ಅಮೆರಿಕದ ಡ್ರಗ್ ರಾಕೆಟ್ ಎಚ್ಚರಿಕೆಯ ನಂತರ, ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್‌ನಲ್ಲಿ ಶನಿವಾರ ಬೆಳಿಗ್ಗೆ ಕನಿಷ್ಠ ಏಳು ಸ್ಫೋಟಗಳು ಸಂಭವಿಸಿವೆ. ಈ ಘಟನೆಯಿಂದ ಜನರು ಭಯಭೀತರಾಗಿದ್ದು, ಯುದ್ಧವಿಮಾನಗಳ ಹಾರಾಟವೂ ಕೇಳಿಬಂದಿದೆ, ಆದರೆ ಸರ್ಕಾರ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ನವದೆಹಲಿ (ಜ.3): ಡ್ರಗ್ ರಾಕೆಟ್ ಬಗ್ಗೆ ಅಮೆರಿಕದ ವಾರ್ನಿಂಗ್ ಬೆನ್ನಲ್ಲೇ ಶನಿವಾರ ಬೆಳಿಗ್ಗೆ ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್‌ನಲ್ಲಿ ಕನಿಷ್ಠ ಏಳು ಸ್ಫೋಟಗಳು ಸಂಭವಿಸಿವೆ. ಮೊದಲ ಸ್ಫೋಟ ಸ್ಥಳೀಯ ಸಮಯ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಸಂಭವಿಸಿದೆ. ಇದಲ್ಲದೆ, ರಾಜಧಾನಿಯ ವಾಯುಪ್ರದೇಶದ ಮೇಲೆ ಕಡಿಮೆ ಎತ್ತರದಲ್ಲಿ ಯುದ್ಧವಿಮಾನಗಳು ಹಾರುವ ಶಬ್ದವೂ ಕೇಳಿಬಂದಿದೆ. ಸ್ಪೋಟಗಳ ಶಬ್ದ ಕೇಳಿ ನಗರದ ವಿವಿಧ ಪ್ರದೇಶಗಳಲ್ಲಿನ ಜನರು ಭಯಭೀತರಾಗಿ ಬೀದಿಗೆ ಇಳಿದಿದ್ದಾರೆ. ಕ್ಯಾರಕಾಸ್‌ನ ಕೆಲವು ಭಾಗಗಳಲ್ಲಿ ಜನರು ಹೊರಗೆ ನಿಂತಿರುವುದು ಕಂಡು ಬಂದಿದೆ. ಆದರೆ, ರಾಜಧಾನಿ ಮೇಲೆ ಆದ ದಾಳಿಯ ಬಗ್ಗೆ ವೆನುಜುವೇಲ ಸರ್ಕಾರ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ನಗರದ ವಿವಿಧ ಭಾಗಗಳಲ್ಲಿ ದೊಡ್ಡ ಶಬ್ದಗಳು ಕೇಳಿಬಂದವು ಎಂದು ರಾಯಿಟರ್ಸ್ ವರದಿ ಮಾಡಿದೆ. ನಗರದ ದಕ್ಷಿಣ ಭಾಗದಲ್ಲಿ, ಪ್ರಮುಖ ಮಿಲಿಟರಿ ನೆಲೆಯ ಬಳಿ ವಿದ್ಯುತ್ ಕಡಿತಗೊಳಿಸಲಾಗಿದೆ. ಸಿಎನ್‌ಎನ್ ವರದಿಗಾರ ಒಸಾಮರಿ "ಒಂದು ಸ್ಫೋಟವು ತುಂಬಾ ಶಕ್ತಿಶಾಲಿಯಾಗಿದ್ದು ಅದು ಕಿಟಕಿಗಳನ್ನು ಅಲುಗಾಡಿಸಿತು" ಎಂದು ಹೇಳಿದ್ದಾರೆ.
ವೆನುಜುವೇಲ ಮೇಲೆ ಅಮೆರಿಕ ಯುದ್ದ ಘೋಷಣೆ ಸಾಧ್ಯತೆ
ಈ ದಾಳಿಗೂ ಮುನ್ನ ಅಮೆರಿಕದ ಪ್ರಸಾರಕ ಟಕರ್ ಕಾರ್ಲ್ಸನ್ ಅಧ್ಯಕ್ಷ ಟ್ರಂಪ್ ವೆನುಜುವೇಲ ವಿರುದ್ಧ ಯುದ್ಧ ಘೋಷಿಸಬಹುದು ಎಂದು ಹೇಳಿದ್ದರು. ಅವರು ತಮ್ಮ ಆನ್‌ಲೈನ್ ಕಾರ್ಯಕ್ರಮ "ಜಡ್ಜಿಂಗ್ ಫ್ರೀಡಂ" ನಲ್ಲಿ ಈ ಹೇಳಿಕೆ ನೀಡಿದ್ದಾರೆ. ಅವರ ಪ್ರಕಾರ, ಅಮೆರಿಕ ಮತ್ತು ವೆನುಜುವೇಲ ನಡುವೆ ಮಿಲಿಟರಿ ಸಂಘರ್ಷದ ಪರಿಸ್ಥಿತಿ ಉದ್ಭವಿಸಬಹುದು ಮತ್ತು ಅಧ್ಯಕ್ಷರು ತಮ್ಮ ಭಾಷಣದಲ್ಲಿ ಅದನ್ನು ಬಹಿರಂಗಪಡಿಸಬಹುದು ಎಂದಿದ್ದರು.
