Asianet Suvarna News Asianet Suvarna News

ರಾಜ ವೈಭವದಿಂದ ಕೆಂಪು ದೀಪದ ತನಕ: ಹೀರಾ ಮಂಡಿಯ ಏಳು ಬೀಳಿನ ಹಾದಿ

ಹೀರಾ ಮಂಡಿ ಪ್ರತಿದಿನವೂ ತನ್ನ ಚಹರೆಯನ್ನು ಬದಲಾಯಿಸುತ್ತಿರುತ್ತದೆ. ಹಗಲಿನ ಹೊತ್ತು ಹೀರಾ ಮಂಡಿ ಯಾವುದೇ ಸಾಮಾನ್ಯ ಮಾರುಕಟ್ಟೆಯ ರೀತಿ ಕಂಡುಬರುತ್ತದೆ. ಆದರೆ ರಾತ್ರಿಯ ವೇಳೆ, ಲೈಂಗಿಕ ವೃತ್ತಿಯವರು ದಿನಸಿ ಅಂಗಡಿಗಳ ಮೇಲಿನ ಸಣ್ಣ ಕೋಣೆಗಳಲ್ಲಿ ತಮ್ಮ ವೃತ್ತಿಯಲ್ಲಿ ನಿರತರಾಗಿರುತ್ತಾರೆ.

The Rise And Fall Of Heera Mandi From Royal Neighborhood to Red Light District gvd
Author
First Published May 25, 2024, 6:44 PM IST

ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಪಾಕಿಸ್ತಾನದ ಲಾಹೋರ್ ನಗರದಲ್ಲಿರುವ ಹೀರಾ ಮಂಡಿ ಎಂಬುದು ಶ್ರೀಮಂತ ಇತಿಹಾಸ ಹೊಂದಿರುವ ಅತ್ಯಂತ ಹಳೆಯ ಪ್ರದೇಶವಾಗಿದೆ. ಲಾಹೋರ್ ನಗರದ ಪುರಾತನ ಭಾಗದಲ್ಲಿರುವ ಹೀರಾ ಮಂಡಿ, ಪಾಕಿಸ್ತಾನದ ಅತ್ಯಂತ ಹಳೆಯ ಕೆಂಪು ದೀಪದ ಪ್ರದೇಶ ಎಂದು ಹೆಸರಾಗಿದೆ. ನೀವೇನಾದರೂ ಹೀರಾ ಮಂಡಿಯ ಸಣ್ಣದಾದ ಬೀದಿಗಳಲ್ಲಿ ನಡೆದು ಹೋದರೆ, ನಿಮ್ಮ ಕಿವಿಗೆ ಅಲ್ಲಿನ ಹಳೆಯದಾದ, ಆಗಲೋ ಈಗಲೋ ಕುಸಿದು ಹೋಗಬಹುದು ಎಂಬಂತೆ ಭಾಸವಾಗುವ ಮನೆಗಳಿಂದ ಬಾಲಿವುಡ್ ಸಿನೆಮಾ ಹಾಡುಗಳು ಮತ್ತು ಅದಕ್ಕೆ ನರ್ತಿಸುವ ಕಾಲ್ಗೆಜ್ಜೆಯ ಮಧುರ ಶಬ್ದಗಳೂ ಬೀಳಬಹುದು. ಇದು ಒಂದಾನೊಂದು ಕಾಲದಲ್ಲಿ ಸಾಂಪ್ರದಾಯಿಕ ನೃತ್ಯ ಪ್ರದರ್ಶನಕ್ಕೆ ಹೆಸರಾಗಿದ್ದ ಹೀರಾ ಮಂಡಿಯ ಇತಿಹಾಸದ ಪಳೆಯುಳಿಕೆಯಂತೆ ಭಾಸವಾಗುತ್ತದೆ.

ಹೀರಾ ಮಂಡಿ ಪ್ರತಿದಿನವೂ ತನ್ನ ಚಹರೆಯನ್ನು ಬದಲಾಯಿಸುತ್ತಿರುತ್ತದೆ. ಹಗಲಿನ ಹೊತ್ತು ಹೀರಾ ಮಂಡಿ ಯಾವುದೇ ಸಾಮಾನ್ಯ ಮಾರುಕಟ್ಟೆಯ ರೀತಿ ಕಂಡುಬರುತ್ತದೆ. ಆದರೆ ರಾತ್ರಿಯ ವೇಳೆ, ಲೈಂಗಿಕ ವೃತ್ತಿಯವರು ದಿನಸಿ ಅಂಗಡಿಗಳ ಮೇಲಿನ ಸಣ್ಣ ಕೋಣೆಗಳಲ್ಲಿ ತಮ್ಮ ವೃತ್ತಿಯಲ್ಲಿ ನಿರತರಾಗಿರುತ್ತಾರೆ. ಈಗ ನಂಬುವುದು ಕಷ್ಟಕರವಾದರೂ, ಹಿಂದೆ ಇದೇ ಹೀರಾ ಮಂಡಿ ಲಾಹೋರ್‌ನಲ್ಲಿ ರಾಜ ವೈಭವದ ಸಂಕೇತವಾಗಿತ್ತು. ಹೀರಾ ಮಂಡಿಯ ಈ ವೈರುಧ್ಯವನ್ನು ಅರ್ಥ ಮಾಡಿಕೊಳ್ಳಬೇಕಾದರೆ, ನಾವು ಇತಿಹಾಸದಲ್ಲಿ ಹಿಂದಕ್ಕೆ, ಅಂದರೆ 16ನೇ ಶತಮಾನಕ್ಕೆ ಸಾಗಬೇಕು. ಆ ಸಮಯದಲ್ಲಿ, ಲಾಹೋರ್ ಸೇರಿದಂತೆ, ಉತ್ತರ ಭಾರತದಾದ್ಯಂತ ಮೊಘಲ್ ಸಾಮ್ರಾಜ್ಯ ತನ್ನ ಆಡಳಿತವನ್ನು ವಿಸ್ತರಿಸಲು ಪ್ರಯತ್ನಿಸುತ್ತಿತ್ತು. 

