ಚೀನಾದ ಸಾಲದ ಬಲೆಗೆ ಸಿಕ್ಕಿದ ಉಗಾಂಡ: ಏಕೈಕ ವಿಮಾನ ನಿಲ್ದಾಣವೂ ಡ್ರ್ಯಾಗನ್ ವಶಕ್ಕೆ?
* ಏಕೈಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಚೀನಾ ಪಾಲಾಗುವ ಆತಂಕ
* ಚೀನಾದ ಸಾಲದ ಬಲೆಗೆ ಸಿಕ್ಕಿದ ಉಗಾಂಡ
ಕಂಪಾಲ(ನ.30): ವಿಶ್ವದ ಬಡ ದೇಶಗಳಿಗೆ ನೆರವಿನ ಹೆಸರಿನಲ್ಲಿ ಸಾಲ ನೀಡಿ ಬಳಿಕ ಆ ದೇಶದ ಆಸ್ತಿಯನ್ನು ವಶಪಡಿಸಿಕೊಳ್ಳುವ ಚೀನಾದ ಕುತಂತ್ರಕ್ಕೆ ಇದೀಗ ಪೂರ್ವ ಆಫ್ರಿಕಾದ ಉಗಾಂಡ ಸಹ ಸಿಲುಕಿಕೊಂಡಿದೆ. ಪರಿಣಾಮ ತನ್ನ ದೇಶದ ಏಕೈಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನೂ ಕಳೆದುಕೊಳ್ಳುವ ಭೀತಿಯಲ್ಲಿ ಉಗಾಂಡ ಸರ್ಕಾರ ಇದೆ. ಈ ನಡುವೆ ಈಗಾಗಲೇ ಉಗಾಂಡದಿಂದ ಚೀನಾ ವಿಮಾನ ನಿಲ್ದಾಣ ವಶಪಡಿಸಿಕೊಂಡಿದೆ ಎಂಬ ವರದಿಗಳನ್ನು ಚೀನಾ ಮತ್ತು ಉಗಾಂಡ ಎರಡೂ ದೇಶಗಳು ಸ್ಪಷ್ಟವಾಗಿ ತಳ್ಳಿಹಾಕಿವೆ.
ಏನಿದು ಪ್ರಕರಣ?:
ತನ್ನ ಎಂಟೆಬ್ಬೆ ವಿಮಾನ ನಿಲ್ದಾಣ ವಿಸ್ತರಣೆ ಮತ್ತು ಅಭಿವೃದ್ಧಿ ನಿಟ್ಟಿನಲ್ಲಿ ಉಗಾಂಡ ಸರ್ಕಾರ ಚೀನಾದ ಎಕ್ಸ್‌ಪೋರ್ಟ್- ಇಂಪೋರ್ಟ್ ಬ್ಯಾಂಕ್‌ನಿಂದ 1550 ಕೋಟಿ ರು. ಸಾಲ ಪಡೆದುಕೊಂಡಿತ್ತು. ಈ ಸಾಲ ಮರುಪಾವತಿಗೆ ಮೊದಲ 7 ವರ್ಷ ಮಾರಟೋರಿಯಂ ಇತ್ತು. ನಂತರ ಶೇ.2ರಷ್ಟುಬಡ್ಡಿಯೊಂದಿಗೆ ಹಣ ಮರುಪಾವತಿ ಮಾಡಬೇಕಿತ್ತು. ಒಂದು ವೇಳೆ ಹಣ ಮಾರುಪಾವತಿ ಮಾಡದೇ ಇದ್ದರೆ, ಯಾವುದೆ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಇಲ್ಲದೆಯೇ, ವಿಮಾನ ನಿಲ್ದಾಣವನ್ನು ತನ್ನ ವಶಕ್ಕೆ ಪಡೆಯುವ ಷರತ್ತನ್ನು ಚೀನಾ ಹಾಕಿತ್ತು.
ಮರುಪಾವತಿ ಇಲ್ಲ:
ಈ ನಡುವೆ ನಾನಾ ಕಾರಣಗಳಿಂದಾಗಿ ಉಗಾಂಡ ಸರ್ಕಾರ ಹಣ ಮರುಪಾವತಿ ಮಾಡಲು ವಿಫಲವಾಗಿತ್ತು. ಹೀಗಾಗಿ ಅದು ನಿಲ್ದಾಣವನ್ನು ಚೀನಾಕ್ಕೆ ಒಪ್ಪಿಸುವ ಭೀತಿ ಎದುರಿಸುತ್ತಿತ್ತು. ಇದನ್ನು ತಪ್ಪಿಸಲು ಕೆಲ ತಿಂಗಳ ಹಿಂದೆ ಉಗಾಂಡ ಅಧಿಕಾರಿಗಳು ಚೀನಾಕ್ಕೆ ತೆರಳಿ ಕೆಲವೊಂದು ವಿನಾಯ್ತಿ ಕೋರಿದ್ದರು. ಆದರೆ ಯಾವುದೇ ವಿನಾಯ್ತಿಗೆ ಚೀನಾ ಸ್ಪಷ್ಟವಾಗಿ ನಿರಾಕರಿಸಿತ್ತು. ಹೀಗಾಗಿ ಯಾವುದೇ ಕ್ಷಣದಲ್ಲಿ ವಿಮಾನ ನಿಲ್ಧಾಣ ಕಳೆದುಕೊಳ್ಳುವ ಭೀತಿಯಲ್ಲಿ ಆ ದೇಶವಿದೆ.