ಪಾಕ್‌ಗೆ ತಿರುಗೇಟು; ಹಿಂದಿನ ಸರ್ಕಾರಕ್ಕಿಂತ ಮೋದಿ ಸ್ಟ್ರಾಂಗ್: ಅಮೆರಕ ಗುಪ್ತಚರ ಇಲಾಖೆ!
* ಅಮೆರಿಕ ಸಂಸತ್‌ಗೆ ಗುಪ್ತಚರ ಇಲಾಖೆ ಮಾಹಿತಿ
* ಪಾಕ್‌ಗೆ ತಿರುಗೇಟು; ಹಿಂದಿನ ಸರ್ಕಾರಕ್ಕಿಂತ ಮೋದಿ ಸ್ಟ್ರಾಂಗ್
ವಾಷಿಂಗ್ಟನ್(ಮಾ.09): ಒಂದು ವೇಳೆ ಪಾಕಿಸ್ತಾನ ಯಾವುದೇ ಪ್ರಚೋದನೆ ಮಾಡಿದರೆ, ಅದಕ್ಕೆ ಈಗಿನ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಭಾರೀ ತಿರುಗೇಟು ನೀಡುವ ಸಾಧ್ಯತೆ ಅತ್ಯಧಿಕವಾಗಿದೆ. ಜೊತೆಗೆ ಇಂಥ ಸಾಧ್ಯತೆ ಈ ಹಿಂದಿನ ಯಾವುದೇ ಸರ್ಕಾರಗಳಿಗಿಂತ ಹೆಚ್ಚು ಎಂದು ಅಮೆರಿಕದ ಗುಪ್ತಚರ ವರದಿಯೊಂದು ಹೇಳಿದೆ.
ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿಯು ಅಮೆರಿಕ ಕಾಂಗ್ರೆಸ್‌ನಲ್ಲಿ ಮೌಲ್ಯಮಾಪನದ ವರದಿಯನ್ನು ಬಿಡುಗಡೆ ಮಾಡಿದ್ದು, ಭಾರತ ವಿರೋಧಿ ಉಗ್ರರನ್ನು ಪಾಕಿಸ್ತಾನ ಮೊದಲಿನಿಂದಲೂ ಆಶ್ರಯ ನೀಡುತ್ತಿದೆ. ಮೊದಲಿನ ಸರ್ಕಾರಗಳಿಗಿಂತ ಪ್ರಸ್ತುತ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಪಾಕಿಸ್ತಾನಕ್ಕೆ ಸೇನಾಬಲ ಬಳಸಿ ತಿರುಗೇಟು ನೀಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಸೇನಾ ಜಟಾಪಟಿಯಲ್ಲಿ ಕಾಶ್ಮೀರದಲ್ಲಿ ಹಿಂಸಾತ್ಮಕ ಅಶಾಂತಿ ಉಂಟಾಗುವ ಸಾಧ್ಯತೆಯಿದೆ ಎಂದು ಹೇಳಿದೆ.
ಅಲ್ಲದೇ ವಿವಾದಿತ ಗಡಿಯಲ್ಲಿ ಭಾರತ ಹಾಗೂ ಚೀನಾ ಸೇನೆಗಳು ನಿಲುವು ಎರಡು ಪರಮಾಣು ಶಕ್ತಿಯುಳ್ಳ ದೇಶಗಳ ನಡುವೆ ಸಶಸ್ತ್ರ ಮುಖಾಮುಖಿಯ ಅಪಾಯವನ್ನು ಹೆಚ್ಚಿಸಿದೆ. ಇದು ಅಮೆರಿಕದ ಹಿತಾಸಕ್ತಿಗಳಿಗೆ ನೇರ ಬೆದರಿಕೆಯೊಡ್ಡುತ್ತಿದ್ದು, ಅಮೆರಿಕದ ಮಧ್ಯಸ್ಥಿಕೆಗೆ ಕರೆ ನೀಡುತ್ತಿದೆ ಎಂದು ಗುಪ್ತಚರ ಇಲಾಖೆ ವರದಿ ಮಾಡಿದೆ.