ಅಮೆರಿಕಾ ಪ್ರಾಬಲ್ಯದೆದುರು ಭಾರತದ ಸ್ವಾಯತ್ತತೆ ರಕ್ಷಿಸಲು ಮೋದಿ ಪ್ರಯತ್ನ

ಮೊಘಲ್ ಚಕ್ರವರ್ತಿ ಅಕ್ಬರ್ ಆಡಳಿತದ ಅವಧಿಯಲ್ಲಿ, 1584ರಿಂದ 1598ರ ನಡುವೆ, ಲಾಹೋರ್ ಮೊಘಲ್ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಈ ಅವಧಿಯಲ್ಲಿ, 1267ರಲ್ಲಿ ದೆಹಲಿ ಸುಲ್ತಾನರ ಸಾಮ್ರಾಜ್ಯದ ಸುಲ್ತಾನ್ ಚಿಯಾಸುದ್ದೀನ್ ಬಲ್ಬನ್ ಕಟ್ಟಿಸಿದ್ದ ಲಾಹೋರ್ ಕೋಟೆಯನ್ನು ಪುನಃ ನವೀಕರಿಸಲಾಯಿತು. ಇದು ಲಾಹೋರ್ ಕೋಟೆ ಮತ್ತು ನಗರದಾದ್ಯಂತ ನಿರ್ಮಿಸಿದ್ದ ಇತರ ಸ್ಮಾರಕಗಳ ಅಭಿವೃದ್ಧಿಗೆ ಹಾದಿ ಮಾಡಿಕೊಟ್ಟಿತು. ಆಸ್ಥಾನದ ಮತ್ತು ರಾಜರ ಸಿಬ್ಬಂದಿಗಳು ಮತ್ತು ಸೇವಕರ ವಾಸಕ್ಕಾಗಿ ಲಾಹೋರ್ ಕೋಟೆಯ ದಕ್ಷಿಣ ಭಾಗದಲ್ಲಿನ ಒಂದು ಪ್ರದೇಶವನ್ನು ವಸತಿ ಪ್ರದೇಶವಾಗಿ ಅಭಿವೃದ್ಧಿ ಪಡಿಸಲಾಯಿತು. 

ಇದು ಕೋಟೆಗೆ ಸನಿಹದಲ್ಲಿದ್ದುದರಿಂದ, ಈ ಪ್ರದೇಶವನ್ನು 'ಶಾಹಿ ಮೊಹಲ್ಲಾ' ಅಥವಾ ರಾಜವಂಶದ ನೆರೆಹೊರೆ ಎಂದು ಕರೆಯಲಾಯಿತು. ಅದಾದ ಕೆಲ ಸಮಯದಲ್ಲಿ, ಈ ಪ್ರದೇಶ ರಾಜರ ಆಸ್ಥಾನದಲ್ಲಿ ಮನರಂಜನೆ ನೀಡುತ್ತಿದ್ದ ತವಾಯಿಫ್‌ಗಳ ನೆಲೆಯಾಗಿ ರೂಪುಗೊಂಡಿತು. ಮೊಘಲ್ ಆಳ್ವಿಕೆಯ ಅವಧಿಯಲ್ಲಿ, ತವಾಯಿಫ್ ಸಂಸ್ಕೃತಿ ಬೆಳೆದು, ಮಧ್ಯಯುಗೀನ ಭಾರತದ ಆಸ್ಥಾನಗಳಲ್ಲಿ ಪ್ರದರ್ಶಿಸಲ್ಪಡುತ್ತಿದ್ದ ಮುಜ್ರಾ ಎಂಬ ಮಾದಕ ನೃತ್ಯ ಪ್ರಕಾರವನ್ನು ಪ್ರದರ್ಶಿಸುತ್ತಿದ್ದ ಕುಶಲ ನೃತ್ಯಗಾರರ ನೆಲೆಯಾಗಿ ಶಾಹಿ ಮೊಹಲ್ಲಾ ಬೆಳೆಯಿತು. ಈ ನೃತ್ಯಗಾರರು ಅತ್ಯಂತ ಯಶಸ್ವಿಯಾಗಿದ್ದು, ಶಾಸ್ತ್ರೀಯ ಸಂಗೀತ ಮತ್ತು ರಂಗಭೂಮಿಗೆ ಮಹತ್ವದ ಕೊಡುಗೆ ನೀಡಿದ್ದರು.

ತವಾಯಿಫ್‌ಗಳಿಗೆ ಸಂಗೀತ, ಶಿಷ್ಟಾಚಾರ ಮತ್ತು ನೃತ್ಯಗಳಿಗೆ ಸಂಬಂಧಿಸಿದಂತೆ ಆ ಕಾಲದ ಅತ್ಯುತ್ತಮ ಶಿಕ್ಷಕರಿಂದ ತರಬೇತಿ ನೀಡಲಾಗುತ್ತಿತ್ತು. ಶಾಹಿ ಮೊಹಲ್ಲಾದ ಮಹಿಳೆಯರು ಆಗಿನ ಶ್ರೀಮಂತ ಜನರಿಗೆ ಸಾಮಾಜಿಕ ಸಂಕೇತಗಳಾಗಿದ್ದು, ಶ್ರೀಮಂತರು ಆಯೋಜಿಸುತ್ತಿದ್ದ ಸಮಾರಂಭಗಳಲ್ಲಿ ತವಾಯಿಫ್‌ಗಳನ್ನು ಕರೆಸಿಕೊಳ್ಳುವುದು ಅವರ ಸ್ಥಾನಮಾನ ಮತ್ತು ಉತ್ಕೃಷ್ಟತೆಯ ಸಂಕೇತವೆಂದು ಪರಿಗಣಿಸಲ್ಪಡುತ್ತಿತ್ತು. ಆ ಸಮಯದಲ್ಲಿ ವೃತ್ತಿಪರ ಮನೋರಂಜಕರು ಲೈಂಗಿಕ ವೃತ್ತಿಯನ್ನು ನಡೆಸುತ್ತಿದ್ದರೂ, ಶಾಹಿ ಮೊಹಲ್ಲಾದ ತವಾಯಿಫ್‌ಗಳು ಇದಕ್ಕೆ ಹೊರತಾಗಿದ್ದರು. ಶ್ರೀಮಂತ ವರ್ಗದವರು ತಮ್ಮ ಮಕ್ಕಳನ್ನೂ ಸರಿಯಾದ ಶಿಷ್ಟಾಚಾರ, ನಡವಳಿಕೆ ಕಲಿಯಲು ಮತ್ತು ಜಗತ್ತಿನ ಜ್ಞಾನ ಪಡೆಯಲು ತವಾಯಿಫ್‌ಗಳ ಬಳಿ ಕಳುಹಿಸುವುದಿತ್ತು.

