ಪಾಕಿಸ್ತಾನದ ಅತ್ಯಂತ ಸಕ್ರಿಯ ಪ್ರತ್ಯೇಕತಾವಾದಿ ಗುಂಪಾದ ಬಲೋಚ್ ಲಿಬರೇಶನ್ ಆರ್ಮಿ (ಬಿಎಲ್ಎ) ಮತ್ತೊಮ್ಮೆ ಸುದ್ದಿಯಲ್ಲಿದೆ.

ಪಾಕಿಸ್ತಾನದ ಅತ್ಯಂತ ಸಕ್ರಿಯ ಪ್ರತ್ಯೇಕತಾವಾದಿ ಗುಂಪಾದ ಬಲೋಚ್ ಲಿಬರೇಶನ್ ಆರ್ಮಿ (ಬಿಎಲ್ಎ) ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಬಾರಿ ಅದು ಅತಿದೊಡ್ಡ ದಾಳಿಯನ್ನೇ ಸಂಘಟಿಸಿದೆ. ಪಾಕಿಸ್ತಾನದ ಸೇನಾ ಪಡೆಗಳು, ದೇಶದ ಮೂಲಭೂತ ವ್ಯವಸ್ಥೆಗಳು, ಮತ್ತು ವಿದೇಶೀ ಹೂಡಿಕೆಗಳನ್ನು ಗುರಿಯಾಗಿಸಿ ದಾಳಿ ನಡೆಸುವುದಕ್ಕೆ ಹೆಸರಾಗಿರುವ ಬಿಎಲ್ಎ, ಈ ಬಾರಿ ಅತ್ಯಂತ ಧೈರ್ಯಶಾಲಿ ನಡೆಗೆ ಮುಂದಾಗಿದ್ದು, ಬಲೂಚಿಸ್ತಾನದಲ್ಲಿ ಪ್ರಯಾಣಿಕರ ರೈಲನ್ನು ಅಪಹರಿಸಿ, ಈ ಪ್ರದೇಶದಲ್ಲಿ ನಡೆದಿರುವ ಸಮಸ್ಯೆಯನ್ನು ಇನ್ನಷ್ಟು ಉದ್ವಿಗ್ನಗೊಳಿಸಿದೆ.

ಜಾಫರ್ ಎಕ್ಸ್‌ಪ್ರೆಸ್ ಹೈಜಾಕ್

ಮಂಗಳವಾರ, ಮಾರ್ಚ್ 11ರಂದು, ಬಿಎಲ್ಎ ಒಂಬತ್ತು ಬೋಗಿಗಳಲ್ಲಿ ಬಹುತೇಕ 500 ಜನರನ್ನು ಒಯ್ಯುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ರೈಲನ್ನು ಅಪಹರಿಸಲು ಬಿಎಲ್ಎ ಸಮಗ್ರವಾಗಿ ಯೋಜಿಸಿದ ದಾಳಿಯೊಂದನ್ನು ಸಂಘಟಿಸಿತು. ಜಾಫರ್ ಎಕ್ಸ್‌ಪ್ರೆಸ್ ರೈಲು ಬಲೂಚಿಸ್ತಾನದ ರಾಜಧಾನಿ ಕ್ವೆಟ್ಟಾದಿಂದ ಖೈಬರ್ ಪಖ್ತೂನ್‌ಖ್ವಾ ಪ್ರಾಂತ್ಯದ ಪ್ರಮುಖ ನಗರವಾದ ಪೇಶಾವರಕ್ಕೆ ಸಂಚರಿಸುತ್ತಿತ್ತು. ಈ ರೈಲನ್ನು ಗುಡಲಾರ್ ಮತ್ತು ಪಿರು ಕುನ್ರಿ ಎಂಬ ಪರ್ವತ ಪ್ರದೇಶಗಳ ಬಳಿ ಶಸ್ತ್ರಸಜ್ಜಿತ ಬಂಡುಕೋರರು ತಡೆಗಟ್ಟಿದರು.

ಪಾಕ್ ರೈಲಿನ ಮೇಲೆ ದಾಳಿ, ಪ್ರಯಾಣಿಕರ ಒತ್ತೆಯಾಳಾಗಿಸಿದ ಮೊದಲ ವಿಡಿಯೋ ಬಿಡುಗಡೆ

ವರದಿಗಳ ಪ್ರಕಾರ, ದಾಳಿಕೋರರು ಸಿಬಿ ಜಿಲ್ಲೆಯಲ್ಲಿ ರೈಲಿಗೆ ನುಗ್ಗುವ ಮುನ್ನ ರೈಲ್ವೇ ಹಳಿಯ ಭಾಗವನ್ನು ಸ್ಫೋಟಿಸಿದ್ದರು. ದಾಳಿಕೋರರು ರೈಲಿನ ಮೇಲೆ ತಮ್ಮ ನಿಯಂತ್ರಣ ಸಾಧಿಸಿ, ಮಹಿಳೆಯರು, ಮಕ್ಕಳು ಸೇರಿದಂತೆ, ಎಲ್ಲ ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಹಿಡಿದಿಟ್ಟುಕೊಂಡರು.

ಭದ್ರತಾ ಪಡೆಗಳ ಪ್ರತಿಕ್ರಿಯೆ

ಪಾಕಿಸ್ತಾನಿ ಭದ್ರತಾ ಪಡೆಗಳು ಕ್ಷಿಪ್ರವಾಗಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿ, ದಾಳಿಕೋರರೊಡನೆ ದೀರ್ಘಾವಧಿಯ ಗುಂಡಿನ ಚಕಮಕಿ ನಡೆಸಿದರು. ಇಲ್ಲಿಯ ತನಕ 157 ಪ್ರಯಾಣಿಕರನ್ನು ರಕ್ಷಿಸಿರುವುದಾಗಿ ವರದಿಗಳು ಬಂದಿದ್ದು, ಈ ಕಾರ್ಯಾಚರಣೆಯಲ್ಲಿ 27 ದಾಳಿಕೋರರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆದರೆ, ಒಂದಷ್ಟು ದಾಳಿಕೋರರು ರೈಲಿನಿಂದ ಪರಾರಿಯಾಗಿದ್ದು, ತಮ್ಮೊಡನೆ ಒಂದಷ್ಟು ಪ್ರಯಾಣಿಕರನ್ನೂ ಪರ್ವತ ಪ್ರದೇಶಗಳಿಗೆ ಹೊತ್ತೊಯ್ದಿದ್ದಾರೆ.

ರಕ್ಷಿಸಲ್ಪಟ್ಟ ಸಾರ್ವಜನಿಕರನ್ನು ಇನ್ನೊಂದು ರೈಲಿನ ಮೂಲಕ ಸುರಕ್ಷಿತವಾಗಿ ಕಚ್ಚಿ ಜಿಲ್ಲೆಯ ಮಾಚ್ ಪಟ್ಟಣಕ್ಕೆ ಕಳುಹಿಸಲಾಗಿದೆ. ಇದೇ ವೇಳೆ, ಕತ್ತಲಲ್ಲೂ ಬಂಡುಕೋರರನ್ನು ಬೆನ್ನಟ್ಟಿದ ಭದ್ರತಾ ಪಡೆಗಳು ಅವರು ಬಚ್ಚಿಟ್ಟುಕೊಂಡಿದ್ದಾರೆ ಎಂದು ನಂಬಲಾಗಿರುವ ಸುರಂಗವೊಂದನ್ನು ಸುತ್ತುವರಿದಿದ್ದಾರೆ.

ಪಾಕಿಸ್ತಾನ ರೈಲು ಹೈಜಾಕ್: 155ಕ್ಕೂ ಹೆಚ್ಚು ಒತ್ತೆಯಾಳುಗಳ ರಕ್ಷಣೆ, 27 ಬಂಡುಕೋರರ ಹತ್ಯೆ

ವೈರುಧ್ಯಮಯ ಹೇಳಿಕೆಗಳು ಮತ್ತು ಹೆಚ್ಚುತ್ತಿರುವ ಉದ್ವಿಗ್ನತೆ

ದಾಳಿಯ ಪ್ರಮಾಣ ಮತ್ತು ಸಾವುನೋವುಗಳಿಗೆ ಸಂಬಂಧಿಸಿದಂತೆ ವ್ಯತಿರಿಕ್ತವಾದ ವರದಿಗಳು ಬಂದಿವೆ. ರಾಯ್ಟರ್ಸ್ ವರದಿಯ ಪ್ರಕಾರ, ಬಿಎಲ್ಎ ಅಪಹರಣದ ಜವಾಬ್ದಾರಿ ಹೊತ್ತುಕೊಂಡಿದ್ದು, ತಾನು 30 ಭದ್ರತಾ ಸಿಬ್ಬಂದಿಗಳ ಹತ್ಯೆ ನಡೆಸಿ, ಮಿಲಿಟರಿ ಸಿಬ್ಬಂದಿಗಳೂ ಸೇರಿದಂತೆ 214 ಪ್ರಯಾಣಿಕರನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದೆ. ಆದರೆ, ಈ ವಿವರಗಳು ಇನ್ನೂ ಖಾತ್ರಿಯಾಗಿಲ್ಲ.

ಬಿಎಲ್ಎ ಒತ್ತೆಯಾಳು ಗಡುವು

ಬಿಎಲ್ಎ ಈಗಾಗಲೇ 48 ಗಂಟೆಗಳ ಗಡುವನ್ನು ಘೋಷಿಸಿದ್ದು, ಅದಕ್ಕೂ ಮುನ್ನ ಮಿಲಿಟರಿ ಬಂಧನದಲ್ಲಿರುವ ಬಲೂಚ್ ರಾಜಕೀಯ ಖೈದಿಗಳು, ಚಳವಳಿಗಾರರು, ಮತ್ತು ಮಿಲಿಟರಿ ವಶಪಡಿಸಿಕೊಂಡಿರುವ ಬಲೂಚಿಗರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದೆ. ಒಂದು ವೇಳೆ ತಮ್ಮ ಬೇಡಿಕೆ ಈಡೇರದಿದ್ದರೆ, ಅಥವಾ ಭದ್ರತಾ ಪಡೆಗಳು ಇನ್ನಷ್ಟು ಕಾರ್ಯಾಚರಣೆ ನಡೆಸಲು ಪ್ರಯತ್ನಿಸಿದರೆ, ತಾವು ಉಳಿದ ಒತ್ತೆಯಾಳುಗಳನ್ನು ಹತ್ಯೆಗೈದು, ರೈಲನ್ನು ನಾಶಪಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿ ಮುಂದುವರಿದಿದ್ದು, ರಕ್ಷಣಾ ಕಾರ್ಯಾಚರಣೆ ಸಾಗಿದೆ. ಈ ಘಟನೆ ಪಾಕಿಸ್ತಾನಿ ಆಡಳಿತಕ್ಕೆ ಬಹುದೊಡ್ಡ ಪರೀಕ್ಷೆಯಾಗಿದ್ದು, ಪಾಕ್ ಆಡಳಿತ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ಪ್ರಯತ್ನ ನಡೆಸುತ್ತಾ, ಬಲೂಚ್ ಪ್ರತ್ಯೇಕತಾವಾದಿ ಗುಂಪುಗಳ ಪ್ರಭಾವವನ್ನು ಕಡಿಮೆಗೊಳಿಸಲು ಪ್ರಯತ್ನ ನಡೆಸುತ್ತಿದೆ.

ಏನು ಈ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್ಎ)?

