ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಕ್ರಮ ಮಾದಕವಸ್ತು ಉತ್ಪಾದನೆ ಮತ್ತು ಕಳ್ಳಸಾಗಣೆಯಲ್ಲಿ ತೊಡಗಿರುವ 23 ಪ್ರಮುಖ ದೇಶಗಳ ಪಟ್ಟಿಯಲ್ಲಿ ಭಾರತವನ್ನು ಸೇರಿಸಿದ್ದಾರೆ. ಚೀನಾ, ಪಾಕಿಸ್ತಾನದಂತಹ ದೇಶಗಳ ಜೊತೆ ಭಾರತವನ್ನು ಹೆಸರಿಸಿರುವುದು ಆಘಾತ ಮೂಡಿಸಿದೆ.

ವಾಷಿಂಗ್ಟನ್ (ಸೆ.17): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವನ್ನು ಅಕ್ರಮ ಮಾದಕವಸ್ತು ಉತ್ಪಾದನೆ ಮತ್ತು ಕಳ್ಳಸಾಗಣೆಯಲ್ಲಿ ತೊಡಗಿರುವ 23 ಪ್ರಮುಖ ದೇಶಗಳ ಪಟ್ಟಿಯಲ್ಲಿ ಸೇರಿಸಿದ್ದು, ಭಾರತಕ್ಕೆ ಮತ್ತೊಂದು ಆಘಾತ ನೀಡಿದ್ದಾರೆ.

ಚೀನಾ, ಅಫ್ಘಾನಿಸ್ತಾನ, ಮತ್ತು ಪಾಕಿಸ್ತಾನದ ಜೊತೆಗೆ ಭಾರತವನ್ನು ಗುರುತಿಸಿರುವ ಟ್ರಂಪ್, ಈ ದೇಶಗಳು ಅಕ್ರಮ ಔಷಧಗಳು ಮತ್ತು ಅವುಗಳ ತಯಾರಿಕೆಯ ರಾಸಾಯನಿಕಗಳ ಉತ್ಪಾದನೆ ಹಾಗೂ ಕಳ್ಳಸಾಗಣೆಯಿಂದ ಅಮೆರಿಕದ ಭದ್ರತೆಗೆ ಅಪಾಯ ಉಂಟುಮಾಡುತ್ತಿವೆ ಎಂದು ಆರೋಪಿಸಿದ್ದಾರೆ.

ಪಟ್ಟಿಯಲ್ಲಿರುವ ದೇಶಗಳು ಯಾವವು?

ಸೆಪ್ಟೆಂಬರ್ 15, 2025ರಂದು ಯುಎಸ್ ಕಾಂಗ್ರೆಸ್‌ಗೆ ಸಲ್ಲಿಸಿದ ‘ಅಧ್ಯಕ್ಷೀಯ ನಿರ್ಣಯ’ದಲ್ಲಿ ಟ್ರಂಪ್, ಅಫ್ಘಾನಿಸ್ತಾನ, ಬಹಾಮಾಸ್, ಬೆಲೀಜ್, ಬೊಲಿವಿಯಾ, ಮ್ಯಾನ್ಮಾರ್, ಚೀನಾ, ಕೊಲಂಬಿಯಾ, ಕೋಸ್ಟರಿಕಾ, ಡೊಮಿನಿಕನ್ ರಿಪಬ್ಲಿಕ್, ಈಕ್ವೆಡಾರ್, ಎಲ್ ಸಾಲ್ವಡಾರ್, ಗ್ವಾಟೆಮಾಲಾ, ಹೈಟಿ, ಹೊಂಡುರಾಸ್, ಭಾರತ, ಜಮೈಕಾ, ಲಾವೋಸ್, ಮೆಕ್ಸಿಕೊ, ನಿಕರಾಗುವಾ, ಪಾಕಿಸ್ತಾನ, ಪನಾಮ, ಪೆರು, ಮತ್ತು ವೆನೆಜುವೆಲಾವನ್ನು ಪ್ರಮುಖ ಮಾದಕವಸ್ತು ಉತ್ಪಾದನೆ ಮತ್ತು ಕಳ್ಳಸಾಗಣೆ ದೇಶಗಳೆಂದು ಗುರುತಿಸಿದ್ದಾರೆ. ಈ ದೇಶಗಳು ಅಮೆರಿಕದ ನಾಗರಿಕರ ಸುರಕ್ಷತೆಗೆ ಧಕ್ಕೆ ತರುತ್ತಿವೆ ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ.