ಲಾಹೋರ್‌ನ ತವಾಯಿಫ್‌ಗಳು ಪ್ರಸಿದ್ಧ ಕತೆ, ಕಾದಂಬರಿಗಳ ಪಾತ್ರಗಳೂ ಆಗಿದ್ದರು. ಲಾಹೋರ್‌ನ ಮೊಘಲ್ ಆಸ್ಥಾನದಲ್ಲಿ ತವಾಯಿಫ್ ಆಗಿದ್ದ ಅನಾರ್ಕಲಿಯದ್ದೂ ಇಂತಹ ಒಂದು ಪ್ರಸಿದ್ಧ ಕತೆಯಾಗಿದೆ. ಆಕೆಯ ಕತೆಯ ಅನುಸಾರ, ಅನಾರ್ಕಲಿ ಆಗಿನ ಮಹಾರಾಜ ಅಕ್ಬರ್‌ನ ಮಗ, ಯುವರಾಜ ಸಲೀಂ (ಅಕ್ಬರ್ ನಂತರ ಮಹಾರಾಜನಾದ ಜಹಾಂಗೀರ್) ಜೊತೆ ರಹಸ್ಯ ಸಂಬಂಧ ಹೊಂದಿದ್ದಳು. ಕತೆಯ ಅನುಸಾರ, ತನ್ನ ಮಗ ಸಾಮಾಜಿಕ ಸ್ಥಾನಮಾನದಲ್ಲಿ ಕೆಳಹಂತದಲ್ಲಿದ್ದ ತವಾಯಿಫ್ ಒಬ್ಬಳ ಜೊತೆ ಪ್ರೀತಿಯಲ್ಲಿ ಬಿದ್ದದ್ದು ದೊರೆ ಅಕ್ಬರ್‌ಗೆ ವಿಪರೀತ ಕೋಪ ಉಂಟುಮಾಡಿತ್ತು. ಇದರ ಪರಿಣಾಮವಾಗಿ, ದೊರೆಯ ಆದೇಶದಂತೆ ಅನಾರ್ಕಲಿಯನ್ನು ಲಾಹೋರ್ ಕೋಟೆಯ ಗೋಡೆಯಲ್ಲೇ ಸಮಾಧಿ ಮಾಡಲಾಯಿತು. ಅವಳು ಅಲ್ಲಿಯೇ ಅಸುನೀಗಿದ್ದಳು. ಅನಾರ್ಕಲಿ ಇದ್ದಳು ಎಂದು ಸಾಬೀತುಪಡಿಸಲು ಯಾವುದೇ ಐತಿಹಾಸಿಕ ಪುರಾವೆಗಳು ಇಲ್ಲದಿದ್ದರೂ, ಆಕೆಯ ಕತೆಯ ಕಾರಣದಿಂದಾಗಿ ಲಾಹೋರ್‌ನ ತವಾಯಿಫ್‌ಗಳು ಸಿನೆಮಾಗಳಲ್ಲಿ, ಪುಸ್ತಕಗಳಲ್ಲಿ, ಮತ್ತು ಕಾಲ್ಪನಿಕ ಕಥೆಗಳಲ್ಲಿ ಭಾಗವಾಗತೊಡಗಿದರು.

18ನೇ ಶತಮಾನದ ಆರಂಭದಲ್ಲಿ, ಲಾಹೋರ್ ಹಲವಾರು ದಾಳಿಗಳನ್ನು ಎದುರಿಸಬೇಕಾಯಿತು. ಮೊದಲಿಗೆ ಇರಾನಿನ ನಾದಿರ್ ಶಾ ದಾಳಿ ನಡೆಸಿದರೆ, ಬಳಿಕ ಅಫ್ಘಾನಿಸ್ತಾನದ ಅಹ್ಮದ್ ಶಾ ಅಬ್ದಾಲಿ ದಾಳಿ ನಡೆಸಿದ. ಈ ಆಕ್ರಮಣಗಳು ಪಂಜಾಬಿನಲ್ಲಿ ಮೊಘಲ್ ಆಡಳಿತವನ್ನು ದುರ್ಬಲಗೊಳಿಸಿ, ತವಾಯಿಫ್‌ಗಳಿಗೆ ರಾಜರ ಬೆಂಬಲವನ್ನು ಕೊನೆಗೊಳಿಸಿದವು. ಇದರ ಪರಿಣಾಮವಾಗಿ ಬಹಳಷ್ಟು ತವಾಯಿಫ್‌ಗಳು ಬೇರೆ ನಗರಗಳಿಗೆ ವಲಸೆ ಹೋದರು. ಅಫ್ಘಾನ್ ಆಕ್ರಮಣದ ಸಂದರ್ಭದಲ್ಲಿ ಲಾಹೋರ್ ನಗರದಲ್ಲಿ ಮೊದಲ ಬಾರಿಗೆ ವೇಶ್ಯಾಗೃಹಗಳು ಕಾಣಿಸಿಕೊಂಡವು. ಆಕ್ರಮಣ ನಡೆಸುತ್ತಿದ್ದ ಸೇನೆ 1748 ಮತ್ತು 1767ರ ನಡುವೆ ತಾನು ದಾಳಿ ನಡೆಸಿದ ಭಾರತೀಯ ಉಪಖಂಡದ ಎಲ್ಲ ನಗರಗಳಿಂದಲೂ ಮಹಿಳೆಯರನ್ನು ಅಪಹರಿಸಿ ಒಯ್ದಿತ್ತು. ಅಬ್ದಾಲಿಯ ಸೇನೆ ಲಾಹೋರ್‌ನಲ್ಲಿ ಎರಡು ವೇಶ್ಯಾಗೃಹಗಳನ್ನು ಸ್ಥಾಪಿಸಿತ್ತು. ಒಂದು ಇಂದಿನ ಧೋಬಿ ಮಂಡಿಯಲ್ಲಿದ್ದರೆ, ಇನ್ನೊಂದು ಮೊಹಲ್ಲ ದಾರಾ ಶಿಕೋಹ್ ನಲ್ಲಿತ್ತು.

