ಪಾಕಿಸ್ತಾನ ರೈಲಿನ ಮೇಲೆ ಬಲೂಚಿಸ್ತಾನ ಲಿಬರೇಶನ್ ಆರ್ಮಿ(BLA) ನಡೆಸಿದ ಭೀಕರ ದಾಳಿಯ ಮೊದಲ ವಿಡಿಯೋ ಬಿಡುಗಡೆ ಮಾಡಲಾಗಿದೆ. ಪಾಕಿಸ್ತಾನ ರೈಲು ಹೈಜಾಕ್ ಮಾಡಿದ ವಿಡಿಯೋವನ್ನು ಖುದ್ದು BLA ಬಿಡುಗಡೆ ಮಾಡಿದೆ. 

ಲಾಹೋರ್(ಮಾ.12) ಪಾಕಿಸ್ತಾನ ದಬ್ಬಾಳಿಕೆಯಿಂದ ರೋಸಿ ಹೋಗಿರುವ ಬಲೂಚಿಸ್ತಾನ ಹಲವು ದಶಕಗಳಿಂದ ಹೋರಾಟ ನಡೆಸುತ್ತಲೇ ಇದೆ. ಇದೀಗ ಬಲೂಚಿಸ್ತಾನ ಲಿಬರೇಶನ್ ಆರ್ಮಿ ದಾಳಿ ತೀವ್ರಗೊಳಿಸಿದ್ದು, ವಿಶ್ವದ ಆತಂಕ ಹೆಚ್ಚಿದೆ. ಕಾರಣ ಬಲೂಚಿಸ್ತಾನ ಲಿಬರೇಶನ್ ಆರ್ಮಿ ಪಾಕಿಸ್ತಾನದ ಪೇಶಾವರಕ್ಕೆ ತೆರಳುತ್ತಿದ್ದ ಪ್ರಯಾಣಿಕರ ರೈಲನ್ನೇ ಹೈಜಾಕ್ ಮಾಡಿ ತೀವ್ರ ಆತಂಕ ಸೃಷ್ಟಿಸಿದೆ. ರೈಲಿನ ಮೇಲೆ ಬಾಂಬ್, ಗ್ರೇನೇಡ್ ದಾಳಿ ಮಾಡಿ ಬಳಿಕ ಪ್ರಯಾಣಿಕರನ್ನು ಒತ್ತೆಯಾಳಾಗಿಟ್ಟುಕೊಳ್ಳಲಾಗಿದೆ. ಸದ್ಯ ಪಾಕಿಸ್ತಾನ ಸೇನೆ 155 ಪ್ರಯಾಣಿಕರನ್ನು ರಕ್ಷಿಸಿದೆ. 27ಕ್ಕೂ ಹೆಟ್ಟು ಬಂಡುಕೋರರನ್ನು ಹೊಡೆದುರುಳಿಸಿದೆ. ಇದರ ನಡುವೆ BLA ದಾಳಿಯ ಮೊದಲ ವಿಡಿಯೋ ಬಿಡುಗಡೆ ಮಾಡಿದೆ. 

 ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಪೇಶಾವರಕ್ಕೆ ಹೋಗುತ್ತಿದ್ದ ರೈಲನ್ನು ಹೈಜಾಕ್ ಮಾಡಿದ ಬಲೂಚ್ ಲಿಬರೇಶನ್ ಆರ್ಮಿ (BLA), ಹಳಿಗಳನ್ನು ಹೇಗೆ ಸ್ಫೋಟಿಸಿದರು, ದಾಳಿ ಹೇಗೆ ಮಾಡಿದರು ಮತ್ತು ಪ್ರಯಾಣಿಕರನ್ನು ಹೇಗೆ ಒತ್ತೆಯಾಳಾಗಿ ಇಟ್ಟುಕೊಂಡರು ಎಂಬುದನ್ನು ತೋರಿಸುವ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಪಾಕಿಸ್ತಾನದಲ್ಲಿ ಇಡೀ ರೈಲೇ ಬಂಡುಕೋರರಿಂದ ಹೈಜಾಕ್‌: 80 ಪ್ರಯಾಣಿಕರ ರಕ್ಷಣೆ

400ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ರೈಲು ಹಳಿ ತಪ್ಪಿ ನಿಲ್ಲುವಂತೆ ಭಾರಿ ಸ್ಫೋಟದೊಂದಿಗೆ ದೃಶ್ಯ ಪ್ರಾರಂಭವಾಗುತ್ತದೆ. ದಟ್ಟವಾದ ಕಪ್ಪು ಹೊಗೆ ಎಂಜಿನ್ ಅನ್ನು ಆವರಿಸಿತು, ಪ್ರಯಾಣಿಕರಲ್ಲಿ ಭಯಾನಕ ವಾತಾವರಣ ಸೃಷ್ಟಿಯಾಯಿತು. ನಂತರ ಬಂಡುಕೋರರು ರೈಲಿಗೆ ನುಗ್ಗಿ ಪ್ರಯಾಣಿಕರನ್ನು ಒತ್ತೆಯಾಳಾಗಿ ಇಟ್ಟುಕೊಂಡರು. ಗಾಯಗೊಂಡ ಚಾಲಕ ಬದುಕಲು ಹೋರಾಡಿದರೂ, ನಂತರ ಸಾವನ್ನಪ್ಪಿದರು. ಕ್ವೆಟ್ಟಾ ಮತ್ತು ಸಿಬಿಯ ನಡುವೆ 100 ಕಿಲೋಮೀಟರ್‌ಗಿಂತಲೂ ಹೆಚ್ಚು ವ್ಯಾಪಿಸಿರುವ ಬೋಲನ್‌ನ ಅಪಾಯಕಾರಿ ಪರ್ವತ ಪ್ರದೇಶದಲ್ಲಿ ಈ ದಾಳಿ ನಡೆಯಿತು. 17 ರೈಲ್ವೆ ಸುರಂಗಗಳು ಮತ್ತು ಕಡಿದಾದ ಭೂಪ್ರದೇಶದಿಂದಾಗಿ ರೈಲುಗಳು ನಿಧಾನವಾಗುತ್ತವೆ. ಈ ಪ್ರದೇಶವು ಉಗ್ರರಿಗೆ ಹೊಂಚು ಹಾಕಲು ಸೂಕ್ತ ಸ್ಥಳವಾಗಿತ್ತು.

Scroll to load tweet…

ಪಾಕಿಸ್ತಾನದ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿ, ನಿಯಂತ್ರಣ ಸಾಧಿಸಲು ತೀವ್ರ ಹೋರಾಟ ನಡೆಸಿದವು. ಎರಡು ದಿನಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ ಕನಿಷ್ಠ 27 ಉಗ್ರರನ್ನು ಹೊಡೆದುರುಳಿಸಿ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 155 ಪ್ರಯಾಣಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ರಕ್ಷಣಾ ಕಾರ್ಯಾಚರಣೆಯಲ್ಲಿ 37 ಪ್ರಯಾಣಿಕರಿಗೆ ಗಾಯಗಳಾಗಿವೆ ಮತ್ತು ಅವರನ್ನು ತಕ್ಷಣವೇ ವೈದ್ಯಕೀಯ ಚಿಕಿತ್ಸೆಗಾಗಿ ಸಾಗಿಸಲಾಯಿತು ಎಂದು ಭದ್ರತಾ ಮೂಲಗಳು ಖಚಿತಪಡಿಸಿವೆ. ಗುಂಡಿನ ಚಕಮಕಿ ಮುಂದುವರಿದಿದ್ದು, ಉಳಿದ ಒತ್ತೆಯಾಳುಗಳ ಬಳಿ ಆತ್ಮಹತ್ಯಾ ಬಾಂಬರ್‌ಗಳನ್ನು ಇರಿಸಿದ್ದಾರೆ ಎನ್ನಲಾಗಿದೆ.

ಏತನ್ಮಧ್ಯೆ, ಉಗ್ರರು ರೈಲಿನ ನಿಯಂತ್ರಣ ಸಾಧಿಸಿದ್ದ ಸುರಂಗಗಳ ಬಳಿ ಗುಂಡಿನ ಸದ್ದು ಮತ್ತು ಸ್ಫೋಟಗಳು ಕೇಳಿಬರುತ್ತಿವೆ. ಸೈನಿಕರು ಪ್ರದೇಶವನ್ನು ಸುತ್ತುವರೆದಿದ್ದು, ಉಳಿದ ಒತ್ತೆಯಾಳುಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ.

ಪಾಕಿಸ್ತಾನ ರೈಲು ಹೈಜಾಕ್: 155ಕ್ಕೂ ಹೆಚ್ಚು ಒತ್ತೆಯಾಳುಗಳ ರಕ್ಷಣೆ, 27 ಬಂಡುಕೋರರ ಹತ್ಯೆ