Asianet Suvarna News Asianet Suvarna News

ಅಮೆರಿಕಾ ಪ್ರಾಬಲ್ಯದೆದುರು ಭಾರತದ ಸ್ವಾಯತ್ತತೆ ರಕ್ಷಿಸಲು ಮೋದಿ ಪ್ರಯತ್ನ

ಅಮೆರಿಕಾ ಈಗಾಗಲೇ ಭಾರತ ಸೇರಿದಂತೆ ಬಹಳಷ್ಟು ದೇಶಗಳೊಡನೆ ಎಲ್ಲ ಧಾರ್ಮಿಕ ಸಮುದಾಯಗಳನ್ನು ಸಮಾನವಾಗಿ ಕಾಣುವಂತೆ ಸಂವಹನ ನಡೆಸಿದೆ ಎಂದು ಅಮೆರಿಕಾದ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರರಾದ ಮ್ಯಾಥ್ಯೂ ಮಿಲ್ಲರ್ ಅಭಿಪ್ರಾಯ ಪಟ್ಟಿದ್ದಾರೆ. 
 

PM Modis attempt to protect Indias independence from American dominance gvd
Author
First Published May 23, 2024, 11:05 PM IST

ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಪಾಶ್ಚಾತ್ಯ ಮಾಧ್ಯಮಗಳು ಸಾಮಾನ್ಯವಾಗಿ ಭಾರತದಲ್ಲಿನ ಕೋಮು ಉದ್ವಿಗ್ನತೆಗಳನ್ನು ಅತಿರಂಜಿತವಾಗಿ ತೋರಿಸುತ್ತಾ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ಧಾರ್ಮಿಕ ಅಲ್ಪಸಂಖ್ಯಾತರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿವೆ. ಭಾರತದಲ್ಲಿ ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ 'ಸ್ಟ್ರೇಂಜರ್ಸ್ ಇನ್ ದೆಯರ್ ಓವ್ನ್ ಲ್ಯಾಂಡ್: ಬಿಯಿಂಗ್ ಮುಸ್ಲಿಮ್ಸ್ ಇನ್ ಮೋದಿಸ್ ಇಂಡಿಯಾ' ಎಂಬ ಲೇಖನವನ್ನು ಪ್ರಕಟಿಸಿತು. ಈ ಲೇಖನ, ಭಾರತೀಯ ಮುಸ್ಲಿಮರು ಅಭದ್ರತೆ ಮತ್ತು ತಮ್ಮ ಗುರುತು ಕಳೆದುಕೊಳ್ಳುವ ಭೀತಿಯಲ್ಲಿ ಜೀವಿಸುತ್ತಿದ್ದಾರೆ ಎಂದು ಪ್ರತಿಪಾದಿಸಿತ್ತು.

ಅಮೆರಿಕಾ ಈಗಾಗಲೇ ಭಾರತ ಸೇರಿದಂತೆ ಬಹಳಷ್ಟು ದೇಶಗಳೊಡನೆ ಎಲ್ಲ ಧಾರ್ಮಿಕ ಸಮುದಾಯಗಳನ್ನು ಸಮಾನವಾಗಿ ಕಾಣುವಂತೆ ಸಂವಹನ ನಡೆಸಿದೆ ಎಂದು ಅಮೆರಿಕಾದ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರರಾದ ಮ್ಯಾಥ್ಯೂ ಮಿಲ್ಲರ್ ಅಭಿಪ್ರಾಯ ಪಟ್ಟಿದ್ದಾರೆ. ಅಮೆರಿಕಾ ಕೆಲವು ಕಾರಣಗಳಿಗಾಗಿ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ವಿಚಾರಗಳನ್ನು ಮುನ್ನಲೆಗೆ ತರುತ್ತದೆ. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಉಪನ್ಯಾಸಕರಾದ ಸಂಜಯ್ ಕುಮಾರ್ ಪಾಂಡೆ ಅವರು ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸುತ್ತಾ, ಅಮೆರಿಕಾದ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಕೆಲವು ಬಾರಿ ನೈಜ ಕಾಳಜಿಯಿಂದ, ಕೆಲವು ಬಾರಿ ತನ್ನ ಅಜೆಂಡಾಗಳ ಕಾರಣಕ್ಕಾಗಿ ಅಲ್ಪಸಂಖ್ಯಾತ ಸಮುದಾಯಗಳ ವಿಚಾರವನ್ನು ಚರ್ಚಿಸುತ್ತದೆ ಎಂದಿದ್ದಾರೆ. ಅದರೊಡನೆ, ಅವರು ಭಾರತ ಇರಾನ್ ಜೊತೆಗೆ ಒಪ್ಪಂದ ಮಾಡಿಕೊಂಡಿರುವುದನ್ನು ಪ್ರಸ್ತಾಪಿಸಿದ್ದಾರೆ.

