ಚೀನಾದ ಗುಪ್ತಚರ ಬಲೂನ್‌, ಲ್ಯಾಟಿನ್‌ ಅಮೆರಿಕ ಮಾರ್ಗದಲ್ಲಿ ಸಂಚಾರ ಮಾಡುತ್ತಿತ್ತು ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್‌ ತನ್ನ ಹೇಳಿಕೆಯ್ಲಿ ತಿಳಿಸಿದೆ. ನಮ್ಮ ಅಂದಾಜಿನ ಪ್ರಕಾರ, ಚೀನಾದ ಕಣ್ಗಾವಲಿನ ಅಡಿಯಲ್ಲಿ ಹಾದು ಹೋಗುತ್ತಿರುವ 2ನೇ ಬಲೂನ್‌ ಇದಾಗಿದೆ. ಈ ನಡುವೆ ಚೀನಾ ಇದು ಆಧಾರ ರಹಿತ ಆರೋಪ ಎಂದು ಹೇಳಿದೆ.

ನವದೆಹಲಿ (ಫೆ.4): ಚೀನಾ ಹಾಗೂ ಅಮೆರಿಕ ನಡುವಿನ ಉದ್ವಿಗ್ನ ವಾತಾವರಣ ಇನ್ನಷ್ಟು ಹೆಚ್ಚಾಗಿದೆ. ಅದಕ್ಕೆ ಕಾರಣವಾಗಿರುವುದು ಚೀನಾದ ಗುಪ್ತಚರ ಬಲೂನ್‌ಗಳು ಅಮರಿಕ, ಕೆನಡ ಮತ್ತು ಲ್ಯಾಟಿನ್‌ ಅಮೆರಿಕ ಭಾಗದಲ್ಲಿ ಕಾಣಿಸಿಕೊಂಡಿರುವುದು. ಪೆಂಟಗನ್‌ ನೇರವಾಗಿ ಚೀನಾ ವಿರುದ್ಧ ದಾಳಿಗೆ ಇಳಿದಿತ್ತು. ಲ್ಯಾಟಿನ್‌ ಅಮೆರಿಕ ಪ್ರದೇಶದಲ್ಲಿ ಚೀನಾದ ಇನ್ನೊಂದು ಬಲೂನ್‌ ಕೂಡ ಹಾರಾಟ ಮಾಡುತ್ತಿರುವುದು ಕಂಡುಬಂದಿದೆ ಎಂದು ಹೇಳಿದೆ. ಈ ನಡುವೆ ಅಮೆರಿಕದ ರಕ್ಷಣಾ ಸಚಿವ ಅಂಟೋನ ಬ್ಲಿಂಕೆನ್‌, ತಮ್ಮ ಚೀನಾ ಭೇಟಿಯನ್ನು ರದ್ದುಗೊಳಿಸಿದ್ದಾರೆ. ಅಮೆರಿಕದ ರಕ್ಷಣಾ ಸಚಿವರ ಜೊತೆ ಚೀನಾದ ರಕ್ಷಣಾ ಸಚಿವ ಯಾಂಗ್‌ ಯಿ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಲ್ಯಾಟಿನ್ ಅಮೆರಿಕದ ಮೂಲಕ ಬಲೂನ್ ಹಾದುಹೋಗಿದೆ ಎಂದು ಯುಎಸ್ ರಕ್ಷಣಾ ಸಚಿವಾಲಯದ ಪೆಂಟಗನ್ ವಕ್ತಾರ ಪ್ಯಾಟ್ರಿಕ್ ರೈಡರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಮ್ಮ ಮೌಲ್ಯಮಾಪನದ ಪ್ರಕಾರ, ಇದು ಚೀನಾದ ಕಣ್ಗಾವಲು ಅಡಿಯಲ್ಲಿ ಹಾದುಹೋಗಿರುವ ಎರಡನೇ ಬಲೂನ್ ಆಗಿದೆ ಎಂದಿದ್ದಾರೆ.