ಇಂತಹ ನಿರಂತರ ಆಕ್ರಮಣಗಳು ಲಾಹೋರ್ ನಗರದಲ್ಲಿ ಪ್ರಕ್ಷುಬ್ಧತೆಗಳನ್ನು ಉಂಟುಮಾಡುತ್ತಿದ್ದವು. ಆದರೆ, ಅಫ್ಘಾನ್ ಸೇನೆ 1762ರಲ್ಲಿ ಸಿಖ್ಖರ ಅತ್ಯಂತ ಪವಿತ್ರ ಮಂದಿರವಾದ ಶ್ರೀ ಹರ್‌ಮಂದಿರ್ ಸಾಹಿಬ್ ಮೇಲೆ ದಾಳಿ ನಡೆಸಿದಾಗ ಸಮುದಾಯಗಳು ಒಂದುಗೂಡಿದವು. ಅಫ್ಘಾನ್ ಸೇನೆಯನ್ನು ಬಳಿಕ ಪಂಜಾಬಿನಿಂದ ಹೊರಹಾಕಲಾಯಿತು. ಆ ಬಳಿಕ ಪಂಜಾಬಿನಲ್ಲಿ ಅಧಿಕಾರದ ನಿರ್ವಾತ ನಿರ್ಮಾಣಗೊಂಡಿತು. ಈ ನಿರ್ವಾತವನ್ನು ಮಿಸ್ಲ್ಸ್ ಎಂದು ಕರೆಯಲಾಗುವ ವಿವಿಧ ಸಿಖ್ ಸಂಸ್ಥಾನಗಳು ತುಂಬಿದವು. ಈ ವೇಳೆ ಅಫ್ಘಾನಿಗಳು ಲಾಹೋರ್‌ನಲ್ಲಿ ಸ್ಥಾಪಿಸಿದ್ದ ವೇಶ್ಯಾಗೃಹಗಳನ್ನು ಮುಚ್ಚಲಾಯಿತು.

1799ರಲ್ಲಿ, ಸುಕೆರ್‌ಚಾಕಿಯ ಮಿಸ್ಲ್‌ನ ಮುಖ್ಯಸ್ಥನಾದ ರಣಜಿತ್ ಸಿಂಗ್ ಭಾಂಗಿ ಮಿಸ್ಲ್‌ನಿಂದ ಲಾಹೋರ್ ಅಧಿಕಾರ ವಹಿಸಿಕೊಂಡ. 1801ರಲ್ಲಿ ಆತ ತನ್ನನ್ನು ತಾನು ಪಂಜಾಬಿನ ಮಹಾರಾಜ ಎಂದು ಘೋಷಿಸಿಕೊಂಡು, ಸಂಪೂರ್ಣ ಪ್ರದೇಶವನ್ನು ಒಗ್ಗೂಡಿಸುವುದಾಗಿ ಭರವಸೆ ನೀಡಿದ. ಮಹಾರಾಜ ರಣಜಿತ್ ಸಿಂಗ್ ಆಸ್ಥಾನದಲ್ಲಿ ತವಾಯಿಫ್‌ಗಳು ಪ್ರದರ್ಶನ ನೀಡುವುದು ಸೇರಿದಂತೆ, ಮೊಘಲರ ಹಲವು ರಾಜ ಸಂಪ್ರದಾಯಗಳನ್ನು ಲಾಹೋರ್‌ಗೆ ಮರಳಿ ತಂದ. ರಣಜಿತ್ ಸಿಂಗ್ ಆಸ್ಥಾನ ಮೊಘಲ್ ಆಸ್ಥಾನಗಳಷ್ಟು ಅದ್ಧೂರಿಯಾಗಿಲ್ಲದೆ ಹೋದರೂ, ಶಾಹಿ ಮೊಹಲ್ಲಾದ ತವಾಯಿಫ್‌ಗಳಿಗೆ ಮರಳಿ ಪ್ರೋತ್ಸಾಹ ಲಭಿಸಿತು.

1802ರಲ್ಲಿ, 22 ವರ್ಷ ವಯಸ್ಸಿನ ಮಹಾರಾಜ ರಣಜಿತ್ ಸಿಂಗ್ ಮೊರಾನ್ ಎಂಬ ಮುಸ್ಲಿಂ ತವಾಯಿಫ್ ಒಬ್ಬಳ ಜೊತೆ ಪ್ರೀತಿಗೆ ಬಿದ್ದ. ಮೂಲತಃ ಕಾಶ್ಮೀರದ ಯುವತಿಯಾದ ಆಕೆ, ಅಮೃತಸರ ಸಮೀಪದ ಮಖಾನ್‌ಪುರ್ ಎಂಬ ಹಳ್ಳಿಯಲ್ಲಿ ವಾಸವಾಗಿದ್ದಳು. ಸಿಖ್ ಮಹಾರಾಜ ಕಂಜರ್ ಎಂಬ ಮನೋರಂಜನಾ ಸಮುದಾಯದ ತವಾಯಿಫ್ ಒಬ್ಬಳನ್ನು ಮದುವೆಯಾಗುವ ಕಲ್ಪನೆಯೇ ರಾಜನ ಆಸ್ಥಾನದ ಗಣ್ಯರು ಮತ್ತು ಧಾರ್ಮಿಕ ಮುಖಂಡರ ಕೋಪಕ್ಕೆ ಕಾರಣವಾಗಿತ್ತು. ಆದರೆ ಈಗಾಗಲೇ ಆಕೆಯೊಡನೆ ಗಾಢವಾಗಿ ಪ್ರೀತಿಯಲ್ಲಿದ್ದ ಮಹಾರಾಜ ರಣಜಿತ್ ಸಿಂಗ್ ಯಾವುದೇ ಅಸಮ್ಮತಿಯನ್ನು ಲೆಕ್ಕಿಸದೆ, ಆಕೆಯನ್ನು ಮದುವೆ ಮಾಡಿಕೊಂಡ. ಆತ ಮೊರಾನ್‌ಗಾಗಿ ಪ್ರತ್ಯೇಕ ಮಹಲ್ ಒಂದನ್ನು ಕಟ್ಟಿಸಿದ್ದ. ಈ ಪ್ರದೇಶ ಇಂದು ಲಾಹೋರ್‌ನಲ್ಲಿ ಪಾಪಡ್ ಮಂಡಿ ಎಂದು ಹೆಸರಾಗಿದೆ. ಇದು ತವಾಯಿಫ್‌ಗಳು ವಾಸಿಸುತ್ತಿದ್ದ ಶಾಹಿ ಮೊಹಲ್ಲಾಗೆ ಸನಿಹದಲ್ಲಿತ್ತು. ಸಲೀಂ ಅನಾರ್ಕಲಿಯ ಭಗ್ನ ಪ್ರೇಮದ ರೀತಿಯಲ್ಲಿ, ರಣಜಿತ್ ಸಿಂಗ್ ಪ್ರೇಮ ದುರಂತ ಅಂತ್ಯ ಕಾಣಲಿಲ್ಲ.

