ಮೊಸಳೆಯ ಕುತ್ತಿಗೆಯಲ್ಲಿ ಸಿಲುಕಿದ್ದ ಟಯರ್‌ನ್ನು ಹೊರ ತೆಗೆದ ಪ್ರಾಣಿ ಪ್ರೇಮಿ

  • ಕಳೆದ ಆರು ವರ್ಷಗಳಿಂದ ಮೊಸಳೆ ಕುತ್ತಿಗೆಯಲ್ಲಿ ಸಿಲುಕಿದ್ದ ಟೈರ್
  • ಇಂಡೋನೇಷಿಯಾದ ಸುಲಾವೆಸಿ ದ್ವೀಪದಲ್ಲಿ ಘಟನೆ
  • ಆರು ವರ್ಷಗಳ ಬಳಿಕ ಸ್ವಚ್ಛಂದವಾಗಿ ವಿಹರಿಸಿದ ಮೊಸಳೆ
Tyre stuck around Crocodile neck finally set free after 6 years akb

ಇಂಡೋನೇಷ್ಯಾ: ಕಳೆದ  ಆರು ವರ್ಷಗಳಿಂದ ಕುತ್ತಿಗೆಗೆ ಟೈರ್ ಸಿಲುಕಿಕೊಂಡು ಒದ್ದಾಡುತ್ತಿದ್ದ ಮೊಸಳೆಯೊಂದು ಕೊನೆಗೂ ಬಂಧಮುಕ್ತವಾಗಿದ್ದು, ಪ್ರಾಣಿ ಪ್ರೇಮಿಯೊಬ್ಬರು ಮೊಸಳೆಯ ಕುತ್ತಿಗೆಯಲ್ಲಿದ್ದ ಟೈರ್‌ನ್ನು ತೆಗೆಯುವ ಮೂಲಕ ಮೊಸಳೆಯ ಶಾಪ ವಿಮೋಚನೆ ಮಾಡಿದ್ದಾರೆ. ಇಂಡೋನೇಷ್ಯಾದ ಸುಲಾವೆಸಿ ದ್ವೀಪದಲ್ಲಿ ಈ ಘಟನೆ ನಡೆದಿದೆ. 13.12 ಅಡಿ ಉದ್ದದ ಮೊಸಳೆ ಬೆಳೆದು ಗಾತ್ರ ಹೆಚ್ಚಾದಂತೆ ಕುತ್ತಿಗೆಯಲ್ಲಿರುವ ಟೈರ್‌ ಅದರ ಉಸಿರುಗಟ್ಟಿಸಬಹುದು ಎಂದು ಪಾಲು ನಗರದ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದರು. 

ಇದಕ್ಕೂ ಮೊದಲೇ ಮೊಸಳೆಯ ಕುತ್ತಿಗೆಯಲ್ಲಿದ್ದ ಟೈರ್‌ನ್ನು ತೆಗೆಯಲು ಹಲವು ಪ್ರಯತ್ನಗಳನ್ನು ನಡೆಸಲಾಗಿತ್ತು. ಮೊಸಳೆ ರಾಂಗ್ಲರ್ ಮತ್ತು ನ್ಯಾಷನಲ್ ಜಿಯೋಗ್ರಾಫಿಕ್ ಟಿವಿ(National Geographic TV) ನಿರೂಪಕ ಮ್ಯಾಟ್ ರೈಟ್  (Matt Wright) ಅವರು 2020ರಲ್ಲಿ ಈ ಮೊಸಳೆಯ ಕುತ್ತಿಗೆಯಲ್ಲಿದ್ದ ಟೈರ್‌ ಅನ್ನು ತೆಗೆಯುವ ಉದ್ದೇಶದಿಂದ ಇಂಡೋನೇಷ್ಯಾಕ್ಕೆ ತೆರಳಿದ್ದರು. ಆದರೆ ಅವರ ಪ್ರಯತ್ನ ಯಶಸ್ಸು ಕಾಣಲಿಲ್ಲ. 

ಇದೀಗ ಸ್ಥಳೀಯ ನಿವಾಸಿ ತಿಲಿ(Tili) ಎಂಬುವವರು ಮೊಸಳೆಯ ಕೊರಳಿನಲ್ಲಿದ್ದ ಟೈರ್ ಹೊರ ತೆಗೆದಿದ್ದಾರೆ. ನಾನು ಮೊಸಳೆ ಹಿಡಿಯಲು ಇಲ್ಲಿನ ಜನರ ಸಹಾಯ ಕೇಳುತ್ತಿದ್ದೆ ಆದರೆ ಅವರು ಹೆದರುತ್ತಿದ್ದರು. ಹೀಗಾಗಿ ನಾನೇ ಮೊಸಳೆಯನ್ನು ಹಿಡಿದೆ ಎಂದು 35 ವರ್ಷದ ಟಿಲಿ ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ (Reuters) ತಿಳಿಸಿದರು.

