ಅಮೆರಿಕದ ನ್ಯೂ ಮೆಕ್ಸಿಕೋದಲ್ಲಿ ವೈದ್ಯಕೀಯ ತಪಾಸಣೆ ಮುಗಿಸಿ ಬರುತ್ತಿದ್ದ ಗರ್ಭಿಣಿ ಕೈದಿಯೊಬ್ಬಳು ಪೊಲೀಸರ ಕಣ್ತಪ್ಪಿಸಿ ವಾಹನದೊಂದಿಗೆ ಪರಾರಿಯಾಗಿದ್ದಾಳೆ. ಊಟಕ್ಕಾಗಿ ಪೊಲೀಸರು ವಾಹನ ನಿಲ್ಲಿಸಿದಾಗ ಚಾಲಕನ ಸೀಟಿಗೆ ಜಿಗಿದು ವಾಹನ ಚಲಾಯಿಸಿಕೊಂಡು ಹೋಗಿದ್ದು, ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದಾರೆ.
ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ಕರೆದೊಯ್ದಿದ್ದ ವೇಳೆ ಪೊಲೀಸರ ವಶದಿಂದ ಗರ್ಭಿಣಿ ಕೈದಿಯೊಬ್ಬಳು ಸಿನಿಮಾ ಶೈಲಿಯಲ್ಲಿ ಎಸ್ಕೇಪ್ ಆದ ಘಟನೆ ಅಮೆರಿಕದ ನ್ಯೂ ಮೆಕ್ಸಿಕೋದಲ್ಲಿ ನಡೆದಿದ್ದು, ಇಂಥದ್ದೊಂದು ಗ್ರೇಟ್ ಎಸ್ಕೇಪ್ ಗೆ ಪೊಲೀಸರೇ ದಂಗಾಗಿ ತಪ್ಪಿಸಿಕೊಂಡ ಕೈದಿಗಾಗಿ ಬೀದಿ ಬೀದಿ ಹುಡುಕಾಡುತ್ತಿದ್ದಾರೆ.
ಹೌದು ನವೆಂಬರ್ 25ರಂದು ರೆಬೆಕ್ಕಾ ಟೇಲರ್ (26) ಎಂಬ ಗರ್ಭಿಣಿ ಕೈದಿಯನ್ನು ವೈದ್ಯಕೀಯ ತಪಾಸಣೆಗಾಗಿ ಅಲ್ಬುಕರ್ಕ್ನ ಆಸ್ಪತ್ರೆಯೊಂದಕ್ಕೆ ಬಿಗಿಭದ್ರತೆಯಲ್ಲಿ ಕರೆದೊಯ್ದಿದ್ದರು. ಆದರೆ ತಪಾಸಣೆ ಮುಗಿಸಿ ಜೈಲಿನತ್ತ ವಾಪಸ್ ಕರೆತರುವಾಗ ಪೊಲೀಸರ ವಶದಿಂದ ಎಸ್ಕೇಪ್ ಆಗಿದ್ದಾಳೆ.
ಪೊಲೀಸರ ವಾಹನದೊಂದಿಗೆ ಪರಾರಿ!
ಕೈದಿ ರೆಬೆಕ್ಕಾ ಟೇಲರ್ ಗರ್ಭಿಣಿ ಹೆಂಗಸು. ಹೀಗಾಗಿ ಆರೋಗ್ಯ ತಪಾಸಣೆಗಾಗಿ ಪೊಲೀಸರು ಆಸ್ಪತ್ರೆಗೆ ಕರೆತಂದಿದ್ದಾರೆ. ಬಳಿಕ ಫಾಸ್ಟ್ಪುಡ್ ರೆಸ್ಟೋರೆಂಟ್ ಬಳಿ ವಾಹನ ನಿಲ್ಲಿಸಿದ್ದಾರೆ. ಅಲ್ಲೇ ಪೊಲೀಸರು ಯಾಮಾರಿದ್ದು. ಗರ್ಭಿಣಿ ಹೆಂಗಸು ಹೇಗೆ ತಪ್ಪಿಸಿಕೊಂಡಾಳು ಎಂಬ ನಂಬಿಕೆಯಿಂದ ರಸ್ತೆ ಮಧ್ಯ ವಾಹನ ನಿಲ್ಲಿಸಿ ಅಧಿಕಾರಿಗಳು ಕೆಳಗಿಳಿದಿದ್ದಾರೆ. ಆದರೆ ಕೈದಿ ರೆಬೆಕ್ಕಾ, ತಪ್ಪಿಸಿಕೊಳ್ಳಲು ಇದೇ ಸರಿಯಾದ ಸಮಯವೆಂದು ಹಿಂಬದಿ ಸಿಟಿನಿಂದ ನೇರವಾಗಿ ಚಾಲಕನ ಸೀಟಿಗೆ ಕುಳಿತು ವಾಹನವನ್ನು ಚಲಾಯಿಸಿಕೊಂಡು ಪರಾರಿಯಾಗಿದ್ದಾಳೆ. ಆದರೆ ಇಂಥದೊಂದು ಯತ್ನ ನಡೆಯುತ್ತದೆಂದು ಊಹಿಸದಿದ್ದ ಪೊಲೀಸ್ ಅಧಿಕಾರಿಗಳ ದಂಗಾಗಿದ್ದಾರೆ. ಘಟನೆ ಬಳಿಕ ಪೊಲೀಸರು ಹೈಅಲರ್ಟ್ ಆಗಿ ಇಡೀ ಅಲ್ಬುಕರ್ಕ್ ಪ್ರದೇಶದ ಪೊಲೀಸರಿಗೆ ಸೂಚನೆ ಹೋಗಿದೆ. ಹಲವು ತಂಡಗಳು ರಚಿಸಿ ತಪ್ಪಿಸಿಕೊಂಡಿರುವ ಗರ್ಭಿಣಿ ಕೈದಿಗಾಗಿ ಹುಡುಕಾಡಲಾರಂಭಿಸಿದ್ದಾರೆ.
ಕೈದಿ ರೆಬೆಕ್ಕಾಳನ್ನ ಅಲ್ಬುಕರ್ಕ್ನಿಂದ ಸುಮಾರು 80 ಮೈಲಿ ದೂರದಲ್ಲಿರುವ ಗ್ರ್ಯಾಂಟ್ಸ್ನ ವೆಸ್ಟರ್ನ್ ನ್ಯೂ ಮೆಕ್ಸಿಕೋ ಕಾರಾಗೃಹಕ್ಕೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಆಕೆಯೊಂದಿಗೆ ಮತ್ತೊಬ್ಬ ಮಹಿಳಾ ಕೈದಿ, ಮೂವರು ಜೈಲು ಅಧಿಕಾರಿಗಳಿದ್ದರು.
ವಾಟಾಬರ್ಗರ್ ರೆಸ್ಟೋರೆಂಟ್ ಬಳಿ ನಡೆದಿದ್ದೇನು?
KOAT ನ್ಯೂಸ್ ವರದಿ ಪ್ರಕಾರ, ನವೆಂಬರ್ 25ರಂದು ಸ್ಥಳೀಯ ಸಮಯ ಬೆಳಗ್ಗೆ ಸುಮಾರು 11.35ಕ್ಕೆ ಅಲ್ಬುಕರ್ಕ್ನ 98ನೇ ಸ್ಟ್ರೀಟ್ NW ಬಳಿಯ ವಾಟಾಬರ್ಗರ್ ರೆಸ್ಟೋರೆಂಟ್ ಬಳಿ ಅಧಿಕಾರಿಗಳ ತಂಡ ಊಟಕ್ಕಾಗಿ ವಾಹನ ನಿಲ್ಲಿಸಿದ್ದರು. ಇದೇ ವೇಳೆ ರೆಬೆಕ್ಕಾ ಟೇಲರ್ ತನ್ನ ಸೀಟ್ ಬೆಲ್ಟ್ ತೆಗೆದು ಹಿಂಬದಿ ಕುಳಿತಿದ್ದ ಸೀಟಿನಿಂದ ಎದ್ದು ಚಾಲಕನ ಸೀಟಿಗೆ ಬಂದು ಕುಳಿತಿದ್ದಾಳೆ. ಡ್ರೈವಿಂಗ್ ನಲ್ಲಿ ಮೊದಲೇ ತರಬೇತಿ ಪಡೆದಿರುವ ರೆಬೆಕ್ಕಾ ಡಾಡ್ಜ್ ಜರ್ನಿ ಎಸ್ಯುವಿ ವೆಹಿಕಲ್ ಡ್ರೈವ್ ಮಾಡಿಕೊಂಡು ಪರಾರಿಯಾಗಿದ್ದಾಳೆ. ರೆಬೆಕ್ಕಾ ಗರ್ಭಿಣಿಯಾಗಿದ್ದ ಕಾರಣ ಅವಳಿಗೆ ಪ್ರಯಾಣದ ವೇಳೆ ಕೈಕೋಳ ಹಾಕಿರಲಿಲ್ಲ ಎಂದು ಕಾರಾಗೃಹ ಇಲಾಖೆ ವಕ್ತಾರೆ ಬ್ರಿಟಾನಿ ರೋಂಬಾಕ್ ತಿಳಿಸಿದ್ದಾರೆ.