ಕೆಲವು ದಶಕಗಳ ಬಳಿಕ, ಸಿಖ್ ಸಾಮ್ರಾಜ್ಯದ ಪ್ರಧಾನ ಮಂತ್ರಿಯಾದ ಹೀರಾ ಸಿಂಗ್ ಡೋಗ್ರಾ ಎಂಬ ಸೇನಾ ಮುಖ್ಯಸ್ಥ ಶಾಹಿ ಮೊಹಲ್ಲಾ ಲಾಹೋರ್ ನಗರದ ಕೇಂದ್ರ ಭಾಗದಲ್ಲಿದೆ ಎಂಬುದನ್ನು ಗಮನಿಸಿದ. ಆತನಿಗೆ ಈ ಪ್ರದೇಶ ಕೇವಲ ತವಾಯಿಫ್‌ಗಳ ಮನೆಗಳಾಗಿ ಮಾತ್ರವಲ್ಲದೆ, ಒಂದು ಬಜಾರ್ ರೀತಿಯ ಆರ್ಥಿಕ ಕೇಂದ್ರವೂ ಆಗಬಹುದು ಎಂಬ ಆಲೋಚನೆ ಮೂಡಿತು. 1839ರಲ್ಲಿ ಮಹಾರಾಜ ರಣಜಿತ್ ಸಿಂಗ್ ನಿಧನದ ಬಳಿಕ, ಹೀರಾ ಸಿಂಗ್ ಡೋಗ್ರಾ ಈ ಪ್ರದೇಶದಲ್ಲಿ ಆಹಾರ ಧಾನ್ಯಗಳ ಮಾರುಕಟ್ಟೆಯೊಂದನ್ನು ಆರಂಭಿಸಿದ. ಈ ಮಾರುಕಟ್ಟೆ 'ಹೀರಾ ಸಿಂಗ್ ದಿ ಮಂಡಿ' (ಹೀರಾ ಸಿಂಗ್‌ನ ಮಾರುಕಟ್ಟೆ) ಅಥವಾ ಸರಳವಾಗಿ ಹೀರಾ ಮಂಡಿ ಎಂಬ ಹೆಸರು ಪಡೆದುಕೊಂಡಿತು. ಆಸಕ್ತಿಕರ ವಿಚಾರವೆಂದರೆ, ಒಂದಷ್ಟು ಜನರು ಹೀರಾ ಎಂಬ ಹೆಸರು (ಹಿಂದಿಯಲ್ಲಿ ಹೀರಾ ಎಂದರೆ ವಜ್ರ ಎಂದರ್ಥ) ಈ ಪ್ರದೇಶದಲ್ಲಿ ವಾಸಿಸುವ ತವಾಯಿಫ್‌ಗಳು ವಜ್ರದಷ್ಟೇ ಸುಂದರವಾಗಿದ್ದಾರೆ ಎಂದು ಸೂಚಿಸುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ.

ಶಾಹಿ ಮೊಹಲ್ಲಾದ ಹೆಸರು ಬದಲಾಗಿ, ಅದು ಹೀರಾ ಮಂಡಿಯಾದರೂ, ಅಲ್ಲಿನ ತವಾಯಿಫ್‌ಗಳು ರಾಜರ ಬೆಂಬಲವನ್ನು ಅನುಭವಿಸುವುದು ಮುಂದುವರಿಯಿತು. ಆದರೆ ಇದು ದೀರ್ಘಕಾಲ ಮುಂದೆ ಸಾಗಲಿಲ್ಲ. ಎರಡು ನಿರ್ಣಾಯಕ ಆಂಗ್ಲೋ - ಸಿಖ್ ಯುದ್ಧಗಳ ಬಳಿಕ (1845-49), ಸಿಖ್ ಸಾಮ್ರಾಜ್ಯ ಪತನಗೊಂಡಿತು. ಆ ಬಳಿಕ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಇಲ್ಲಿನ ನಿಯಂತ್ರಣ ಸಾಧಿಸಿತು. ಆದರೆ ಬ್ರಿಟಿಷರಿಗೆ ತವಾಯಿಫ್‌ಗಳ ಸಂಗೀತ ಮತ್ತು ನೃತ್ಯಕ್ಕೆ ಬೆಂಬಲ ನೀಡುವ ಆಸಕ್ತಿ ಇರಲಿಲ್ಲ. ಕಾಲ ಕ್ರಮೇಣ ಮುಜ್ರಾ ಸಂಸ್ಕೃತಿ ವೇಶ್ಯಾವಾಟಿಕೆಯೊಡನೆ ಸಂಬಂಧ ಹೊಂದಿತು.

ತಮ್ಮ ಜೀವನೋಪಾಯ ಕಳೆದುಕೊಂಡ ಬಹಳಷ್ಟು ತವಾಯಿಫ್‌ಗಳು ಲಾಹೋರ್‌ನ ಹಳೆಯ ನಗರದ ಅನಾರ್ಕಲಿ ಪ್ರದೇಶದಲ್ಲಿದ್ದ ಕಂಟೋನ್ಮೆಂಟ್‌ನಲ್ಲಿ ನೆಲೆಸಿದ್ದ ಬ್ರಿಟಿಷ್ ಸೈನಿಕರಿಗೆ ಲೈಂಗಿಕ ಕಾರ್ಯಕರ್ತೆಯರಾಗಿ ಜೀವನ ನಡೆಸತೊಡಗಿದರು. ಈ ಪ್ರದೇಶ ಮೊಘಲ್ ಕಾಲದ ಶಾಹಿ ಮೊಹಲ್ಲಾ ಮತ್ತು ಇಂದಿನ ಹೀರಾ ಮಂಡಿಗೆ ಸನಿಹದಲ್ಲಿದ್ದರಿಂದ, ಲೈಂಗಿಕ ವೃತ್ತಿಪರರು ಇಲ್ಲಿಂದಲೂ ಕಾರ್ಯಾಚರಿಸಲು ಆರಂಭಿಸಿದರು. 1850ರ ದಶಕದ ಆರಂಭದಲ್ಲಿ, ಪ್ಲೇಗ್ ರೋಗ ಲಾಹೋರ್ ನಗರಕ್ಕೆ ಅಪ್ಪಳಿಸಿತು. ಬ್ರಿಟಿಷ್ ಆಡಳಿತ ಅನಾರ್ಕಲಿಯಿಂದ ಹಳೆ ಲಾಹೋರ್ ಹೊರವಲಯದ ಧರಂಪುರಕ್ಕೆ ತನ್ನ ಕಂಟೋನ್ಮೆಂಟ್ ಅನ್ನು ಸ್ಥಳಾಂತರಿಸಿತು. ಅವರು ವೇಶ್ಯೆಯರನ್ನೂ ಸ್ಥಳಾಂತರಿಸಲು ಪ್ರಯತ್ನ ನಡೆಸಿದರಾದರೂ, ಅವರಲ್ಲಿ ಸಾಕಷ್ಟು ಜನರು ಅಲ್ಲೇ ಉಳಿದುಕೊಳ್ಳಲು ನಿರ್ಧರಿಸಿದರು.