ಈ ಪಟ್ಟಿಯಲ್ಲಿ ಉಲ್ಲೇಖಿತ 23 ದೇಶಗಳ ಪೈಕಿ, ಅಫ್ಘಾನಿಸ್ತಾನ, ಬೊಲಿವಿಯಾ, ಮ್ಯಾನ್ಮಾರ್, ಕೊಲಂಬಿಯಾ, ಮತ್ತು ವೆನೆಜುವೆಲಾವು ಅಂತಾರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ಒಪ್ಪಂದಗಳನ್ನು ಪಾಲಿಸುವಲ್ಲಿ ಸ್ಪಷ್ಟವಾಗಿ ವಿಫಲವಾಗಿವೆ ಎಂದು ಟ್ರಂಪ್ ಟೀಕಿಸಿದ್ದಾರೆ. ಇವುಗಳ ಮಾದಕ ದ್ರವ್ಯ ನಿಗ್ರಹ ಕಾರ್ಯಾಚರಣೆಗಳನ್ನು ಸುಧಾರಿಸಲು ಯುಎಸ್ ವಿದೇಶಾಂಗ ಇಲಾಖೆ ಕರೆ ನೀಡಿದೆ.

ಫೆಂಟನಿಲ್ ಉತ್ಪಾದನೆಗೆ ಚೀನಾ ಅತಿದೊಡ್ದ ಮೂಲ:

ವಿಶೇಷವಾಗಿ ಚೀನಾವನ್ನು ಫೆಂಟನಿಲ್ ಉತ್ಪಾದನೆಗೆ ಬೇಕಾದ ರಾಸಾಯನಿಕಗಳ ವಿಶ್ವದ ಅತಿದೊಡ್ಡ ಮೂಲ ಎಂದು ಟ್ರಂಪ್ ಗುರುತಿಸಿದ್ದಾರೆ. ಚೀನಾದಿಂದ ಫೆಂಟನಿಲ್, ನೈಟ್ರೇಟ್‌ಗಳು, ಮತ್ತು ಮೆಥಾಂಫೆಟಮೈನ್‌ನಂತಹ ಮಾದಕವಸ್ತುಗಳ ಜಾಗತಿಕ ಹರಡುವಿಕೆಯನ್ನು ತಡೆಗಟ್ಟಲು ಚೀನಾದ ನಾಯಕತ್ವವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಆದರೆ, ಈ ಪಟ್ಟಿಯಲ್ಲಿ ದೇಶವೊಂದರ ಉಪಸ್ಥಿತಿಯು ಆ ದೇಶದ ಸರ್ಕಾರದ ಮಾದಕವಸ್ತು ವಿರೋಧಿ ಪ್ರಯತ್ನಗಳನ್ನು ಅಥವಾ ಅಮೆರಿಕದೊಂದಿಗಿನ ಸಹಕಾರವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಯುಎಸ್ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ. ಭಾರತದ ಸಂದರ್ಭದಲ್ಲಿ, ಗೋಲ್ಡನ್ ಕ್ರೆಸೆಂಟ್ (ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾನ) ಮತ್ತು ಗೋಲ್ಡನ್ ಟ್ರಯಾಂಗಲ್ (ಮ್ಯಾನ್ಮಾರ್, ಲಾವೋಸ್, ಥೈಲ್ಯಾಂಡ್) ನಡುವೆ ಇರುವ ಭೌಗೋಳಿಕ ಸ್ಥಾನದಿಂದಾಗಿ ಭಾರತವು ನಾರ್ಕೊ-ಟೆರರಿಸಂಗೆ ಬಲಿಯಾಗಿದೆ ಎಂದು ವರದಿಗಳು ತಿಳಿಸಿವೆ.

ಈ ಆರೋಪವು ಭಾರತ-ಅಮೆರಿಕ ಸಂಬಂಧಗಳ ಮೇಲೆ ಒತ್ತಡ ಹೇರಿದ್ದು, ಈಗಾಗಲೇ ಟ್ರಂಪ್‌ರ ದ್ವಿಮುಖ ನೀತಿಗಳಿಂದ ತೊಂದರೆಯಲ್ಲಿರುವ ಭಾರತಕ್ಕೆ ಇದು ಮತ್ತೊಂದು ಹಿನ್ನಡೆಯಾಗಿದೆ.