ಭಾರತ ಮತ್ತು ಪಾಕಿಸ್ತಾನದ ನಡುವಣ ಪರಮಾಣು ದಾಳಿ ನಿಲ್ಲಿಸಿದ್ದೇ ನಾನು ಎಂದು ಹಲವು ಬಾರಿ ಜಗತ್ತಿನ ಮುಂದೆ ಬೀಗುತ್ತಾ ಬಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸರಣಿ ಹೇಳಿಕೆ ಹಿಂದೆ, ನೊಬೆಲ್‌ ಶಾಂತಿ ಪ್ರಶಸ್ತಿಗಾಗಿ ಅವರ ಹಪಹಪಿಯೇ ಕಾರಣ ಎಂಬ ವಿಶ್ಲೇಷಣೆ ಕೇಳಿಬಂದಿದೆ.

ವಾಷಿಂಗ್ಟನ್‌: ಭಾರತ ಮತ್ತು ಪಾಕಿಸ್ತಾನದ ನಡುವಣ ಪರಮಾಣು ದಾಳಿ ನಿಲ್ಲಿಸಿದ್ದೇ ನಾನು ಎಂದು ಹಲವು ಬಾರಿ ಜಗತ್ತಿನ ಮುಂದೆ ಬೀಗುತ್ತಾ ಬಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸರಣಿ ಹೇಳಿಕೆ ಹಿಂದೆ, ನೊಬೆಲ್‌ ಶಾಂತಿ ಪ್ರಶಸ್ತಿಗಾಗಿ ಅವರ ಹಪಹಪಿಯೇ ಕಾರಣ ಎಂಬ ವಿಶ್ಲೇಷಣೆ ಕೇಳಿಬಂದಿದೆ. ಜೊತೆಗೆ ಇದೇ ಕಾರಣಕ್ಕಾಗಿಯೇ ಟ್ರಂಪ್‌, ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಂ ಮುನೀರ್‌ಗೆ ಔತಣ ಕೂಟ ಆಯೋಜಿಸಿದ್ದರು ಎಂಬುದನ್ನು ಸ್ವತಃ ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರೇ ಖಚಿತಪಡಿಸಿದ್ದಾರೆ.

ಸಾಮಾನ್ಯವಾಗಿ ಮಿತ್ರರಾಷ್ಟ್ರಗಳ ನಾಯಕರೊಂದಿಗೆ ಮಾತ್ರ ಅಮೆರಿಕ ಅಧ್ಯಕ್ಷರು ಔತಣಕೂಟದಲ್ಲಿ ಭಾಗಿಯಾಗುವುದು ರೂಢಿ. ಆದರೆ ಅಚ್ಚರಿಯೆಂಬಂತೆ, ಬುಧವಾರ ರಾತ್ರಿ ಪಾಕ್‌ನ ಸೇನಾ ಮುಖ್ಯಸ್ಥರಿಗೆ ಈ ಗೌರವ ನೀಡಲಾಗಿದೆ. ತಮ್ಮ ಅಧಿಕಾರದ ಮೊದಲ ಅವಧಿಯಲ್ಲಿ ಉಗ್ರವಾದಕ್ಕೆ ಬೆಂಬಲ ನೀಡುವ ಪಾಕ್‌ ಬಗ್ಗೆ ಕಟುಟೀಕೆ ಮಾಡುತ್ತಿದ್ದ ಟ್ರಂಪ್‌ ತಮ್ಮ 2ನೇ ಅವಧಿಯಲ್ಲಿ ಶಾಂತಿ ದೂತರಾಗುವ ದಾರಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ.

ಅಧಿಕಾರಕ್ಕೆ ಏರಿದ 15 ದಿನದಲ್ಲಿ ರಷ್ಯಾ- ಉಕ್ರೇನ್‌ ಯುದ್ಧ ನಿಲ್ಲಿಸುವೆ ಎಂದು ಹೇಳಿಕೊಂಡಿದ್ದರು. ಇರಾನ್‌ ಜೊತೆಗೆ ಹಳಸಿದ್ದ ಸಂಬಂಧ ಸುಧಾರಿಸಲು ಮಾತುಕತೆ ಪುನಾರಂಭಿಸಿದ್ದರು. ಮಧ್ಯಪ್ರಾಚ್ಯ ಬಿಕ್ಕಟ್ಟು ಇತ್ಯರ್ಥಕ್ಕೆ ಹಲವು ಬಾರಿ ಯತ್ನ ನಡೆಸಿದ್ದರು. ಜೊತೆಗೆ ಇತ್ತೀಚಿನ ಭಾರತ- ಪಾಕ್‌ ಯುದ್ಧ ನಿಲ್ಲಿಸಿದ್ದು ನಾನೇ ಎಂದು 15ಕ್ಕೂ ಹೆಚ್ಚು ಬಾರಿ ಬಹಿರಂಗವಾಗಿ ಹೇಳಿಕೊಂಡಿದ್ದರು.

ಇದೆಲ್ಲವೂ ಟ್ರಂಪ್‌, ನೊಬೆಲ್‌ ಶಾಂತಿಯ ಮೇಲೆ ಕಣ್ಣಿಟ್ಟಿರುವ ಸುಳಿವು ಎಂದು ವಿಶ್ಲೇಷಿಸಲಾಗಿದೆ.ಇನ್ನು ಮುನೀರ್‌ಗೆ ಔತಣ ನೀಡಿದ ಬಗ್ಗೆ ಪ್ರತಿಕ್ರಿಯಿಸಿರುವ ಶ್ವೇತಭವನದ ವಕ್ತಾರೆ ಅನ್ನಾ ಕೆಲ್ಲಿ, ‘ಔತಣಕೂಟವು ಭಾರತ-ಪಾಕ್‌ ನಡುವೆ ಸಂಭಾವ್ಯ ಪರಮಾಣು ಯುದ್ಧವನ್ನು ತಡೆದದ್ದಕ್ಕಾಗಿ ಟ್ರಂಪ್‌ಗೆ ನೋಬೆಲ್‌ ಶಾಂತಿ ಪುರಸ್ಕಾರ ನೀಡಬೇಕು ಎಂದು ತಮ್ಮ ಪರವಾಗಿ ಮಾತನಾಡಿದ ಹಾಗೂ ಅಮೆರಿಕ ಮೂಲದ ಜನರನ್ನು ದೇಶದ ನಿಜವಾದ ರಾಯಭಾರಿಗಳೆಂದು ಬಣ್ಣಿಸಿದ ಮುನೀರ್‌ಗೆ ಟ್ರಂಪ್‌ ನೀಡಿದ ಮೆಚ್ಚುಗೆ’ ಎಂದು ಹೇಳಿದ್ದಾರೆ.

  • ಭಾರತ ಮತ್ತು ಪಾಕಿಸ್ತಾನದ ನಡುವಣ ಪರಮಾಣು ದಾಳಿ ನಿಲ್ಲಿಸಿದ್ದೇ ನಾನು
  • ಜಗತ್ತಿನ ಮುಂದೆ ಬೀಗುತ್ತಾ ಬಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌
  • ಸರಣಿ ಹೇಳಿಕೆ ಹಿಂದೆ, ನೊಬೆಲ್‌ ಶಾಂತಿ ಪ್ರಶಸ್ತಿಗಾಗಿ ಅವರ ಹಪಹಪಿಯೇ ಕಾರಣ
  • ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಂ ಮುನೀರ್‌ಗೆ ಔತಣ ಕೂಟ