US Security Agency Warning: ಹತ್ಯೆಯಾದ ಅಮೆರಿಕಾದ ಬಲಪಂಥೀಯ ನಾಯಕ ಚಾರ್ಲಿ ಕಿರ್ಕ್ ಅವರ ಹತ್ಯೆಯ ಬಗ್ಗೆ ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಭದ್ರತಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಹತ್ಯೆಯಾಗುವ ಸಾಧ್ಯತೆ ಶೇ.100 ರಷ್ಟಿದೆ ಎಂದು ತಿಳಿಸಲಾಗಿತ್ತು ಎಂದು ಅಮೆರಿಕಾದ ಭದ್ರತಾ ಸಂಸ್ಥೆಯೊಂದು ಹೇಳಿಕೊಂಡಿದೆ.
ಚಾರ್ಲಿ ಕಿರ್ಕ್ ಜೀವ ಬೆದರಿಕೆ ಇರುವ ಬಗ್ಗೆ ಮೊದಲೇ ಎಚ್ಚರಿಸಿದ್ದ ಭದ್ರತಾ ಏಜೆನ್ಸಿ:
US Security Agency Warning ನ್ಯೂಯಾರ್ಕ್: ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಅಮೆರಿಕಾದ ಬಲಪಂಥೀಯ ನಾಯಕ ಹಾಗೂ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತ್ಯಾಪ್ತ ಹಾಗೂ ಟ್ರಂಪ್ ಚಿಂತನೆಗಳ ಪ್ರಬಲ ಪ್ರತಿಪಾದಕ ಚಾರ್ಲಿ ಕಿರ್ಕ್ ಅವರಿಗೆ ಅವರ ಸಾವಿನ ಬಗ್ಗೆ ಮೊದಲೇ ಎಚ್ಚರಿಕೆ ನೀಡಲಾಗಿತ್ತು ಎಂಬುದು ವರದಿಯಾಗಿದೆ. ಬುಧವಾರ ಸೆಪ್ಟೆಂಬರ್ 10 ರಂದು ಚಾರ್ಲಿ ಕಿರ್ಕ್ ಅವರನ್ನು ಉತಾಹ್ ವ್ಯಾಲಿ ವಿವಿ ಆವರಣದಲ್ಲಿ ಸಾರ್ವಜನಿಕ ಭಾಷಣದಲ್ಲಿ ತೊಡಗಿದ್ದಾಗಲೇ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಆದರೆ ಅಮೆರಿಕಾದ ಉನ್ನತ ಮಟ್ಟದ ಭದ್ರತಾ ತಜ್ಞರು ಚಾರ್ಲಿ ಕಿರ್ಕ್ ಜೀವಕ್ಕೆ ಅಪಾಯ ಇರುವ ಬಗ್ಗೆ ಮೊದಲೇ ಸೂಚಿಸಿದ್ದರು ಎಂಬ ಮಾಹಿತಿ ಈಗ ಬೆಳಕಿಗೆ ಬಂದಿದೆ. ಅಗತ್ಯವಾದ ಭದ್ರತಾ ಕ್ರಮಗಳನ್ನು ಕೈಗೊಳ್ಳದೇ ಹೋದಲಿ ಚಾರ್ಲಿ ಕಿರ್ಕ್ ಅವರ ಹತ್ಯೆಯಾಗುವ ಶೇಕಡಾ100ರಷ್ಟು ಸಾಧ್ಯತೆ ಇದೆ ಎಂದು ತಿಳಿಸಲಾಗಿತ್ತು ಎಂದು ಯುಎಸ್ ಅಧಿಕಾರಿಗಳು ಹೇಳಿದ್ದಾರೆ.
ಭದ್ರತೆ ಹೆಚ್ಚಿಸದಿದ್ದರೆ ಶೇ.100 ಹತ್ಯೆಯಾಗುವ ಸಾಧ್ಯತೆ ಎಂದಿದ್ದ ಭದ್ರತಾ ಏಜೆನ್ಸಿ:
ಈ ಬಗ್ಗೆ ಅಮೆರಿಕಾದ ಅಂಗ್ಲ ಮಾಧ್ಯಮ ದಿ ಮಿರರ್ ವರದಿ ಮಾಡಿದ್ದು, ಕಾರ್ಯನಿರ್ವಾಹಕ ರಕ್ಷಣಾ ಸಂಸ್ಥೆಯಾದ ದಿ ಬಾಡಿಗಾರ್ಡ್ ಗ್ರೂಪ್ ಆಫ್ ಬೆವರ್ಲಿ ಹಿಲ್ಸ್‌ನ ಮಾಲೀಕ ಕ್ರಿಸ್ ಹೆರ್ಜಾಗ್ ಅವರು ಮಾರ್ಚ್ 6 ರಂದೇ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಚಾರ್ಲಿ ಕಿರ್ಕ್ ಅವರನ್ನು ಭೇಟಿಯಾದ ನಂತರ ಎಚ್ಚರಿಕೆ ನೀಡಲಾಗಿತ್ತು ಎಂದು ಹೇಳಿದ್ದಾಗಿ ವರದಿ ಮಾಡಿದೆ. ತಮ್ಮ ಸುರಕ್ಷತೆಯ ಬಗ್ಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ ಮುಂಬರುವ ವಿಶ್ವವಿದ್ಯಾಲಯದ ಭಾಷಣದ ಯಾವುದಾದರೂ ಕಾರ್ಯಕ್ರಮಗಳಲ್ಲಿ ಕೊಲೆಯಾಗುವ ಶೇಕಡಾ 100 ಸಾಧ್ಯತೆ ಇದೆ ಎಂದು ಸ್ವತಃ ಚಾರ್ಲಿ ಕಿರ್ಕ್ ಅವರಿಗೆ ತಿಳಿಸಲಾಗಿತ್ತು ಎಂದು ಹೇಳಿದ್ದಾರೆ.