ಆ ಪ್ರದೇಶದಲ್ಲಿ ವೇಶ್ಯಾವಾಟಿಕೆ ಹೆಚ್ಚುತ್ತಾ ಹೋದರೂ, ಹೀರಾ ಮಂಡಿ ಪ್ರದರ್ಶನ ಕಲೆಯ ಕೇಂದ್ರ ಎಂಬ ತನ್ನ ಸ್ಥಾನವನ್ನು ಉಳಿಸಿಕೊಂಡಿತ್ತು. ಈ ಸಮಯದಲ್ಲಿ ತವಾಯಿಫ್‌ಗಳಿಗೆ ಆರ್ಥಿಕ ಬೆಂಬಲವನ್ನು ರಾಜರು ನೀಡುವ ಬದಲು, ನಗರದ ಶ್ರೀಮಂತ ಜನರು ನೀಡುತ್ತಿದ್ದರು. ಇದರಿಂದಾಗಿ ಹೀರಾ ಮಂಡಿಗೆ ಅದರ 'ಬಜಾ಼ರ್ ಇ ಹುಸ್ನ್' (ಸೌಂದರ್ಯದ ಮಾರುಕಟ್ಟೆ) ಎಂಬ ಅಡ್ಡ ಹೆಸರು ಲಭಿಸಿತು. ತನ್ನ ಗುರುತಿನಲ್ಲಿನ ಬದಲಾವಣೆಯ ಹೊರತಾಗಿಯೂ, ಶಾಹಿ ಮೊಹಲ್ಲಾ ಪ್ರದರ್ಶನ ಕಲೆಯ ಕೇಂದ್ರವಾಗಿ ಉಳಿದುಕೊಂಡಿತು. ಇದರಿಂದಾಗಿ ಹೀರಾ ಮಂಡಿ ಸಾಕಷ್ಟು ಅತ್ಯುತ್ತಮ ಪ್ರದರ್ಶಕರನ್ನು ನೀಡಿತು. ನೂರ್ ಜಹಾನ್, ಖುರ್ಷಿದ್ ಬೇಗಂ, ಮುಮ್ತಾಜ್, ಮತ್ತು ಶಾಂತಿ ಇಂತಹ ಪ್ರತಿಭೆಗಳಿಗೆ ಉದಾಹರಣೆಯಾಗಿದ್ದಾರೆ. ಅದರೊಡನೆ, ಆಧುನಿಕ ಲಾಹೋರ್ ನಿರ್ಮಾತೃ ಎಂದೇ ಹೆಸರಾದ ಸರ್ ಗಂಗಾ ರಾಮ್ ಅವರ ಮನೆಯೂ ಇದೇ ಪ್ರದೇಶದಲ್ಲಿತ್ತು.

ಉಸ್ತಾದ್ ಆಮಿರ್ ಖಾನ್ ಅವರ ನಿವಾಸ, ಉಸ್ತಾದ್ ದಮನ್ ಖಾನ್ ಅವರ ಬೈಠಕ್ ಸಹ ಒಂದು ಕಾಲದಲ್ಲಿ ಇಲ್ಲಿದ್ದವು. ಹಿಂದೆ ಈ ಬೈಠಕ್‌ಗೆ ಸೂಫಿ ಕವಿ ಶಾ ಹುಸೇನ್ ಅವರ ಸ್ಮರಣಾರ್ಥ 'ಹುಜ್ರಾ ಇ ಶಾ ಹುಸೇನ್' ಎಂದು ಹೆಸರಿಡಲಾಗಿತ್ತು. ತಕ್ಸಾಲಿ ಗೇಟ್ ಬಳಿಯ ಉಸ್ತಾದ್ ಸರ್ದಾರ್ ಖಾನ್ ದಿಲ್ಲಿ ವಾಲೆ ಕಿ ಬೈಠಕ್ ಆ ಕಾಲದ ಅತ್ಯಂತ ಗೌರವಾನ್ವಿತ ಬೈಠಕ್ ಆಗಿತ್ತು. ಹೀರಾ ಮಂಡಿ ಚೌಕದ ಉಸ್ತಾದ್ ಬರ್ಕತ್ ಅಲಿ ಖಾನ್ ಅವರ ಬೈಠಕ್ ತುಮ್ರಿ ಮತ್ತು ಘಜಲ್ ಹಾಡುಗಾರಿಕೆಗೆ ಪ್ರಸಿದ್ಧವಾಗಿತ್ತು. ಉಸ್ತಾದ್ ಚೋಟೆ  ಆಶಿಕ್ ಅಲಿ ಖಾನ್ ಖಯಾಲ್ ಹಾಡುಗಾರಿಕೆಯಲ್ಲಿ ಅತ್ಯಂತ ಪ್ರಸಿದ್ಧರಾಗಿದ್ದರು.

