಪಾದಕ ಕಾರಣದಿಂದ ಭಾರತ ಪಾಕಿಸ್ತಾನ ಸಂಘರ್ಷ, ಕಾಶ್ಮೀರದಲ್ಲಿನ ಉಗ್ರ ಕೃತ್ಯಗಳಿಗೆ ಭಾರತ ತಿರುಗೇಟು ನೀಡಲಿದೆ. ಇದು ಸಂಘರ್ಷವಾಗಿ ಮಾರ್ಪಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ನವದೆಹಲಿ (ಡಿ.30) ಹೊಸ ವರ್ಷ ಆತ್ಮೀಯವಾಗಿ ಸ್ವಾಗತಿಸಲು ವೇದಿಕೆಗಳು ಸಜ್ಜಾಗುತ್ತಿದೆ. ಅದ್ಧೂರಿ ಕಾರ್ಯಕ್ರಮಗಳು ಸೆಟ್ಟೇರಿದೆ. ಆದರೆ 2026ರ ವರ್ಷದ ಭಯಾನಕ ಭವಿಷ್ಯವೊಂದು ಹೊರಬಿದ್ದಿದೆ. ಹೌದು, 2026ರಲ್ಲಿ ಭಾರತ ಹಾಗೂ ಪಾಕಿಸ್ತಾನ ಸಂಘರ್ಷ ನಡೆಯಲಿದೆ ಎಂದಿದ್ದಾರೆ. ಕಾಶ್ಮೀರದ ಉಗ್ರ ಕೃತ್ಯಗಳಿಗೆ ಭಾರತ ನೀಡುವ ತಿರುಗೇಟು ನೆರೆಯ ಪಾಕಿಸ್ತಾನದ ಮೇಲೆ ಘನಘೋರ ಪರಿಮಾಮ ಸೃಷ್ಟಿಸಲಿದೆ ಎಂಬ ಭವಿಷ್ಯ ಇದೀಗ ಪಾಕಿಸ್ತಾನದ ಆತಂಕ ಹೆಚ್ಚಿಸಿದೆ. ಇದಕ್ಕೆ ಸಂಬಂಧ ಪಟ್ಟಂತೆ ನಡೆಯುತ್ತಿರುವ ಶಸ್ತ್ರಾಸ್ತ್ರಗಳ ಡೀಲ್ ಕೂಡ ಪಾಕಿಸ್ತಾನದ ನಿದ್ದೆಗೆಡಿಸಿದೆ. ಅಮೆರಿಕದ ಥಿಂಕ್ ಟ್ಯಾಂಕ್ ಈ ಭವಿಷ್ಯ ನುಡಿದಿದೆ. ಆದರೆ ಇದು ಕೇವಲ ಭವಿಷ್ಯವಲ್ಲ, ಭಾರತದ ಅಂತಾರಾಷ್ಟ್ರೀಯ ಡಿಪ್ಲೊಮಸಿ ಕುರಿತು ಅಧ್ಯಯನ ನಡೆಸಿ ಹೇಳಿರುವ ವರದಿ.
ಅಮೆರಿಕದ ಕೌನ್ಸಿಲ್ ಆಫ್ ಫಾರಿನ್ ರಿಲೇಶನ್ (ಸಿಎಫ್ಆರ್) ವಿದೇಶಾಂಗ ತಜ್ಞರು ವಿದೇಶಾಂಗ ನೀತಿ, ಭಾರತದಲ್ಲಿನ ಬೆಳವಣಿಗೆ, ದ್ವೀಪಕ್ಷೀಯ ಸಂಬಂಧಗಳ ಕುರಿತು ಸಮೀಕ್ಷೆ ಹಾಗೂ ಅಧ್ಯಯನದ ಮೂಲಕ ಈ ಭವಿಷ್ಯ ನುಡಿದಿದ್ದಾರೆ.ಸಿಎಫ್ಆರ್ ವರದಿ ಪ್ರಕಾರ 2026ರಲ್ಲಿ ಭಾರತದ ಪ್ರತಿಕ್ರಿಯೆ ತೀಕ್ಷ್ಣವಾಗಿರಲಿದೆ. 2025ರಲ್ಲಿ ಪೆಹಲ್ಗಾಂ ದಾಳಿಗೆ ಪ್ರತಿಯಾಗಿ ಭಾರತ ಆಪರೇಶನ್ ಸಿಂದೂರ್ ದಾಳಿ ನಡೆಸಿತ್ತು. ಬಳಿಕ ಪಾಕಿಸ್ತಾನದ ಮನವಿಯಂತೆ ಕದನ ವಿರಾಮ ಹಾಕಿತ್ತು. ಆದರೆ ಈ ಬಾರಿ ಭಾರತ ಅತ್ಯಲ್ಪ ಸಮಯದಲ್ಲೇ ಘನಘೋರ ಪರಿಣಾಮ ಸೃಷ್ಟಿಸಲಿದೆ ಎಂದು ಸಿಎಫ್ಆರ್ ಭವಿಷ್ಯ ನುಡಿದಿದೆ.
