ಟರ್ಬ್ಯುಲೆನ್ಸ್ ದುರಂತ: ಸಿಂಗಾಪುರ್ ಏರ್‌ಲೈನ್ಸ್ ಘಟನೆ ಮತ್ತು ವಿಮಾನಯಾನದ ಭವಿಷ್ಯ
ಗಾಳಿಯ ಸಂಚಾರ ಇದ್ದಕ್ಕಿದ್ದ ಹಾಗೇ ಅಸಮ ಮತ್ತು ಅಸ್ತವ್ಯಸ್ತಗೊಂಡಾಗ ಟರ್ಬ್ಯುಲೆನ್ಸ್ ಉಂಟಾಗುತ್ತದೆ. ಎಡ್ಡಿ ಎಂದು ಕರೆಯಲಾಗುವ ಸುತ್ತುವ ಗಾಳಿಯ ಮಾದರಿ ಮತ್ತು ಗಾಳಿಯ ಮೇಲು ಕೆಳಗಿನ ಚಲನೆ ಟರ್ಬ್ಯುಲೆನ್ಸ್‌ಗೆ ಕಾರಣವಾಗುತ್ತದೆ.
ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಮೇ 21ರಂದು, ಲಂಡನ್ನಿನಿಂದ ಸಿಂಗಾಪುರಕ್ಕೆ ತೆರಳುತ್ತಿದ್ದ ವಿಮಾನ ತೀವ್ರ ಪ್ರಮಾಣದ ವಾಯು ಪ್ರಕ್ಷುಬ್ಧತೆಯನ್ನು (ಏರ್ ಟರ್ಬ್ಯುಲೆನ್ಸ್) ಎದುರಿಸಿತು. ಇದರ ಪರಿಣಾಮವಾಗಿ, ಓರ್ವ ಪ್ರಯಾಣಿಕ ಸಾವಿಗೀಡಾದರೆ, ಹಲವಾರು ಪ್ರಯಾಣಿಕರು ಗಾಯಗೊಂಡರು. ಇಂತಹ ಘಟನೆಗಳು ಸಾಮಾನ್ಯವಾಗಿದ್ದು, ಟರ್ಬ್ಯುಲೆನ್ಸ್ ಎನ್ನುವುದು ವಿಮಾನ ನೆಗೆಯುವಂತೆ ಮಾಡುತ್ತದೆ. ಆದರೆ ವಿಜ್ಞಾನಿಗಳು ಭವಿಷ್ಯದಲ್ಲಿ ನಾವು ಇನ್ನೂ ಹೆಚ್ಚು ಇಂತಹ ಪ್ರಕ್ಷುಬ್ಧತೆಗಳನ್ನು ಕಾಣುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
'ಟರ್ಬ್ಯುಲೆನ್ಸ್ ಪದದ ಅರ್ಥವೇನು?: ಗಾಳಿಯ ಸಂಚಾರ ಇದ್ದಕ್ಕಿದ್ದ ಹಾಗೇ ಅಸಮ ಮತ್ತು ಅಸ್ತವ್ಯಸ್ತಗೊಂಡಾಗ ಟರ್ಬ್ಯುಲೆನ್ಸ್ ಉಂಟಾಗುತ್ತದೆ. ಎಡ್ಡಿ ಎಂದು ಕರೆಯಲಾಗುವ ಸುತ್ತುವ ಗಾಳಿಯ ಮಾದರಿ ಮತ್ತು ಗಾಳಿಯ ಮೇಲು ಕೆಳಗಿನ ಚಲನೆ ಟರ್ಬ್ಯುಲೆನ್ಸ್‌ಗೆ ಕಾರಣವಾಗುತ್ತದೆ. ಗುಡುಗು ಸಿಡಿಲುಗಳು, ದಪ್ಪವಾದ ಮೋಡಗಳು ಮತ್ತು ಪರ್ವತಗಳೂ ಟರ್ಬ್ಯುಲೆನ್ಸ್ ಪರಿಸ್ಥಿತಿಯನ್ನು ಉಂಟುಮಾಡುತ್ತವೆ. ಸುತ್ತುವ ಗಾಳಿಯ ಮಾದರಿ (ಸ್ವಿರ್ಲಿಂಗ್ ಏರ್ ಪ್ಯಾಟರ್ನ್) ಎಂದರೆ ವೃತ್ತಾಕಾರವಾಗಿ ಅಥವಾ ಸುರುಳಿಯಾಕಾರದಲ್ಲಿ ಗಾಳಿಯ ಚಲನೆಯಾಗಿದೆ. ಇದರ ಪರಿಣಾಮವಾಗಿ, ಗಾಳಿ ಊಹಿಸಲು ಸಾಧ್ಯವಿಲ್ಲದ ರೀತಿಯಲ್ಲಿ ಚಲಿಸಿ, ಟರ್ಬ್ಯುಲೆನ್ಸ್ ಉಂಟುಮಾಡುತ್ತದೆ.
