ಸ್ಪೈ ಬಲೂನ್ ಹೊಡೆದುರುಳಿಸಿದ ಅಮೆರಿಕ: ದೊಡ್ಡಣ್ಣನಿಗೆ ಎಚ್ಚರಿಕೆ ಕೊಟ್ಟ ಚೀನಾ
ಗೂಢಚಾರಿಕೆ ಬಲೂನ್ ಅನ್ನು ಹೊಡೆದುರುಳಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರು ಈ ಕಾರ್ಯಾಚರಣೆಯನ್ನು ಉದ್ದೇಶಪೂರ್ವಕ ಮತ್ತು ಕಾನೂನುಬದ್ಧ ಕ್ರಮ ಎಂದು ಹೇಳಿದೆ.
ಬೀಜಿಂಗ್ / ವಾಷಿಂಗ್ಟನ್ (ಫೆಬ್ರವರಿ 5, 2023): ಅಮೆರಿಕದ ಅಣ್ವಸ್ತ್ರ ಕ್ಷಿಪಣಿಗಳ ನೆಲೆ ಇರುವ ಮೋಂಟಾನಾ ವಾಯುಸೀಮೆಯಲ್ಲಿ ಗುರುವಾರ ನಿಗೂಢ ಬಲೂನ್ ಪತ್ತೆಯಾಗಿದ್ದು, ಈ ಬಗ್ಗೆ ಅಮೆರಿಕ ಆರಂಭದಲ್ಲಿ ಎಚ್ಚರಿಕೆಯ ಹೆಜ್ಜೆ ಇಟ್ಟಿತ್ತು. ಆದರೆ, ಶನಿವಾರ ಚೀನಾದ ಗೂಢಚಾರಿಕೆ ಬಲೂನ್ ಅನ್ನು ಹೊಡೆದುರುಳಿಸಲಾಗಿದೆ. ಈ ಗೂಢಚಾರಿಕೆ ಬಲೂನ್ ಅನ್ನು ಹೊಡೆದುರುಳಿಸಿದ್ದಕ್ಕಾಗಿ ಪೆಂಟಗನ್ ಅನ್ನು ಜೋ ಬೈಡೆನ್ ಆಡಳಿತವು ಶ್ಲಾಘಿಸಿದೆ. ಆದರೆ ಚೀನಾವು ಈ ಕ್ರಮಕ್ಕೆ ತನ್ನ ಬಲವಾದ ಅತೃಪ್ತಿಯನ್ನು ವ್ಯಕ್ತಪಡಿಸಿದೆ ಮತ್ತು ಅಗತ್ಯವಾದ ಪ್ರತಿಕ್ರಿಯೆಗಳನ್ನು ನೀಡಬಹುದು ಎಂದು ಎಚ್ಚರಿಕೆ ನೀಡಿದೆ.
ಗೂಢಚಾರಿಕೆ ಬಲೂನ್ ಅನ್ನು ಹೊಡೆದುರುಳಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರು ಈ ಕಾರ್ಯಾಚರಣೆಯನ್ನು ಉದ್ದೇಶಪೂರ್ವಕ ಮತ್ತು ಕಾನೂನುಬದ್ಧ ಕ್ರಮ ಎಂದು ಹೇಳಿದೆ. ಆದರೆ ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಾನುವಾರ ಬೆಳಿಗ್ಗೆ ಹೇಳಿಕೆಯಲ್ಲಿ ಯುಎಸ್ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ನಾಗರಿಕ ವಿಮಾನವನ್ನು ಉರುಳಿಸಿರುವುದು ಸ್ಪಷ್ಟವಾಗಿ ಅತಿಯಾಗಿ ಪ್ರತಿಕ್ರಿಯಿಸುತ್ತಿದೆ ಮತ್ತು ಅಂತಾರಾಷ್ಟ್ರೀಯ ಅಭ್ಯಾಸವನ್ನು ಗಂಭೀರವಾಗಿ ಉಲ್ಲಂಘಿಸುತ್ತಿದೆ ಎಂದು ಹೇಳಿದೆ.
