ತೀವ್ರ ವಿಕೋಪಕ್ಕೆ ತಿರುಗಿದ ರಷ್ಯಾ ಉಕ್ರೇನ್ ಬಿಕ್ಕಟ್ಟು ಬಾಂಬ್ ಶೆಲ್ಟರ್‌ನಲ್ಲಿ ಅಡಗಿಕೊಂಡ ಮಕ್ಕಳು ಉಕ್ರೇನ್ ರಾಷ್ಟ್ರಗೀತೆ ಹಾಡುತ್ತಿರುವ ಪುಟಾಣಿಗಳು
ಕೀವ್(ಮಾ.3): ಉಕ್ರೇನ್ ಮೇಲೆ ರಷ್ಯಾ ಆಕ್ರಮಣ 8ನೇ ದಿನವೂ ಮುಂದುವರೆದಿದೆ. ರಷ್ಯಾ ಆಕ್ರಮಣದಿಂದ ಉಕ್ರೇನ್ ಜನಜೀವನ ನರಕಸದೃಶ್ಯವಾಗಿದೆ. ಸಂಪೂರ್ಣ ನಗರಗಳೇ ನಾಶವಾಗಿವೆ. ತಿನ್ನಲು ಊಟವಿಲ್ಲದೇ ಕುಡಿಯಲು ನೀರಿಲ್ಲದೇ ಜನ ಸಂಕಷ್ಟ ಪಡುತ್ತಿದ್ದಾರೆ. ಈ ಮಧ್ಯೆ ಅಲ್ಲಿನ ಪುಟ್ಟ ಪುಟ್ಟ ಮಕ್ಕಳು ಜೀವ ಉಳಿಸಿಕೊಳ್ಳುವುದಕ್ಕಾಗಿ ಬಾಂಬ್ ಶೆಲ್ಟರ್‌ನಲ್ಲಿ ಅಡಗಿಕೊಂಡಿದ್ದು, ಅಲ್ಲಿ ತಮ್ಮ ದೇಶದ ರಾಷ್ಟ್ರಗೀತೆಯನ್ನು ಹಾಡುತ್ತಿದ್ದಾರೆ. ಈ ಮೂಲಕ ಸಂಕಷ್ಟದಲ್ಲೂ ಪುಟಾಣಿಗಳು ದೇಶಪ್ರೇಮ ಮೆರೆಯುತ್ತಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಉಕ್ರೇನ್ ವಿದೇಶಾಂಗ ವ್ಯವಹಾರಗಳ ಇಲಾಖೆಯ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋ ಪೋಸ್ಟ್ ಆಗಿದೆ. ಹೊರಗೆ ರಾಕೆಟ್ ದಾಳಿ ನಡೆಯುತ್ತಿದ್ದರೆ, ಬಾಂಬ್ ಶೆಲ್ಟರ್ ಒಳಗಡೆ ಕುಳಿತು ಮಕ್ಕಳು ಉಕ್ರೇನ್ ರಾಷ್ಟ್ರಗೀತೆ (Ukraine national anthem)ಯನ್ನು ಹಾಡುತ್ತಿದ್ದಾರೆ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.
23 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಆರು ಜನ ಮಕ್ಕಳು ಸಣ್ಣ ಟೇಬಲ್‌ವೊಂದರ ಸುತ್ತಲೂ ಕುಳಿತು ಕಾರ್ಡ್ ಆಟ ಆಡುತ್ತಾ ರಾಷ್ಟ್ರಗೀತೆಯನ್ನು ಹಾಡುತ್ತಿದ್ದಾರೆ. ಈ ಗೀತೆಯು 19 ನೇ ಶತಮಾನದ ಉಕ್ರೇನಿಯನ್ ಕವಿತೆ (poem) 'ಉಕ್ರೇನ್ ಇನ್ನೂ ಸತ್ತಿಲ್ಲ'(Ukraine Is Not Dead Yet) ಎಂಬ ಶೀರ್ಷಿಕೆಯಿಂದ ಹುಟ್ಟಿಕೊಂಡಿದೆ. ರಷ್ಯಾದ ಆಕ್ರಮಣದ ಮಧ್ಯೆ ಉಕ್ರೇನಿಯನ್ನರಲ್ಲಿ ಐಕ್ಯಮತ್ಯವನ್ನು ವ್ಯಕ್ತಪಡಿಸಲು ಮತ್ತು ಧೈರ್ಯವನ್ನು ಪ್ರೇರೇಪಿಸಲು ಈ ಗೀತೆಯು ಒಂದು ಮಾರ್ಗವಾಗಿದೆ. ಜನರು ಈ ಗೀತೆಯನ್ನು ಹಾಡುವ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಈಗಾಗಲೇ ವೈರಲ್ ಆಗಿವೆ.
ಇದಕ್ಕೂ ಮೊದಲು, ಉಕ್ರೇನಿಯನ್ ಮಹಿಳೆಯೊಬ್ಬರು ಬಾಂಬ್ ದಾಳಿಯಿಂದ ಹಾನಿಗೀಡಾದ ತಮ್ಮ ಮನೆಯ ಕಿಟಕಿಯಿಂದ ಗಾಜಿನ ಚೂರುಗಳನ್ನು ಗುಡಿಸುತ್ತಾ ರಾಷ್ಟ್ರಗೀತೆಯನ್ನು ಹಾಡುವ ವೀಡಿಯೊ ವೈರಲ್ ಆಗಿತ್ತು. ಈ ಮಧ್ಯೆ ಉಕ್ರೇನ್ ವಶಕ್ಕೆ ತೀವ್ರ ಯತ್ನ ನಡೆಸುತ್ತಿರುವ ರಷ್ಯಾ, ಈ ಯತ್ನ ಫಲ ಕೊಟ್ಟಕೂಡಲೇ ತನ್ನ ಕೈಗೊಂಬೆಯಾಗಿರುವ ವಿಕ್ಟರ್ ಯನುಕೋವಿಚ್ ಅವರನ್ನೇ ಉಕ್ರೇನ್‌ನ ಹೊಸ ಅಧ್ಯಕ್ಷರಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಈ ಮೂಲಕ ಉಕ್ರೇನ್ ದೇಶವು, ನ್ಯಾಟೋ ಒಕ್ಕೂಟದತ್ತ ವಾಲದೇ ತನ್ನ ಹಿಡಿತದಲ್ಲೇ ಇರುವಂತೆ ನೋಡಿಕೊಳ್ಳಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.