ಅಮೆರಿಕ ಮತ್ತು ವೆನುಜುವೇಲ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಸಮಯದಲ್ಲಿ ಈ ಹೇಳಿಕೆ ಬಂದಿದೆ. ಅಕ್ರಮವಾಗಿ ಕಸಿದುಕೊಳ್ಳಲಾದ ತನ್ನ ತೈಲ ಮತ್ತು ಇಂಧನ ಹಕ್ಕುಗಳನ್ನು ವೆನುಜುವೇಲ ಹಿಂದಿರುಗಿಸಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 1976 ರಲ್ಲಿ ವೆನುಜುವೇಲ ಅಮೆರಿಕದ ತೈಲ ಕಂಪನಿಗಳನ್ನು ಬಲವಂತವಾಗಿ ಹೊರಹಾಕಿತು ಮತ್ತು ಅವರ ಆಸ್ತಿಗಳನ್ನು ಸಹ ವಶಪಡಿಸಿಕೊಂಡಿದೆ ಎಂದು ಟ್ರಂಪ್ ಹೇಳಿದ್ದರು.
ವೆನುಜುವೇಲ ತೈಲ ಟ್ಯಾಂಕರ್‌ಗಳನ್ನ ಬ್ಲಾಕ್ ಮಾಡಿದ ಅಮೆರಿಕ
ನಿಷೇಧಿತ ತೈಲ ಟ್ಯಾಂಕರ್‌ಗಳನ್ನು ವೆನುಜುವೇಲಗೆ ಮತ್ತು ಅಲ್ಲಿಂದ ಸಾಗಿಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಆದೇಶಿಸುವ ಮೂಲಕ ಟ್ರಂಪ್ ವೆನುಜುವೇಲ ಮೇಲೆ ಒತ್ತಡವನ್ನು ಹೆಚ್ಚಿಸಿದರು. ದಕ್ಷಿಣ ಅಮೆರಿಕಾದ ಇತಿಹಾಸದಲ್ಲಿ ವೆನುಜುವೇಲ ಅತಿದೊಡ್ಡ ನೌಕಾ ಮುತ್ತಿಗೆಯಿಂದ ಸುತ್ತುವರೆದಿದೆ ಎಂದು ಟ್ರಂಪ್ ತಮ್ಮ ಟ್ರುಥೌಟ್ ಅಕೌಂಟ್‌ನಲ್ಲಿ ಬರೆದುಕೊಂಡಿದ್ದರು. ವೆನೆಜುವೆಲಾ ಅಮೆರಿಕದಿಂದ ಕದ್ದ ತೈಲ, ಭೂಮಿ ಮತ್ತು ಇತರ ಸ್ವತ್ತುಗಳನ್ನು ಹಿಂದಿರುಗಿಸುವವರೆಗೆ ಈ ಮುತ್ತಿಗೆ ಮುಂದುವರಿಯುತ್ತದೆ ಎಂದು ತಿಳಿಸಿದ್ದರು.
ಐವರು ಅಮೆರಿಕ ಪ್ರಜೆಗಳನ್ನು ಬಂಧಿಸಿದ ವೆನುಜುವೇಲ
ಟ್ರಂಪ್ ಆಡಳಿತದ ಮಿಲಿಟರಿ ಅಭಿಯಾನಕ್ಕೆ ಪ್ರತಿಕ್ರಿಯೆಯಾಗಿ ವೆನುಜುವೇಲ ಕೂಡ ಅಮೆರಿಕನ್ ನಾಗರಿಕರ ಸಾಮೂಹಿಕ ಬಂಧನಗಳನ್ನು ನಡೆಸುತ್ತಿದೆ. ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾದ ಕೆರಿಬಿಯನ್ ಸಮುದ್ರ ಮತ್ತು ಪೂರ್ವ ಪೆಸಿಫಿಕ್ ಮಹಾಸಾಗರದಲ್ಲಿ ಹೆಚ್ಚಿದ ಅಮೆರಿಕದ ಮಿಲಿಟರಿ ಚಟುವಟಿಕೆಯ ಮಧ್ಯೆ ಈ ಬಂಧನಗಳು ನಡೆದಿವೆ.
ಇಲ್ಲಿಯವರೆಗೆ ಐದು ಅಮೆರಿಕದ ನಾಗರಿಕರನ್ನು ಬಂಧಿಸಲಾಗಿದೆ ಎಂದು ವರದಿಗಳು ಸೂಚಿಸುತ್ತವೆ. ಪ್ರತಿಯೊಂದು ಪ್ರಕರಣದ ಸಂದರ್ಭಗಳು ವಿಭಿನ್ನವಾಗಿವೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ನ್ಯೂಯಾರ್ಕ್ ಟೈಮ್ಸ್‌ಗೆ ತಿಳಿಸಿದ್ದಾರೆ. ಕೆಲವು ಬಂಧನಗಳು ಕಾನೂನುಬದ್ಧ ಕ್ರಿಮಿನಲ್ ಆರೋಪಗಳಿಗೆ ಕಾರಣವಾಗಬಹುದು, ಆದರೆ ಅಮೆರಿಕದ ಆಡಳಿತವು ತಪ್ಪಾಗಿ ಬಂಧಿಸಲ್ಪಟ್ಟ ಇಬ್ಬರು ಅಮೆರಿಕನ್ನರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸುತ್ತಿದೆ.