ಕೇಂದ್ರ ಅಮೆರಿಕದ ಭಾಗದಿಂದ ಈ ಗುಪ್ತಚರ ಬಲೂನ್‌ಅನ್ನು ಕಾಣಬಹುದು ಎಂದು ರೈಡರ್‌ ಈ ಮುನ್ನ ಹೇಳಿದ್ದರು. ಆದರೆ, ಈ ಬಲೂನ್‌ ಇರುವ ಸ್ಥಳದ ಬಗ್ಗೆ ಕ್ಷಣ ಕ್ಷಣದ ಮಾಹಿತಿಯನ್ನು ನೀಡಲು ನಿರಾಕರಿಸಿದ್ದಾರೆ. ಸದ್ಯ ಬಲೂನ್‌ ಎಲ್ಲಿದೆ, ಎಷ್ಟು ದೊಡ್ಡ ಪ್ರಮಾಣದಲ್ಲಿದೆ ಎನ್ನು ವಿವರಗಳನ್ನು ಈ ತಕ್ಷಣವೇ ನೀಡಲು ಸಾಧ್ಯವಿಲ್ಲ ಎಂದು ರೈಡರ್‌ ಹೇಳಿದ್ದಾರೆ.

ಉತ್ತರ ಅಮೆರಿಕಾದ ಏರೋಸ್ಪೇಸ್ ಡಿಫೆನ್ಸ್ ಕಮಾಂಡ್ (NORAD) ಈ ಗುಪ್ತಚರ ಬಲೂನ್ ಕುರಿತಾಗಿ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ರೈಡರ್‌ ಹೇಳಿದ್ದಾರೆ. ಈ ಬಲೂನ್ ಮೊಂಟಾನಾದಲ್ಲಿ ಕಂಡುಬಂದಿದೆ ಮತ್ತು ಅದರ ಗಾತ್ರವು ಮೂರು ಬಸ್‌ಗಳಿಗೆ ಸಮಾನವಾಗಿದೆ. ಈ ಸ್ಪೈ ಬಲೂನ್‌ನಿಂದ ಜನರಿಗೆ ಯಾವುದೇ ಅಪಾಯವಿಲ್ಲ ಎಂದು ರೈಡರ್ ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಅಮೆರಿಕದ ವಾಯುಪ್ರದೇಶದಲ್ಲಿ ಈ ಬಲೂನ್ ಹಾರಾಡುತ್ತಿರುವುದನ್ನು ಅಮೆರಿಕ ಟ್ರ್ಯಾಕ್ ಮಾಡುತ್ತಿದೆ. ಅಮೆರಿಕದ ಸೇನಾ ವಿಮಾನಗಳ ಮೂಲಕವೂ ನಿಗಾ ಇಡಲಾಗುತ್ತಿದೆ. ಈ ಬಲೂನ್‌ಅನ್ನು ಶೂಟ್‌ ಮಾಡುವ ಅವಕಾಶವಿದ್ದರೂ, ಇದರಿಂದ ಬೀಳುವ ಅವಶೇಷಗಳಿಂದ ಸುರಕ್ಷತಾ ಅಪಾಯವಿದೆ. ಆ ಕಾರಣದಿಂದ ಕೆಲವು ಹಿರಿಯ ಯುಎಸ್‌ ಅಧಿಕಾರಿಗಳು ಅಧ್ಯಕ್ಷ ಜೋ ಬಿಡೆನ್‌ ಅವರಿಗೆ ಈ ಬಲೂನ್‌ಅನ್ನು ಶೂಟ್‌ ಮಾಡದಂತೆ ಸಲಹೆ ನೀಡಿದ್ದಾರೆ. ಅದೇ ವೇಳೆ ಈ ಬಲೂನ್ ಬೇಹುಗಾರಿಕೆಗೆ ಬಳಕೆಯಾಗುತ್ತಿರುವುದು ಸ್ಪಷ್ಟವಾಗಿದೆ ಎಂದು ರಕ್ಷಣಾ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೊದಲ ಬಾರಿಗೆ ಶ್ವೇತ ಭವನಕ್ಕೆ ಪ್ರಧಾನಿ ಮೋದಿ ಪ್ರವಾಸ: ಜೋ ಬೈಡೆನ್‌ ಆತಿಥ್ಯಕ್ಕೆ ಶೀಘ್ರದಲ್ಲೇ ಡೇಟ್‌ ಫಿಕ್ಸ್‌..!