ತೈಲ ಭದ್ರತೆಗಾಗಿ ಭಾರತದ ಹೆಜ್ಜೆ: ಅಮೆರಿಕಾದ ವಿರುದ್ಧ ದೃಢ ನಡೆ

"ಕೆಲವೊಂದು ಸಂದರ್ಭಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಕುರಿತು ನೈಜ ಕಾಳಜಿ ಇರುತ್ತದೆ. ಆದರೆ, ಹೆಚ್ಚಿನ ಸಂದರ್ಭದಲ್ಲಿ ದೇಶಗಳು ಹೇಗೆ ವರ್ಗೀಕರಿಸಲ್ಪಡುತ್ತವೆ ಎನ್ನುವುದು ವಿದೇಶಾಂಗ ನೀತಿಯ ಅಜೆಂಡಾಗಳು ಮತ್ತು ರಾಜಕೀಯ ವಿಚಾರಗಳ ಮೇಲೆ ಅವಲಂಬಿತವಾಗಿರುತ್ತವೆ" ಎಂದು ಪಾಂಡೆ ಹೇಳಿದ್ದಾರೆ. "ಉದಾಹರಣೆಗೆ, ಭಾರತ ಇರಾನ್ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಆದರೆ ಭಾರತ ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಅಮೆರಿಕಾ ಅಥವಾ ಯುರೋಪ್ ಜೊತೆಗೆ ನಿಂತಿಲ್ಲ. ಆದರೆ ಭಾರತ ಹಿಂದೆಯೂ ಸ್ಥಿರವಾದ ನಿಲುವನ್ನು ಹೊಂದಿರುವುದರಿಂದ, ಭಾರತಕ್ಕೆ ಇಂತಹ ಟೀಕೆಗಳು ಬಾಧಿಸುವುದಿಲ್ಲ" ಎಂದು ಅವರು ಹೇಳಿದ್ದಾರೆ.

ಆದರೆ ಭಾರತ ಹಿಂದಿನಿಂದಲೂ ವಿಭಿನ್ನ ನಂಬಿಕೆಗಳನ್ನು ಹೊಂದಿರುವ ದೇಶಗಳೊಡನೆ ಉತ್ತಮ ಸಂಬಂಧ ಸಾಧಿಸಿದ ಇತಿಹಾಸವನ್ನು ಹೊಂದಿದೆ ಎಂದು ಪಾಂಡೆ ಪ್ರತಿಪಾದಿಸಿದ್ದಾರೆ. ಭಾರತ ಒಂದು ವಿಭಿನ್ನ ಮತ್ತು ವಿಶಿಷ್ಟವಾದ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಒಂದಷ್ಟು ಭಿನ್ನಾಭಿಪ್ರಾಯಗಳ ಹೊರತಾಗಿಯೂ, 19ನೇ ಶತಮಾನದ ತನಕ ಭಾರತದಲ್ಲಿ ಕ್ರುಸೇಡ್ ರೀತಿಯ ದೊಡ್ಡ ಪ್ರಮಾಣದ ಧರ್ಮ ಯುದ್ಧಗಳು ಸಂಭವಿಸಿರಲಿಲ್ಲ. ಆದರೆ 19ನೇ ಮತ್ತು 20ನೇ ಶತಮಾನದಲ್ಲಿ ಬ್ರಿಟಿಷರ ಒಡೆದು ಆಳುವ ನೀತಿಯಂತಹ ರಾಜಕಾರಣದ ಪರಿಣಾಮವಾಗಿ, ಸ್ವಾತಂತ್ರ್ಯಾನಂತರದ ಚುನಾವಣಾ ರಾಜಕೀಯವೂ ಧರ್ಮ ಮತ್ತು ಇತರ ಗುರುತಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿತು ಎಂದು ಪಾಂಡೆ ವಿವರಿಸಿದ್ದಾರೆ.

