ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊರ್ಮುಜ್ ಜಲಸಂಧಿ ಮೂಲಕ ಸಾಗುವ ಹಡಗುಗಳ ಮೇಲೆ ಶೇ. 20ರಷ್ಟು ಭದ್ರತಾ ಶುಲ್ಕ ವಿಧಿಸುವುದಾಗಿ ಘೋಷಿಸಿದ್ದಾರೆ. ಇರಾನ್‌ಗೆ ಪಾಠ ಕಲಿಸುವ ಈ ಕ್ರಮದಿಂದ ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆಯಾಗುವ ಆತಂಕ ಎದುರಾಗಿದೆ.

ಅಮೆರಿಕ-ಇರಾನ್ ನಡುವಿನ ಸಂಘರ್ಷ ಮತ್ತೆ ಭುಗಿಲೆದ್ದಿದ್ದು, ಮತ್ತೆ ಜಗತ್ತಿನ ಆರ್ಥಿಕತೆ ಅಲ್ಲೋಲ ಕಲ್ಲೋಲವಾಗುವ ಬಗ್ಗೆ ಚಿಂತೆಗೀಡುಮಾಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald trump) ಅವರು ತಮ್ಮನ್ನು ತಾವೇ 'ಹೊರ್ಮುಜ್ ಜಲಸಂಧಿಯ ರಕ್ಷಕ' (Guardian of the Hormuz Strait) ಎಂದು ಘೋಷಿಸಿಕೊಂಡಿದ್ದು, ಜಾಗತಿಕ ವಾಣಿಜ್ಯ ವಲಯದಲ್ಲಿ ತಲ್ಲಣ ಮೂಡಿಸುವಂತಹ ಆದೇಶವೊಂದನ್ನು ಹೊರಡಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟ್ರಂಪ್‌ನ ಈ ನಿರ್ಧಾರ ಜಾಗತಿಕವಾಗಿ ಪರಿಣಾಮ ಬೀರಲಿದೆ

ಇದರ ಅನ್ವಯ ಇನ್ಮುಂದೆ ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಪ್ರತಿಯೊಂದು ವಾಣಿಜ್ಯ ಸರಕು ಮತ್ತು ತೈಲ ಟ್ಯಾಂಕರ್‌ಗಳ ಮೇಲೆ ಶೇ. 20ರಷ್ಟು ಭಾರಿ ಭದ್ರತಾ ಶುಲ್ಕವನ್ನು ಹೇರಲಾಗುವುದು ಎಂದು ಘೋಷಿಸಿದ್ದಾರೆ. ಈ ಅನಿರೀಕ್ಷಿತ ಕ್ರಮದಿಂದ ಇರಾನ್‌ಗೆ ಶಿಕ್ಷೆ ನೀಡುವ ಮಾರ್ಗವೆಂದು ಹೇಳಲಾಗುತ್ತಿದೆ ಆದರೆ, ಈ ಒಂದು ನಿರ್ಧಾರದಿಂದ ಜಾಗತಿಕ ಮಾರುಕಟ್ಟೆಗಳು ಅಕ್ಷರಶಃ ಕಂಗಾಲಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಇದು ಅಮೆರಿಕದ 'ರಕ್ಷಕ' ಮನೋಭಾವದ ತೆರಿಗೆಯಾಗಲಿದ್ದು, ಇದರ ಪರಿಣಾಮ ಮಾತ್ರ ಜಗತ್ತಿನಾದ್ಯಂತ ಆಗಲಿದೆ.

ಭಾರತದ ಅಡುಗೆ ಮನೆಗೂ ತಟ್ಟಲಿದೆ ಬಿಸಿ

ಟ್ರಂಪ್ ಅವರ ಈ 'ತೆರಿಗೆ ದಾಳಿ'ಯ ನೇರ ಪರಿಣಾಮ ಭಾರತದ ಮೇಲೆ ಆಗುವ ಸಾಧ್ಯತೆ ದಟ್ಟವಾಗಿದೆ. ಗಲ್ಫ್ ರಾಷ್ಟ್ರಗಳಿಂದ ಬರುವ ಹಡಗುಗಳ ಮೇಲೆ ಈ ತೆರಿಗೆ ಅನ್ವಯವಾಗುವುದರಿಂದ, ಭಾರತಕ್ಕೆ ಆಮದು ಆಗುವ ವಸ್ತುಗಳ ಬೆಲೆ ಏರಿಕೆಯಾಗುವುದು ಬಹುತೇಕ ನಿಶ್ಚಿತವಾಗಿದೆ. ಇದು ಭಾರತದ ಆರ್ಥಿಕತೆಯ ಮೇಲೆ ಹೊಸದೊಂದು ಒತ್ತಡವನ್ನು ಸೃಷ್ಟಿಸಲಿದೆ. ವಿಶೇಷವಾಗಿ, ಭಾರತದ ಕೋಟ್ಯಂತರ ಮನೆಗಳ ಅಡುಗೆ ಮನೆಯ ಬಜೆಟ್‌ಗೆ ಇದು ನೇರವಾಗಿ ಕತ್ತರಿ ಹಾಕಲಿದೆ. ಈ ತೆರಿಗೆಯಿಂದಾಗಿ ಭಾರತದಲ್ಲಿ ಎಲ್‌ಪಿಜಿ (LPG) ಸಿಲಿಂಡರ್‌ಗಳ ಬೆಲೆಗಳು ಗಗನಕ್ಕೇರುವ ಆತಂಕ ಎದುರಾಗಿದೆ. ಅಷ್ಟೇ ಅಲ್ಲ, ಅಡುಗೆ ಅನಿಲದ ಸಂಪೂರ್ಣ ಪೂರೈಕೆ ಸರಪಳಿಯೇ ಬುಡಮೇಲಾಗುವ ಅಪಾಯವಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಒಂದು ಕಡೆ ಇರಾನ್‌ಗೆ ಬಿಸಿ ಮುಟ್ಟಿಸುವ ಯತ್ನವಾದರೆ, ಇನ್ನೊಂದೆಡೆ ಭಾರತದಂತಹ ರಾಷ್ಟ್ರಗಳ ಆರ್ಥಿಕತೆಯ ಮೇಲೆ ಇದು ದೊಡ್ಡ ಹೊಡೆತ ನೀಡಲಿದೆ. ಟ್ರಂಪ್ ಅವರ ಹುಚ್ಚುತನದ ನಿರ್ಧಾರವು ಜಾಗತಿಕ ವಾಣಿಜ್ಯ ಸಮೀಕರಣಗಳನ್ನೇ ಬದಲಿಸುವ ಸೂಚನೆ ನೀಡಿದ್ದು, ಮುಂದೇನಾಗಲಿದೆಯೋ ಎಂಬ ಆತಂಕವಂತೂ ಇದೆ..