Washington airport plane incident: ವಾಷಿಂಗ್ಟನ್ನ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ವೇ ಕಡೆಗೆ ಚಲಿಸುತ್ತಿದ್ದ ಎರಡು ಬೋಯಿಂಗ್ 737 ವಿಮಾನಗಳ ರೆಕ್ಕೆಗಳು ಪರಸ್ಪರ ಡಿಕ್ಕಿಯಾಗಿವೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
ವಾಷಿಂಗ್ಟನ್: ಇತ್ತೀಚೆಗೆ ಅಮೆರಿಕದ ವಾಯು ಸಂಚಾರ ನಿಯಂತ್ರಣ ಕೇಂದ್ರಗಳ ನಡುವಿನ ಸಂವಹನ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷದಿಂದಾಗ ದೇಶಾದ್ಯಂತ 11000 ಕ್ಕೂ ಹೆಚ್ಚು ವಿಮಾನಗಳ ಹಾರಾಟ ಹಠಾತ್ ನಿಂತು ಹೋದ ಘಟನೆ ಮಾಸುವ ಮುನ್ನವೇ ಇದೀಗ ವಾಷಿಂಗ್ಟನ್ನ ರೋನಾಲ್ಡ್ ರೇಗನ್ ವಾಷಿಂಗ್ಟನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ವಿಚಿತ್ರ ಘಟನೆ ನಡೆದಿದೆ.
ಹೌದು ಅಮೆರಿಕ ವಿಮಾನಗಳಿಗೆ ಪದೇಪದೆ ಕಂಟಕ ಎದುರಾಗುತ್ತಿದೆ. ಶುಕ್ರವಾರ ಟೇಕಾಫ್ ಆಗಲು ರನ್ವೇ ಕಡೆಗೆ ಚಲಿಸುತ್ತಿದ್ದ ಅಮೆರಿಕನ್ ಏರ್ಲೈನ್ಸ್ ಎರಡೂ ಬೋಯಿಂಗ್ 737 ವಿಮಾನಗಳ ರೆಕ್ಕೆಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡ ಘಟನೆ ನಡೆದಿದೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್(FAA) ತಿಳಿಸಿದೆ.
ಎರಡು ವಿಮಾನಗಳ ನಡುವೆ ಡಿಕ್ಕಿ ಆಗಿದ್ದು ಹೇಗೆ?
ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ವರದಿಯಾಗಿದೆ.
FAA ಹೇಳುವ ಪ್ರಕಾರ ಈ ದುರಂತ ಘಟನೆ ಶುಕ್ರವಾರ ಸಂಜೆ ಸುಮಾರು 5 ಗಂಟೆ ಸುಮಾರಿಗೆ ನಡೆದಿದೆ. ಅಮೆರಿಕನ್ ಏರ್ಲೈನ್ಸ್ನ 638ನೇ ವಿಮಾನವು ಆ ಸಮಯಕ್ಕೆ ಸರಿಯಾಗಿ ಡಲ್ಲಾಸ್ಗೆ ತೆರಳಬೇಕಿತ್ತು. ಅಂತೆಯೇ ಏರ್ಪೋರ್ಟ್ನಿಂದ ಟೇಕ್ ಆಫ್ ಆಗಿದೆ. ಇದೇ ವೇಳೆಗೆ ಚಿಕಾಗೋಗೆ ತೆರಳಬೇಕಿದ್ದ 2152 ನೇ ಇನ್ನೊಂದು ವಿಮಾನದ ರೆಕ್ಕೆಗೆ ಡಿಕ್ಕಿ ಹೊಡೆದಿದೆ. ಒಂದೇ ಸಮಯದಲ್ಲಿ ಎರಡೂ ವಿಮಾನಗಳು ಟೇಕಾಫ್ ಆಗಲು ರನ್ವೇ ಕಡೆಗೆ ಚಲಿಸುತ್ತಿದ್ದವು ಎಂದು 7News ವರದಿ ಮಾಡಿದೆ.
ಎರಡು ವಿಮಾನಗಳು ಪರಸ್ಪರ ರೆಕ್ಕೆಗಳ ನಡುವೆ ಘರ್ಷಣೆ ನಡೆಯುತ್ತಿದ್ದಂತೆ ದಿಗಿಲುಗೊಂಡ 638ನೇ ವಿಮಾನದ ಪೈಲಟ್ ಈ ಘಟನೆ ಬಗ್ಗೆ ತಕ್ಷಣ ವಿಮಾನ ನಿಲ್ದಾಣದ ವಾಯು ಸಂಚಾರ ನಿಯಂತ್ರಣ ಸಿಬ್ಬಂದಿಗೆ (ಏರ್ ಟ್ರಾಫಿಕ್ ಕಂಟ್ರೋಲರ್)ಗೆ ಮಾಹಿತಿ ನೀಡಿದ್ದಾರೆ. 'ನಮ್ಮ ವಿಮಾನದ ರೆಕ್ಕೆ ಪಕ್ಕದಲ್ಲಿ ಹಾರುತ್ತಿದ್ದ ವಿಮಾನ ಡಿಕ್ಕಿ ಹೊಡೆದಿದೆ ಎಂದು ಪೈಲಟ್ ಮಾಹಿತಿ ನೀಡಿದ್ದಾರೆ.
ವಿಮಾನದ ರೆಕ್ಕೆಯ ಬಾಗವೇ ಮುರಿದುಬಿತ್ತು! ಸಂಚಾರ ವಿಳಂಬ
ಎರಡು ವಿಮಾನಗಳ ಡಿಕ್ಕಿಯ ಪರಿಣಾಮವಾಗಿ ಒಂದು ವಿಮಾನದ ರೆಕ್ಕೆಯ ತುದಿಯಲ್ಲಿರುವ ಮೇಲೆಕ್ಕೆ ಬಾಗಿದ ವಿಂಗ್ಲೆಟ್ ಮುರಿದುಬಿದ್ದ ಪರಿಣಾಮ ಏರ್ ಟ್ರಾಫಿಕ್ ಕಂಟ್ರೋಲ್ ಸಿಬ್ಬಂದಿಯೊಂದಿಗೆ ನಡೆಸಿದ ಸಂಭಾಷಣೆಯ ಆಡಿಯೋದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಈ ಘಟನೆ ಬಳಿಕ ಮುರಿದುಬಿದ್ದಿದ್ದ ವಿಂಗ್ಲೆಟ್ ಅನ್ನು ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ. ನಂತರ ಎರಡೂ ವಿಮಾನಗಳು ತಮ್ಮ ನಿಗದಿತ ಪಾರ್ಕಿಂಗ್ ಸ್ಥಳಗಳಿಗೆ ಬಂದು ನಿಂತಿವೆ.
ಈ ಘಟನೆಯಿಂದಾಗ ಕೆಲಕಾಲ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಬೇಕಿದ್ದ ಮತ್ತೊಂದು ವಿಮಾನವನ್ನು ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡುವುದು ರದ್ದುಗೊಳಿಸುವಂತೆ ಸೂಚನೆ ನೀಡಲಾಯಿತು. ಇದರೊಂದಿಗೆ ವಿಮಾನ ನಿಲ್ದಾಣಕ್ಕೆ ಲ್ಯಾಂಡಿಂಗ್ ಆಗಬೇಕಿದ್ದ ಇತರ ವಿಮಾನಗಳಿಗೂ ಹಾರಾಟ ವಿಳಂಬವಾಗುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು.