ಒಂದೇ ಒಂದು ಬುಲೆಟ್‌ನಿಂದ ಚಾರ್ಲಿ ಕಿರ್ಕ್ ಕತೆ ಮುಗಿಸಿದ್ದ ಹಂತಕ:
ಚಾರ್ಲಿ ಕಿರ್ಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ 33 ಗಂಟೆಗಳ ನಂತರ ಗುರುವಾರ ಮಧ್ಯರಾತ್ರಿಯೇ ಶಂಕಿತ ಆರೋಪಿ ಟೈಲರ್ ರಾಬಿನ್ಸನ್‌ನನ್ನು ಪೊಲೀಸರು ಬಂಧಿಸಿದ್ದಾರೆ. 31 ವರ್ಷದ ಚಾರ್ಲಿ ಕಿರ್ಕ್ ಅವರ ಕತ್ತಿಗೇ ನೇರವಾಗಿ ಗುರಿ ಇಡುವ ಮೂಲಕ ಒಂದೇ ಒಂದು ಬುಲೆಟ್ ಫೈರ್ ಮಾಡುವ ಮೂಲಕ ಚಾರ್ಲಿ ಕಿರ್ಕ್ ಹತ್ಯೆ ಮಾಡಲಾಗಿತ್ತು. ಈ ವೇಳೆ ಅವರು ಓರಿಯಂ ನಗರದ ಉತಾಯ್ ವ್ಯಾಲಿ ವಿವಿಯಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಡೇರೆಯಲ್ಲಿ ಕುಳಿತು ಭಾಷಣ ಮಾಡುತ್ತಿದ್ದರು.
ಆತನ ಸಾವಿನ ಬಗ್ಗೆ ನನ್ನ ಭವಿಷ್ಯ ನಿಜವಾಯ್ತು ಎಂದು ಕ್ರಿಸ್ ಹೆರ್ಜಾಗ್…
ಚಾರ್ಲಿ ಕಿರ್ಕ್ ಅವರು ಭದ್ರತಾ ಸಂಸ್ಥೆಯ ಮಾಲೀಕ ಕ್ರಿಸ್ ಹೆರ್ಜಾಗ್ ಅವರ ಕೆಲ ಸಲಹೆಗಳನ್ನು ಕೇಳಿದ್ದರು. ಆದರೆ ಅವರು ನಂತರ ಹೆರ್ಜಾಗ್ ಅವರ ಜೊತೆ ಸಂಪರ್ಕದಲ್ಲಿರಲಿಲ್ಲ. ಬೇಸರದ ವಿಚಾರ ಎಂದರೆ ಆತ ಮತ್ತೆ ನನ್ನ ಸಂಪರ್ಕಕ್ಕೆ ಸಿಗಲಿಲ್ಲ, ಹಾಗೂ ಆತನ ಸಾವಿನ ಬಗ್ಗೆ ನನ್ನ ಭವಿಷ್ಯ ನಿಜವಾಯ್ತು ಎಂದು ಕ್ರಿಸ್ ಹೆರ್ಜಾಗ್ ಅವರು ಡೈಲಿ ಮೇಲ್ ಜೊತೆ ಬೇಸರ ವ್ಯಕ್ತಪಡಿಸಿದರು.
ಚಾರ್ಲಿ ಕಿರ್ಕ್‌ಗೆ ನೀಡಿರುವ ಭದ್ರತೆ ಸಾಕಾಗುವುದಿಲ್ಲ ಎಂದು ತನ್ನ ಭದ್ರತಾ ತಂಡದಲ್ಲಿರುವ ಎಲ್ಲರೂ ಭಾವಿಸಿದ್ದೆವು, ನನ್ನ ಗುಂಪಿನಲ್ಲಿರುವ ಪ್ರತಿಯೊಬ್ಬರೂ ಅವನಿಗೆ ನೀಡಿರುವ ಅವನಿಗೆ ಅಗತ್ಯವಾಗಿ ಇರಬೇಕಾದ ಭದ್ರತೆಯ ಮಟ್ಟದ ಸಮೀಪದಲ್ಲೂ ಇಲ್ಲ ಎಂದು ಭಾವಿಸಿದ್ದೆವು ಹಾಗೂ ಅವನ ಮುಂಬರುವ ಕಾರ್ಯಕ್ರಮಗಳಲ್ಲಿ ಒಂದರಲ್ಲಿ ಅವನು ಗುಂಟೇಡಿಗೆ ಬಲಿಯಾಗುವ ಅಪಾಯದಲ್ಲಿ ಇರುತ್ತಾನೆ ಎಂದು ನಾವು ಚಿಂತಿಸಿದ್ದೆವು ಎಂದು ಅವರು ಹೇಳಿದ್ದಾರೆ.
