ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಸ್ರೇಲ್-ಲೆಬನಾನ್ ಕದನ ವಿರಾಮದ ಬಗ್ಗೆ ಗೊಂದಲಕಾರಿ ಹೇಳಿಕೆ ನೀಡಿ ಮಿತ್ರರಾಷ್ಟ್ರವನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಮತ್ತೊಂದೆಡೆ, ಹೋರ್ಮುಜ್ ಜಲಸಂಧಿ ವಿಚಾರದಲ್ಲಿ ಇರಾನ್‌ಗೆ ಎಚ್ಚರಿಕೆ ನೀಡಿದ್ದು, ಇದಕ್ಕೆ ಇರಾನ್ ಆಕ್ರೋಶ ವ್ಯಕ್ತಪಡಿಸಿದೆ.

ಅಮೆರಿಕಾದಿಂದ ಸ್ಪಷ್ಟನೆ ಕೇಳಿದ ಇಸ್ರೇಲ್

ವಾಷಿಂಗ್ಟನ್: ಲೆಬನಾನ್- ಇಸ್ರೇಲ್‌ ನಡುವೆ 10 ದಿನಗಳ ಕದನ ವಿರಾಮ ಘೋಷಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಆ ಬೆನ್ನಲ್ಲೇ ಇಸ್ರೇಲ್‌ ಲೆಬನಾನ್ ಮೇಲೆ ದಾಳಿ ಮಾಡುವುದನ್ನು ಅಮೆರಿಕ ನಿಷೇಧಿಸಿದೆ ಎಂದಿದ್ದಾರೆ. ಇದು ಸ್ವತಃ ಇಸ್ರೇಲ್‌ ಅನ್ನೇ ಗೊಂದಲಕ್ಕೀಡು ಮಾಡಿದ್ದು, ಈ ಬಗ್ಗೆ ಅಮೆರಿಕದಿಂದ ಸ್ಪಷ್ಟನೆ ಕೇಳಿದೆ ಎನ್ನಲಾಗಿದೆ. ಗುರುವಾರ ಇಸ್ರೇಲ್ - ಲೆಬನಾನ್‌ ನಡುವೆ ಕದನ ವಿರಾಮ ಏರ್ಪಟ್ಟಿತ್ತು. ಇದರ ಅನ್ವಯ ಇಸ್ರೇಲ್‌ ಆತ್ಮರಕ್ಷಣೆಗಾಗಿ ಮಿಲಿಟರಿ ಕ್ರಮ ತೆಗೆದುಕೊಳ್ಳುವ ಹಕ್ಕು ಉಳಿಸಿಕೊಂಡಿತ್ತು. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶುಕ್ರವಾರ ಅದಕ್ಕೆ ವಿರುದ್ಧವಾದ ಹೇಳಿಕೆ ನೀಡಿದ್ದಾರೆ. ಇಸ್ರೇಲ್‌ ಇನ್ನು ಮುಂದೆ ಲೆಬನಾನ್‌ ಮೇಲೆ ಬಾಂಬ್‌ ದಾಳಿ ಮಾಡುವುದಿಲ್ಲ. ಅದನ್ನು ಅಮೆರಿಕ ನಿಷೇಧಿಸಿದೆ. ಇಸ್ರೇಲ್‌ ಲೆಬನಾನ್‌ ಕಟ್ಟಡ ಸ್ಫೋಟಿಸುವುದನ್ನು ಮುಂದುವರೆಸಲು ಸಾಧ್ಯವಿಲ್ಲ. ನಾವು ಅದನ್ನು ಅನುಮತಿಸುವುದಿಲ್ಲ ಎಂದಿದ್ದರು.

ಬ್ಲಾಕ್‌ಮೇಲ್ ಮಾಡ್ಬೇಡಿ ಎಂದ ಟ್ರಂಪ್ ಹೋರ್ಮುಜ್ ಜಲಸಂಧಿ ಬಂದ್‌ ಮಾಡಿದ್ದಕ್ಕೆ ಕಿಡಿ

ವಾಷಿಂಗ್ಟನ್: ಕದನ ವಿರಾಮ ನಡುವೆಯೂ ಇರಾನ್ ಹೋರ್ಮುಜ್ ಜಲಸಂಧಿ ಬಂದ್ ಮಾಡಿರುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದು, ಇರಾನ್ ನಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಲು ಸಾಧ್ಯವಿಲ್ಲ' ಎಂದು ಗುಡುಗಿದ್ದಾರೆ. ಹೋರ್ಮುಜ್ ಜಲಸಂಧಿ ಮೇಲೆ ಅಮೆರಿಕ ಹೇರಿದ್ದ ನಿರ್ಬಂಧ ವಿರೋಧಿಸಿ ಹಡಗುಗಳ ಮುಕ್ತ ಸಂಚಾರಕ್ಕೆ ನೀಡಿದ್ದ ಅವಕಾಶವನ್ನು ಇರಾನ್ ಶನಿವಾರದಿಂದ ಹಿಂದಕ್ಕೆ ಪಡೆದಿತ್ತು.