ಇದನ್ನು ಓದಿ: ಅಮೆರಿಕ ಮಾತ್ರವಲ್ಲ, ಕೆನಡಾ, ಲ್ಯಾಟಿನ್ ಅಮೆರಿಕದಲ್ಲೂ ಚೀನಾದ ಗುಪ್ತಚರ ಬಲೂನ್ ಪ್ರತ್ಯಕ್ಷ!
ಅಮೆರಿಕ ವಾಯುವಲಯದಲ್ಲಿ ಚೀನಾ ಹಾರಿಬಿಟ್ಟಿದ್ದ ಶಂಕಿತ ಗೂಢಚರ್ಯೆ ಬಲೂನ್ ಅನ್ನು ಹೊಡೆದುರುಳಿಸಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಚಿಂತಿಸುತ್ತಿದ್ದಾರೆ. ಹೊಡೆದುರುಳಿಸಿದ ಬಲೂನ್ ಅನ್ನು ಅಟ್ಲಾಂಟಿಕ್ ಸಾಗರದ ಮೇಲೆ ಬೀಳಿಸುವ ಇರಾದೆ ಹೊಂದಿದ್ದಾರೆ ಎಂದು ಮೂಲಗಳು ಶನಿವಾರಕ್ಕೂ ಮುನ್ನ ಹೇಳಿದ್ದವು. ನಂತರ, ಯಶಸ್ವಿಯಾಗಿ ಬಲೂನ್ ಅನ್ನು ಹೊಡೆದುರುಳಿಸಿದ್ದಕ್ಕೆ ಫೈಟರ್ ಪೈಲಟ್‌ಗಳನ್ನು ಜೋ ಬೈಡೆನ್ ಅಭಿನಂದಿಸಿದ್ದಾರೆ. ಅವರು ಅದನ್ನು ಯಶಸ್ವಿಯಾಗಿ ತೆಗೆದುಹಾಕಿದರು. ಮತ್ತು ಅದನ್ನು ಮಾಡಿದ ನಮ್ಮ ಏವಿಯೇಟರ್‌ಗಳನ್ನು ನಾನು ಅಭಿನಂದಿಸಲು ಬಯಸುತ್ತೇನೆ ಎಂದು ಬೈಡೆನ್ ಮೇರಿಲ್ಯಾಂಡ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಆದರೆ, ಅಮೆರಿಕದ ಈ ನಡೆ ಯುಎಸ್-ಚೀನಾ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಆರಂಭದಲ್ಲಿ ಹಿಂಜರಿದರೂ, ಗುರುವಾರ ಬಲೂನ್ ಪತ್ತೆಯಾದ ಬಳಿಕ ಪ್ರತಿಕ್ರಿಯಿಸಿದ್ದ ಚೀನಾ ಇದು ‘ಸಿವಿಲಿಯನ್ ಏರ್‌ಶಿಪ್’ ಆಗಿದ್ದು, ಇದನ್ನು ಹವಾಮಾನದ ಸಂಶೋಧನೆಯ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತಿದೆ. ಇದು ತಪ್ಪಿ ಅಮೆರಿಕದ ವಾಯುಸೀಮೆಯನ್ನು ಪ್ರವೇಶಿಸಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಹೇಳಿತ್ತು. ಆದರೆ ಶನಿವಾರದ ಕಾರ್ಯಾಚರಣೆಯ ನಂತರ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಚೀನಾದ ಮಾನವರಹಿತ ನಾಗರಿಕ ವಾಯುನೌಕೆಯ ಮೇಲೆ ದಾಳಿ ಮಾಡಿದ ಯುನೈಟೆಡ್ ಸ್ಟೇಟ್ಸ್ ಕ್ರಮದ ವಿರುದ್ಧ ಬಲವಾದ ಅತೃಪ್ತಿ ಮತ್ತು ಪ್ರತಿಭಟನೆಗಳನ್ನು ವ್ಯಕ್ತಪಡಿಸಿದೆ.
ಇದನ್ನೂ ಓದಿ: ಮೊದಲ ಬಾರಿಗೆ ಶ್ವೇತ ಭವನಕ್ಕೆ ಪ್ರಧಾನಿ ಮೋದಿ ಪ್ರವಾಸ: ಜೋ ಬೈಡೆನ್ ಆತಿಥ್ಯಕ್ಕೆ ಶೀಘ್ರದಲ್ಲೇ ಡೇಟ್ ಫಿಕ್ಸ್..!