ಅಮೆರಿಕಾ ಸೇರಿದಂತೆ, ಹಲವು ರಾಷ್ಟ್ರಗಳು ಬಿಎಲ್ಎ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿವೆ. ಬಲೂಚಿಸ್ತಾನವನ್ನು ಸ್ವತಂತ್ರ ರಾಷ್ಟ್ರವನ್ನಾಗಿಸುವುದು ಬಿಎಲ್ಎ ಗುರಿಯಾಗಿದೆ. ಅಪಾರ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿರುವ ಬಲೂಚಿಸ್ತಾನ, ಅಫ್ಘಾನಿಸ್ತಾನ ಮತ್ತು ಇರಾನ್ ಜೊತೆ ಗಡಿ ಹಂಚಿಕೊಂಡಿದೆ. ಬಿಎಲ್ಎ ಅತ್ಯಂದ ದೀರ್ಘ ಕಾಲದಿಂದಲೂ ಪಾಕಿಸ್ತಾನದ ಫೆಡರಲ್ ಸರ್ಕಾರದ ವಿರುದ್ಧ ಹೋರಾಡುತ್ತಿರುವ, ಹಲವಾರು ಜನಾಂಗೀಯ ಬಂಡುಕೋರ ಗುಂಪುಗಳನ್ನು ಒಳಗೊಂಡ ಸಂಘಟನೆಯಾಗಿದೆ. ಬಲೂಚಿಸ್ತಾನದ ಬೆಲೆಬಾಳುವ ಅನಿಲ ಮತ್ತು ಖನಿಜಗಳನ್ನು ಸ್ಥಳೀಯ ಜನರಿಗೆ ಅನ್ಯಾಯ ಮಾಡುವ ಮೂಲಕ ಪಾಕಿಸ್ತಾನ ಕಿತ್ತುಕೊಳ್ಳುತ್ತಿದೆ ಎಂದು ಸಂಘಟನೆ ಆರೋಪಿಸಿದೆ.

ಪಾಕಿಸ್ತಾನದಲ್ಲಿ ಇಡೀ ರೈಲೇ ಬಂಡುಕೋರರಿಂದ ಹೈಜಾಕ್‌: 80 ಪ್ರಯಾಣಿಕರ ರಕ್ಷಣೆ

ಬಲೂಚಿಸ್ತಾನದಲ್ಲಿ ಪ್ರಮುಖ ಗಣಿ ಯೋಜನೆಗಳು ಚಾಲ್ತಿಯಲ್ಲಿದ್ದು, ರೆಕೊ ದಿಕ್ ಎನ್ನುವುದು ಜಗತ್ತಿನ ಅತಿದೊಡ್ಡ ಚಿನ್ನ ಮತ್ತು ತಾಮ್ರದ ಗಣಿಗಳಲ್ಲಿ ಒಂದಾಗಿದ್ದು, ಇದನ್ನು ಕೆನಡಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬಾರಿಕ್ ಗೋಲ್ಡ್ ನಿರ್ವಹಿಸುತ್ತಿದೆ. ಪಾಕಿಸ್ತಾನದ ಮೂಲಭೂತ ವ್ಯವಸ್ಥೆಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಚೀನಾ, ಈ ಪ್ರದೇಶದಲ್ಲಿ ಚಿನ್ನ ಮತ್ತು ತಾಮ್ರದ ಗಣಿಗಾರಿಕಾ ಯೋಜನೆಗಳನ್ನು ನಡೆಸುತ್ತಿದೆ.

ಮೂಲಭೂತ ವ್ಯವಸ್ಥೆ ಮತ್ತು ಜಾಗತಿಕ ಆಸಕ್ತಿ

ಬಿಎಲ್ಎ ಸಾಮಾನ್ಯವಾಗಿ ಬಲೂಚಿಸ್ತಾನದಲ್ಲಿರುವ ಮಿಲಿಟರಿ ನೆಲೆಗಳು ಮತ್ತು ಮಿಲಿಟರಿ ಮೂಲಭೂತ ವ್ಯವಸ್ಥೆಗಳನ್ನು ಗುರಿಯಾಗಿಸಿ, ದಾಳಿ ನಡೆಸುತ್ತದೆ. ಆದರೆ, ಈ ಸಂಘಟನೆ ಪಾಕಿಸ್ತಾನದ ಬೇರೆ ಸ್ಥಳಗಳಲ್ಲೂ ದಾಳಿ ನಡೆಸಿದೆ. ಉದಾಹರಣೆಗೆ, ಕಳೆದ ವರ್ಷ, ಕರಾಚಿಯಲ್ಲಿ ಈ ಸಂಘಟನೆ ವಿಮಾನ ನಿಲ್ದಾಣದ ಬಳಿ ಪೋರ್ಟ್ ಕಾಸಿಂ ಇಲೆಕ್ಟ್ರಿಕ್ ಪವರ್ ಕಂಪನಿಯ ತಂಡದ ಮೇಲೆ ಮಾರಣಾಂತಿಕ ದಾಳಿ ನಡೆಸಿತ್ತು.

ಬಿಎಲ್ಎ ಚೀನಾ - ಪಾಕಿಸ್ತಾನ್ ಎಕನಾಮಿಕ್ ಕಾರಿಡಾರ್ (ಸಿಪಿಇಸಿ) ಮತ್ತು ಗ್ವಾದರ್ ಬಂದರು ಯೋಜನೆ ಸೇರಿದಂತೆ, ಚೀನೀ ಯೋಜನೆಗಳನ್ನು ಬಲವಾಗಿ ವಿರೋಧಿಸುತ್ತಿದೆ. ಚೀನಾ ಬಲೂಚಿಸ್ತಾನದ ಸಂಪನ್ಮೂಲಗಳನ್ನು ಅಪಹರಿಸಲು ಪಾಕಿಸ್ತಾನಕ್ಕೆ ನೆರವಾಗುತ್ತಿದೆ ಎಂದು ಬಿಎಲ್ಎ ಆರೋಪಿಸಿದೆ. ಇದರ ಪರಿಣಾಮವಾಗಿ, ಹಲವಾರು ಹಿಂಸಾತ್ಮಕ ಘಟನೆಗಳು ನಡೆದಿವೆ. ಹಿಂದೆ, ಬಲೂಚಿಸ್ತಾನದಲ್ಲಿ ಬಿಎಲ್ಎ ಯೋಧರು ದಾಳಿ ನಡೆಸಿ, ಚೀನೀ ಕಾರ್ಮಿಕರನ್ನು ಹತ್ಯೆಗೈದಿದ್ದರು. ಅವರು ಕರಾಚಿಯಲ್ಲಿರುವ ಚೀನಾ ರಾಯಭಾರ ಕಚೇರಿಯನ್ನೂ ದಾಳಿಗೆ ಗುರಿಯಾಗಿಸಿದ್ದರು.