ಮೊಂಟಾನಾದಲ್ಲಿ ಬಲೂನ್‌ ಕಾಣಿಸಿಕೊಳ್ಳುವ ಹಿಂದಿದೆ ಕಾರಣ: ಅಮೆರಿಕದ ಮೊಂಟಾನಾ ಪ್ರದೇಶದಲ್ಲಿ ಜನಸಂಖ್ಯೆ ಬಹಳ ವಿರಳ. ಆದರೆ, ಅಮೆರಿಕದ ಏರ್‌ಫೋರ್ಸ್‌ನ ವಿಶೇಷ ಬೇಸ್‌ ಈ ಪ್ರದೇಶದಲ್ಲಿದೆ. ಮೊಂಟಾನಾದಿಂದಲೇ ಖಂಡಾಂತರ ಕ್ಷಿಪಣಿಗಳ ಕಾರ್ಯನಿರ್ವಹಣೆ ಮಾಡಲಾಗುತ್ತದೆ. ವಿಶೇಷವಾಗಿ ಅಮೆರಿಕದಲ್ಲಿ ಮೂರು ಪರಮಾಣು ಕ್ಷಿಪಣಿ ಕ್ಷೇತ್ರಗಳಿವೆ. ಅವುಗಳ ಪೈಕಿ ಒಂದು ಮೊಂಟಾನಾ. ಅಮೆರಿಕದ ಅಧಿಕಾರಿಗಳ ಪ್ರಕಾರ, ಚೀನಾದ ಬೇಹುಗಾರಿಕೆ ಸಾಧನವು ಈ ಸೂಕ್ಷ್ಮ ಸ್ಥಳಗಳ ಬಗ್ಗೆ ಮಾಹಿತಿ ಸಂಗ್ರಹಿಸುವಲ್ಲಿ ನಿರತವಾಗಿದೆ. ಇತ್ತಿಚಿನ ವರ್ಷಗಳಲ್ಲಿ ಅಮೆರಿಕದಲ್ಲಿ ಸಾಕಷ್ಟು ಬಾರಿ ಗುಪ್ತಚರ ಬಲೂನ್‌ಗಳು ಕಾಣಿಸಿಕೊಂಡಿವೆ. ಆದರೆ, ಚೀನಾದ ಗುಪ್ತಚರ ಬಲೂನ್‌ ಈ ಬಾರಿ ಅಮೆರಿಕ ವಾಯುಪ್ರದೇಶದಲ್ಲಿ ತುಂಬಾ ಸಮಯದವರೆಗೆ ಇದ್ದ ಕಾರಣ, ಅಮೆರಿಕ ಬಹಳ ಎಚ್ಚರಿಕೆ ವಹಿಸಿದೆ.

2019ರಲ್ಲಿ ಭಾರತ - ಪಾಕ್‌ ಪರಮಾಣು ಯುದ್ಧ ಮಾಡುವುದರಲ್ಲಿತ್ತು, ಅಮೆರಿಕ ಅದನ್ನು ತಡೆದಿದೆ: ಮೈಕ್‌ ಪಾಂಪಿಯೊ

ಸಿಟ್ಟಾದ ಚೀನಾ: ತನ್ನ ವಿರುದ್ಧ ಅಮೆರಿಕ ನಿರಂತರವಾಗಿ ಬೇಹುಗಾರಿಕೆ ಆರೋಪ ಮಾಡುತ್ತಿದೆ ಎಂದು ಚೀನಾ ಆಕ್ರೋಶ ವ್ಯಕ್ತಪಡಿಸಿದೆ. ಅಮೆರಿಕ ಈಗಾಗಲೇ ಬೀಜಿಂಗ್‌ ಹಾಗೂ ವಾಷಿಂಗ್ಟನ್‌ನಲ್ಲಿರುವ ರಾಯಭಾರ ಕಚೇರಿಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದೆ. ಈ ಕುರಿತು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಅವರು, ನಾವು ಪ್ರಸ್ತುತ ಸತ್ಯಗಳನ್ನು ಸಂಗ್ರಹಿಸುವ ಮತ್ತು ಪರಿಶೀಲಿಸುವ ಕಾರ್ಯದಲ್ಲಿ ನಿರತರಾಗಿದ್ದೇವೆ ಎಂದು ಹೇಳಿದ್ದಾರೆ. ಇತರ ದೇಶಗಳ ಸಾರ್ವಭೌಮತ್ವ ಮತ್ತು ವಾಯುಪ್ರದೇಶವನ್ನು ಉಲ್ಲಂಘಿಸುವ ಉದ್ದೇಶವನ್ನು ಚೀನಾ ಹೊಂದಿಲ್ಲ. ಎರಡೂ ಕಡೆಯವರು ಈ ಸಮಸ್ಯೆಯನ್ನು ಶಾಂತವಾಗಿ ಮತ್ತು ಎಚ್ಚರಿಕೆಯಿಂದ ನಿಭಾಯಿಸುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.