ರಾಜ ವೈಭವದಿಂದ ಕೆಂಪು ದೀಪದ ತನಕ: ಹೀರಾ ಮಂಡಿಯ ಏಳು ಬೀಳಿನ ಹಾದಿ
ಆಗಸದಲ್ಲಿ ಚಲಿಸುತ್ತಿರುವ ವಿಮಾನವೊಂದು ಟರ್ಬ್ಯುಲೆನ್ಸ್ ಅನ್ನು ಎದುರಿಸಿದಾಗ, ಅದರ ಎತ್ತರ ಇದ್ದಕ್ಕಿದ್ದಂತೆ ಕಡಿಮೆಯಾಗಬಹುದು. ಇದು ಒಂದು ರೀತಿ ರಸ್ತೆ ಹೊಂಡಕ್ಕೆ ಕಾರ್ ಚಕ್ರ ಇಳಿದ ರೀತಿಯಲ್ಲಿ ಭಾಸವಾಗುತ್ತದೆ. ರಸ್ತೆ ಹೊಂಡಗಳು ಕಾರ್ ಪ್ರಯಾಣವನ್ನು ನೆಗೆಯುವಂತೆ, ಅಲುಗಾಡುವಂತೆ ಮಾಡುವ ರೀತಿಯಲ್ಲೇ, ಟರ್ಬ್ಯುಲೆನ್ಸ್ ವಿಮಾನ ಪ್ರಯಾಣ ಕಷ್ಟಕರವಾಗುವಂತೆ ಮಾಡುತ್ತದೆ. ಟರ್ಬ್ಯುಲೆನ್ಸ್ ಎಷ್ಟು ಬಲವಾಗಿದೆ ಎನ್ನುವುದರ ಆಧಾರದಲ್ಲಿ ವಿಮಾನದ ಅಲುಗಾಡುವಿಕೆ ಸಂಭವಿಸುತ್ತದೆ.
ಹೆಚ್ಚಿನ ಸಂದರ್ಭಗಳಲ್ಲಿ, ಟರ್ಬ್ಯುಲೆನ್ಸ್‌ಗಳು ಲಘುವಾಗಿರುತ್ತವೆ. ಪೈಲಟ್‌ಗಳು ಕೆಲವು ನಿರ್ದಿಷ್ಟ ಪ್ರಕ್ರಿಯೆಗಳು ಅಥವಾ ನಿಯಮಗಳನ್ನು ಪಾಲಿಸಿ, ಟರ್ಬ್ಯುಲೆನ್ಸ್ ಅನ್ನು ತಪ್ಪಿಸಲು ಪ್ರಯತ್ನ ಪಡುತ್ತಾರೆ. ಪೈಲಟ್‌ಗಳು ಸಾಮಾನ್ಯವಾಗಿ ಹೆಚ್ಚಿನ ಎತ್ತರದಲ್ಲಿ ಹಾರಾಟ ನಡೆಸಿ, ಹವಾಮಾನ ವರದಿಗಳನ್ನು, ಮುನ್ಸೂಚನೆಗಳನ್ನು ಗಮನಿಸಿ, ವಿಮಾನದಲ್ಲಿರುವ ರೇಡಾರ್ ಮಾಹಿತಿಗಳನ್ನು ಅನುಸರಿಸಿ, ಟರ್ಬ್ಯುಲೆನ್ಸ್ ಇರುವ ಪ್ರದೇಶಗಳಿಂದ ದೂರವಾಗಿ ಚಲಿಸುತ್ತಾರೆ. ಅದರೊಡನೆ, ಪೈಲಟ್‌ಗಳಿಗೆ ವಿಮಾನದ ಮುಂಭಾಗದ ದೊಡ್ಡ ಗಾಜಿನ ಮೂಲಕ ದೂರದಿಂದಲೇ ಬಿರುಗಾಳಿಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.