ಗೆರಿಲ್ಲಾ ಯುದ್ಧದಿಂದ ಆತ್ಮಹತ್ಯಾ ದಾಳಿ

2022ರಲ್ಲಿ, ಬಿಎಲ್ಎ ಸೇನಾ ನೆಲೆಗಳು ಮತ್ತು ನೌಕಾನೆಲೆಗಳ ಮೇಲೆ ಯೋಜಿತ ದಾಳಿಗಳನ್ನು ನಡೆಸಿ, ತನ್ನ ಮಿಲಿಟರಿ ಸಾಮರ್ಥ್ಯವನ್ನು ಪ್ರದರ್ಶಿಸಿತ್ತು. ಕಾಲ ಕಳೆದಂತೆ, ಸಂಘಟನೆ ತನ್ನ ಕಾರ್ಯತಂತ್ರಗಳನ್ನು ಬದಲಾಯಿಸುತ್ತಾ ಬಂದಿದ್ದು, ಮಹಿಳಾ ದಾಳಿಕೋರರನ್ನೂ ಒಳಗೊಂಡಿದೆ. 2022ರಲ್ಲಿ ಕರಾಚಿಯ ಒಂದು ವಿಶ್ವವಿದ್ಯಾಲಯದ ಆವರಣದಲ್ಲಿ ಚೀನೀಯರ ಮೇಲೆ ನಡೆದ ದಾಳಿ ಇದಕ್ಕೆ ಒಂದು ಉದಾಹರಣೆಯಾಗಿದೆ. ಬಿಎಲ್ಎ ಕೇವಲ ಮಿಲಿಟರಿ ವ್ಯಕ್ತಿಗಳ ಮೇಲೆ ದಾಳಿ ನಡೆಸದೆ, ಪ್ರಮುಖ ಚೀನೀ ಅಧಿಕಾರಿಗಳ ಮೇಲೂ ದಾಳಿ ನಡೆಸಿತ್ತು. ಇಂತಹ ಒಂದು ಘಟನೆ ಕಳೆದ ವರ್ಷ ಗ್ವಾದರ್‌ನಲ್ಲಿ ನಡೆದಿತ್ತು.

ಬಿಎಲ್ಎ ವ್ಯಾಪ್ತಿ ಪಾಕಿಸ್ತಾನವನ್ನೂ ಮೀರಿ ಬೆಳೆದಿದ್ದು, ಅದು ಇರಾನ್ ಜೊತೆಗಿನ ಗಡಿಯಾಚೆಗಿನ ಚಕಮಕಿಯಲ್ಲಿ ಮುಖ್ಯ ಪಾತ್ರ ವಹಿಸಿದೆ. 2024ರ ಆರಂಭದಲ್ಲಿ, ಈ ಗುಂಪಿಗೆ ಸಂಬಂಧಿಸಿದ ಹಿಂಸಾಚಾರದ ಪರಿಣಾಮವಾಗಿ, ಇರಾನ್ ಮತ್ತು ಪಾಕಿಸ್ತಾನಗಳ ನಡುವೆ ಕ್ಷಿಪಣಿ ದಾಳಿ ನಡೆದು, ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ತಲೆದೋರಿತು. ವಿದೇಶೀ ಗುಪ್ತಚರ ಸಂಸ್ಥೆಗಳು ಬಿಎಲ್ಎಗೆ ನೆರವು ನೀಡುತ್ತಿವೆ ಎಂದು ಪಾಕಿಸ್ತಾನ ಆರೋಪಿಸಿದ್ದು, ಸಂಘಟನೆ ವಿಶೇಷವಾಗಿ ಅಫ್ಘಾನಿಸ್ತಾನ ಮತ್ತು ಭಾರತದೊಡನೆ ಸಂಬಂಧ ಹೊಂದಿದೆ ಎಂದಿದೆ. ಆದರೆ, ವಿದೇಶೀ ಶಕ್ತಿಗಳ ಪಾತ್ರವಿರುವುದು ಜಾಗತಿಕ ಸಮಾಲೋಚನೆಗಳಲ್ಲಿ ಚರ್ಚೆಯ ವಿಷಯವಾಗಿಯೇ ಉಳಿದಿದೆ.

ಬಿಎಲ್ಎ ಏಕೆ ಸ್ವಾತಂತ್ರ್ಯಕ್ಕಾಗಿ ಆಗ್ರಹಿಸುತ್ತಿದೆ?

ಪಾಕಿಸ್ತಾನ ಬಲಪ್ರಯೋಗ ನಡೆಸುವ ಮೂಲಕ ಬಲೂಚಿಸ್ತಾನದ ಮೇಲೆ ನಿಯಂತ್ರಣ ಸಾಧಿಸಿದೆ ಎಂದು ಬಿಎಲ್ಎ ಆರೋಪಿಸಿದೆ. ಸಂಘಟನೆಯ ಪ್ರಕಾರ, ಮಾರ್ಚ್ 1948ರಲ್ಲಿ, ಪಾಕಿಸ್ತಾನ ಬಲೂಚಿಸ್ತಾನದ ಹಿಂದಿನ ದೊರೆ, ಖಾನ್ ಆಫ್ ಕಲಾತ್ ಮೇಲೆ ಒತ್ತಡ ಹೇರಿ, ಬಲೂಚಿಸ್ತಾನ ಪಾಕಿಸ್ತಾನದೊಡನೆ ವಿಲೀನಗೊಳ್ಳುವುದಾಗಿ ಒಪ್ಪಂದಕ್ಕೆ ಸಹಿ ಹಾಕಿಸಿತ್ತು. 2000ನೇ ದಶಕದ ಆರಂಭದಲ್ಲಿ ಆರಂಭಗೊಂಡ ಬಿಎಲ್ಎ, ಅಂದಿನಿಂದಲೂ ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದೆ.

ಪಾಕಿಸ್ತಾನ ಸ್ವತಂತ್ರ ರಾಷ್ಟ್ರವಾದಾಗ, ಗ್ವಾದರ್ ಅದರ ಭಾಗವಾಗಿರದೆ, ಒಮಾನ್ ಸುಲ್ತಾನರ ಆಡಳಿತಕ್ಕೆ ಒಳಪಟ್ಟಿತ್ತು. ಹಲವಾರು ವರ್ಷಗಳ ಮಾತುಕತೆಗಳ ಬಳಿಕ, ಪಾಕಿಸ್ತಾನ 1958ರಲ್ಲಿ ಗ್ವಾದರ್ ಅನ್ನು ಒಮಾನ್ ನಿಂದ ಖರೀದಿಸಿತು. ಪಾಕಿಸ್ತಾನದ ಜೊತೆಗಿನ ಸ್ವಾತಂತ್ರ್ಯ ಹೋರಾಟದ ಇತಿಹಾಸ ಮತ್ತು ಪಾಕಿಸ್ತಾನಕ್ಕೆ ಅದರ ಸೇರ್ಪಡೆ ಇಂದಿಗೂ ಬಲೂಚಿಸ್ತಾನದ ನೀತಿಯನ್ನು ರೂಪಿಸುತ್ತಿವೆ.

1955ರಲ್ಲಿ, ಪಾಕಿಸ್ತಾನ ಸರ್ಕಾರ ಪಶ್ಚಿಮ ಪಾಕಿಸ್ತಾನದ ವಿಭಿನ್ನ ಪ್ರಾಂತ್ಯಗಳು ಮತ್ತು ಪ್ರದೇಶಗಳನ್ನು 'ವನ್ ಯುನಿಟ್ ಪ್ಲಾನ್' ಎಂಬ ನೀತಿಯಡಿ ಒಂದಾಗಿಸುವ ನಿರ್ಧಾರಕ್ಕೆ ಬಂತು. ಈ ಯೋಜ‌ನೆ, ಆಡಳಿತಾತ್ಮಕ ಒಗ್ಗಟ್ಟು ಸಾಧಿಸಿ, ಪಶ್ಚಿಮ ಪಾಕಿಸ್ತಾನ ಮತ್ತು ಪೂರ್ವ ಪಾಕಿಸ್ತಾನಗಳ (ಈಗಿನ ಬಾಂಗ್ಲಾದೇಶ) ನಡುವೆ ಅಧಿಕಾರದ ಸಮತೋಲನ ಸಾಧಿಸುವ ಗುರಿ ಹೊಂದಿತ್ತು. ಆದರೆ, ಈ ಯೋಜನೆ ಫೆಡರಲ್ ಸರ್ಕಾರಕ್ಕೆ ಹೆಚ್ಚಿನ ನಿಯಂತ್ರಣ ನೀಡಿ, ಸ್ಥಳೀಯ ಮುಖಂಡರು ಮತ್ತು ಸಮುದಾಯಗಳ ಅಧಿಕಾರವನ್ನು ಮೊಟಕುಗೊಳಿಸಿತು. ಬಹಳಷ್ಟು ಜನರು, ಅದರಲ್ಲೂ ಬಲೂಚಿಸ್ತಾನ ಮತ್ತು ಸಿಂಧ್ ನಂತಹ ಸಣ್ಣ ಪ್ರಾಂತ್ಯಗಳ ಜನರು ಈ ಯೋಜನೆ ತಮ್ಮ ವಿಶಿಷ್ಟ ಗುರುತು ಮತ್ತು ರಾಜಕೀಯ ಹಕ್ಕುಗಳನ್ನು ಕಿತ್ತುಕೊಳ್ಳುತ್ತದೆ ಎಂದು ವಾದಿಸಿ, ಇದನ್ನು ವಿರೋಧಿಸಿದ್ದರು.

ಬಲವಾದ ವಿರೋಧದ ಪರಿಣಾಮವಾಗಿ, 'ವನ್ ಯುನಿಟ್ ಪ್ಲ್ಯಾನ್' ಅನ್ನು ಅಂತಿಮವಾಗಿ 1970ರಲ್ಲಿ ತೆಗೆದು ಹಾಕಲಾಯಿತು. ಇದು ಬಲೂಚಿಸ್ತಾನ ಸೇರಿದಂತೆ, ಹಲವಾರು ಪ್ರಾಂತ್ಯಗಳಿಗೆ ತಮ್ಮದೇ ಶಾಸನ ಸಭೆಯನ್ನು ಹೊಂದಿ, ತಮ್ಮ ಆಡಳಿತವನ್ನು ನಿರ್ವಹಿಸಲು ಅನುಕೂಲ ಮಾಡಿಕೊಟ್ಟಿತು. ಆದರೆ, ಪ್ರಾಂತ್ಯಗಳಿಗೆ ಒಂದು ಹಂತದ ನಿಯಂತ್ರಣ ಲಭಿಸಿದರೂ, ಫೆಡರಲ್ ಸರ್ಕಾರ ಮತ್ತು ಪ್ರಾಂತ್ಯಗಳ ನಡುವಿನ ನೈಜ ಅಧಿಕಾರ ಹಂಚಿಕೆ ಸಂಪೂರ್ಣವಾಗಿ ಜಾರಿಯಾಗಲೇ ಇಲ್ಲ. ಬಹಳಷ್ಟು ಸಮಸ್ಯೆಗಳು ಹಾಗೆಯೇ ಉಳಿದಿದ್ದು, ರಾಷ್ಟ್ರೀಯ ನಿರ್ಧಾರಗಳಲ್ಲಿ ತಮ್ಮ ಧ್ವನಿಯೂ ಕೇಳುವಂತೆ ಮಾಡಲು ಸಣ್ಣ ಪ್ರಾಂತ್ಯಗಳು ಶ್ರಮಪಡುವಂತಾಯಿತು. ಹಲವಾರು ಪ್ರಾಂತೀಯ ಸರ್ಕಾರಗಳನ್ನು ಅವುಗಳ ಅಧಿಕಾರಾವಧಿ ಪೂರ್ಣಗೊಳಿಸುವ ಮುನ್ನವೇ ಕಿತ್ತುಹಾಕಲಾಗಿದ್ದು, ಇಸ್ಲಾಮಾಬಾದಿನ ಕೇಂದ್ರ ಸರ್ಕಾರ ಪ್ರಾಂತ್ಯಗಳು ಹೇಗೆ ಕಾರ್ಯಾಚರಿಸಬೇಕು ಎಂಬ ಕುರಿತು ಪ್ರಮುಖ ನಿರ್ಧಾರಗಳನ್ನು ತನಗೆ ಬೇಕಾದಂತೆ ಕೈಗೊಳ್ಳುತ್ತಿತ್ತು.

ಅಂದರೆ, ಬಲೂಚಿಸ್ತಾನ ಮತ್ತು ಇತರ ಪ್ರಾಂತ್ಯಗಳು ತಮ್ಮದೇ ಆದ ಸರ್ಕಾರವನ್ನು ಹೊಂದಿದ್ದರೂ, ಕೇಂದ್ರ ಸರ್ಕಾರದ ಹಸ್ತಕ್ಷೇಪವಿಲ್ಲದೆ ಅವುಗಳಿಗೆ ತಮ್ಮದೇ ಆದ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯವಿರಲಿಲ್ಲ. ಈ ಪ್ರಾಂತ್ಯಗಳಿಗೆ, ಅದರಲ್ಲೂ ಬಲೂಚಿಸ್ತಾನಕ್ಕೆ, ತಮ್ಮನ್ನು ತಾವು ಸ್ವಯಂ ಆಡಳಿತ ನಡೆಸುವ ಅಧಿಕಾರ ಲಭಿಸದ್ದರಿಂದ, ಜನರಲ್ಲಿ ಹೆಚ್ಚಿನ ಆಕ್ರೋಶ ಮೂಡಿತು. ಇದರ ಪರಿಣಾಮವಾಗಿ, ಬಲೂಚಿಸ್ತಾನದಲ್ಲಿ ನಿರಂತರವಾಗಿ ಪ್ರತಿಭಟನೆಗಳು, ಹೋರಾಟಗಳು ನಡೆದು, ಜನರು ತಮ್ಮ ಹಕ್ಕುಗಳನ್ನು ದಮನಿಸಲಾಗುತ್ತಿದೆ ಎಂಬ ಭಾವನೆ ಹೊಂದಿದರು.

ಬಲೂಚಿಸ್ತಾನ ಅತಿದೊಡ್ಡ ಭೂ ಪ್ರದೇಶವನ್ನು ಹೊಂದಿದ್ದು, ಪಾಕಿಸ್ತಾನದ 44% ಭೂಭಾಗವನ್ನು ಹೊಂದಿದೆ. ಈ ಪ್ರದೇಶ ತಾಮ್ರ, ಚಿನ್ನ, ಕಲ್ಲಿದ್ದಲು, ಮತ್ತು ನೈಸರ್ಗಿಕ ಅನಿಲದಂತಹ ಅಪಾರ ನೈಸರ್ಗಿಕ ಸಂಪನ್ಮೂಲಗಳ ನೆಲೆಯಾಗಿದೆ. ಇಷ್ಟೆಲ್ಲ ಸಂಪನ್ಮೂಲಗಳನ್ನು ಹೊಂದಿದ್ದರೂ, ಬಲೂಚಿಸ್ತಾನ ಪಾಕಿಸ್ತಾನದ ಅತ್ಯಂತ ಹಿಂದುಳಿದಿರುವ ಪ್ರದೇಶವಾಗಿದೆ. ಆರ್ಥಿಕ ಅಭಿವೃದ್ಧಿಯ ಕೊರತೆಯೂ ಸಹ ಜನರ ಆಕ್ರೋಶ ಹೆಚ್ಚಲು ಕಾರಣವಾಗಿದ್ದು, ಪಾಕಿಸ್ತಾನ ತಮ್ಮನ್ನು ಕಡೆಗಣಿಸಿದೆ, ಮೂಲೆಗುಂಪಾಗಿಸಿದೆ ಎಂದು ಭಾವಿಸಿದ್ದಾರೆ.

ಬಲೂಚಿಸ್ತಾನ ಅಪಾರ ನೈಸರ್ಗಿಕ ಸಂಪನ್ಮೂಗಳನ್ನು ಹೊಂದಿದ್ದರೂ, ಬಲೂಚಿಸ್ತಾನದ ಸ್ಥಳೀಯ ಜನರಿಗೆ ಯಾವುದೇ ಹೇಳಿಕೊಳ್ಳುವಂತಹ ಆರ್ಥಿಕ ಪ್ರಯೋಜನಗಳು ಲಭಿಸಿಲ್ಲ. 2018-19ರ ಯುಎನ್‌ಡಿಪಿ ವರದಿ ಪಾಕಿಸ್ತಾನದ ಒಟ್ಟು ಆರ್ಥಿಕತೆಗೆ ಬಲೂಚಿಸ್ತಾನದ ಕೊಡುಗೆ ಕೇವಲ 4.5% ಎಂದಿದ್ದು, ದೇಶದ 14% ರಸ್ತೆ ಜಾಲವನ್ನು ಮಾತ್ರವೇ ಹೊಂದಿದೆ ಎಂದಿತ್ತು. ಅದರೊಡನೆ, ಪಾಕಿಸ್ತಾನದ ಒಟ್ಟು ವಿದ್ಯುತ್ ಪೂರೈಕೆಯಲ್ಲಿ ಬಲೂಚಿಸ್ತಾನ ಕೇವಲ 4% ಮಾತ್ರವೇ ಪಡೆದುಕೊಂಡಿತ್ತು. ಇದು ನೈಸರ್ಗಿಕ ಸಂಪನ್ಮೂಲ ಶ್ರೀಮಂತಿಕೆಯ ಹೊರತಾಗಿಯೂ ಬಲೂಚಿಸ್ತಾನ ಎಷ್ಟು ಕನಿಷ್ಠ ಅಭಿವೃದ್ಧಿ ಸಾಧಿಸಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಬಲೂಚಿಸ್ತಾನ ಅಪಾರ ಖನಿಜ ಸಂಪತ್ತು, ವಿಶಾಲ ಕರಾವಳಿ ಪ್ರದೇಶವನ್ನು ಹೊಂದಿದ್ದರೂ, ಅದರ ಆರ್ಥಿಕತೆ ದುರ್ಬಲವಾಗಿದೆ. ಇದರಿಂದಾಗಿ ಬಲೂಚ್ ಜನರು ಪಾಕಿಸ್ತಾನ ಸರ್ಕಾರದ ನೀತಿಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ. ಬಲೂಚಿಸ್ತಾನ ಮಕ್ಕಳ ಕ್ಷೇಮಾಭಿವೃದ್ಧಿ, ಯುವಕರ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯಂತಹ ಪ್ರಮುಖ ಕ್ಷೇತ್ರಗಳಲ್ಲೂ ಹಿಂದುಳಿದಿದ್ದು, ಒಟ್ಟಾರೆ ಅಭಿವೃದ್ಧಿಯ ವಿಚಾರದಲ್ಲಿ ಕೊರತೆ ಹೊಂದಿರುವುದು ಸ್ಪಷ್ಟವಾಗಿದೆ.

ಸರ್ಕಾರ ಈ ಪ್ರದೇಶದಲ್ಲಿ ಮಿಲಿಟರಿಯನ್ನು ನಿರ್ವಹಿಸುತ್ತಿರುವ ಕುರಿತು ಬಹಳಷ್ಟು ಬಲೂಚಿಗರು ಅಸಮಾಧಾನ ಹೊಂದಿದ್ದಾರೆ. ತಮ್ಮ ಕಾರ್ಯಾಚರಣೆಯ ಭಾಗವಾಗಿ, ಪಾಕಿಸ್ತಾನಿ ಸೇನೆ ಬಲೂಚಿಸ್ತಾನದ ಜನರನ್ನು ತಮಗೆ ಬೇಕಾದಂತೆ ಬಂಧಿಸಿ, ಅವರ ಇತ್ಯೋಪರಿಗಳನ್ನು ಮನೆಯವರಿಗೂ ತಿಳಿಸುತ್ತಿಲ್ಲ ಎಂಬ ಆರೋಪಗಳಿವೆ. ಇದು ಸ್ಥಳೀಯರಲ್ಲಿ ಸೇನೆಯ ಕುರಿತು ಭಯ ಮತ್ತು ಕೋಪಕ್ಕೆ ಕಾರಣವಾಗಿದೆ. ಬಹಳಷ್ಟು ಪ್ರಕರಣಗಳಲ್ಲಿ, ಕಾಣೆಯಾಗುವ ಜನರು ಬಳಿಕ ಸರಿಯಾದ ವಿಚಾರಣೆ ನಡೆಯದೆ ಅಥವಾ ಸೇನೆಗೆ ಬೇಕಾದಂತೆ ಯೋಜಿಸಿದ ವಿಚಾರಣೆಗೆ ಗುರಿಯಾಗಿ, ಹತ್ಯೆಯಾಗಿದ್ದರು. ಇಂತಹ ಕಣ್ಮರೆಗಳ ಕುರಿತು ವಿಚಾರಣೆ ನಡೆಸಲು ಸರ್ಕಾರ ನೇಮಿಸಿದ ಸಮಿತಿಯೊಂದು ಇಂತಹ 2,752 ಪ್ರಕರಣಗಳು ನಡೆದಿವೆ ಎಂದು ವರದಿ ಸಲ್ಲಿಸಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಪ್ರದರ್ಶಿಸಿದೆ.

ಆದರೆ, ವಾಯ್ಸ್ ಆಫ್ ಬಲೂಚ್ ಮಿಸ್ಸಿಂಗ್ ಪರ್ಸನ್ಸ್ ರೀತಿಯ ನಾಗರಿಕ ಸಂಘಟನೆಗಳು, 2002 ಮತ್ತು 2024ರ ನಡುವೆ 7,000ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದಿವೆ. ಬಹಳಷ್ಟು ಮಾನವ ಹಕ್ಕು ಸಂಸ್ಥೆಗಳು ಬಲೂಚಿಸ್ತಾನದಲ್ಲಿ ಜನರ ಕಣ್ಮೆರೆಯಾಗುವ ಕುರಿತು ಕಳವಳ ವ್ಯಕ್ತಪಡಿಸಿವೆ.

ಬಲೂಚಿಸ್ತಾನದಲ್ಲಿ ಡ್ರ್ಯಾಗನ್ ಪ್ರಭಾವ

ಚೀನಾದ ಒಂದು ಸಂಸ್ಥೆ ಬಲೂಚಿಸ್ತಾನದಲ್ಲಿರುವ ಗ್ವಾದರ್ ಬಂದರನ್ನು 40 ವರ್ಷಗಳ ಕಾಲ ಗುತ್ತಿಗೆಗೆ ಪಡೆದಿದ್ದು, ಬಂದರಿನ ನಿರ್ಮಾಣ, ಮತ್ತು ಕಾರ್ಯಾಚರಣೆಯ ಜವಾಬ್ದಾರಿ ವಹಿಸಿಕೊಂಡಿದೆ. ಗ್ವಾದರ್ ಬಂದರು ಕೇವಲ ವ್ಯಾಪಾರ ಸಂಬಂಧಿ ಉದ್ದೇಶಗಳಿಗಷ್ಟೇ ಬಳಕೆಯಾಗಲಿದೆ ಎಂದು ಪಾಕಿಸ್ತಾನಿ ಅಧಿಕಾರಿಗಳು ಹೇಳಿದ್ದರೂ, ಬಹಳಷ್ಟು ಜನರು ಇದನ್ನು ಭವಿಷ್ಯದಲ್ಲಿ ಮಿಲಿಟರಿ ಉದ್ದೇಶಗಳಿಗೆ ಬಳಸಲಾಗುತ್ತದೆ ಎಂಬ ಆತಂಕ ಹೊಂದಿದ್ದಾರೆ. ಒಂದು ವೇಳೆ ಚೀನಾ ಏನಾದರೂ ಇಲ್ಲಿ ನೌಕಾಪಡೆಯ ಉಪಸ್ಥಿತಿಯನ್ನು ಹೊಂದಿದರೆ, ಅದಕ್ಕೆ ತನ್ನ ಪ್ರಭಾವವನ್ನು ಪರ್ಷಿಯನ್ ಕೊಲ್ಲಿಯತ್ತ ವ್ಯಾಪಿಸಲು ಮತ್ತು ಹೊರ್ಮುಸ್ ಜಲಸಂಧಿಯ ಮೂಲಕ ತನ್ನ ಇಂಧನ ಸಾಗಾಣಿಕೆಯನ್ನು ಸುಭದ್ರಗೊಳಿಸಲು ನೆರವಾಗಲಿದೆ.

ಆದರೆ, ಗ್ವಾದರ್ ಬಂದರಿನಲ್ಲಿ ಬೇಲಿ ನಿರ್ಮಾಣ ಮತ್ತು ಇತರ ನೂತನ ಮೂಲಭೂತ ಸೌಕರ್ಯಗಳ ಯೋಜನೆಗಳನ್ನು ನಡೆಸುತ್ತಿರುವುದು, ಭವಿಷ್ಯದಲ್ಲಿ ಅದನ್ನು ಮಿಲಿಟರಿ ಉದ್ದೇಶಗಳಿಗೆ ಬಳಸುವ ಸಾಧ್ಯತೆಗಳಿರುವುದು ಸ್ಥಳೀಯ ಸಮುದಾಯವನ್ನು ಆತಂಕಕ್ಕೆ ತಳ್ಳಿದೆ. ಬಹಳಷ್ಟು ಜನರು ಇದರಿಂದಾಗಿ ತಮಗೆ ಸಮುದ್ರಕ್ಕೆ ಪ್ರವೇಶ ಲಭಿಸುವುದು ಕಡಿಮೆಯಾಗಿ, ತಮ್ಮ ಜೀವನೋಪಾಯಕ್ಕೆ ಸಮಸ್ಯೆಯಾಗಲಿದೆ ಎಂದು ಆತಂಕ ಹೊಂದಿದ್ದಾರೆ. ಗ್ವಾದರ್ ಬಳಿ ಚೀನಾದ ಮೀನುಗಾರಿಕಾ ಬೋಟ್‌ಗಳು ಆಗಮಿಸಿರುವುದನ್ನು ವಿರೋಧಿಸಿ, ಸ್ಥಳೀಯ ಮೀನುಗಾರರು ಪ್ರತಿಭಟನೆ ನಡೆಸಿದ್ದರು. ಅವರು ಅಕ್ರಮ ಮೀನುಗಾರಿಕೆಯನ್ನು ನಿಷೇಧಿಸಿ, ಸ್ಥಳೀಯರಿಗೆ ಯಾವುದೇ ನಿರ್ಬಂಧಗಳಿಲ್ಲದೆ ಮೀನುಗಾರಿಕೆ ನಡೆಸುವ ಹಕ್ಕು ನೀಡಬೇಕೆಂದು ಆಗ್ರಹಿಸಿದ್ದರು.

ಬಲೂಚಿಸ್ತಾನದ ಬಹಳಷ್ಟು ಜನರು ಸಿಪಿಇಸಿ ಆರಂಭಗೊಂಡು 10 ವರ್ಷಗಳ ಬಳಿಕವೂ ತಮಗೆ ಯಾವುದೇ ಆರ್ಥಿಕ ಪ್ರಯೋಜನ ಲಭಿಸಿಲ್ಲ ಎಂಬ ಅಭಿಪ್ರಾಯ ಹೊಂದಿದ್ದಾರೆ. ಬಲೂಚಿಸ್ತಾನದ ಜನರು ಹೊರಗಿನವರು ಬಲೂಚಿಸ್ತಾನಕ್ಕೆ ಆಗಮಿಸಿ, ಮೂಲಭೂತ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸುವುದರಿಂದ, ಅಲ್ಲಿನ ಜನಸಂಖ್ಯಾ ವಿಧಾನ ಬದಲಾಗುವ ಕುರಿತು ಆತಂಕ ಹೊಂದಿದ್ದಾರೆ. ಸಿಪಿಇಸಿ ಜಾರಿಗೆ ಬಂದರೂ, ಬಲೂಚಿಸ್ತಾನದ ಕಡೆಗಣಿಸುವಿಕೆ ಹಾಗೆಯೇ ಮುಂದುವರಿದಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)