ವೆನಿಜುವೆಲಾ ಮೇಲಿನ ದಾಳಿಯ ಬೆನ್ನಲ್ಲೇ ಮೆಕ್ಸಿಕೋ, ಕ್ಯೂಬಾ, ಕೊಲಂಬಿಯಾಗೂ ಇದೇ ರೀತಿಯ ದಾಳಿಯ ಎಚ್ಚರಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ. ಡ್ರಗ್ಸ್ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿರುವ ಈ ದೇಶಗಳಿಗೂ ವೆನಿಜುವೆಲಾಗೆ ಆದ ಸ್ಥಿತಿಯೇ ಎದುರಾಗಲಿದೆ ಎಂದು ಖಡಕ್ ಸಂದೇಶ
ವಾಷಿಂಗ್ಟನ್: ವೆನಿಜುವೆಲಾ ಮೇಲಿನ ದಾಳಿಯ ಬೆನ್ನಲ್ಲೇ ಮೆಕ್ಸಿಕೋ, ಕ್ಯೂಬಾ, ಕೊಲಂಬಿಯಾಗೂ ಇದೇ ರೀತಿಯ ದಾಳಿಯ ಎಚ್ಚರಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ. ಡ್ರಗ್ಸ್ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿರುವ ಈ ದೇಶಗಳಿಗೂ ವೆನಿಜುವೆಲಾಗೆ ಆದ ಸ್ಥಿತಿಯೇ ಎದುರಾಗಲಿದೆ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.
ಮುಡುರೋ ಬಂಧನದ ಬೆನ್ನಲ್ಲೇ ಸುದ್ದಿಗೋಷ್ಠಿ
ವೆನಿಜುವೆಲಾ ಅಧ್ಯಕ್ಷ ನಿಕೋಲಸ್ ಮುಡುರೋ ಬಂಧನದ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್ ತಮ್ಮ ‘ಸಮರದಾಹ’ ಇಷ್ಟಕ್ಕೇ ನಿಲ್ಲುತ್ತಿಲ್ಲ ಎಂಬ ಸುಳುಹು ನೀಡಿದರು.
‘ಮೆಕ್ಸಿಕೋ, ಕ್ಯೂಬಾ ಮತ್ತು ಕೊಲಂಬಿಯಾ ದೇಶಗಳಲ್ಲಿ ಆಡಳಿತದಲ್ಲಿರುವ ಸರ್ಕಾರಗಳು ಅಮೆರಿಕಕ್ಕೆ ಡ್ರಗ್ಸ್ ಪೂರೈಕೆ ಮಾಡುವ ಮೂಲಕ ನಮ್ಮ ಜನರ ಬದುಕು ಹಾಳು ಮಾಡುತ್ತಿವೆ. ಹೀಗಾಗಿ ವೆನಿಜುವೆಲಾ ರೀತಿಯಲ್ಲೇ ಈ ದೇಶಗಳ ಮೇಲೂ ಕ್ರಮ ಕೈಗೊಳ್ಳುವ ಅಗತ್ಯವಿದೆ’ ಎಂದು ಎಚ್ಚರಿಸಿದರು.
ಮೆಕ್ಸಿಕೋವನ್ನು ಪ್ರಭಾವಿ ಡ್ರಗ್ಸ್ ಮಾಫಿಯಾ ಮುನ್ನಡೆಸುತ್ತಿವೆ
‘ಮೆಕ್ಸಿಕೋ ಅಧ್ಯಕ್ಷೆ ಕ್ಲೌಡಿಯಾ ಶಿನ್‌ಬಾಮ್ ಪರ್ಡೋ ಒಳ್ಳೆಯ ಮಹಿಳೆ. ಆದರೆ ಮೆಕ್ಸಿಕೋವನ್ನು ಆಕೆಯಲ್ಲ, ಪ್ರಭಾವಿ ಡ್ರಗ್ಸ್ ಮಾಫಿಯಾ ಮುನ್ನಡೆಸುತ್ತಿವೆ. ಮೆಕ್ಸಿಕೋ ವಿಚಾರದಲ್ಲಿ ಏನಾದರೂ ಕ್ರಮ ಕೈಗೊಳ್ಳಲೇಬೇಕಿದೆ’ ಎಂದರು.
‘ನಿಮ್ಮ ದೇಶದಲ್ಲಿರುವ ಡ್ರಗ್ ಮಾಫಿಯಾ ವಿರುದ್ಧ ನಾವೇ ಕ್ರಮ ಕೈಗೊಳ್ಳಬೇಕೇ ಎಂದು ನಾನು ಹಲವು ಬಾರಿ ಆಕೆಯ್ನು ಕೇಳಿದ್ದೆ. ಆಗ ಆಕೆ ಬೇಡ... ಬೇಡ... ಅಂದಿದ್ದಳು’ ಎಂದು ಇದೇ ವೇಳೆ ತಿಳಿಸಿದರು.
‘ಇನ್ನು ಕ್ಯೂಬಾದ ಪರಿಸ್ಥಿತಿಯೂ ಚೆನ್ನಾಗಿಲ್ಲ. ಅಲ್ಲಿನ ಜನ ಹಲವು ವರ್ಷಗಳಿಂದ ಸಂಕಷ್ಟದಲ್ಲಿದ್ದಾರೆ. ಕ್ಯೂಬಾ ಒಂದು ವಿಫಲ ರಾಷ್ಟ್ರ. ನಾವು ಕ್ಯೂಬಾದ ಜನರಿಗೆ ನೆರವಾಗಲು ಬಯಸಿದ್ದೇವೆ’ ಎಂದು ಟ್ರಂಪ್ ಮಾರ್ಮಿಕವಾಗಿ ನುಡಿದರು.
ಲ್ಯಾಟಿನ್ ಅಮೆರಿಕದ ಮತ್ತೊಂದು ರಾಷ್ಟ್ರ ಕೊಲಂಬಿಯಾ ಅಧ್ಯಕ್ಷ ಗುಸ್ತಾವೋ ಪೆಟ್ರೋ ವಿರುದ್ಧವೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಈ ದೇಶವು ಕನಿಷ್ಠ ಮೂರು ಪ್ರಮುಖ ಕೊಕೇನ್ ಫ್ಯಾಕ್ಟರಿಗಳನ್ನು ನಡೆಸುತ್ತಿದೆ. ಅವರು ಕೊಕೇನ್ ತಯಾರಿಸುತ್ತಿದ್ದಾರೆ. ನಂತರ ಅದನ್ನು ಅಮೆರಿಕಕ್ಕೆ ರವಾನಿಸುತ್ತಿದ್ದಾರೆ’ ಎಂದು ದೂರಿದ್ದಾರೆ.