ಹೀರಾ ಮಂಡಿ ದಂಗಲ್‌ಗಳು ಎಂದು ಕರೆಯಲಾಗುವ ಕೆಲವು ಸಂಗೀತ ಜುಗಲ್‌ಬಂದಿಗಳನ್ನು ಆಯೋಜಿಸಿತ್ತು. ಈ ಸಮಾರಂಭಗಳು ಸಂಗೀತಗಾರರಿಗೆ ಸ್ಪರ್ಧಿಸಲು ಒಂದು ಸಾರ್ವಜನಿಕ ವೇದಿಕೆಯನ್ನು ಸೃಷ್ಟಿಸಿತ್ತು. 1940ರ ದಶಕದಲ್ಲಿ ಉಸ್ತಾದ್ ಬರಾಯ್ ಘುಲಾಮ್ ಅಲಿ ಖಾನ್ ಮತ್ತು ಉಸ್ತಾದ್ ಉಮೀದ್ ಅಲಿ ಖಾನ್ ಅವರ ನಡುವೆ ಒಂದು ಪ್ರಸಿದ್ಧ ಸ್ಪರ್ಧೆ ಹೀರಾ ಮಂಡಿಯಲ್ಲಿ ನಡೆದಿತ್ತು. ಈ ಸಂಗೀತ ಸ್ಪರ್ಧೆಯಲ್ಲಿ ಇಬ್ಬರು ದಿಗ್ಗಜ ಸಂಗೀತಗಾರರು ತಮ್ಮ ಅಸಾಧಾರಣ ಪಾಂಡಿತ್ಯ, ಪ್ರತಿಭೆ ಪ್ರದರ್ಶಿಸಿದ್ದರು. ಅವರಿಬ್ಬರು ಸುದೀರ್ಘ ಅವಧಿಗೆ ಹಾಡುತ್ತಾ ಸಾಗಿದ್ದರು‌. ಇಬ್ಬರೂ ಸೋಲೊಪ್ಪಿಕೊಳ್ಳಲು ಸಿದ್ಧರಿಲ್ಲದೆ, ದಣಿವಿನ ಲಕ್ಷಣವನ್ನೂ ತೋರಿಸದೆ ಹಾಡುತ್ತಿದ್ದರು. ಆದ್ದರಿಂದ ಅವರ ಹಾಡುಗಾರಿಕೆ ಬೆಳಗಿನ ತನಕವೂ ಸಾಗಿತ್ತು. ಅಂತಿಮವಾಗಿ, ಸ್ವತಃ ಪ್ರಸಿದ್ಧ ಸಂಗೀತಗಾರರಾದ ಪಂಡಿತ್ ಜೀವನ್ ಲಾಲ್ ಮಟ್ಟೂ ಅವರು ಮಧ್ಯ ಪ್ರವೇಶಿಸಿ, ಸಂಗೀತ 'ಯುದ್ಧ' ನಡೆಸುತ್ತಿದ್ದ ಇಬ್ಬರು ಹಾಡುಗಾರರನ್ನು ಪ್ರತ್ಯೇಕಿಸಿದ್ದರು. ಬಳಿಕ ಗೌರವ - ಪುರಸ್ಕಾರಗಳನ್ನು ಇಬ್ಬರು ದಿಗ್ಗಜರಿಗೆ ಸಮಾನವಾಗಿ ಹಂಚಲಾಯಿತು.

ಜನಪ್ರಿಯ ಉರ್ದು ಸಾಹಿತಿ ಸಾದತ್ ಹಸನ್ ಮಂಟೋ ಅವರ ಸಣ್ಣ ಕತೆಯಾದ 'ನಯಾ ಕಾನೂನ್'ನಲ್ಲಿ ಹೀರಾ ಮಂಡಿಯನ್ನು ಪ್ರಸ್ತಾಪಿಸಿದ್ದರು. ಈ ಕತೆ 1935ರ ಗವರ್ನಮೆಂಟ್ ಆಫ್ ಇಂಡಿಯಾ ಆ್ಯಕ್ಟ್‌ನ ಹಿನ್ನೆಲೆಯಲ್ಲಿ ರಚಿಸಲ್ಪಟ್ಟಿದ್ದು, ಬ್ರಿಟಿಷ್ ಆಡಳಿತದಲ್ಲಿ ಪೂರ್ಣಗೊಳ್ಳದ ಭಾರತೀಯರ ನಂಬಿಕೆ ಮತ್ತು ನಿರೀಕ್ಷೆಗಳನ್ನು ವಸ್ತುವಾಗಿ ಹೊಂದಿತ್ತು. ಮಂಟೋ ಈ ಕತೆಯನ್ನು ಮುಂಬೈನಲ್ಲಿ ಜೀವನ ನಡೆಸುವ ಸಂದರ್ಭದಲ್ಲಿ, 1930ರ ದಶಕದಲ್ಲಿ ಬರೆದಿದ್ದರು. ಆದರೆ 1993-94ರಲ್ಲಿ ಪಾಕಿಸ್ತಾನದ ಸಿಂಧ್ ಪಠ್ಯಪುಸ್ತಕ ಸಮಿತಿ 11 ಮತ್ತು 12ನೇ ತರಗತಿಯ ಉರ್ದು ಪಠ್ಯಪುಸ್ತಕವನ್ನು ಪರಿಷ್ಕರಿಸಿ, ಮಾಂಟೋ ಅವರ ಕತೆಯನ್ನು ಒಳಗೊಳ್ಳಲು ನಿರ್ಧರಿಸಿದಾಗ ಕತೆಗೆ ಮತ್ತೆ ಜನಪ್ರಿಯತೆ ಲಭಿಸಿತು. ಕತೆಯಲ್ಲಿ 'ಹೀರಾ ಮಂಡಿ' ಎಂಬ ಹೆಸರನ್ನು ಕೇವಲ 'ಮಂಡಿ' ಎಂದು ಬಳಸಲಾಗಿತ್ತು.

ಭಾರತದ ಸ್ವಾತಂತ್ರ್ಯದ ಬಳಿಕ, ಹೀರಾ ಮಂಡಿ ಲೈಂಗಿಕ ಕಾರ್ಯಕರ್ತರ ಕೇಂದ್ರವಾಗಿಯೂ, ಮನೋರಂಜನಾ ಕೇಂದ್ರವಾಗಿಯೂ ಮುಂದುವರಿಯಿತು. ಈಗಾಗಲೇ ಲೈಂಗಿಕ ಕಾರ್ಯಕರ್ತೆಯರಾಗಿದ್ದ ತವಾಯಿಫ್‌ಗಳು ಕಂಜರ್ ಸಮುದಾಯಕ್ಕೆ ಸೇರಿದ್ದರು. ಆದರೆ, ಇತರ ಸಮುದಾಯಗಳ, ಪೂರ್ವ ಪಾಕಿಸ್ತಾನ ಸೇರಿದಂತೆ ವಿವಿಧ ನಂಬಿಕೆಯ, ಧರ್ಮಗಳ ಮಹಿಳೆಯರೂ ಸಹ ಹೀರಾ ಮಂಡಿಗೆ ತಲುಪಿದ್ದರು. ಅವರು ಒಂದೋ ಬಡತನದಿಂದಾಗಿ ಹೀರಾ ಮಂಡಿಗೆ ಬಂದಿದ್ದರು, ಅಥವಾ ಅವರನ್ನು ಅಕ್ರಮವಾಗಿ ಮಾನವ ಕಳ್ಳ ಸಾಗಾಣಿಕೆ ನಡೆಸಲಾಗಿತ್ತು.

