ಕ್ರಿಸ್ಮಸ್‌ಗೆ ಭರ್ಜರಿ ಆಫರ್ ಘೋಷಿಸಿದ ಟ್ರಂಪ್, 2.7 ಲಕ್ಷ ರೂ ನಗದು, ಉಚಿತ ವಿಮಾನ ಟಿಕೆಟ್, ಮಾರಾಟ ಹೆಚ್ಚಾಗಲು, ಬ್ರ್ಯಾಂಡ್ ಪ್ರಮೋಶನ್‌ಗೆ ಆಫರ್ ನೀಡುವುದು ನೋಡಿದ್ದೀರಿ. ಆದರೆ ಇಲ್ಲಿ ಅಮೆರಿಕ ಅಧ್ಯಕ್ಷರೇ ಕ್ರಿಸ್ಮಸ್‌ಗೆ ಆಫರ್ ಕೊಟ್ಟಿದ್ದಾರೆ. ಒಂದು ಕಂಡೀಷನ್ ಹಾಕಿದ್ದಾರೆ.

ವಾಶಿಂಗ್ಟನ್ (ಡಿ.23) ಕಾರು, ಬೈಕ್, ಮೊಬೈಲ್, ಇ ಕಾಮರ್ಸ್ ಸೇರಿದಂತೆ ಹಲವು ಕಂಪನಿಗಳು ವಿಶೇಷ ಸಂದರ್ಭ, ಹಬ್ಬಗಳ ವೇಳೆ ಆಫರ್ ನೀಡುತ್ತಾರೆ. ಈ ಬಾರಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭರ್ಜರಿ ಆಫರ್ ಘೋಷಿಸಿದ್ದಾರೆ. ಡೋನಾಲ್ಡ್ ಟ್ರಂಪ್ ನೀಡಿದ ವಿಶೇಷ ಆಫರ್ ಪ್ಯಾಕೇಜ್‌ನಲ್ಲಿ 2.7 ಲಕ್ಷ ರೂಪಾಯಿ ನಗದು ಹಣ ನೀಡಲಿದ್ದಾರೆ. ಇದರ ಜೊತೆಗೆ ಉಚಿತ ವಿಮಾನ ಟಿಕೆಟ್ ಕೂಡ ನೀಡಲಿದ್ದಾರೆ. ಹಣ ಹಾಗೂ ಉಚಿತ ವಿಮಾನ ಟಿಕೆಟ್ ಆಫರ್ ಇದೀಗ ಅಮೆರಿಕದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಈ ಆಫರ್ ಯಾರಿಗೆ?

ಟ್ರಂಪ್ ಘೋಷಿಸಿದ ಕ್ರಿಸ್ಮಸ್ ಆಫರ್ ಯಾರಿಗೆ?

ಡೋನಾಲ್ಡ್ ಟ್ರಂಪ್ ನಿರ್ಧಾರಗಳು, ಘೋಷಣೆಗಳ ಹಿಂದಿನ ಒಳಾರ್ಥ, ಉದ್ದೇಶ ಮೇಲ್ನೋಟಕ್ಕೆ ಅರ್ಥವಾಗುವುದಿಲ್ಲ.ಹಲವು ಬಾರಿ ಟ್ರಂಪ್ ನಿರ್ಧಾರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ವಿವಾದ, ಚರ್ಚೆ ಹುಟ್ಟುಹಾಕಿದೆ. ಆದರೆ ಈ ಬಾರಿ ಕ್ರಿಸ್ಮಸ್ ಆಫರ್ ಹಿಂದೆ ಮಹತ್ತರ ಉದ್ದೇಶವಿದೆ. ಇದು ಅಕ್ರಮವಾಗಿ ಯಾರೆಲ್ಲಾ ಅಮೆರಿಕದಲ್ಲಿ ನೆಲೆಸಿದ್ದಾರೋ ಅವರಿಗೆ ನೀಡಿರುವ ಆಫರ್. ಅಕ್ರಮವಾಗಿ ಅಮೆರಿಕದಲ್ಲಿ ನೆಲೆಸಿರುವ ಮಂದಿ ಸ್ವಯಂ ಪ್ರೇರಿತವಾಗಿ ಅಮೆರಿಕ ತೊರೆಯಲು ಮುಂದಾಗುತ್ತಾರೋ ಅವರಿಗೆ 2.7 ಲಕ್ಷ ರೂಪಾಯಿ ನಗದು ಹಣ ಜೊತೆಗೆ ಅವರವರ ತವರಿಗೆ ಮರಳಲು ವಿಮಾನ ಟಿಕೆಟ್ ಉಚಿತವಾಗಿ ಡೋನಾಲ್ಡ್ ಟ್ರಂಪ್ ಸರ್ಕಾರ ನೀಡಲಿದೆ. ಇದು ಕ್ರಿಸ್ಮಸ್ ಆಫರ್.