ಕ್ರುಸೇಡ್ ಎನ್ನುವುದು ಮಧ್ಯ ಯುಗದಲ್ಲಿ (5ರಿಂದ 15ನೇ ಶತಮಾನದ ಮಧ್ಯ) ನಡೆದ ಧಾರ್ಮಿಕ ಯುದ್ಧಗಳ ಸರಣಿಯಾಗಿದ್ದು, ಪ್ರಾಥಮಿಕವಾಗಿ ಕ್ರೈಸ್ತರು ಮತ್ತು ಮುಸಲ್ಮಾನರ ನಡುವೆ ನಡೆದಿತ್ತು. ಕ್ರುಸೇಡ್ ಮೂಲತಃ ಮಧ್ಯ ಪೂರ್ವ ಪ್ರದೇಶದ, ಅದರಲ್ಲೂ ಜೆರುಸಲೇಂನ ಪವಿತ್ರ ತಾಣಗಳನ್ನು ನಿಯಂತ್ರಿಸುವ ಗುರಿ ಹೊಂದಿತ್ತು. ಭಾರತ ಸ್ವಾತಂತ್ರ್ಯ ಗಳಿಸಿದ ಬಳಿಕ, ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಮತದಾರರ ಬೆಂಬಲ ಪಡೆಯಲು ಕೆಲವು ಸಂದರ್ಭಗಳಲ್ಲಿ ಧರ್ಮವನ್ನು ಬಳಸಿಕೊಂಡಿವೆ ಎಂದು ಪಾಂಡೆ ಹೇಳಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಅಂತಹ ಯಾವುದೇ ಕೋಮು ಗಲಭೆಗಳು ನಡೆದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಧರ್ಮಾಧಾರಿತ ರಾಜಕಾರಣದ ಬದಲಿಗೆ, ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಎಲ್ಲರನ್ನೂ ಸಮಾನವಾಗಿ ಕಾಣುತ್ತಾ, ಯಾವುದೇ ಭೇದ ಭಾವ ತೋರುವುದಿಲ್ಲ ಎಂದಿದ್ದಾರೆ.

ಧಾರ್ಮಿಕ ಅಲ್ಪಸಂಖ್ಯಾತರ ಕುರಿತು ಭಾರತದಲ್ಲಿ ತಾರತಮ್ಯ ನಡೆಸಲಾಗುತ್ತಿದೆ ಎಂದು ಆರೋಪಿಸಿ, ಭಾರತದ ಗೌರವವನ್ನು ಹಾಳುಗೆಡವಲು ಪಾಶ್ಚಾತ್ಯ ಮಾಧ್ಯಮಗಳು ಪ್ರಯತ್ನ ನಡೆಸುತ್ತಿರುವುದು ಇದು ಮೊದಲ ಬಾರಿಯಲ್ಲ. ಲೋಕಸಭಾ ಚುನಾವಣೆಯ ಮುನ್ನ, ಬ್ರಿಟಿಷ್ ವಾರ ಪತ್ರಿಕೆ 'ದ ಎಕನಾಮಿಸ್ಟ್' ಪ್ರಧಾನಿ ನರೇಂದ್ರ ಮೋದಿ ಅವರು ಉನ್ಮಾದದ ಹಿಂದೂ ಕೋಮುವಾದವನ್ನು ಪ್ರಚುರಪಡಿಸಿದ್ದಾರೆ ಎಂದು ಆರೋಪಿಸಿದೆ. 'ಉನ್ಮಾದದ ಹಿಂದೂ ಕೋಮುವಾದ' ಎನ್ನುವುದು ಹಿಂದೂ ಸಂಸ್ಕ್ರತಿ ಮತ್ತು ನಂಬಿಕೆಗಳನ್ನು ಪ್ರತಿಪಾದಿಸುವ ಅಹಂಕಾರದ ಹಿಂದೂ ರಾಷ್ಟ್ರೀಯವಾದವನ್ನು ಪ್ರತಿನಿಧಿಸುತ್ತದೆ.

ಭಾರತದ ಮೇಲೆ ಒತ್ತಡ ಹೇರುವ ಅಮೆರಿಕಾದ ಪ್ರಯತ್ನಗಳು ಲೋಕಸಭಾ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿಲ್ಲ ಎಂದು ಪಾಂಡೆ ಹೇಳಿದ್ದಾರೆ. ಆದರೆ, ಅಮೆರಿಕಾದ ಪ್ರಯತ್ನಗಳು ಸರ್ಕಾರದ ಮೇಲೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪರಿಣಾಮ ಬೀರಬಹುದು ಎಂದು ಅವರು ಒಪ್ಪಿಕೊಂಡಿದ್ದಾರೆ. ಆದರೆ ಇಂತಹ ಪ್ರಯತ್ನಗಳಿಗೆ ಭಾರತದ ವಿದೇಶಾಂಗ ಸಚಿವಾಲಯ ಸೂಕ್ತವಾಗಿ ಪ್ರತಿಕ್ರಿಯಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಮೆರಿಕಾ ಹೊರಿಸಿರುವ ಆರೋಪಗಳನ್ನು ಭಾರತೀಯ ಅಧಿಕಾರಿಗಳು ಬಲವಾಗಿ ತಳ್ಳಿಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಈ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ಭಾರತದ ಆಂತರಿಕ ವಿಚಾರಗಳಿಗೆ ಸಂಬಂಧಿಸಿದಂತೆ ಮಧ್ಯಪ್ರವೇಶ ಮಾಡಲು ನಡೆಸುವ ವಿದೇಶೀ ಪ್ರಯತ್ನಗಳು ಜೂನ್ 4ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಂದಾಗ ಕೊನೆಯಾಗಲಿದೆ ಎಂದಿದ್ದಾರೆ.

ಬಾಹ್ಯಾಕಾಶದ ಗಡಿಗಳಾಚೆ: ಭಾರತದ 2047ರ ಮುನ್ನೋಟ

"ಅಸಹಿಷ್ಣುತೆ ಎನ್ನುವುದು ಹಲವು ಪ್ರಕಾರಗಳಲ್ಲಿ ಕಾಣಿಸಿಕೊಳ್ಳುತ್ತದೆ. ಧಾರ್ಮಿಕ ಭಿನ್ನತೆಗಳು, ಭಿನ್ನಾಭಿಪ್ರಾಯಗಳು ಕೇವಲ ಇದರ ಉದಾಹರಣೆಗಳು. ಅಮೆರಿಕಾದಲ್ಲೂ ನಾವು ಬಿಳಿಯರು - ಕರಿಯರು ಎಂಬ ಭೇದವಿದೆ. ಏಷ್ಯಾ ಮೂಲದ ಭಾರತೀಯರು, ಚೀನೀಯರು, ಲ್ಯಾಟಿನ್ ಅಮೆರಿಕಾದ ಮೆಕ್ಸಿಕೋ, ಮತ್ತು ಕರಿಯ ಜನಾಂಗದ ಜನರನ್ನು ಗುರಿಯಾಗಿಸಲಾಗುತ್ತದೆ" ಎಂದು ಮೋದಿ ಹೇಳಿದ್ದಾರೆ. 1861ರಲ್ಲಿ ಗುಲಾಮಗಿರಿ ನಿಷೇಧ ಕಾನೂನು ಜಾರಿಗೆ ಬಂದರೂ, 1960ರ ದಶಕದಲ್ಲಿ ನಾಗರಿಕ ಹಕ್ಕು ಹೋರಾಟಗಳು ನಡೆದಿದ್ದರೂ, ಕರಿಯರು ಮತ್ತು ಏಷ್ಯನ್ನರ ವಿರುದ್ಧ ಅಮೆರಿಕಾದಲ್ಲಿ ಇಂದಿಗೂ ವರ್ಣಭೇದ ನೀತಿ ಜಾರಿಯಲ್ಲಿದೆ ಎಂದು ಸಂಜಯ್ ಕುಮಾರ್ ಪಾಂಡೆ ಹೇಳಿದ್ದಾರೆ.

Latest Videos
Follow Us:
Download App:
  • android
  • ios