Russia Ukraine War: ಭಾರತೀಯರ ರಕ್ಷಣೆಗೆ ರಷ್ಯಾದಿಂದಲೇ ಸಾಥ್: ನಾಯಿಯೊಂದಿಗೆ ಭಾರತಕ್ಕೆ ಮರಳಿದ ವಿದ್ಯಾರ್ಥಿ!
ವಿಕ್ಟರ್, ಪುಟಿನ್ ಅವರ ಬೆಂಬಲಿಗರಾಗಿದ್ದು, 2006-2007ರ ಅವಧಿಗೆ ಉಕ್ರೇನ್ ಪ್ರಧಾನಿಯಾಗಿ, 2010-2014ರವರೆಗೆ ಉಕ್ರೇನ್ ಅಧ್ಯಕ್ಷರಾಗಿದ್ದರು. ಆದರೆ ಭಾರೀ ಭ್ರಷ್ಟಾಚಾರ ಮತ್ತು ಜನರ ವಿರೋಧ ಕಟ್ಟಿಕೊಂಡು 2014ರಲ್ಲಿ ಹುದ್ದೆಯಿಂದ ಕಿತ್ತು ಹಾಕಲ್ಪಟ್ಟಿದ್ದರು. ಅಧ್ಯಕ್ಷರಾಗಿ ಇವರ ಆಯ್ಕೆಯ ವೇಳೆ ಭಾರೀ ಅಕ್ರಮ ನಡೆದಿದ್ದು, ಸ್ವತಃ ರಷ್ಯ ಅಧ್ಯಕ್ಷ ಪುಟಿನ್ ಅವರೇ ವಿಕ್ಟರ್ ಆಯ್ಕೆ ಖಚಿತಪಡಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಆದರೆ 2014ರಲ್ಲಿ ಅಧಿಕಾರದಿಂದ ಕಿತ್ತುಹಾಕಲ್ಪಟ್ಟ ವಿಕ್ಟರ್ ರಷ್ಯಾಕ್ಕೆ ಪರಾರಿಯಾಗಿ ಅಲ್ಲೇ ವಾಸಿಸುತ್ತಿದ್ದಾರೆ. ಹೀಗಾಗಿ, ಇದೀಗ ಉಕ್ರೇನ್ ತಮ್ಮ ಕೈವಶವಾಗುತ್ತಲೇ, ಮರಳಿ ವಿಕ್ಟರ್ ಅವರನ್ನು ಉಕ್ರೇನ್‌ಗೆ ಕರೆತಂದು ಅವರನ್ನೇ ದೇಶದ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲು ರಷ್ಯಾ ಯೋಜನೆ ರೂಪಿಸಿದೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಉಕ್ರೇನ್‌ನ ‘ಉಕ್ರೇನ್‌ಸ್ಕಾ ಪ್ರಾವ್ಡಾ’ ಪತ್ರಿಕೆ ವರದಿ ಮಾಡಿದೆ.
Russia Ukraine War: ರಷ್ಯಾದಿಂದ ಅಗ್ನಿ ಮಳೆ: 2000 ಉಕ್ರೇನ್ ನಾಗರಿಕರ ಸಾವು!
ಇನ್ನೊಂದೆಡೆ ತಮ್ಮ ದೇಶದ ಪರವಾಗಿ ಯಾರಾದರೂ ವಿದೇಶಿಯರು ಹೋರಾಡಲು ಸಿದ್ಧವಾಗಿದ್ದರೆ ಅವರಿಗೆ ಮುಕ್ತ ಅವಕಾಶ ನೀಡುವುದಾಗಿ ಉಕ್ರೇನ್ ಅಧ್ಯಕ್ಷ ಜೆಲೆನ್‌ಸ್ಕಿ ಘೋಷಿಸಿದ್ದಾರೆ. ಈಗಾಗಲೇ ಸಾಮಾನ್ಯ ಪ್ರಜೆಗಳು ಮತ್ತು ಕೈದಿಗಳಿಗೆ ನೀಡಿದ್ದ ಅವಕಾಶವನ್ನು ಇದೀಗ ವಿದೇಶಿ ಪ್ರಜೆಗಳಿಗೂ ವಿಸ್ತರಿಸಲಾಗಿದೆ. ಈ ನಿಯಮಕ್ಕೆ ಮಂಗಳವಾರ ಅವರು ಸಹಿ ಹಾಕಿದ್ದು, ಇದು ಯುದ್ಧ ನಡೆಯುವವರೆಗೂ ಮುಂದುವರೆಯುತ್ತದೆ ಎಂದು ತಿಳಿಸಲಾಗಿದೆ. ಅಲ್ಲದೆ ಹೀಗೆ ಬರುವವರಿಗೆ ದೇಶ ಪ್ರವೇಶ ಪಡೆಯಲು ಇದ್ದ ವೀಸಾ ನಿಯಮವನ್ನೇ ರದ್ದು ಮಾಡಲಾಗಿದೆ.