ತಿಲಿ ಮರದ ದಿಮ್ಮಿಗೆ ಹಗ್ಗವನ್ನು ಕಟ್ಟಿ ಬಲೆಯನ್ನು ನೀರಿನಲ್ಲಿ ಬಿಟ್ಟರು. ನಂತರ ಅದರಲ್ಲಿ ಜೀವಂತ ಕೋಳಿಗಳು ಮತ್ತು ಬಾತುಕೋಳಿಗಳನ್ನು ಬಿಟ್ಟರು. ಮೂರು ವಾರಗಳ ಕಾಲ ಮೊಸಳೆಗಾಗಿ ಕಾದ ಅವರಿಗೆ ಎರಡು ಪ್ರಯತ್ನಗಳಲ್ಲಿ ಮೊಸಳೆ ಅವರಿಂದ ತಪ್ಪಿಸಿಕೊಂಡಿತ್ತು. ಇದರಿಂದ ಮೊಸಳೆಯನ್ನು ಸೆರೆಹಿಡಿಯುವಲ್ಲಿ ನಾನು ಗಂಭೀರವಾಗಿಲ್ಲ ಎಂದು ಜನರು ಸಂಶಯ ವ್ಯಕ್ತಪಡಿಸಿದ್ದರು. ಪ್ರಾಣಿಗಳಿಗೆ ನೋಯಿಸುವುದನ್ನು ನಾನು ಸಹಿಸುವುದಿಲ್ಲ, ಅದು ಹಾವಾಗಿದ್ದರೂ ಸರಿ ನಾನು ಸಹಾಯ ಮಾಡುತ್ತೇನೆ ಎಂದು ತಿಲಿ ಹೇಳಿದರು.

ಇತ್ತ ಸೆರೆ ಸಿಕ್ಕ ಮೊಸಳೆಯ ಕುತ್ತಿಗೆಯಲ್ಲಿದ್ದ ಟೈರ್ ತೆಗೆಯಲು ಅವರು ಗರಗಸವನ್ನು ಬಳಸಿದರು. ಇದಕ್ಕೂ ಮೊದಲು 2020ರಲ್ಲಿ, ಇಂಡೋನೇಷ್ಯಾದ ಅಧಿಕಾರಿಗಳು ಮೊಸಳೆಯ ಕುತ್ತಿಗೆಯಲ್ಲಿದ್ದ ಟೈರ್ ತೆಗೆದವರಿಗೆ ಬಹುಮಾನ ಘೋಷಿಸಿದ್ದರು. ಮೊಸಳೆಯ ಕುತ್ತಿಗೆಯಲ್ಲಿ ಟೈರ್‌ ಇರುವುದನ್ನು  2016 ರಲ್ಲಿ ಅದು ಪಾಲು ನದಿಯಲ್ಲಿ ತಿರುಗುತ್ತಿದ್ದಾಗ ಗುರುತಿಸಲಾಗಿತ್ತು. ಅದು 2018 ರಲ್ಲಿ ಪಾಲುಗೆ ಅಪ್ಪಳಿಸಿದ ಸುನಾಮಿ ಮತ್ತು ಭೂಕಂಪದಿಂದ ಬದುಕುಳಿದಿತ್ತು. ಸ್ಥಳೀಯ ಜನರು ಇದನ್ನು 'ಬುಯಾ ಕಲುಂಗ್ ಬ್ಯಾನ್'  ಎಂದರೆ ಟೈರ್‌ನ್ನೇ ನೆಕ್ಲೆಸ್‌ ಆಗಿ ಧರಿಸಿರುವ ಮೊಸಳೆ ಎಂದು ಕರೆಯುತ್ತಿದ್ದರು. 

ಈ ಹಿಂದೆ ಈ ಮೊಸಳೆ ಗಾಳಿಗಾಗಿ ಏದುಸಿರು ಬಿಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಟೈರ್‌ನಿಂದಾಗಿ ಉಸಿರಾಡಲಾಗದೆ ಈ ಮೊಸಳೆ ಸಾಯಬಹುದು ಎಂದು ಜನ ಆತಂಕ ವ್ಯಕ್ತಪಡಿಸಿದ್ದರು. ಆದಾದ ಬಳಿಕ ಆ ಪ್ರಾಂತ್ಯದ ಗವರ್ನರ್ ಅವರು 13 ಅಡಿ ಮೊಸಳೆಯನ್ನು ಹೇಗೆ ರಕ್ಷಿಸಬಹುದು ಎಂಬುದನ್ನು ಕಂಡುಹಿಡಿಯಲು ತಮ್ಮ ಸಂಪನ್ಮೂಲ-ಸಂರಕ್ಷಣಾ ಸಂಸ್ಥೆಗೆ ಸೂಚನೆ ನೀಡಿದ್ದರು. ಅಲ್ಲದೇ ಟೈರ್‌ನ್ನು ಮೊಸಳೆ ಕುತ್ತಿಗೆಯಿಂದ ತೆಗೆದವರಿಗೆ ತಮ್ಮ ಸ್ವಂತ ಹಣವನ್ನು ನೀಡುವುದಾಗಿ ಹೇಳಿದ್ದರು.

Latest Videos
Follow Us:
Download App:
  • android
  • ios