- Home
- News
- World News
- ಕೊನೆಗೂ ಸಿಕ್ತು ಗುಡ್ ನ್ಯೂಸ್! ಸಹಜ ಸ್ಥಿತಿಗೆ ಮರುಳಿದ ಹಾರ್ಮೋಜ್ ಜಲಸಂಧಿ, ಭಾರತಕ್ಕೆ ಬಂತು LNG ಹಡಗು
ಕೊನೆಗೂ ಸಿಕ್ತು ಗುಡ್ ನ್ಯೂಸ್! ಸಹಜ ಸ್ಥಿತಿಗೆ ಮರುಳಿದ ಹಾರ್ಮೋಜ್ ಜಲಸಂಧಿ, ಭಾರತಕ್ಕೆ ಬಂತು LNG ಹಡಗು
ಅಮೆರಿಕ ಸೇನಾ ದಿಗ್ಬಂಧನ ತೆರವಾದ ನಂತರ ಹಾರ್ಮೋಜ್ ಜಲಸಂಧಿಯಿಂದ ಭಾರತಕ್ಕೆ ಇಂಧನ ಹೊತ್ತ ಹಡಗುಗಳು ಬರಲಾರಂಭಿಸಿವೆ. ಅಮೆರಿಕ-ಇರಾನ್ ನಡುವಿನ ತಾತ್ಕಾಲಿಕ ಒಪ್ಪಂದದ ಮೇಲಿರುವ ಈ ವ್ಯವಸ್ಥೆಯು ಮುಂದಿನ 60 ದಿನಗಳವರೆಗೆ ಜಗತ್ತಿಗೆ ಕುತೂಹಲ ಮೂಡಿಸಿದೆ.

ಹಾರ್ಮೋಜ್ ಜಲಸಂಧಿ
ಅಮೆರಿಕ ಸೇನಾ ದಿಗ್ಬಂಧನ ತೆರವುಗೊಳಿಸಿದ ನಂತರ ಹಾರ್ಮೋಜ್ ಜಲಸಂಧಿಯಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ. ಭಾರತಕ್ಕೆ ಹೊರಟಿದ್ದ ಮೊದಲ ಹಡಗು ಇಂದು ಗುಜರಾತ್‌ನ ದಹೇಜ್ ಬಂದರನ್ನು ತಲುಪಲಿದೆ. ಈ ಹಡಗು ಬರೋಬ್ಬರಿ 62,370 ಮೆಟ್ರಿಕ್ ಟನ್ ಎಲ್‌ಎನ್‌ಜಿ (ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್) ಹೊತ್ತು ತರುತ್ತಿದೆ.
34 ಭಾರತೀಯ ಹಡಗುಗಳು
ಯುದ್ಧದ ಕಾರಣದಿಂದಾಗಿ ಈ ಹಡಗು ಕಳೆದ ಮೂರು ತಿಂಗಳಿಂದಲೂ ಹೆಚ್ಚು ಕಾಲ ಅಲ್ಲೇ ಸಿಲುಕಿಕೊಂಡಿತ್ತು. ಇಂಧನ ಮತ್ತು ರಸಗೊಬ್ಬರಗಳನ್ನು ಹೊತ್ತಿರುವ ಇನ್ನೂ 34 ಭಾರತೀಯ ಹಡಗುಗಳು ಶೀಘ್ರದಲ್ಲೇ ಭಾರತಕ್ಕೆ ಬರಲಿವೆ. ಕೇಂದ್ರ ಸರ್ಕಾರವು ಪರಿಸ್ಥಿತಿಯ ಮೇಲೆ ನಿಗಾ ಇರಿಸಿದೆ.
'ದಿಶಾ' ಹೆಸರಿನ ಹಡಗು ಯಶಸ್ವಿಯಾಗಿ ಜಲಸಂಧಿಯನ್ನು ದಾಟಿದ ಹಿನ್ನೆಲೆಯಲ್ಲಿ, ಇಂಧನ ಮತ್ತು ರಸಗೊಬ್ಬರಗಳನ್ನು ಹೊತ್ತಿರುವ ಉಳಿದ 34 ಭಾರತೀಯ ಹಡಗುಗಳು ಕೂಡ ಭಾರತದತ್ತ ಪ್ರಯಾಣ ಬೆಳೆಸಲು ಸಿದ್ಧವಾಗಿವೆ.