ಈ ನಡುವೆ ವಾಹನದಲ್ಲಿ ಕುಳಿತಿದ್ದ ಇನ್ನಿಬ್ಬರು ಮಹಿಳಾ ಕೈದಿಗಳು ಅಚ್ಚರಿ ರೀತಿಯಲ್ಲಿ ವಾಹನದಿಂದ ಕೆಳಗಿಳಿದಿದ್ದಾರೆ. ಇಬ್ಬರು ಕೈದಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರೆಬೆಕ್ಕಾ ಧರಿಸಿದ್ದ ಸಮವಸ್ತ್ರ ಪತ್ತೆ
ರೆಬೆಕ್ಕಾ ಎಂಥ ಚಾಲಕಿ ಹೆಂಗಸು ಎಂದರೆ ಎಸ್ಕೇಪ್ ಆದ ಬಳಿಕ ಮೊದಲು ತಾನು ಧರಿಸಿದ್ದ ಕೈದಿ ಸಮವಸ್ತ್ರ ಬಿಸಾಡಿದ್ದಾಳೆ. ಇತ್ತ ಆಕೆಗಾಗಿ ಹುಡುಕಾಡುತ್ತಿರುವ ಪೊಲೀಸರಿಗೆ 98ನೇ ಸ್ಟ್ರೀಟ್ ಮತ್ತು ರಿಯೊ ಬ್ರಾವೊ ಬೌಲೆವಾರ್ಡ್ ಬಳಿ ಆಕೆ ಧರಿಸಿದ್ದ ಕಿತ್ತಳೆ ಬಣ್ಣದ ಜೈಲು ಸಮವಸ್ತ್ರ ಪತ್ತೆಯಾಗಿದೆ. ಇದಲ್ಲದೆ ಅಲಮೋಸಾ ಪಾರ್ಕ್ ಬಳಿ ಜೈಲು ಅಧಿಕಾರಿಗಳ ತಂಡದ ಮೊಬೈಲ್ ಫೋನ್ ಕೂಡ ಪತ್ತೆಯಾಗಿದ್ದು, ಅದನ್ನು ನ್ಯೂ ಮೆಕ್ಸಿಕೋ ರಾಜ್ಯ ಪೊಲೀಸರಿಗೆ ಒಪ್ಪಿಸಲಾಗಿದೆ.
ಎಲ್ಲ ಕಡೆ ಹುಡುಕಾಡಿದರೂ ಸಿಗದ ರೆಬೆಕ್ಕಾ!
ಎಸ್ಕೇಪ್ ಆಗಿರುವ ಕೈದಿ ರೆಬೆಕ್ಕಳಿಗಾಗಿ ಇಡೀ ಪೊಲೀಸ್ ತಂಡವೇ ಹುಡುಕಾಡುತ್ತಿದೆ. ಇದಕ್ಕೆಂದೇ ಹಲವು ಟೀಂ ಗಳನ್ನ ಪೊಲೀಸ್ ಇಲಾಖೆ ರಚಿಸಿದೆ. ಗ್ರೇಹೌಂಡ್ ಬಸ್ಗಳು, ಆಮ್ಟ್ರಾಕ್ ರೈಲು ಸೇರಿದಂತೆ ಎಲ್ಲ ಸಾರ್ವಜನಿಕ ಸಾರಿಗೆ ವಾಹನಗಳಲೆಲ್ಲ ಹುಡುಕಾಡುತ್ತಿದ್ದಾರೆ. ಆಕೆಗಾಗಿ ನಡೆದಿರುವ ಈ ಶೋಧ ಕಾರ್ಯದಲ್ಲಿ ನ್ಯೂ ಮೆಕ್ಸಿಕೋ ರಾಜ್ಯ ಪೊಲೀಸರಷ್ಟೇ ಅಲ್ಲದೆ, ಅಲ್ಬುಕರ್ಕ್ ಪೊಲೀಸರು, ಬರ್ನಾಲಿಲ್ಲೊ ಕೌಂಟಿ ಶೆರಿಫ್ ಕಚೇರಿ, ಅಮೆರಿಕದ ಮಾರ್ಷಲ್ಸ್ ಸರ್ವಿಸ್ ಕೂಡ ತೊಡಗಿಕೊಂಡಿದೆ ಎಂದರೆ ರೆಬೆಕ್ಕಾ ಎಂಥ ಖತರ್ನಾಕ್ ಕೈದಿ ಇದ್ದಿರಬಹುದು.