ವರದಿಯಲ್ಲಿ ಉಲ್ಲೇಖಿಸಿದ ಅಂಶಗಳು
ಇತ್ತೀಚೆಗೆ ಭಾರತ ಸರ್ಕಾರ 79,000 ಕೋಟಿ ರೂಪಾಯಿ ಶಸ್ತ್ರಾಸ್ತ್ರ ಖರೀದಿ ಒಪ್ಪಂದ ಮಾಡಿಕೊಂಡಿದೆ. ಡ್ರೋನ್, ಏರ್ ಮಿಸೈಲ್, ಗೈಡೆಡ್ ಬಾಂಬ್ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರ ಖರೀದಿಗೆ ಒಪ್ಪಂದ ಪೂರ್ಣಗೊಳಿಸಿದೆ. ಏರ್ ಡಿಫೆನ್ಸ್ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ಭಾರತ ಸಿದ್ಧಪಡಿಸಿದೆ. ಗಡಿಯಲ್ಲಿ ಬೇಲಿ ಸೇರಿದಂತೆ ಒಳ ನುಸುಳುವಿಕೆ ಬ್ರೇಕ್ ಹಾಕಲು ಕ್ರಮಗಳನ್ನು ಕೈಗೊಂಡಿದೆ. ಇದೇ ವೇಳೆ ಭಾರತ ರಕ್ಷಣಾ ಸಚಿವ, ಸೇನಾ ಮುಖ್ಯಸ್ಥರು, ಪಾಕಿಸ್ತಾನದ ಸಿಂಧೂ ಭಾರತದ ಭಾಗ, ಒಂದು ದಿನ ಸಿಂಧೂ ಭಾರತದ ಭಾಗವಾಗಲಿದೆ ಎಂದಿದ್ದಾರೆ. ಇತ್ತ ಸೇನಾ ಮುಖ್ಯಸ್ಥರು ಪಾಕಿಸ್ತಾನ ನೆಟ್ಟಗೆ ಇರದಿದ್ದರೂ ಮತ್ತೆ ಯಾವತ್ತು ನೆಟ್ಟಗೆ ನಿಲ್ಲಲು ಸಾಧ್ಯವಾಗದಂತೆ ಮಾಡುತ್ತೇವೆ ಎಂಬ ಹಲವು ಎಚ್ಚರಿಕೆಗಳನ್ನು ನೀಡಿದೆ. ಜೊತೆಗೆ ಭಾರತದ ದ್ವಿಪಕ್ಷೀಯ ಸಂಬಂಧಗಳು, ಭಾರತದ ವಿದೇಶಾಂಗ ನೀತಿ, ಭಯೋತ್ಪಾದನೆ ವಿರುದ್ಧ ಭಾರತದ ಶೂನ್ಯ ಸಹಿಷ್ಣುತೆ ಕ್ರಮಗಳು ಒಂದು ಸಣ್ಣ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ತಿರುಗೇಟು ನೀಡುವ ಪರಿಸ್ಥಿತಿಗೆ ಕೊಂಡೊಯ್ಯಲಿದೆ. ಹೀಗಾಗಿ 2026ರಲ್ಲಿ ಭಾರತ ಪಾಕಿಸ್ತಾನ ಯುದ್ಧ ನಡೆಯುವ ಸಾಧ್ಯತೆ ಹೆಚ್ಚಿದೆ ಎಂದು ಸಿಎಫ್ಆರ್ ಭವಿಷ್ಯ ನುಡಿದಿದೆ.
ಪಾಕಿಸ್ತಾನಕ್ಕೆ ಶಾಕ್ ನೀಡಲಿದೆ ಅಫ್ಘಾನಿಸ್ತಾನ
ಇದೇ ಸಿಎಫ್ಆರ್ ವರದಿಯಲ್ಲಿ ಪಾಕಿಸ್ತಾನಕ್ಕೆ ಅಫ್ಘಾನಿಸ್ತಾನ ಕೂಡ ಶಾಕ್ ನೀಡಲಿದೆ ಎಂದಿದೆ. ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ ನಡುವಿನ ಸಂಘರ್ಷ ತೀವ್ರಗೊಳ್ಳಲಿದೆ . ಭಾರತದ ಜೊತೆ ಆತ್ಮೀಯವಾಗುತ್ತಿರುವ ಅಫ್ಘಾನಿಸ್ತಾನ ಮತ್ತೊಂದೆಡೆಯಿಂದ ಪಾಕಿಸ್ತಾನಕ್ಕೆ ಸಂಘರ್ಷ ಶುರುವಮಾಡಲಿದೆ. ಪಾಕಿಸ್ತಾನ ದಿಟ್ಟ ಪ್ರತಿಕ್ರಿಯೆ ನೀಡಿದರೂ ಆರ್ಥಿಕವಾಗಿ ಪಾಕಿಸ್ತಾನಕ್ಕೆ ತೀವ್ರ ಸಂಕಷ್ಟಕ್ಕೆ ತಳ್ಳಲಿದೆ ಎಂದು ಸಿಎಫ್ಆರ್ ಹೇಳಿದೆ.