ಟರ್ಬ್ಯುಲೆನ್ಸ್ ಅನ್ನು ತಪ್ಪಿಸುವ ಸಲುವಾಗಿ, 'ಹೆಚ್ಚಿನ ಎತ್ತರದಲ್ಲಿ ಚಲಿಸುವುದು' ಎಂದರೆ, ಸಾಮಾನ್ಯವಾಗಿ ವಿಮಾನ 30,000 ಅಡಿಗಳಷ್ಟು ಎತ್ತರದಲ್ಲಿ (9,144 ಮೀಟರ್) ಚಲಿಸುತ್ತದೆ. ಸಾಮಾನ್ಯವಾಗಿ ವಾಣಿಜ್ಯ ವಿಮಾನಗಳು ಈ ಎತ್ತರದಲ್ಲಿ ಚಲಿಸುತ್ತವೆ. ಇಷ್ಟು ಎತ್ತರದಲ್ಲಿ, ಗಾಳಿ ಹೆಚ್ಚು ಸ್ಥಿರವಾಗಿದ್ದು, ಟರ್ಬ್ಯುಲೆನ್ಸ್ ಎದುರಾಗುವ ಸಾಧ್ಯತೆಗಳು ಕಡಿಮೆಯಿರುತ್ತವೆ.
ಕ್ಲಿಯರ್ ಏರ್ ಟರ್ಬ್ಯುಲೆನ್ಸ್ (ಸಿಎಟಿ) ಎಂದು ಕರೆಯಲಾಗುವ ಒಂದು ಮಾದರಿಯ ಟರ್ಬ್ಯುಲೆನ್ಸ್ ಅನ್ನು ಹವಾಮಾನ ರೇಡಾರ್‌ಗಳಿಂದ ಗುರುತಿಸಲು ಸಾಧ್ಯವಾಗುವುದಿಲ್ಲ. ಇದು ಸಾಮಾನ್ಯವಾಗಿ ತಂಗಾಳಿ ಮತ್ತು ಬಿಸಿ ಗಾಳಿ ಮಿಳಿತವಾಗುವ ಜೆಟ್ ಸ್ಟ್ರೀಮ್‌ಗಳಲ್ಲಿ ಸಂಭವಿಸುತ್ತದೆ. ಸಿಎಟಿ ಯಾವುದೇ ರೀತಿಯ ಮುನ್ಸೂಚನೆ ಇಲ್ಲದೆ, ಇದ್ದಕ್ಕಿದ್ದಂತೆ ಸಂಭವಿಸುವುದರಿಂದ, ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಶನ್ (ಎಫ್ಎಎ) ಈ ಟರ್ಬ್ಯುಲೆನ್ಸ್ ಅನ್ನು ಅತ್ಯಂತ ತೊಂದರೆದಾಯಕ ಎಂದು ಪರಿಗಣಿಸಿದೆ.
