ವುಹಾನ್‌(ಫೆ.10): ವಿಶ್ವದಾದ್ಯಂತ 10 ಕೋಟಿ ಜನರನ್ನು ಬಾಧಿಸಿ, 23 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಕೊರೋನಾ ವೈರಸ್‌, ಚೀನಾದ ವುಹಾನ್‌ನಲ್ಲಿರುವ ಕುಖ್ಯಾತ ‘ದ ವುಹಾನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿ’ಯಿಂದ ಸೋರಿಕೆಯಾಗಿರುವ ಸಾಧ್ಯತೆ ಇಲ್ಲ. ಅದು ಪ್ರಾಣಿಗಳಿಂದ ಮಾನವರಿಗೆ ಹರಡಿರುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ತಜ್ಞ ವೈದ್ಯರೊಬ್ಬರು ಹೇಳಿದ್ದಾರೆ. ಈ ಮೂಲಕ, ‘ಕೊರೋನಾ ವೈರಸ್‌’ ಚೀನಾ ಉದ್ದೇಶಪೂರ್ವಕವಾಗಿ ಹರಿಯಬಿಟ್ಟಸೋಂಕು ಎಂಬ ಆರೋಪವನ್ನು ಅಲ್ಲಗಳೆದಿದ್ದಾರೆ.

ಸೋಂಕಿನ ಮೂಲ ಮತ್ತು 2019ರ ಡಿಸೆಂಬರ್‌ಗೂ ಮುನ್ನ ಚೀನಾದಲ್ಲಿ ಕೊರೋನಾ ಸಾರ್ಸ್‌- ಕೋವ್‌-2 ವೈರಸ್‌ ಇತ್ತೇ ಎಂಬುದನ್ನು ಹುಡುಕುವ ನಿಟ್ಟಿನಲ್ಲಿ 10 ದೇಶಗಳ ಪ್ರತಿನಿಧಿಗಳನ್ನು ಡಬ್ಲ್ಯುಎಚ್‌ಒ ನಿಯೋಗವೊಂದು ಹಾಲಿ ಚೀನಾಕ್ಕೆ ಭೇಟಿ ಕೊಟ್ಟಿದೆ. ಈ ವೇಳೆ ಅದು ವುಹಾನ್‌ ಹೊರವಲಯದಲ್ಲಿರುವ ಕಾಡುಪ್ರಾಣಿಗಳ ಮಾಂಸದ ಮಾರುಕಟ್ಟೆಮತ್ತು ನಾನಾ ರೀತಿಯ ವೈರಾಣುಗಳ ಸಂಗ್ರಹ ಹೊಂದಿರುವ ‘ದ ವುಹಾನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿ’ಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದೆ. ಈ ಪರಿಶೀಲನೆ ಬಳಿಕ ಮಾತನಾಡಿರುವ ಡಬ್ಲ್ಯುಎಚ್‌ಒದ ಆಹಾರ ಸುರಕ್ಷತೆ ಮತ್ತು ಪ್ರಾಣಿಗಳ ರೋಗ ತಜ್ಞ ಪೀಟರ್‌ ಬೆನ್‌ ಎಂಬರೇಕ್‌ ಈ ಎಲ್ಲಾ ಮಾಹಿತಿ ನೀಡಿದ್ದಾರೆ.

‘ನಮ್ಮ ಪ್ರಾಥಮಿಕ ತನಿಖೆ ಅನ್ವಯ, 2019ರ ಡಿಸೆಂಬರ್‌ಗೂ ಮೊದಲೇ ಚೀನಾದಲ್ಲಿ ಸಾರ್ಸ್‌ ಕೋವ್‌ 2 ವೈರಸ್‌ ಇತ್ತು ಎಂಬುದನ್ನು ಸಾಬೀತುಪಡಿಸುವ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಜೊತೆಗೆ ವೈರಸ್‌ ಬಾವಲಿಯಲ್ಲಿ ಉಗಮವಾಗಿ ಬಳಿಕ ಮಾನವರಿಗೆ ಹರಡಿರುವ ಸಾಧ್ಯತೆ ಇದೆ. ಆದರೆ ವುಹಾನ್‌ನಲ್ಲಿ ಬಾವಲಿಗಳು ಇಲ್ಲದ ಕಾರಣ, ಅದು ಬಾವಲಿಗಳಿಂದ ಯಾವುದಾದರೂ ಸಸ್ತನಿಗೆ ಹರಡಿ ಅಲ್ಲಿಂದ ಮಾನವರಿಗೆ ವರ್ಗಾವಣೆಯಾಗಿರುವ ಸಾಧ್ಯತೆ ಹೆಚ್ಚು. ಹೀಗೆ ವೈರಸ್‌ ಇಂಟರ್‌ ಮೀಡಿಯೇಟರಿ ಸ್ಪೀಸಿಸ್‌ಗಳ ಮೂಲಕವೇ ಮಾನವರಿಗೆ ವೈರಸ್‌ ಹಬ್ಬಿರುವ ಸಾಧ್ಯತೆ ದಟ್ಟವಾಗಿದೆ. ಪ್ರಾಣಿಗಳ ಮೂಲಕ ವೈರಸ್‌ ಸಾಗಿಬಂದ ಪಥದ ಬಗ್ಗೆ ಇನ್ನಷ್ಟುವಿಸ್ತೃತ ಅಧ್ಯಯನ, ಸಂಶೋಧನೆ ನಡೆದರೆ ಈ ಬಗ್ಗೆ ಬೆಳಕು ಚೆಲ್ಲಬಹುದು’ ಎಂದಿದ್ದಾರೆ.

‘ಆದರೆ ನಮ್ಮ ತನಿಖೆಗಳ ಸಾರಾಂಶದ ಅನ್ವಯ, ಪ್ರಯೋಗಾಲಯದಿಂದ ಉದ್ದೇಶಪೂರ್ವಕವಾಗಿ ಸೋರಿಕೆ ಮಾಡಲಾಗಿದೆ ಎಂಬ ಊಹಾಪೋಹಗಳನ್ನು ಸಾಬೀತುಪಡಿಸುವ ಯಾವುದೇ ಅಂಶಗಳೂ ಲಭ್ಯವಾಗಿಲ್ಲ. ಇನ್ನು ಶೀತಲೀಕೃತ ಉತ್ಪನ್ನಗಳ ಮೂಲಕವೂ ಮಾನವರಿಗೆ ಸೋಂಕು ಹರಡಿರಬಹುದು. ಆದರೆ ಈ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಶೋಧನೆಗೂ ನಮ್ಮ ಶಿಫಾರಸಿಲ್ಲ’ ಎಂದು ಪೀಟರ್‌ ತಿಳಿಸಿದ್ದಾರೆ.

ಕೊರೋನಾ ವೈರಸ್‌ ವಿಷಯದಲ್ಲಿ ಅಮೆರಿಕ ಸೇರಿದಂತೆ ವಿಶ್ವದ ಹಲವಾರು ದೇಶಗಳು ಆರಂಭದಿಂದಲೂ ಚೀನಾ ಕಡೆಗೆ ಬೊಟ್ಟು ಮಾಡಿದ್ದವಾದರೂ, ವಿಶ್ವ ಆರೋಗ್ಯ ಸಂಸ್ಥೆ ಮಾತ್ರ ಮೊದಲಿನಿಂದಲೂ ಕಮ್ಯುನಿಸ್ಟ್‌ ದೇಶಕ್ಕೆ ಕ್ಲೀನ್‌ಚಿಟ್‌ ಕೊಟ್ಟುಕೊಂಡೇ ಬಂದಿತ್ತು. ಇದೀಗ ತನ್ನ ತನಿಖಾ ವರದಿಯಲ್ಲೂ ಅದು ಚೀನಾಕ್ಕೆ ಕ್ಲೀನ್‌ಚಿಟ್‌ ನೀಡಿರುವುದು ಹಲವು ದೇಶಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ.