ಇರಾನ್‌ ಮೇಲೆ ದಾಳಿ ಮಾಡುವುದಾಗಿ ಸುಳಿವು ನೀಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈಗ ಇರಾನ್‌ ಜತೆ ವ್ಯಾಪಾರ ವಹಿವಾಟು ನಡೆಸುವ ದೇಶಗಳ ಮೇಲೆ ಆಮದು ಸುಂಕ ಅಸ್ತ್ರ ಪ್ರಯೋಗಿಸಿದ್ದಾರೆ.

ವಾಷಿಂಗ್ಟನ್‌: ಇರಾನ್‌ ಮೇಲೆ ದಾಳಿ ಮಾಡುವುದಾಗಿ ಸುಳಿವು ನೀಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈಗ ಇರಾನ್‌ ಜತೆ ವ್ಯಾಪಾರ ವಹಿವಾಟು ನಡೆಸುವ ದೇಶಗಳ ಮೇಲೆ ಆಮದು ಸುಂಕ ಅಸ್ತ್ರ ಪ್ರಯೋಗಿಸಿದ್ದಾರೆ. ಇರಾನ್‌ ಜತೆಗೆ ವ್ಯಾಪಾರ ಮಾಡುವ ದೇಶಗಳ ಮೇಲೆ ಶೇ.25ರಷ್ಟು ಹೆಚ್ಚುವರಿ ಆಮದು ಸುಂಕ ಹೇರುವುದಾಗಿ ಘೋಷಿಸಿದ್ದಾರೆ.

ಈ ಮೂಲಕ ತಮ್ಮ ಬದ್ಧ ವೈರಿ ಹಾಗೂ ಇರಾನ್‌ ಸರ್ವಾಧಿಕಾರಿ ಅಯತೊಲ್ಲಾ ಅಲಿ ಖಮೇನಿ ಮೇಲೆ ಪರೋಕ್ಷವಾಗಿ ಒತ್ತಡ ಹೇರಿದ್ದಾರೆ.

ಈ ಹೊಸ ತೆರಿಗೆ ತಕ್ಷಣದಿಂದಲೇ ಜಾರಿಗೆ ಬರಲಿದೆ. ಇದರಿಂದಾಗಿ ಇರಾನ್‌ ಜತೆಗೆ ಅತಿ ಹೆಚ್ಚು ವ್ಯಾಪಾರ-ವಹಿವಾಟು ನಡೆಸುವ ದೇಶಗಳಾದ ಭಾರತ, ಚೀನಾ ಮತ್ತು ಯುಎಇಗೆ ಹೊಡೆತ ಬೀಳುವ ನಿರೀಕ್ಷೆ ಇದೆ.

ಟ್ರಂಪ್‌ ಘೋಷಣೆಗೆ ಭಾರತ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸರ್ಕಾರದ ಮೂಲಗಳು ಪ್ರತಿಕ್ರಿಯಿಸಿ, ‘ಇರಾನ್‌ಗೆ ಭಾರತದ ಆಮದು-ರಫ್ತು ತುಂಬಾ ಕಮ್ಮಿ. ಅದು ಟಾಪ್‌ 50 ವ್ಯಾಪಾರ ಪಾಲುದಾರ ದೇಶಗಳ ಪಟ್ಟಿಯಲ್ಲಿಲ್ಲ. ಹೀಗಾಗಿ ಭಾರತದ ಮೇಲೆ ಪರಿಣಾಮ ತುಂಬಾ ಕಮ್ಮಿ’ ಎಂದಿವೆ. ಚೀನಾ ಸರ್ಕಾರ ಮಾತ್ರ ಗರಂ ಆಗಿ ಪ್ರತಿಕ್ರಿಯಿಸಿದ್ದು, ‘ತೆರಿಗೆ ಸಮರದಲ್ಲಿ ಈವರೆಗೂ ಯಾರೂ ಗೆದ್ದಿಲ್ಲ. ನಮ್ಮ ಹಿತ ಕಾಯಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ’ ಎಂದಿದೆ.

ಯಾವ್ಯಾವ ದೇಶಗಳಿಗೆ ಸಮಸ್ಯೆ?:

ಭಾರತ, ಚೀನಾ, ಟರ್ಕಿ, ಯುಎಇ, ಪಾಕಿಸ್ತಾನ, ಅರ್ಮೇನಿಯಾ ದೇಶಗಳು ಇರಾನ್ ಜತೆಗೆ ಹೆಚ್ಚಿನ ವ್ಯಾಪಾರ ಸಂಬಂಧ ಹೊಂದಿವೆ. ಅಮೆರಿಕದ ಈ ನಿರ್ಧಾರದಿಂದಾಗಿ ಭಾರತವೂ ಸೇರಿದಂತೆ ಈ ದೇಶಗಳಿಗೆ ಶೇ.25ರಷ್ಟು ತೆರಿಗೆ ಹೊರೆ ಎದುರಿಸುವ ಭೀತಿ ಎದುರಾಗಿದೆ.

ಭಾರತದ ಮೇಲಿನ ತೆರಿಗೆ ಹೆಚ್ಚಾಗುತ್ತಾ?:

ಈ ಹಿಂದೆ ಅಮೆರಿಕವು ಭಾರತದ ವಸ್ತುಗಳ ಮೇಲೆ ಶೇ.25ರಷ್ಟು ಆಮದು ತೆರಿಗೆ ವಿಧಿಸಿತ್ತು. ಇದರ ಜತೆಗೆ ರಷ್ಯಾದಿಂದ ತೈಲ ಖರೀದಿಸುತ್ತಿರುವ ಹಿನ್ನೆಲೆಯಲ್ಲಿ ಶೇ.25ರಷ್ಟು ಹೆಚ್ಚುವರಿ ತೆರಿಗೆ ಹೇರಿತ್ತು. ಒಂದು ವೇಳೆ ಇರಾನ್ ಜತೆಗಿನ ವ್ಯಾಪಾರ-ವಹಿವಾಟಿಗಾಗಿ ಇದೀಗ ಮತ್ತೆ ಶೇ.25ರಷ್ಟು ತೆರಿಗೆ ವಿಧಿಸಿದರೆ ಭಾರತದ ಮೇಲೆ ಅಮೆರಿಕ ಒಟ್ಟು ಶೇ.75ರಷ್ಟು ತೆರಿಗೆ ವಿಧಿಸಿದಂತಾಗಲಿದೆ. ಇದು ಅಮೆರಿಕದಿಂದ ಹೆಚ್ಚು ತೆರಿಗೆಗೆ ಗುರಿಯಾಗುತ್ತಿರುವ ದೇಶಗಳ ಸಾಲಿನಲ್ಲಿ ಭಾರತವನ್ನೂ ತಂದು ನಿಲ್ಲಿಸುತ್ತದೆ.

ಭಾರತ-ಇರಾನ್ ವ್ಯಾಪಾರ ಮೇಲೆ ಏನು ಪರಿಣಾಮ?:

ಇರಾನ್‌ ಜತೆಗೆ ವ್ಯಾಪಾರ-ವ್ಯವಹಾರ ನಡೆಸುತ್ತಿರುವ ವಿಶ್ವದ 5 ಪ್ರಮುಖ ರಾಷ್ಟ್ರಗಳಲ್ಲಿ ಭಾರತವೂ ಒಂದು. ಸರ್ಕಾರಿ ಅಂಕಿ-ಅಂಶಗಳ ಪ್ರಕಾರ, 2024-25ರಲ್ಲಿ ಎರಡೂ ದೇಶಗಳ ನಡುವೆ 14,000 ಕೋಟಿ ರು. ನಷ್ಟು ವ್ಯಾಪಾರ ನಡೆದಿದೆ. ಭಾರತ 10 ಸಾವಿರ ಕೋಟಿ ರು. ವಸ್ತುಗಳನ್ನು ರಫ್ತು ಮಾಡಿದರೆ, 3,700 ಕೋಟಿ ರು. ವಸ್ತುಗಳನ್ನು ಇರಾನ್‌ನಿಂದ ಆಮದು ಮಾಡಿಕೊಂಡಿದೆ.

ಹಾಗೆ ನೋಡಿದರೆ 2019ರ ಬಳಿಕ ಭಾರತ-ಇರಾನ್ ನಡುವಿನ ವ್ಯಾಪಾರ ವಹಿವಾಟು ಕಡಿಮೆಯೇ ಆಗಿದೆ. ಟ್ರಂಪ್‌ ನಿರ್ಬಂಧಕ್ಕೆ ಮಣಿದು ಭಾರತವು ಇರಾನ್‌ನಿಂದ ತೈಲ ಆಮದನ್ನು 2019ರ ಬಳಿಕ ಸ್ಥಗಿತಗೊಳಿಸಿದೆ. 2019ರಲ್ಲಿ ಇರಾನ್‌ ಜತೆಗೆ 1.5 ಲಕ್ಷ ಕೋಟಿ ರು. ಇದ್ದ ವಹಿವಾಟು 2024ರ ವೇಳೆಗೆ 14 ಕೋಟಿ ರು.ಗೆ ಇಳಿದಿದೆ. ಅಂದರೆ ಶೇ.87ರಷ್ಟು ಕುಸಿದಿದೆ.

ಆರ್ಗ್ಯಾನಿಕ್‌ ಕೆಮಿಕಲ್‌, ಬಾಸ್ಮತಿ ಅಕ್ಕಿ, ಚಹಾ, ಸಕ್ಕರೆ, ಔಷಧಗಳು, ಹಣ್ಣುಗಳು, ಧಾನ್ಯಗಳು, ಆರ್ಟಿಫಿಷಿಯಲ್‌ ಜ್ಯುವೆಲ್ಲರಿ ಮತ್ತು ಮಾಂಸವನ್ನು ಭಾರತ ಹೆಚ್ಚಾಗಿ ರಫ್ತು ಮಾಡುತ್ತದೆ. ಭಾರತದ ಬಾಸ್ಮತಿ ಅಕ್ಕಿಗೆ ಇರಾನ್‌ ಅತಿದೊಡ್ಡ ಮಾರುಕಟ್ಟೆಯಾಗಿದೆ. ಅದೇ ರೀತಿ ಇರಾನ್‌ನಿಂದ ಮೆಥೆನಾಲ್‌, ಪೆಟ್ರೋಲಿಯಂ ಬಿಟುಮೆನ್‌, ಲಿಕ್ವಿಫೈಡ್‌ ಪ್ರೊಪೇನ್‌, ಆ್ಯಪಲ್‌ಗಳು, ಖರ್ಜೂರ ಮತ್ತು ರಾಸಾಯನಿಕಗಳನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳುತ್ತದೆ.

ಭಾರತದ ಮೇಲಿನಸುಂಕ ಬರೆ 75%!

- ಭಾರತದ ವಸ್ತುಗಳಿಗೆ ಕೆಲ ತಿಂಗಳ ಹಿಂದಿನಿಂದ ಅಮೆರಿಕ 25% ತೆರಿಗೆ ವಿಧಿಸುತ್ತಿದೆ

- ರಷ್ಯಾದಿಂದ ತೈಲ ಖರೀದಿಸುತ್ತಿರುವ ಕಾರಣ 25% ಹೆಚ್ಚುವರಿ ಸುಂಕ ಹೇರಿದೆ

- ಇದೀಗ ಇರಾನ್‌ ಜತೆ ವ್ಯವಹರಿಸುತ್ತಿರುವ ಕಾರಣ ಮತ್ತೆ ಅಮೆರಿಕದಿಂದ 25% ತೆರಿಗೆ