ಜೆಟ್ ಸ್ಟ್ರೀಮ್ಸ್ ಎಂದರೆ, ವಾತಾವರಣದ ಮೇಲ್ಭಾಗದಲ್ಲಿ ಅತ್ಯಂತ ವೇಗವಾಗಿ ಚಲಿಸುವ ಗಾಳಿಯ ಪ್ರವಾಹವಾಗಿದೆ. ತಣ್ಣಗಿನ ಮತ್ತು ಬೆಚ್ಚಗಿನ ಗಾಳಿಗಳು ಒಂದಕ್ಕೊಂದು ಬೆರೆತಾಗ, ಈ ಜೆಟ್ ಸ್ಟ್ರೀಮ್‌ಗಳಲ್ಲಿ ಕ್ಲಿಯರ್ ಏರ್ ಟರ್ಬ್ಯುಲೆನ್ಸ್ (ಸಿಎಟಿ) ಉಂಟಾಗುತ್ತದೆ. ಎರಡು ಗಾಳಿಗಳ ನಡುವಿನ ತಾಪಮಾನದ ವ್ಯತ್ಯಾಸ ಮತ್ತು ಅವುಗಳ ವೇಗದ ಪರಿಣಾಮವಾಗಿ, ಕ್ಷಿಪ್ರವಾದ, ಊಹಿಸಲಾಸಧ್ಯವಾದ ಗಾಳಿಯ ಚಲನೆ ಉಂಟಾಗುತ್ತದೆ. ಇದರಿಂದಾಗಿ ಕಣ್ಣಿನಿಂದ ನೋಡಲು ಸಾಧ್ಯವಿಲ್ಲದ, ರೇಡಾರ್‌ನಿಂದಲೂ ಗುರುತಿಸಲಾಗದ ಟರ್ಬ್ಯುಲೆನ್ಸ್ ಉಂಟಾಗುತ್ತದೆ.
ಟರ್ಬ್ಯುಲೆನ್ಸ್ ಉಂಟಾದಾಗ ಹಾರಾಟ ನಡೆಸುವುದು ಅಪಾಯಕಾರಿಯೇ?: ಸಂಭಾವ್ಯ ಟರ್ಬ್ಯುಲೆನ್ಸ್ ಕಾರಣದಿಂದ, ಬಹಳಷ್ಟು ವಿಮಾನಯಾನ ಸಂಸ್ಥೆಗಳು ತಮ್ಮ ಪ್ರಯಾಣಿಕರಿಗೆ ವಿಮಾನ ಟೇಕಾಫ್ ಆಗುವ ಮುನ್ನ ಸೀಟ್ ಬೆಲ್ಟ್‌ಗಳನ್ನು ಧರಿಸುವಂತೆ, ಮತ್ತು ಅವರ ಬ್ಯಾಗ್‌ಗಳನ್ನು ಸುರಕ್ಷಿತವಾಗಿ ಇಡುವಂತೆ ಸಲಹೆ ಮಾಡುತ್ತವೆ. ಒಂದು ವೇಳೆ ವಿಮಾನ ಏನಾದರೂ ಟರ್ಬ್ಯುಲೆನ್ಸ್‌ಗೆ ಎದುರಾಗಿ, ಅದರ ಹಾರಾಟದ ಎತ್ತರ ಇದ್ದಕ್ಕಿದ್ದಂತೆ ಕಡಿಮೆಯಾದರೆ, ಆ ಕ್ಷಿಪ್ರ ಚಲನೆ ಪ್ರಯಾಣಿಕರು ಮತ್ತು ಅವರ ಚೀಲಗಳ ಮೇಲೆ ಗುರುತ್ವಾಕರ್ಷಣೆಗಿಂತಲೂ ಹೆಚ್ಚಿನ ಪ್ರಭಾವ ಬೀರುತ್ತದೆ.