1978ರಿಂದ 1988ರ ನಡುವೆ, ಮುಹಮ್ಮದ್ ಜಿಯಾ ಉಲ್ ಹಕ್ ಅವರ ಅಧ್ಯಕ್ಷೀಯ ಅವಧಿಯಲ್ಲಿ ಮುಜ್ರಾ ಮತ್ತು ಲೈಂಗಿಕ ಕಾರ್ಯಗಳ ಸಂಸ್ಕೃತಿಯನ್ನು ಹೀರಾ ಮಂಡಿಯಿಂದ ಅಳಿಸಿ ಹಾಕಲು ಗಂಭೀರವಾಗಿ ಪ್ರಯತ್ನ ನಡೆಸಲಾಗಿತ್ತು. ಆದರೆ ಈ ಪ್ರಯತ್ನಗಳು ಯಶಸ್ಸು ಕಂಡಿರಲಿಲ್ಲ. ಸರ್ಕಾರಿ ಕ್ರಮಗಳನ್ನು ತಪ್ಪಿಸಲು ಹಲವಾರು ವೇಶ್ಯಾಗೃಹಗಳು ಲಾಹೋರ್ ನಗರದ ಬೇರೆ ಬೇರೆ ಪ್ರದೇಶಗಳಿಗೆ ತೆರಳಿದವು. ಇಂಟರ್ನೆಟ್‌ ಯುಗದಲ್ಲಿ ಹೀರಾ ಮಂಡಿಯ ಲೈಂಗಿಕ ಕಾರ್ಯಕರ್ತರು ಗ್ರಾಹಕರನ್ನು ತಲುಪಲು ಸಾಮಾಜಿಕ ಜಾಲತಾಣಗಳು ಮತ್ತು ವಿವಿಧ ಆ್ಯಪ್‌ಗಳನ್ನು ಬಳಸುತ್ತಿದ್ದಾರೆ.

ತೈಲ ಭದ್ರತೆಗಾಗಿ ಭಾರತದ ಹೆಜ್ಜೆ: ಅಮೆರಿಕಾದ ವಿರುದ್ಧ ದೃಢ ನಡೆ

ಸಿಖ್ ಸಾಮ್ರಾಜ್ಯದ ಕಾಲದಲ್ಲಿ ಸ್ಥಾಪಿಸಲಾದ ಆಹಾರ ಧಾನ್ಯಗಳ ಮಾರುಕಟ್ಟೆ ಹೀರಾ ಮಂಡಿಯಿಂದ ಸ್ಥಳಾಂತರಗೊಂಡಿತು. ಆದರೆ ಹೀರಾ ಮಂಡಿಯ ಗುರುತು ಕೇವಲ ವೇಶ್ಯಾವಾಟಿಕೆಗೆ ಸೀಮಿತವಾಗಿಲ್ಲ. ಇದು ಲಾಹೋರ್ ಕೋಟೆಯ ನಗರದಲ್ಲಿ ಅತ್ಯಂತ ಜನಪ್ರಿಯ, ಜನಭರಿತ ಆಹಾರ ತಾಣಗಳನ್ನು ಹೊಂದಿದೆ. ಇಲ್ಲಿ ವಿವಿಧ ಬಗೆಯ ರಸ್ತೆ ಬದಿಯ ಖಾದ್ಯದ ಅಂಗಡಿಗಳು, ಹಳೆಯ ಕಾಲದ ಹೊಟೆಲ್‌ಗಳು, ಸಿಹಿ ತಿನಿಸುಗಳ ಅಂಗಡಿಗಳು ಅತ್ಯಂತ ಜನಪ್ರಿಯವಾಗಿವೆ. ನೀವೇನಾದರೂ ಇಲ್ಲಿನ ಯಾವುದಾದರೂ ಹೊಟೆಲಿನ ಮೇಲ್ಭಾಗಕ್ಕೆ ಹತ್ತಿದರೆ, ಲಾಹೋರಿನ ಅತ್ಯಂತ ಭವ್ಯವಾದ, ಮೊಘಲ್ ಕಾಲದ ಬಾದ್‌ಶಾಹಿ ಮಸೀದಿಯ ಸುಂದರ ದೃಶ್ಯವನ್ನು ಕಾಣಬಹುದು. 

ಆಜಾದಿ ಚೌಕದ ಅಭಿವೃದ್ಧಿ, ಗ್ರೇಟರ್ ಇಕ್ಬಾಲ್ ಪಾರ್ಕ್ ನಿರ್ಮಾಣ, ಮತ್ತು ಹೆಚ್ಚಿನ ಗಿಡಮರಗಳಿಂದ ಕೂಡಿದ ಹಸಿರು ಪ್ರದೇಶಗಳು ಇಲ್ಲಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿವೆ. ಈಗ ಹೀರಾ ಮಂಡಿ ತನ್ನ ಪ್ರವಾಸೋದ್ಯಮದ ಅವಕಾಶಗಳಿಂದಾಗಿ ಜನರನ್ನು ಆಕರ್ಷಿಸುತ್ತಿದೆ. ಕಾಲದ ಜೊತೆಗೆ ಎಲ್ಲ ಪ್ರದೇಶಗಳೂ ಬದಲಾಗುತ್ತವೆ. ಇಂತಹ ಬದಲಾವಣೆಗಳಿಗೆ ಹೀರಾ ಮಂಡಿಯೂ ಹೊರತಾಗಿಲ್ಲ. ದುರದೃಷ್ಟವಶಾತ್, ಮುಜ್ರಾ ಮತ್ತು ಸಂಗೀತದ ಸಂಸ್ಕೃತಿ ಮರೆಯಾಗುತ್ತಿರುವುದರಿಂದ, ಮೊಘಲ್ ಕಾಲದ ಪ್ರದರ್ಶನ ಕಲೆಯ ಕೇಂದ್ರವಾದ ಹೀರಾ ಮಂಡಿ ತನ್ನ ಮೂಲ ಸಾರವನ್ನು ಕಳೆದುಕೊಂಡಿದೆ. ಒಂದು ಕಾಲದಲ್ಲಿ ಲಾಹೋರ್ ನಗರದ ರಾಜತ್ವದ ಸಂಕೇತವಾಗಿದ್ದ ಹಿಂದಿನ ಶಾಹಿ ಮಹಲ್, ಇಂದು ಗಾಢ ಉದ್ಯಮವೊಂದರ ನೆರಳಿನಡಿ ಗುರುತಿಸಲ್ಪಡುತ್ತಿದೆ.

Latest Videos
Follow Us:
Download App:
  • android
  • ios