ಹಡಗುಗಳ ಮೇಲೆ ಕೇಂದ್ರ ಸರ್ಕಾರದ ನಿಗಾ
ಇತ್ತೀಚೆಗೆ ಓಮನ್ ಕರಾವಳಿ ಬಳಿ ಅಮೆರಿಕ ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಭಾರತೀಯ ಹಡಗುಗಳ ಸುರಕ್ಷತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಈ ಹಡಗುಗಳು ಹಾರ್ಮೋಜ್ ಜಲಸಂಧಿ ದಾಟಿ ಭಾರತಕ್ಕೆ ಬಂದ ನಂತರ, ದೇಶದಲ್ಲಿ ಕೆಲವು ದಿನಗಳಿಂದ ಉಂಟಾಗಿದ್ದ ಇಂಧನ ಬಿಕ್ಕಟ್ಟು ನಿವಾರಣೆಯಾಗಲಿದೆ ಎಂದು ಸರ್ಕಾರ ಭಾವಿಸಿದೆ.
ಶಾಂತಿ ಒಪ್ಪಂದದಲ್ಲಿ ಏನಿದೆ?
ಒಪ್ಪಂದದ ಪ್ರಕಾರ, ಮುಂದಿನ 30 ದಿನಗಳಲ್ಲಿ ಇರಾನ್‌ನ ಸಂಪೂರ್ಣ ನೌಕಾ ದಿಗ್ಬಂಧನವನ್ನು ತೆಗೆದುಹಾಕಲು ಅಮೆರಿಕ ಒಪ್ಪಿಕೊಂಡಿದೆ. ಯುದ್ಧಕ್ಕೂ ಮೊದಲು ಹಡಗುಗಳು ಯಾವುದೇ ಅಡೆತಡೆ ಇಲ್ಲದೆ ಸಂಚರಿಸುತ್ತಿದ್ದ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರಲಾಗುತ್ತದೆ. ಅಂತಿಮ ಒಪ್ಪಂದಕ್ಕೆ ಸಹಿ ಹಾಕಿದ 30 ದಿನಗಳೊಳಗೆ, ಅಮೆರಿಕವು ಇರಾನ್ ಸುತ್ತಮುತ್ತಲಿನ ಆಯಕಟ್ಟಿನ ಪ್ರದೇಶಗಳಿಂದ ತನ್ನ ಬೃಹತ್ ಸೇನೆಯನ್ನು ಶಾಶ್ವತವಾಗಿ ಹಿಂಪಡೆಯಲಿದೆ ಎಂಬುದು ಈ ಒಪ್ಪಂದದ ಅತಿದೊಡ್ಡ ಟ್ವಿಸ್ಟ್.
60 ದಿನಗಳ ಸಸ್ಪೆನ್ಸ್
ಇದಕ್ಕೆ ಪ್ರತಿಯಾಗಿ, ಇರಾನ್ ಮುಂದಿನ 60 ದಿನಗಳವರೆಗೆ ಯಾವುದೇ ತೆರಿಗೆ ಅಥವಾ ಶುಲ್ಕವಿಲ್ಲದೆ ಎಲ್ಲಾ ವಾಣಿಜ್ಯ ಹಡಗುಗಳಿಗೆ ಸುರಕ್ಷಿತ ಮಾರ್ಗ ನೀಡುವುದಾಗಿ ಭರವಸೆ ನೀಡಿದೆ. ಒಂದು ವೇಳೆ ಮುಂದಿನ 60 ದಿನಗಳಲ್ಲಿ ಎರಡೂ ದೇಶಗಳು ಅಂತಿಮ ನಿರ್ಧಾರಕ್ಕೆ ಬರದಿದ್ದರೆ, ಈ ಇಡೀ ಪ್ರಯತ್ನ ವ್ಯರ್ಥವಾಗಲಿದೆ. ಹೀಗಾಗಿ ಈ 60 ದಿನಗಳು ಇಡೀ ಜಗತ್ತಿಗೆ ಒಂದು ಸಸ್ಪೆನ್ಸ್ ಥ್ರಿಲ್ಲರ್‌ನಂತಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

