ಬ್ರಿಟನ್‌ನ ರಾಜ ಆಂಡ್ರ್ಯೂ ಭಾರತದ ಯೋಗಿಯಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಚಿಕಿತ್ಸೆಗಾಗಿ ಆದ ವೆಚ್ಚದ ಬಿಲ್‌ಅನ್ನು ಕಿಂಗ್‌ ಚಾರ್ಲ್ಸ್‌ಗೆ ಕಳುಹಿಸಿಕೊಟ್ಟಿದ್ದಾರೆ. ಇದನ್ನು ನೋಡಿದ ಕಿಂಗ್‌ ಚಾರ್ಲ್ಸ್‌ ಈ ಹಣವನ್ನು ನೀವೇ ಕಟ್ಟಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ನವದೆಹಲಿ (ಮಾ.15): ಬ್ರಿಟನ್‌ನ ರಾಜ ಕಿಂಗ್‌ ಚಾರ್ಲ್ಸ್‌, ಪ್ರಿನ್ಸ್ ಆಂಡ್ರ್ಯೂ ಅವರ ಚಿಕಿತ್ಸೆಗೆ ಆದ ವೆಚ್ಚವನ್ನು ಭರಿಸಲು ನಿರಾಕರಿಸಿದ್ದಾರೆ. ಪ್ರಿನ್ಸ್‌ ಆಂಡ್ರ್ಯೂ ಕಳೆದ ಕಲವಾರು ವರ್ಷಗಳಿಂದ ಭಾರತದ ಯೋಗಿಯಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅದಕ್ಕಾಗಿ ಪ್ರತಿ ವರ್ಷಕ್ಕೆ 32 ಲಕ್ಷ ರೂಪಾಯಿ ಶುಲ್ಕವನ್ನು ಪಾವತಿ ಮಾಡುತ್ತಿದ್ದರು. ಇಲ್ಲಿಯವರೆಗೂ ರಾಣಿ ಎಲಿಜಬೆತ್‌ ತನ್ನ ಆದಾಯದ ಹಣದಿಂದ ಈ ಮೊತ್ತವನ್ನು ಮಗನ ಚಿಕಿತ್ಸೆಗಾಗಿ ನೀಡುತ್ತಿದ್ದರು. ತಾಯಿ ಎಲಿಜಬೆತ್‌ ನಿಧನದ ಆಂಡ್ರ್ಯೂ ಈ ಬಿಲ್‌ಗಳನ್ನು ರಾಜನಾಗಿರುವ ಅಣ್ಣ ಚಾರ್ಲ್ಸ್‌ಗೆ ಕಳಿಸಿದ್ದಾರೆ. ಆದರೆ ಕಿಂಗ್‌ ಚಾರ್ಲ್ಸ್‌ ಈ ಹಣವನ್ನು ಭರಿಸಲು ನಿರಾಕರಿಸಿದ್ದು ಮಾತ್ರವಲ್ಲದೆ, ಸ್ವತಃ ಆಂಡ್ರ್ಯೂ ಈ ಹಣವನ್ನು ತನ್ನ ಆದಾಯದಿಂದ ನೀಡಬೇಕು ಎಂದು ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲಿಯೇ ಬ್ರಿಟನ್‌ ರಾಜಮನೆತನದಲ್ಲಿ ಮತ್ತೊಂದು ಸುತ್ತಿನ ಕೋಲಾಹಲ ಏಳುವ ಲಕ್ಷಣ ಕಂಡಿದೆ. ಬ್ರಿಟಿಷ್ ಪತ್ರಿಕೆ 'ದಿ ಸನ್' ಮಾಡಿರುವ ವರದಿಯ ಪ್ರಕಾರ, ಭಾರತೀಯ ಯೋಗಿಗಳು ಹಲವು ವರ್ಷಗಳಿಂದ ಮಂತ್ರಗಳು, ಮಸಾಜ್ ಮತ್ತು ಧ್ಯಾನದ ಮೂಲಕ ಆಂಡ್ರ್ಯೂಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದಕ್ಕಾಗಿ ಅವರು ಇನ್ನೂ ಸುಮಾರು 1 ತಿಂಗಳ ಕಾಲ ಆಂಡ್ರ್ಯೂ ಅವರ ರಾಯಲ್ ಲಾಡ್ಜ್ ಮನೆಯಲ್ಲಿ ವಾಸ ಮಾಡಲಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕ್ವಿನ್‌ ಎಲಿಜಬೆತ್‌ ನಿಧನರಾದರು. ಅಲ್ಲಿಯವರೆಗೂ ಪುತ್ರ ಆಂಡ್ರ್ಯೂನ ಎಲ್ಲಾ ಬಿಲ್‌ಗಳನ್ನು ಸ್ವತಃ ಅವರೇ ಪಾವತಿ ಮಾಡುತ್ತಿದ್ದರು. ಈ ಹಣವನ್ನು ಬ್ರಿಟಿಷ್ ರಾಜನ ರಾಜ್ಯ ಡಚಿ ಆಫ್ ಲ್ಯಾಂಕಾಸ್ಟರ್‌ನ ಗಳಿಕೆಯಿಂದ ನೀಡಲಾಗುತ್ತಿತ್ತು. ಆದರೆ ಬ್ರಿಟನ್‌ನಲ್ಲಿ ಹೆಚ್ಚುತ್ತಿರುವ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು, ಕಿಂಗ್‌ ಚಾರ್ಲ್ಸ್‌ ದುಂದುವೆಚ್ಚವನ್ನು ನಿಯಂತ್ರಣ ಮಾಡಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಆಂಡ್ರ್ಯೂಗೆ ತನ್ನ ಚಿಕಿತ್ಸೆಯ ವೆಚ್ಚವನ್ನು ಅವರೇ ಭರಿಸಿಕೊಳ್ಳಬೇಕು. ಲ್ಯಾಂಕಾಸ್ಟರ್‌ನ ಗಳಿಕೆಯಿಂದ ಇದನ್ನು ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಹಾಗೇನಾದರೂ, ಬ್ರಿಟನ್‌ ಖಜಾನೆಯಿಂದ ಇದನ್ನು ನೀಡಿದರೆ, ರಾಜಮನೆತನದ ಬಗ್ಗೆ ದೇಶದ ಜನರಿಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಪಟ್ಟಾಭಿಷೇಕಕ್ಕೆ ಕೊಹಿನೂರ್‌ ವಜ್ರ ಇಲ್ಲದ ಕಿರೀಟ ಧರಿಸಲು ಬ್ರಿಟನ್ ರಾಣಿ ಕ್ಯಾಮಿಲ್ಲಾ ನಿರ್ಧಾರ

ಎರಡೂವರೆ ಕೋಟಿ ವೇತನ ಕೂಡ ಕಟ್‌: ಕೇವಲ ಚಿಕಿತ್ಸೆಯ ವೆಚ್ಚ ಮಾತ್ರವಲ್ಲ, ಪ್ರಿನ್ಸ್‌ ಆಂಡ್ರ್ಯೂಗೆ ನೀಡಲಾಗುತ್ತಿರುವ ವಾರ್ಷಿಕ ಎರಡೂವರೆ ಕೋಟಿ ವೇತನವನ್ನೂ ಕೂಡ ಕಿಂಗ್‌ ಚಾರ್ಲ್ಸ್‌ ನಿಲ್ಲಿಸಲು ನಿರ್ಧರಿಸಿದ್ದಾರೆ ಎನ್ನಳಾಗಿದೆ. ಆಂಡ್ರ್ಯೂಗೆ ನೀಡಲಾಗುವ ಈ ವೇತನ ಕೂಡ ಡ್ಯಾಚಿ ಆಫ್‌ ಲ್ಯಾಂಕಾಸ್ಟರ್‌ನಿಂದಲೇ ನೀಡಲಾಗುತ್ತಿತ್ತು. ಕೆಲವು ದಿನಗಳ ಹಿಂದೆ ಆಂಡ್ರ್ಯೂಗೆ ತಮ್ಮ ರಾಯಲ್‌ ಲಾಡ್ಜ್‌ಅನ್ನು ಅನ್ನು ಖಾಲಿ ಮಾಡುವಂತೆ ಕೂಡ ಬ್ರಿಟನ್‌ ರಾಜಮನೆತನ ಸೂಚನೆ ನೀಡಿತ್ತು. ಪ್ರಸ್ತುತ ಪ್ರಿನ್ಸ್‌ ಆಂಡ್ರ್ಯೂ, ಪ್ರಿನ್ಸ್‌ ಹ್ಯಾರಿ ಅವರ ಫ್ರಾಗ್ಮೋರ್ ಕಾಟೇಜ್‌ನಲ್ಲಿ ವಾಸ ಮಾಡುತ್ತಿದ್ದಾರೆ. ಪ್ರಿನ್ಸ್‌ ಹ್ಯಾರಿ ಅವರ ಪುಸಕ್ತ ಸ್ಪೇರ್‌ ಬಿಡುಗಡೆಯಾಗುವವರೆಗೂ ಪ್ರಿನ್ಸ್‌ ಹ್ಯಾರಿ ತಮ್ಮ ಪತ್ನಿ ಮೇಗನ್‌ ಮರ್ಕಲ್‌ ಜೊತೆ ಇದೇ ಮನೆಯಲ್ಲಿ ವಾಸ ಮಾಡುತ್ತಿದ್ದರು. ಆದರೆ, ಪುಸ್ತಕ ವಿವಾದಕ್ಕೆ ಈಡಾದ ಬಳಿಕ ಅವರು ಈ ಮನೆಯನ್ನು ತೊರೆದು ಅಮೆರಿಕಕ್ಕೆ ವಲಸೆ ಹೋಗಿದ್ದಾರೆ.