ಲ್ಯಾಟಿನ್ ಅಮೆರಿಕದಲ್ಲೂ ಪ್ರತ್ಯಕ್ಷ..!
ಅಮೆರಿಕದ ಅಣ್ವಸ್ತ್ರ ಕ್ಷಿಪಣಿಗಳ ನೆಲೆ ಇರುವ ಮೋಂಟನಾ ವಾಯುಸೀಮೆಯಲ್ಲಿ ಗುರುವಾರ ನಿಗೂಢ ಬಲೂನ್ ಪತ್ತೆಯಾದ ಬೆನ್ನಲ್ಲೇ, ಇದೀಗ ಲ್ಯಾಟಿನ್ ಅಮೆರಿಕ ದೇಶಗಳ ಮೇಲೆ ಚೀನಾ ಎಂದು ಶಂಕಿಸಲಾದ ಮತ್ತೊಂದು ಬಲೂನ್ ಶುಕ್ರವಾರ ಪತ್ತೆಯಾಗಿದ್ದು, ಭಾರೀ ಆತಂಕಕ್ಕೆ ಕಾರಣವಾಗಿದೆ.
ಮೊದಲ ಬಲೂನ್ ಪತ್ತೆಯಾದ ಬೆನ್ನಲ್ಲೇ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್ ತಮ್ಮ ಚೀನಾ ಪ್ರವಾಸವನ್ನು ದಿಢೀರ್ ಮುಂದೂಡಿದ್ದರು. ಅದರ ಬೆನ್ನಲ್ಲೇ ಗೂಢಚರ ಉದ್ದೇಶಕ್ಕೆ ಬಂದಿರಬಹುದು ಎಂದು ಊಹಿಸಲಾದ ಮತ್ತೊಂದು ಬಲೂನ್ ಪತ್ತೆಯಾಗಿರುವುದು ಉಭಯ ದೇಶಗಳ ನಡುವೆ ಹಳಸಿರುವ ಸಂಬಂಧವನ್ನು ಮತ್ತಷ್ಟು ಬಿಗಡಾಯಿಸಲು ಕಾರಣವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: 2019ರಲ್ಲಿ ಭಾರತ - ಪಾಕ್ ಪರಮಾಣು ಯುದ್ಧ ಮಾಡುವುದರಲ್ಲಿತ್ತು, ಅಮೆರಿಕ ಅದನ್ನು ತಡೆದಿದೆ: ಮೈಕ್ ಪಾಂಪಿಯೊ
ಈ ಕುರಿತು ಮಾಹಿತಿ ನೀಡಿರುವ ಅಮೆರಿಕದ ರಕ್ಷಣಾ ಇಲಾಖೆಯ ಕೇಂದ್ರ ಕಚೇರಿ ಪೆಂಟಗನ್‌ನ ಪತ್ರಿಕಾ ಕಾರ್ಯದರ್ಶಿ ಜ. ಪ್ಯಾಟ್ರಿಕ್ ರೈಡರ್, ‘ಲ್ಯಾಟಿನ್ ಅಮೆರಿಕದ ವಾಯುಸೀಮೆಯಲ್ಲಿ ಬಲೂನ್ ಹಾರಾಟದ ಸುದ್ದಿ ಬಂದಿದೆ. ಇದು ಚೀನಾದ್ದಿರಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ಇದಕ್ಕಿಂತ ಹೆಚ್ಚಿನ ಮಾಹಿತಿ ಲಭ್ಯವಿಲ್ಲ’ ಎಂದು ಹೇಳಿದ್ದಾರೆ. ಈ ಬಲೂನ್ ಲ್ಯಾಟಿನ್ ಅಮೆರಿಕದ ಯಾವ ದೇಶದ ಮೇಲೆ ಹಾರಾಡುತ್ತಿತ್ತು? ಅದು ಅಮೆರಿಕದ ಕಡೆಗೆ ಪ್ರಯಾಣ ಬೆಳೆಸಿತ್ತೇ ಎಂಬ ಕುರಿತು ಅಮೆರಿಕ ಯಾವುದೇ ಮಾಹಿತಿ ನೀಡಿಲ್ಲ.