ಅವಳಿ ಮಕ್ಕಳಿಗೆ ಬೇರೆ ಬೇರೆ ಅಪ್ಪ ಎಂದರೆ ನಂಬುವುದು ಬಲು ಕಷ್ಟವೇ. ಅಂಥ ಘಟನೆಯೊಂದು ನಡೆದಿದೆ. ಇದು ಹೇಗೆ ಸಾಧ್ಯ? ಮಹಿಳೆಗೆ ಆಗಿದ್ದೇನು? ಇಲ್ಲಿದೆ ಡಿಟೇಲ್ಸ್​... 

ಜಗತ್ತಿನಲ್ಲಿ ಏನೇನೋ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲವೊಂದು ಘಟನೆಗಳನ್ನು ನೋಡಿದಾಗ ನಿಜಕ್ಕೂ ಇವೆಲ್ಲಾ ಸಾಧ್ಯನಾ ಅಥವಾ ಬರಿಯ ಕಲ್ಪನೆಯಾ ಎಂದು ಎನ್ನಿಸುವುದು ಉಂಟು. ಅದರಲ್ಲಿಯೂ ವೈದ್ಯಕೀಯ ಲೋಕದಲ್ಲಿ ಇಂಥ ವಿಚಿತ್ರಗಳು ನಡೆಯುತ್ತಲೇ ಇರುತ್ತವೆ. ಇದೀಗ ಅಂಥದ್ದೇ ಒಂದು ಘಟನೆ ವರದಿಯಾಗಿದೆ. ಕೆಲ ವರ್ಷಗಳ ಹಿಂದೆ ಸದ್ದು ಮಾಡಿದ್ದ ಈ ಘಟನೆ ಮತ್ತೆ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗ್ತಿದೆ. ಅಷ್ಟಕ್ಕೂ ಇದರಲ್ಲಿ ಅವಳಿ-ಜವಳಿ ಮಕ್ಕಳಿಗೆ ಬೇರೆ ಬೇರೆ ಅಪ್ಪಂದಿರು ಎನ್ನುವ ಸುದ್ದಿ ಇದು!

ಅಯ್ಯಬ್ಬಾ ಇದ್ಹೇಗೆ ಸಾಧ್ಯ ಎಂದು ಬಹುತೇಕ ಎಲ್ಲರೂ ಹುಬ್ಬೇರಿಸಬಹುದು. ಆದರೆ ಬ್ರೆಜಿಲ್​ನಲ್ಲಿ ಈ ಘಟನೆ ನಡೆದಿದೆ. 19 ವರ್ಷದ ಯುವತಿ ಇಂಥದ್ದೊಂದು ವಿಚಿತ್ರ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಬ್ರೆಜಿಲ್‌ನ ಗೋಯಾಸ್‌ನಲ್ಲಿರುವ ಮಿನೆರಿಯೊಸ್‌ನ ಮಹಿಳೆ ಈಕೆ. ಇವಳ ಪ್ರಕಾರ ಇವಳು, ಒಂದೇ ದಿನ ಇಬ್ಬರು ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಳಂತೆ. ಆ ಬಳಿಕ ಗರ್ಭ ಧರಿಸಿದ್ದಾಳೆ. ಮಗುವಿನ ಅಪ್ಪ ಯಾರು ಎನ್ನುವುದು ಕನ್​ಫ್ಯೂಸ್​ ಆಗಿದೆ. ಇದೇ ಕಾರಣಕ್ಕೆ ತಂದೆ ಯಾರೆಂದು ದೃಢೀಕರಿಸಲು ಅವಳು ಪಿತೃತ್ವ ಪರೀಕ್ಷೆ ಅರ್ಥಾತ್​ ಡಿಎನ್​ಎ ಪರೀಕ್ಷೆ ಮಾಡಿಸಿದ್ದಾಳೆ. ಅದನ್ನು ನೋಡಿ ಅವಳಿಗೇ ಗಾಬರಿಯಾಗಿದೆ. ಏಕೆಂದರೆ, ಒಂದು ಮಗುವಿನ ಡಿಎನ್​ಎ ಒಂದು ಗಂಡಸಿನದ್ದು, ಇನ್ನೊಂದು ಮತ್ತೊಂದು ಗಂಡಸಿನದ್ದು ಆಗಿದೆ.

ಎರಡು ವಿಭಿನ್ನ ಜೈವಿಕ ತಂದೆಗಳೊಂದಿಗೆ ಅವಳಿ ಮಕ್ಕಳಿಗೆ ಜನ್ಮ ನೀಡುವ ಜೈವಿಕ ವಿದ್ಯಮಾನವನ್ನು ಹೆಟೆರೊಪಿಟರ್ನಲ್ ಸೂಪರ್‌ಫೆಕಂಡೇಶನ್ ಎಂದು ಕರೆಯಲಾಗುತ್ತದೆ. ಋತುಚಕ್ರದ ಸಮಯದಲ್ಲಿ ಬಿಡುಗಡೆಯಾಗುವ ಎರಡನೇ ಅಂಡಾಣುವು ಪ್ರತ್ಯೇಕ ಲೈಂಗಿಕ ಸಂಭೋಗದಿಂದ ಬೇರೆ ಪುರುಷನ ವೀರ್ಯ ಕೋಶಗಳಿಂದ ಫಲವತ್ತಾದಾಗ ಇದು ಸಂಭವಿಸುತ್ತದೆ. ಸುಲಭದಲ್ಲಿ ಹೇಳಬೇಕು ಎಂದರೆ, ಮಹಿಳೆಯಲ್ಲಿ ಒಂದು ಅಂಡಾಣು ಬದಲು ಎರಡು ಅಂಡಾಣುಗಳು ಬಿಡುಗಡೆಯಾದ ತಿಂಗಳಲ್ಲಿ ಇಂಥದೊಂದು ಅಚ್ಚರಿ ಘಟಿಸಲು ಅವಕಾಶವಿದೆ. ಈ ಎರಡೂ ಅಂಡಾಣುಗಳು ಇಬ್ಬರು ಪುರುಷರ ವೀರ್ಯಾಣುಗಳಿಂದ ಫಲಿತಗೊಂಡರೆ ಮಹಿಳೆ ಜನ್ಮ ನೀಡುವ ಅವಳಿಗಳ ತಂದೆ ಬೇರೆ ಬೇರೆಯಾಗಿರುವ ಸಾಧ್ಯತೆಯಿದೆ ಎನ್ನುತ್ತಾರೆ ವೈದ್ಯರು.

ವೈದ್ಯರ ಪ್ರಕಾರ, ಈ ಪ್ರಕರಣವು ಅತ್ಯಂತ ಅಪರೂಪ ಮತ್ತು ಮಿಲಿಯನ್‌ನಲ್ಲಿ ಒಂದು ಪ್ರಕರಣ ಮಾತ್ರ ಸಂಭವಿಸುತ್ತದೆ. ಮಾನವರಲ್ಲಿ ಈ ವಿದ್ಯಮಾನ ಅಪರೂಪವಾಗಿದ್ದರೂ, ನಾಯಿಗಳು, ಬೆಕ್ಕುಗಳು ಮತ್ತು ಹಸುಗಳಲ್ಲಿ ಹೆಟೆರೊಪಿಟರ್ನಲ್ ಸೂಪರ್‌ಫೆಕಂಡೇಶನ್ ಸಾಮಾನ್ಯವಾಗಿದೆ.