ರೀಡಿಂಗ್ ವಿಶ್ವವಿದ್ಯಾಲಯದ ಹವಾಮಾನ ವಿಜ್ಞಾನ ಉಪನ್ಯಾಸಕರಾದ ಪಾಲ್ ವಿಲಿಯಮ್ಸ್ ಅವರು ಟರ್ಬ್ಯುಲೆನ್ಸ್ ಕುರಿತು ವಿವರಿಸುತ್ತಾ, ಟರ್ಬ್ಯುಲೆನ್ಸ್ ಎದುರಾಗುವ ಸಂದರ್ಭದಲ್ಲಿ, ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಿರದಿದ್ದರೆ, ಅವರು ವಿಮಾನದೊಳಗೆ ಅತ್ತಿಂದಿತ್ತ ಎಸೆಯಲ್ಪಡುವ ಸಾಧ್ಯತೆಗಳು ಹೆಚ್ಚಿವೆ ಎಂದಿದ್ದಾರೆ. ಕೆಲವು ಸಂದರ್ಭಗಳಲ್ಲಿ, ಪ್ರಯಾಣಿಕರು ತಮ್ಮ ಆಸನಗಳಿಂದ ಕ್ಷಿಪಣಿಯ ರೀತಿ ಉಡಾವಣೆಗೊಳ್ಳುವ ಅಪಾಯಗಳೂ ಇರುತ್ತವೆ ಎಂದು ಅವರು ವಿವರಿಸುತ್ತಾರೆ. ಇದರಿಂದಾಗಿ ನಿಮಗೆ ಮತ್ತು ನಿಮ್ಮ ಸುತ್ತಲಿನ ಪ್ರಯಾಣಿಕರಿಗೆ, ಅದರಲ್ಲೂ ಮೇಲಕ್ಕೆ ಚಿಮ್ಮಿ ಕೆಳಗೆ ಬೀಳುವಾಗ, ಗಾಯಗಳಾಗುವ ಸಂಭವನೀಯತೆಗಳಿವೆ.
ಇತ್ತೀಚಿನ ಸಿಂಗಾಪುರ್ ಏರ್‌ಲೈನ್ಸ್ ಘಟನೆಯ ರೀತಿಯಲ್ಲಿ, ಇದು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದಾದರೂ, ಟರ್ಬ್ಯುಲೆನ್ಸ್‌ಗೆ ಸಂಬಂಧಿಸಿದಂತೆ ಪ್ರಯಾಣಿಕರಿಗೆ ಗಾಯಗಳಾಗುವುದು, ಸಾವು ಸಂಭವಿಸಬಹುದು ಅತ್ಯಂತ ಅಪರೂಪವಾಗಿದೆ. ಎಫ್ಎಎ ವರದಿಗಳ ಪ್ರಕಾರ, 2009ರಿಂದ 2022ರ ತನಕ, ಟರ್ಬ್ಯುಲೆನ್ಸ್ ಕಾರಣದಿಂದ ಕೇವಲ 163 ಗಂಭೀರ ಗಾಯಗಳು ಸಂಭವಿಸಿವೆ. ಒಂದೇ ವರ್ಷದಲ್ಲಿ ಸಂಭವಿಸಿದ ಅತ್ಯಧಿಕ ಗಾಯಗಳ ಸಂಖ್ಯೆ 18 ಆಗಿದ್ದವು.
ಟರ್ಬ್ಯುಲೆನ್ಸ್ ಈಗ ಹೆಚ್ಚು ಹೆಚ್ಚಾಗಿ ಸಂಭವಿಸುತ್ತಿದೆಯೇ?: ಕೆಲವು ವಿಜ್ಞಾನಿಗಳ ಪ್ರಕಾರ, ಹವಾಮಾನ ಬದಲಾವಣೆಯ ಕಾರಣದಿಂದಾಗಿ, ಟರ್ಬ್ಯುಲೆನ್ಸ್, ಅದರಲ್ಲೂ ಕ್ಲಿಯರ್ ಏರ್ ಟರ್ಬ್ಯುಲೆನ್ಸ್ (ಸಿಎಟಿ) ಹೆಚ್ಚು ಹೆಚ್ಚು ಸಾಮಾನ್ಯವಾಗುವ ಸಾಧ್ಯತೆಗಳಿವೆ. ಒಂದು ಅಧ್ಯಯನದ ಪ್ರಕಾರ, ಈ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಪಾಲ್ ವಿಲಿಯಮ್ಸ್ ಅವರ ನೇತೃತ್ವದಲ್ಲಿ, ರೀಡಿಂಗ್ ವಿಶ್ವವಿದ್ಯಾಲಯದ ಒಂದು ತಂಡ ಕಳೆದ 40 ವರ್ಷಗಳ ಅವಧಿಯಲ್ಲಿ, ಜಾಗತಿಕವಾಗಿ ಕ್ಲಿಯರ್ ಏರ್ ಟರ್ಬ್ಯುಲೆನ್ಸ್ (ಸಿಎಟಿ) ಪ್ರಕ್ರಿಯೆಯನ್ನು ಅಧ್ಯಯನ ನಡೆಸಿದೆ.