ಅಮೆರಿಕದಲ್ಲಿ ಡಿಪಾರ್ಟ್‌ಮೆಂಟ್ ಆಫ್ ಹೋಮ್‌ಲ್ಯಾಂಡ್ ಸೆಕ್ಯೂರಿಟಿ (ಡಿಹೆಚ್ಎಸ್) ಈಗಾಗಲೇ ಅಕ್ರಮ ವಲಸಿಗರು, ಅಕ್ರಮವಾಗಿ ಅಮೆರಿಕದದಲ್ಲಿ ನೆಲೆಸಿರುವವರನ್ನು ಹುಡುಕಿ ಹುಡುಕಿ ಗಡೀಪಾರು ಮಾಡುತ್ತಿದೆ. ಹಲವು ಬಾರಿ ಕೈಗೆ ಕೋಳ ಹಾಕಿ ಗಡೀಪಾರು ಮಾಡಿದ ಉದಾಹರಣೆಗಳಿವೆ. ಡೋನಾಲ್ಡ್ ಟ್ರಂಪ್ ಆದೇಶದ ಮೇರೆಗೆ ಡಿಹೆಚ್ಎಸ್ ಹೆಚ್ಚು ಆಕ್ರಮಣಕಾರಿಯಾಗಿ ಅಕ್ರಮವಾಗಿ ನೆಲೆಸಿರುವವರನ್ನು ಗಡೀಪಾರು ಮಾಡುತ್ತಿದೆ. ಕ್ರಿಸ್ಮಸ್ ಹಬ್ಬದ ಪ್ರಯುಕ್ತ, ಅಕ್ರಮವಾಗಿ ನೆಲೆಸಿರುವರಿಗೆ ಟ್ರಂಪ್ ಆಫರ್ ನೀಡಿದ್ದಾರೆ. ಸ್ವಯಂ ಪ್ರೇರಿತವಾಗಿ ಅಮೆರಿಕ ತೊರೆಯಲು ಮುಂದಾದರೆ ನಗದು ಹಣ, ವಿಮಾನ ಟಿಕೆಟ್ ಜೊತೆಗೆ ಯಾವುದೇ ಪ್ರಕರಣವಿಲ್ಲದೆ ಕಳುಹಿಸಿಕೊಡಲಾಗುತ್ತದೆ.

ಮೇ ತಿಂಗಳಲ್ಲಿ ಘೋಷಿಸಿ ಇನ್ಸೆಂಟೀವ್‌ಗಿಂತ 3 ಪಟ್ಟು ಅಧಿಕ

ಮೇ ತಿಂಗಳಲ್ಲಿ ಇದೇ ರೀತಿಯ ಸಣ್ಣ ಆಫರ್ ಟ್ರಂಪ್ ಘೋಷಿಸಿದ್ದರು. ಸ್ವಯಂ ಪ್ರೇರಿತವಾಗಿ ಅಮೆರಿಕ ತೊರೆಯಲು ಬಯಸುವ ಅಕ್ರಮ ನೆಲೆಸಿಗನಿಗೆ 1,000 ಅಮೆರಿಕನ್ ಡಾಲರ್ ಇನ್ಸೆಂಟೀವ್ ಘೋಷಿಸಿದ್ದರು. ಇದೀಗ ಟ್ರಂಪ್ 3,000 ಅಮೆರಿಕನ್ ಡಾಲರ್ ಘೋಷಿಸಿದ್ದಾರೆ.