ಬುಲೆಟ್ ಪ್ರೂಫ್ ಗ್ಲಾಸ್ ಪ್ಯಾನೆಲ್ ಬಳಸುವಂತೆ ಎಚ್ಚರಿಕೆ ನೀಡಲಾಗಿತ್ತು:
ತಮ್ಮ ಭದ್ರತಾ ತಜ್ಞರು, ಆತನಿಗೆ ಬುಲೆಟ್ ಪ್ರೂಫ್ ಗ್ಲಾಸ್ ಪ್ಯಾನೆಲ್ ಬಳಸುವಂತೆ ಹಾಗೂ ಆತನಿಂದ 700 ಮೀಟರ್ ದೂರದವರೆಗೆ ಇರುವ ಎಲ್ಲರನ್ನು ಪರೀಕ್ಷಿಸಲು ಲೋಹ ಶೋಧಕಗಳನ್ನು ಬಳಸುವಂತೆ ಸಲಹೆ ನೀಡಲಾಗಿತ್ತು. ಒರ್ವ ಸ್ನಿಪ್ಪರ್ ತಲೆಗೆ ನೇರವಾಗಿ ಗುಂಡು ಹಾರಿಸುವ ಸಾಧ್ಯತೆ ಹೆಚ್ಚಿದೆ. ಇದರ ಅರ್ಥ ಆತ ಬ್ಯಾಲಿಸ್ಟಿಕ್ ಗ್ಲಾಸ್ ಹೊಂದಿರುವುದು ಬಹಳ ಮುಖ್ಯ ಎಂದು ಸಲಹೆ ನೀಡಿದ್ದೆ ಎಂದು ಕ್ರಿಸ್ ಹೆರ್ಜಾಗ್ ಅವರು ಹೇಳಿದ್ದಾರೆ.
ಹಂತಕ ರಾಬಿನ್ಸನ್ ಪೊಲೀಸ್ ಕಸ್ಟಡಿಗೆ
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟೈಲರ್ ರಾಬಿನ್ಸನ್ ಎಂಬಾತನನ್ನು ಪೊಲೀಸರು ಗುರುವಾರ ರಾತ್ರಿಯೇ ಕಸ್ಟಡಿಗೆ ಪಡೆದಿದ್ದಾರೆ. ಈತನ ಕುಟುಂಬ ಸ್ನೇಹಿತನೇ ಈತನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಈತನನ್ನು ಬಂಧಿಸಲಾಗಿದೆ. ಅರೋಪಿ ರಾಬಿನ್ಸನ್ ತಾನು ಈ ಕೃತ್ಯವೆಸಗಿದೆ ಎಂದು ಅವರ ಬಳಿ ತಪ್ಪೊಪ್ಪಿಕೊಂಡ ನಂತರ ಆತನ ಕುಟುಂಬ ಸ್ನೇಹಿತರು ಪೊಲೀಸರಿಗೆ ದೂರು ನೀಡಿದ ನಂತರ ಆತನ ಬಂಧನವಾಗಿದೆ ಎಂದು ಉತಾಹ್ ಗವರ್ನರ್ ಸ್ಪೆನ್ಸರ್ ಕಾಕ್ಸ್ ಅವರು ವರದಿಗಾರರಿಗೆ ಹೇಳಿದ್ದಾರೆ. ಹಂತಕನ ಪತ್ತೆಗೆ ಲಕ್ಷ ಡಾಲರ್ ಬಹುಮಾನ ಘೋಷಿಸಲಾಗಿತ್ತು..
ಇದನ್ನೂ ಓದಿ: ಮುಸ್ಲಿಂ, ಏಷ್ಯಾದಿಂದ ವಲಸೆ ಖಂಡಿಸಿ ಲಂಡನ್‌ನಲ್ಲಿ ಭಾರಿ ಪ್ರತಿಭಟನೆ: ಪೊಲೀಸರ ಹಲ್ಲು ಉದುರಿಸಿದ ಪ್ರತಿಭಟನಾಕಾರರು
ಇದನ್ನೂ ಓದಿ: ಕೇಜಿಗೆ ಕೇವಲ 2 ರೂಪಾಯಿ 50 ಪೈಸೆಗೆ ಈರುಳ್ಳಿ ಮಾರಿ ವಿಷಾದದಿಂದ ನಕ್ಕ ರೈತ ಹೇಳಿದ್ದೇನು?: ವೀಡಿಯೋ