ಅಮೆರಿಕಾ ಪ್ರಾಬಲ್ಯದೆದುರು ಭಾರತದ ಸ್ವಾಯತ್ತತೆ ರಕ್ಷಿಸಲು ಮೋದಿ ಪ್ರಯತ್ನ
ಅವರ ಸಂಶೋಧನೆಯ ಪ್ರಕಾರ, 1979ಕ್ಕೆ ಹೋಲಿಸಿದರೆ, 2020ರ ವೇಳೆಗೆ ಉತ್ತರ ಅಟ್ಲಾಂಟಿಕ್ ಪ್ರದೇಶದಲ್ಲಿ ಗಂಭೀರ ಸಿಎಟಿಗಳು 55% ಹೆಚ್ಚಳ ಕಂಡಿವೆ. ಸಿಎಟಿ ಹೆಚ್ಚಳವು ಜೆಟ್ ಸ್ಟ್ರೀಮ್‌ಗಳ ಮೇಲೆ ಹವಾಮಾನ ಬದಲಾವಣೆಯ ಪರಿಣಾಮವನ್ನು ತೋರಿವೆ ಎಂದು ಸಂಶೋಧಕರು ವಿವರಿಸಿದ್ದಾರೆ. ಜೆಟ್ ಸ್ಟ್ರೀಮ್‌ಗಳು ವಾತಾವರಣದಲ್ಲಿ ಅತ್ಯಂತ ವೇಗವಾಗಿ ಚಲಿಸುವ ಗಾಳಿಯ ಪ್ರವಾಹಗಳಾಗಿದ್ದು, ಹವಾಮಾನ ಬದಲಾವಣೆ ಅವುಗಳನ್ನು ಇನ್ನಷ್ಟು ತೀವ್ರವೂ, ಊಹಿಸಲಸಾಧ್ಯವಾಗಿಯೂ ಮಾಡಬಹುದು.
ಇದರ ಅನುಸಾರವಾಗಿ ಹೇಳುವುದಾದರೆ, ಟರ್ಬ್ಯುಲೆನ್ಸ್‌ಗಳು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪದೇ ಪದೇ ಸಂಭವಿಸಬಹುದು ಎಂದು ವಿಲಿಯಮ್ಸ್ ಹೇಳಿದ್ದಾರೆ. ಒಂದು ವೇಳೆ ಹವಾಮಾನ ಬದಲಾವಣೆ ಈಗ ನಿರೀಕ್ಷಿತ ರೀತಿಯಲ್ಲೇ ಮುಂದುವರಿದರೆ, ಜೆಟ್ ಸ್ಟ್ರೀಮ್‌ಗಳಲ್ಲಿ ಟರ್ಬ್ಯುಲೆನ್ಸ್ (ವಾಯು ಪ್ರಕ್ಷುಬ್ಧತೆ) ಮುಂದಿನ ದಶಕಗಳಲ್ಲಿ ಎರಡು ಪಟ್ಟು, ಮೂರು ಪಟ್ಟು ಹೆಚ್ಚಾಗಬಹುದು ಎಂದು ವಿಲಿಯಮ್ಸ್ ವಿವರಿಸಿದ್ದಾರೆ. ಒಂದು ವೇಳೆ ಇಂತಹ ದಿನಗಳು ಬರುತ್ತವಾದರೆ, ವಿಮಾನದಲ್ಲಿ ಪ್ರಯಾಣಿಸುವಾಗ ಸದಾ ಸೀಟ್ ಬೆಲ್ಟ್ ಧರಿಸಿರುವುದು ಸುರಕ್ಷಿತ ಕ್ರಮವಾಗಿರಲಿದೆ.