ಬ್ರಿಟನ್‌ ರಾಜ ಚಾರ್ಲ್ಸ್‌ ಜತೆ ಮೊದಲ ಬಾರಿ ಸಂಭಾಷಣೆ ನಡೆಸಿದ ಪ್ರಧಾನಿ ಮೋದಿ: ಜಿ20 ಕುರಿತು ಚರ್ಚೆ

ಲೈಂಗಿಕ ಹಗರಣದ ಆರೋಪ ಹೊತ್ತಿದ್ದ ಪ್ರಿನ್ಸ್‌ ಆಂಡ್ರ್ಯೂ: ಇನ್ನು ಆಂಡ್ರ್ಯೂ ವಿರುದ್ಧ ಲೈಂಗಿಕ ಹಗರಣದ ಆರೋಪವೂ ಇದೆ. ಆಂಡ್ರ್ಯೂ ವಿರುದ್ಧ ಮಾಡೆಲ್‌ ವರ್ಜೀನಿಯಾ ಗಿಯುಫ್ರೆ ಈ ಆರೋಪ ಮಾಡಿದ್ದರು. ತನಗೆ 17 ವರ್ಷವಾಗಿದ್ದಾಗ ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಜೆಫ್ರಿ ಎಪ್ಸ್ಟೀನ್, ತನ್ನನ್ನು ಆಂಡ್ರ್ಯೂ ಬಳಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಆಂಡ್ರ್ಯೂ ನನ್ನೊಂದಿಗೆ ಸೆಕ್ಸ್‌ ಮಾಡಿದ್ದ ಎಂದು ಆರೋಪಿಸಿದ್ದರು. ಈ ಆರೋಪ ಬಂದ ಬೆನ್ನಲ್ಲಿಯೇ ಕಿಂಗ್‌ ಚಾರ್ಲ್ಸ್‌ ಕ್ರಮ ಕೈಗೊಂಡು ಆಂಡ್ರ್ಯೂರನ್ನು ರಾಜಮನೆತನದಿಂದ ಹೊರಹಾಕಿದ್ದರು. ಅವರಿಗೆ ನೀಡಿದ್ದ ಭದ್ರತೆಯನ್ನೂ ತೆಗೆದುಹಾಕಲಾಗಿತ್ತು. ಆದರೆ, ಈಗ ಅವರಿಗೆ ಫ್ರಾಗ್ಮೋರ್ ಕಾಟೇಜ್‌ನಲ್ಲಿ ಉಳಿದುಕೊಳ್ಳಲು ಅವಕಾಶ ನೀಡಲಾಗಿದೆ. ರಾಜಮನೆತನದಿಂದ ಹೊರಹಾಕಿದ್ದರೂ ಅವರಿಗೆ ಫ್ರಾಗ್ಮೋರ್ ಕಾಟೇಜ್‌ ನೀಡಲಾಗಿರುವ ಬಗ್ಗೆ ರಾಯಲ್‌ ಫ್ಯಾಮಿಲಿ ಯಾವುದೇ ಹೇಳಿಕೆಯನ್ನೂ ನೀಡಿಲ್ಲ.