ಈ ಬಗ್ಗೆ ಅಧ್ಯಕ್ಷರ ಕಚೇರಿಯಲ್ಲಿ ಪ್ರತಿಕ್ರಿಯಿಸಿರುವ ಡೊನಾಲ್ಡ್ ಟ್ರಂಪ್, 'ನಾವು ಇರಾನ್‌ನೊಂದಿಗೆ ಈ ವಿಷಯದ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಅವರು ಹೋರ್ಮುಜ್ ಜಲಸಂಧಿಯನ್ನು ಮತ್ತೆ ಮುಚ್ಚಲು ಬಯಸಿದ್ದಾರೆ. ಅವರು ಇದನ್ನು ಬಹಳಷ್ಟು ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ಇರಾನ್ ನಮ್ಮನ್ನು ಬ್ಲಾಕ್‌ಮೇಲ್ ಮಾಡುವುದಕ್ಕೆ ಸಾಧ್ಯವಿಲ್ಲ' ಎಂದು ಎಚ್ಚರಿಕೆ ನೀಡಿದ್ದಾರೆ.

ಒಂದೇ ಗಂಟೆಯಲ್ಲಿ ಟ್ರಂಪ್‌ನಿಂದ 7 ಸುಳ್ಳು:

ಟೆಹ್ರಾನ್: ಗಂಟೆಗೊಂದು ಗೊಂದಲದ ಹೇಳಿಕೆ ಮೂಲಕ ಸ್ವತಃ ಮಿತ್ರ ದೇಶ ಇಸ್ರೇಲ್ ಮಾತ್ರವಲ್ಲದೇ ಶತ್ರು ದೇಶ ಇರಾನ್ ಅನ್ನೂ ಗೊಂದಲದಲ್ಲಿ ಬೀಳಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 1 ಗಂಟೆಯ ಅವಧಿಯಲ್ಲಿ 7 ಸುಳ್ಳುಗಳನ್ನು ಹೇಳಿದ್ದಾರೆ ಎಂದು ಇರಾನ್ ಆರೋಪಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಘಾಲಿಬಾಫ್, 'ಇಂಥ ಸುಳ್ಳುಗಳ ಮೂಲಕ ಅವರು ಯುದ್ಧವನ್ನೂ ಗೆಲ್ಲಲಾಗುವುದಿಲ್ಲ ಮತ್ತು ಸಂಧಾನ ಮಾತುಕತೆಯಲ್ಲೂ ಯಾವುದೇ ಫಲ ಕಾಣಲು ಸಾಧ್ಯವಿಲ್ಲ. ಒಂದು ಗಂಟೆಯ ಅವಧಿಯಲ್ಲಿ ಟ್ರಂಪ್ 7 ಸುಳ್ಳು ಹೇಳಿದ್ದಾರೆ. ಅವರು ಹೇಳಿದ ಯಾವುದೇ ಮಾತುಗಳೂ ಸತ್ಯವಲ್ಲ' ಎಂದು ಹೇಳಿದ್ದಾರೆ. ಆದರೆ 7 ಸುಳ್ಳುಗಳು ಯಾವುದು ಎಂಬುದರ ಬಗ್ಗೆ ಸ್ಪೀಕರ್ ಬೆಳಕು ಚೆಲ್ಲಿಲ್ಲ. ಇದೇ ವೇಳೆ ಸಂಸ್ಕರಿತ ಯುರೇನಿಯಂ ಅನ್ನು ಇರಾನ್ ಹಸ್ತಾಂತರಿಸಲಿದೆ ಎಂಬ ಟ್ರಂಪ್ ವಾದ ಸುಳ್ಳು.

ಈ ವಿಷಯ ಮಾತುಕತೆಯಲ್ಲಿ ಪ್ರಸ್ತಾಪವೇ ಆಗಿಲ್ಲ. ಈ ವಿಚಾರ ಮಾತುಕತೆಯಲ್ಲಿ ಪ್ರಸ್ತಾಪವೇ ಆಗಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಡಿವೊರ್ಸ್ ರೂಮರ್ಸ್‌ಗಳಿಗೆ ಬ್ರೇಕ್: 2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ರಣ್ವೀರ್ ಜೋಡಿ